ಶುಕ್ರವಾರ, ಏಪ್ರಿಲ್ 3, 2020
19 °C
ಮಾಂಜರಿ: ತಾತ್ಕಾಲಿಕ ಶೆಡ್‌, ಟೆಂಟ್‌ಗಳೇ ಆಸರೆ

ಉತ್ತರ ಕರ್ನಾಟಕ ಪ್ರವಾಹ: ಏಳು ತಿಂಗಳುಗಳಾದರೂ ಸಿಗದ ಪರಿಹಾರ!

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಹೋದ ವರ್ಷ ಕೃಷ್ಣಾ ನದಿ ಪ್ರವಾಹದಿಂದ ಮುಳುಗಡೆಯಾಗಿದ್ದ ಚಿಕ್ಕೋಡಿ ತಾಲ್ಲೂಕಿನ ಮಾಂಜರಿ ಗ್ರಾಮದ ನಿವಾಸಿಗಳು ಹೊಸ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ. ಅವರಲ್ಲಿ ಬಹುತೇಕರಿಗೆ ಸರ್ಕಾರದಿಂದ ಇನ್ನೂ ಪರಿಹಾರವೇ ಸಿಕ್ಕಿಲ್ಲ! ನೆರೆ ಸಂತ್ರಸ್ತರು ರಸ್ತೆ ಬದಿಯಲ್ಲಿ ಅಥವಾ ತಾತ್ಕಾಲಿಕ ಶೆಡ್‌ಗಳಲ್ಲಿ ಜೀವನ ನಡೆಸುವುದು ತಪ್ಪಿಲ್ಲ.

ಹೋದ ವರ್ಷ ಜುಲೈ ಅಂತ್ಯದಲ್ಲಿ, ಕೃಷ್ಣಾ ನದಿ ಉಕ್ಕಿ ಹರಿದಿದ್ದರಿಂದ ಈ ಗ್ರಾಮ ತತ್ತರಿಸಿ ಹೋಗಿತ್ತು. ಮನೆಗಳು ಕೊಚ್ಚಿ ಹೋಗಿದ್ದವು. ಪ್ರವಾಹದಿಂದಾದ ಹಾನಿ ವೀಕ್ಷಿಸುವುದಕ್ಕಾಗಿ ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡ, ಸಚಿವರಾದಿಯಾಗಿ ಜನಪ್ರತಿನಿಧಿಗಳು, ಅಧಿಕಾರಿಗಳೆಲ್ಲರೂ ಈ ಗ್ರಾಮಕ್ಕೆ ಹಲವು ಬಾರಿ ಭೇಟಿ ಕೊಟ್ಟಿದ್ದರು.

ಪ್ರತಿ ವರ್ಷ ಪ್ರವಾಹಕ್ಕೆ ತುತ್ತಾಗುವುದರಿಂದ, ಈ ಗ್ರಾಮವನ್ನು ಸ್ಥಳಾಂತರ ಮಾಡುವಂತೆಯೂ ಅಲ್ಲಿನ ಜನರು ಆಗ್ರಹಿಸಿದ್ದರು. ಆದರೆ, ಈ ನಿಟ್ಟಿನಲ್ಲಿ ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ. ಸದ್ಯಕ್ಕೆ ಬದುಕು ಕಟ್ಟಿಕೊಳ್ಳಲು ಆರ್ಥಿಕ ಚೈತನ್ಯ ನೀಡುವ ಕೆಲಸವನ್ನೂ ಅಧಿಕಾರಿಗಳು ಮಾಡಿಲ್ಲ. ಪರಿಣಾಮ, ಬಹಳಷ್ಟು ಮನೆಗಳ ದುರಸ್ತಿ ಕಾಮಗಾರಿ ಆರಂಭವಾಗಿಲ್ಲ.

ಹೆಚ್ಚಿನವರಿಗೆ ಬಂದಿಲ್ಲ:

ಗ್ರಾಮದಲ್ಲಿ ಪರಿಶಿಷ್ಟರ ಕಾಲೊನಿಯಲ್ಲಿ ಅತಿ ಹೆಚ್ಚು ಹಾನಿ ಉಂಟಾಗಿತ್ತು. ಸಂಪೂರ್ಣವಾಗಿ ಹಾಳಾಗಿದ್ದ ಸಾವಿರ ಮನೆಗಳ ಪೈಕಿ ಈವರೆಗೆ ಪರಿಹಾರ ಸಿಕ್ಕಿರುವುದು ಅರ್ಧಕ್ಕಿಂತಲೂ ಕಡಿಮೆ. ಇನ್ನೂ 527 ಮನೆಗಳಿಗೆ ಪರಿಹಾರ ಬರುವುದು ಬಾಕಿ ಇದೆ. ಹೀಗಾಗಿ, ಅವರು ಕನಿಷ್ಠ ಮೂಲಸೌಲಭ್ಯಗಳೂ ಇಲ್ಲದೇ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸೂರು ಸರಿಪಡಿಸಿಕೊಳ್ಳುವುದಕ್ಕಾಗಿ ಅವರು, ಸಮರ್ಪಕ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.

ಬಯಲಲ್ಲೇ ಸ್ನಾನ ಮಾಡುವುದು, ಶೌಚಕ್ರಿಯೆಗಾಗಿ ಬಯಲನ್ನೇ ಆಶ್ರಯಿಸಬೇಕಾದ ಸ್ಥಿತಿ ಇಲ್ಲಿನ ಜನರದಾಗಿದೆ. ಇದರಿಂದಾಗಿ, ಮಹಿಳೆಯರು ತೀವ್ರ ಮುಜುಗರ ಅನುಭವಿಸುತ್ತಿದ್ದಾರೆ.

ಅಧಿಕಾರಿಗಳಿಗೆ ತಿಳಿಸಿದ್ದೇವೆ:

‘ನಮ್ಮ ಕಾಕಾನ ಮನೆಗೆ ಪರಿಹಾರ ಬಂದಿದೆ. ಆದರೆ, ನಮ್ಮ ಮನೆಗೆ ಹಣ ಬಂದಿಲ್ಲ. ತಹಶೀಲ್ದಾರ್‌ ಕಚೇರಿ, ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೂಲಿ ಕಾರ್ಮಿಕರೇ ಹೆಚ್ಚಿದ್ದೇವೆ. ಶೆಡ್‌ ಹಾಕಿಕೊಂಡು, ಟಾರ್ಪಲಿನ್‌ನಿಂದ ಟೆಂಟ್‌ಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಹೊಸದಾಗಿ ಸಮೀಕ್ಷೆ ನಡೆಸಿದ್ದಾರೆ. ಅದೇನೋ ಸಾಫ್ಟ್‌ವೇರ್‌ ಲಾಕ್‌ ಆಗಿದೆ. ಹಾಗಾಗಿ, ಪರಿಹಾರ ಪ್ರಕ್ರಿಯೆ ನಡೆಯುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ’ ಎಂದು ಅಲ್ಲಿನ ನಿವಾಸಿ ನಿತಿನ ಮಾಯಣ್ಣವರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಂದಷ್ಟು ಕುಟುಂಬಗಳು ಅಂಬೇಡ್ಕರ್‌ ಭವನದಲ್ಲಿ ತಗಡಿನ ಗೋಡೆಗಳನ್ನು ಹಾಕಿಕೊಂಡು ವಾಸವಿದ್ದವು. ಆದರೆ, ಭವನಕ್ಕೆ ಬಣ್ಣ ಹಚ್ಚಬೇಕೆಂದು ಅಲ್ಲಿದ್ದವರನ್ನು ಹೊರಗಡೆ ಕಳುಹಿಸಲಾಯಿತು. ಅವರೀಗ ರಸ್ತೆ ಬದಿಯಲ್ಲೇ ತಾಡಪಾಲಿನಿಂದ ಟೆಂಟ್ ಹಾಕಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಕೂಲಿಗೆ ಹೋಗುವ ಜನರು ಎಷ್ಟು ದಿನಗಳವರೆಗೆ ಕಚೇರಿಗಳಿಗೆ ಅಲೆಯಲು ಸಾಧ್ಯವಾಗುತ್ತದೆ?’ ಎಂದು ಅವರು ಕೇಳಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಚಿಕ್ಕೋಡಿ ತಹಶೀಲ್ದಾರ್‌ ಸುಭಾಷ ಸಂ‍ಪಗಾಂವಿ, ‘ತಾಂತ್ರಿಕ ತೊಂದರೆಯಿಂದಾಗಿ ಒಂದಷ್ಟು ಮಂದಿಗೆ ಮನೆ ಹಾನಿ ಪರಿಹಾರ ಸಿಕ್ಕಿಲ್ಲ. ದಾಖಲೆಗಳು ಸರಿ ಇಲ್ಲದಿರುವುದು ಕೂಡ ಇದಕ್ಕೆ ಕಾರಣವಾಗಿದೆ. ಯಾರಾರಿಗೆ ಪರಿಹಾರ ಸಿಕ್ಕಿಲ್ಲ ಎನ್ನುವ ಪಟ್ಟಿ ಸಿದ್ಧಪಡಿಸಿದ್ದೇವೆ. ಮನೆಗಳು ಬಿದ್ದು ಹೋಗಿರುವ ಫೋಟೊಗಳನ್ನೂ ತೆಗೆಸಿದ್ದೇವೆ. ರಾಜೀವ್‌ಗಾಂಧಿ ವಸತಿ ನಿಗಮದ ಅಂತರ್ಜಾಲತಾಣ ತೆರೆದುಕೊಳ್ಳುತ್ತಿದ್ದಂತೆಯೇ ದಾಖಲೆಗಳನ್ನು ಅಪ್‌ಲೋಡ್‌ ಮಾಡಿಸಿ, ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು