ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಕರ ಜಮೀನು ಕಬಳಿಸುವ ಹುನ್ನಾರ: ರೈತ ಸಂಘ ಆರೋಪ

ಮಡಿಕೇರಿಯಲ್ಲಿ ರಾಜ್ಯ ರೈತ ಸಂಘದಿಂದ ಪ್ರತಿಭಟನೆ, ಭೂಸುಧಾರಣಾ ಕಾಯ್ದೆ ತಿದ್ದುಪಡಿಗೆ ವಿರೋಧ
Last Updated 20 ಜೂನ್ 2020, 13:02 IST
ಅಕ್ಷರ ಗಾತ್ರ

ಮಡಿಕೇರಿ: ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ, ನಗರದ ಜನರಲ್‌ ತಿಮ್ಮಯ್ಯ ವೃತ್ತದಲ್ಲಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಕೊಡಗು ಜಿಲ್ಲೆಯ ರೈತರು ಶನಿವಾರ ಪ್ರತಿಭಟನೆ ನಡೆಸಿ, ಆಕ್ರೋಶ ಹೊರ ಹಾಕಿದರು.

ಜಿಲ್ಲೆಯ ಪೊನ್ನಂಪೇಟೆ, ಗೋಣಿಕೊಪ್ಪಲು, ಕುಟ್ಟ, ಶ್ರೀಮಂಗಲ, ವಿರಾಜಪೇಟೆ, ಮೂರ್ನಾಡು ಭಾಗದಿಂದ ಬಂದಿದ್ದ ರೈತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಬಾರದು ಎಂದು ಆಗ್ರಹಿಸಿದರು.

ಉದ್ಯಮಿಗಳು ಕೃಷಿಕರ ಜಮೀನು ಖರೀದಿಸಿದರೆ, ಬಡ ರೈತರ ಅವರ ಮನೆಗೆ ಕೂಲಿಗೆ ತೆರಳುವ ಸ್ಥಿತಿ ನಿರ್ಮಾಣವಾಗಲಿದೆ. ಇದುವರೆಗೂ ಸಣ್ಣಪುಟ್ಟ ರೈತರು ತಮ್ಮ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಸ್ವಾಭಿಮಾನದಿಂದ ಬದುಕು ನಡೆಸುತ್ತಿದ್ದಾರೆ. ಭೂಸುಧಾರಣೆಯ ತಿದ್ದುಪಡಿ ಕಾಯ್ದೆ ಜಾರಿಯಾದರೆ ರೈತರು ಬೀದಿ ಪಾಲಾಗಲಿದ್ದಾರೆ. ಜಮೀನು ಮಾರಾಟ ಮಾಡಿ ಅಲ್ಲೇ ಕೂಲಿ ಮಾಡುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ನೋವು ತೋಡಿಕೊಂಡರು.

ತಿದ್ದುಪಡಿ ಕಾಯ್ದೆ ಜಾರಿಯಾದರೆ ಕೃಷಿ ಜಮೀನು ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಪಾಲಾಗಲಿದೆ. ಅಲ್ಲದೇ ಭ್ರಷ್ಟ ರಾಜಕಾರಣಿಗಳು ಹಾಗೂ ಭ್ರಷ್ಟಾಚಾರದಿಂದ ಸಂಪಾದನೆ ಮಾಡಿದ ಹಣದಿಂದ ಸರ್ಕಾರಿ ನೌಕರರು ನೂರಾರು ಎಕರೆ ಭೂಮಿ ಖರೀದಿಸುತ್ತಾರೆ. ಇದರಿಂದ ರೈತರು ಬೀದಿ ಪಾಲಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಿದರು.

ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ಸಿ. ಗಣೇಶ್‌ ಮಾತನಾಡಿ, ತಿದ್ದುಪಡಿಯನ್ನು ಈ ಕೂಡಲೇ ವಾಪಸ್‌ ಪಡೆದುಕೊಳ್ಳಬೇಕು. ರೈತರಿಗೆ ಅನ್ಯಾಯ ಆಗಬಾರದು. ಕೃಷಿ ಜಮೀನು ಕಬಳಿಸುವ ಹುನ್ನಾರ ನಡೆಯುತ್ತಿದೆ. ಹುಲಿ ಹಾಗೂ ಕಾಡಾನೆಗಳ ಜೊತೆಗೆ ಬದುಕು ನಡೆಸುತ್ತಿದ್ದೇವೆ. ಈ ಸಮಸ್ಯೆ ಪರಿಹಾರ ಮಾಡುವುದು ಬಿಟ್ಟು ಯಾರೋ ಬಂದು ಜಮೀನು ಖರೀದಿ ಮಾಡುವ ಕ್ರಮ ಖಂಡನೀಯ. ಕೊಳ್ಳೆ ಹೊಡೆಯುವ ವ್ಯವಸ್ಥೆಯಿದು. ಭತ್ತ ಬೆಳೆಯುವ ರೈತರಿಗೆ ಪ್ರೋತ್ಸಾಹ ನೀಡುವುದು, ಕೃಷಿ ಜಮೀನು ಉಳಿಸುವ ಕೆಲಸ ಆಗಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ರಾಜ್ಯದಾದ್ಯಂತ ಹೋರಾಟ ನಡೆಯುತ್ತಿದೆ. ಈ ಕಾಯ್ದೆ ವಾಪಸ್‌ ತೆಗೆದುಕೊಳ್ಳದಿದ್ದರೆ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದರು. ಸ್ಥಳಕ್ಕೆ ಬಂದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾಗೆ ಮನವಿ ಸಲ್ಲಿಸಿದರು.

ಪೊಲೀಸರೊಂದಿಗೆ ವಾಗ್ವಾದ:

ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆಗೆ ಮುಂದಾದ ವೇಳೆ ಪೊಲೀಸರು ಹಾಗೂ ರೈತರ ನಡುವೆ ವಾಗ್ವಾದ ನಡೆಯಿತು. ವಾಹನ ಓಡಾಟಕ್ಕೆ ತೊಂದರೆ ಆಗುತ್ತಿದೆ. ಹೆಚ್ಚುಹೊತ್ತು ಪ್ರತಿಭಟನೆ ನಡೆಸುವಂತಿಲ್ಲ ಎಂದರು.

ಆಗ ರೈತರು, ‘ನಮಗೆ ಅನ್ಯಾಯ ಆಗುತ್ತಿದೆ. ನಮ್ಮ ನೋವು ಸರ್ಕಾರಕ್ಕೆ ಮುಟ್ಟಬೇಕು. ಪೊಲೀಸರು ಅಧಿಕಾರ ಚಲಾವಣೆ ಮಾಡದೇ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲು ಅವಕಾಶ ಕಲ್ಪಿಸಬೇಕು’ ಎಂದು ಕೋರಿದರು. ಬಳಿಕ ಕೆಲವು ನಿಮಿಷಗಳ ಕಾಲ ಮಾನವ ಸರಪಳಿ ನಿರ್ಮಿಸಿ, ಆಕ್ರೋಶ ಹೊರಹಾಕಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT