ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಸಂಕಷ್ಟ: ಬಲೆಗೆ ಬಿದ್ದ ಮೀನಿನಂತಾದ ಮತ್ಸ್ಯೋದ್ಯಮ

ಬೆಲೆ ಏರಿಕೆಯ ಬಿಸಿ– ಹೆಚ್ಚಿದ ತೆರಿಗೆಯ ಭಾರ
Last Updated 3 ಸೆಪ್ಟೆಂಬರ್ 2019, 8:58 IST
ಅಕ್ಷರ ಗಾತ್ರ

ಮಂಗಳೂರು: ಪ್ರಮುಖವಾಗಿ ಮೀನಿನ ಅತಿ ದೊಡ್ಡ ಖರೀದಿದಾರರಾಗಿರುವ ಫಿಶ್‌ ಮೀಲ್‌ ಮತ್ತು ಫಿಶ್‌ ಆಯಿಲ್‌ ಕಂಪನಿಗಳು ಜಿಎಸ್‌ಟಿ ಹೊಡೆತಕ್ಕೆ ನಲುಗಿದ್ದು, ಮುಷ್ಕರಕ್ಕೆ ಮುಂದಾಗಿವೆ. ಮೀನುಗಾರರು ಹಿಡಿದು ತರುವ ಮೀನುಗಳನ್ನು ಖರೀದಿಸುವವರೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಬಲೆಗೆ ಬಿದ್ದ ಮೀನಿನಂತಾಗಿದೆ ಸದ್ಯದ ಮತ್ಸ್ಯೋದ್ಯಮದ ಸ್ಥಿತಿ.

‘ಪ್ರತಿ ಬೋಟ್‌ಗಳಲ್ಲಿ 20 ಟನ್‌ ನಷ್ಟು ಮೀನು ತರಲಾಗುತ್ತದೆ. ಇಷ್ಟು ಮೀನುಗಳಿಗೆ ಮಾರುಕಟ್ಟೆ ದೊರೆಯದಿದ್ದರೆ, ₹ 10 ಲಕ್ಷ ನಷ್ಟ ಉಂಟಾಗು ತ್ತದೆ. ಕಂಪನಿ ಬೋಟುಗಳು ಹಿಡಿದು ತಂದ ಮೀನುಗಳನ್ನು ಖರೀದಿಸದಿದ್ದರೆ, ಹೆಚ್ಚಿನ ಮೀನುಗಳನ್ನು ನೀರಿಗೆ ಬಿಸಾಡುವ ಸ್ಥಿತಿ ಬರಲಿದೆ’ ಎನ್ನುತ್ತಾರೆ ಪರ್ಸಿನ್‌ ಬೋಟ್‌ ಮಾಲೀಕರ ಸಂಘದ ಅಧ್ಯಕ್ಷ ಮೋಹನ ಬೇಂಗ್ರೆ.

ಜಿಎಸ್‌ಟಿ ಆರಂಭಕ್ಕೂ ಮುನ್ನ ಮೀನಿನ ಎಣ್ಣೆ ಉತ್ಪಾದನೆಗೆ ಉತ್ಪಾದಕರು ಶೇ 5ರಷ್ಟು ತೆರಿಗೆ ಪಾವತಿಸುತ್ತಿದ್ದರು. ಜಿಎಸ್‌ಟಿ ಜಾರಿಗೊಳಿಸಿದ ಬಳಿಕ ಆ ತೆರಿಗೆ ಶೇ 12ಕ್ಕೆ ಏರಿಕೆಯಾಗಿದೆ. ಫಿಶ್‌ ಮೀಲ್‌ಗೆ 2017ರ ಜುಲೈ 1ರಿಂದ ಅನ್ವಯವಾಗುವಂತೆ ಶೇ 5 ರಷ್ಟು ಜಿಎಸ್‌ಟಿ ವಿಧಿಸಿದೆ. ಇದನ್ನು ವಿರೋಧಿಸಿ ಕಂಪನಿ ಮಾಲೀಕರು ಆಗಸ್ಟ್‌ 1 ರಿಂದಲೇ ಮುಷ್ಕರ ಆರಂಭಿಸಿದ್ದಾರೆ.

ಮಂಜುಗಡ್ಡೆ ದರವೂ ಹೆಚ್ಚು: ಮೀನು ಕೆಡದಂತೆ ಸಂರಕ್ಷಿಸಲು ಬೇಕಾಗುವ ಮಂಜುಗಡ್ಡೆಯ ದರ ಪರಿಷ್ಕರಣೆಯಾಗಿರುವುದು ಮೀನುಗಾರರಿಗೆ ಮತ್ತಷ್ಟು ಆರ್ಥಿಕ ಹೊರೆಯನ್ನು ಉಂಟು ಮಾಡಿದೆ.

ರಾಜ್ಯದಲ್ಲಿ ಏಪ್ರಿಲ್‌ 1ರಿಂದ ಪ್ರತಿ ಯೂನಿಟ್‌ ವಿದ್ಯುತ್ ದರ 35 ಪೈಸೆ ಹೆಚ್ಚಳವಾಗಿದೆ. ಮಂಜುಗಡ್ಡೆ ಘಟಕಕ್ಕೆ ಬರುವ ವಿದ್ಯುತ್ ಬಿಲ್‌ನಲ್ಲಿ ಈಗ ₹1 ಲಕ್ಷ ಹೆಚ್ಚಳವಾಗಲಿದೆ. ವಿದ್ಯುತ್ ಬಿಲ್‌ ಮೇಲಿನ ಜಿಎಸ್‌ಟಿ ಕೂಡಾ ಶೇ 6ರಿಂದ ಶೇ 9ಕ್ಕೆ ಏರಿದೆ. ಇವು ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿವೆ. ಕರ್ನಾಟಕ ಕರಾವಳಿ ಮಂಜುಗಡ್ಡೆ ಮತ್ತು ಶೈತ್ಯಾಗಾರಗಳ ಮಾಲೀಕರ ಸಂಘವು, ಸದ್ಯದ ಮೀನುಗಾರಿಕಾ ಋತುವಿಗೆ ಸಣ್ಣ ಬ್ಲಾಕ್‌ಗೆ ₹75 (ಹಿಂದಿನ ದರ ₹70 ), ಮಧ್ಯಮ ಬ್ಲಾಕ್‌ಗೆ ₹150 (₹140), ದೊಡ್ಡ ಬ್ಲಾಕ್‌ಗೆ ₹225 (₹210 ) ನಿಗದಿಸಿದೆ.

‘2007ರಿಂದ 2017ರ ತನಕ ರಾಜ್ಯ ಸರ್ಕಾರ ಮೀನುಗಾರಿಕೆಗೆ ಪೂರೈಸುವ ಮಂಜುಗಡ್ಡೆಗೆ ತೆರಿಗೆ ವಿನಾಯಿತಿ ನೀಡಿತ್ತು. ಈಗ ಶೇ 5 ಜಿಎಸ್‌ಟಿ ವಿಧಿಸಲಾಗಿದೆ. ಮಂಜುಗಡ್ಡೆ ಸ್ಥಾವರಗಳಿಗೆ ಬೇಕಾದ ಅಮೋನಿಯ ಅನಿಲ ಸಿಲಿಂಡರ್ (60 ಕೆ.ಜಿ.)ದರ ₹ 2ಸಾವಿರದಿಂದ ₹ 4,550 ಕ್ಕೆ ಏರಿದೆ’ ಎಂದು ಕರ್ನಾಟಕ ಕರಾವಳಿ ಮಂಜುಗಡ್ಡೆ ಮತ್ತು ಶೈತ್ಯಾಗಾರ ಮಾಲೀಕರ ಸಂಘದ ಉದಯ ಕುಮಾರ್ ತಿಳಿಸಿದ್ದಾರೆ.

ಇಂದು ಸಭೆ

‘ಉಳ್ಳಾಲ ಭಾಗದ 9 ಫಿಶ್‌ ಆಯಿಲ್‌ ಘಟಕಗಳು ಆ.1ರಿಂದ ಸ್ಥಗಿತವಾಗಿದೆ. ಬುಧವಾರ ದೆಹಲಿಯಲ್ಲಿ ಅಖಿಲ ಭಾರತ ಫಿಶ್ ಮೀಲ್‌, ಫಿಶ್‌ ಆಯಿಲ್‌ ಘಟಕಗಳ ಸಭೆ ಇದ್ದು ಚರ್ಚಿಸಿ, ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಫಿಶ್‌ ಆಯಿಲ್‌ ಫ್ಯಾಕ್ಟರಿ ಅಸೋಸಿಯೇಷನ್‌ ಅಧ್ಯಕ್ಷ ಎಚ್‌.ಕೆ.ಖಾದರ್ ತಿಳಿಸಿದ್ದಾರೆ.

ಇನ್ನಷ್ಟು ಓದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT