ಸೋಮವಾರ, ಮಾರ್ಚ್ 1, 2021
20 °C
ವಿದ್ಯುದ್ದೀಪಗಳಿಗೆ ಮರಗಳ ಹನನ; ಜೀವ ಸಂಕುಲಕ್ಕೆ ಅಪಾಯ; ಪರಿಸರ ಪ್ರೇಮಿಗಳ ಆತಂಕ

‘ಹಂಪಿ ಉತ್ಸವ’ಕ್ಕಾಗಿ ಕಾಡು ನಾಶ!

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Deccan Herald

ಹೊಸಪೇಟೆ: ಹಂಪಿಯ ಮಾತಂಗ ಪರ್ವತದಲ್ಲಿ ವಿದ್ಯುದ್ದೀಪಗಳನ್ನು ಅಳವಡಿಸಲು ಕುರುಚಲು ಕಾಡನ್ನು ನಾಶಪಡಿಸುತ್ತಿದ್ದು, ಇದಕ್ಕೆ ಪರಿಸರ ಪ್ರೇಮಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ನ. 3ರಿಂದ 5ರ ವರೆಗೆ ನಡೆಯಲಿರುವ ‘ಹಂಪಿ ಉತ್ಸವ’ಕ್ಕಾಗಿ ಜಿಲ್ಲಾ ಆಡಳಿತ ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎ.ಎಸ್‌.ಐ.) ಸಿದ್ಧತೆ ಮಾಡಿಕೊಳ್ಳುತ್ತಿವೆ. ಅದಕ್ಕಾಗಿ, ಕೆಲವು ದಿನಗಳಿಂದ ಪರ್ವತದಲ್ಲಿನ ಕುರುಚಲು ಕಾಡು, ಮರಗಳನ್ನು ಕಡಿದು ವಿದ್ಯುತ್‌ ತಂತಿ ಅಳವಡಿಸಲಾಗುತ್ತಿದೆ. ಇದರಿಂದ ಅಲ್ಲಿ ನೆಲೆಸಿರುವ ಹಕ್ಕಿಗಳು ಹಾಗೂ ಸರೀಸೃಪಗಳ ಆವಾಸ ಸ್ಥಾನಕ್ಕೆ ಕಂಟಕ ಬಂದೊದಗಿದ್ದು, ಕೂಡಲೇ ಕೆಲಸ ಸ್ಥಗಿತಗೊಳಿಸಬೇಕೆಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.

‘ದಖನ್‌ ಪ್ರಸ್ಥಭೂಮಿಗೆ ಕುರುಚಲು ಕಾಡು ಹೇಳಿ ಮಾಡಿಸಿದ ಜಾಗ. ಹಂಪಿಯ ಮಾತಂಗ ಪರ್ವತದಲ್ಲಿ ಈ ಕಾಡು ಯಥೇಚ್ಛವಾಗಿದೆ. ಅಲ್ಲಿ ಕಾರೆ ಹಣ್ಣು, ಕವಳೆ ಹಣ್ಣು, ಜಾನೇ, ಉಲುಪಿ, ತೊಂಡೆ ಸೇರಿದಂತೆ ಇತರ ಹಣ್ಣು ಹಾಗೂ ಕಳೆ ಸಸ್ಯಗಳಿವೆ. ಅದು 150 ಜಾತಿಯ ಹಕ್ಕಿಗಳ ನೆಲೆಬೀಡಾಗಿದೆ. ಅದರಲ್ಲೂ ಅಪಾಯದ ಅಂಚಿನಲ್ಲಿರುವ ಹಳದಿ ಗಂಟಲಿನ ಪಿಕಳಾರಗಳಿವೆ. ಕಲ್ಲು ಬಂಡೆಗಳಲ್ಲಿಯೇ ಗೂಡು ಕಟ್ಟುವುದು ಅವುಗಳ ವಿಶೇಷ. ಕಲ್ಲು ಕೋಳಿಗಳು, ಬುರಲಿ, ಕೌಜುಗ ನೆಲ ಹಕ್ಕಿಗಳಿವೆ. ಕರಡಿ, ಚಿರತೆ ಹಾಗೂ ಸರೀಸೃಪಗಳ ಆವಾಸ ಸ್ಥಾನವೂ ಹೌದು. ಒಂದುವೇಳೆ ಕಾಡು ನಾಶಗೊಳಿಸಿದರೆ ಇಡೀ ಜೀವಸಂಕುಲಕ್ಕೆ ಅಪಾಯ ಬಂದೊದಗುತ್ತದೆ’ ಎಂದು ಪಕ್ಷಿ ತಜ್ಞ ಸಮದ್‌ ಕೊಟ್ಟೂರು ಆತಂಕ ವ್ಯಕ್ತಪಡಿಸಿದ್ದಾರೆ.

‘ಮಾತಂಗ ಪರ್ವತದ ಸುತ್ತಲೂ ಮುಳ್ಳಿನ ಕಳ್ಳಿ ಗಿಡಗಳು (ಕ್ಯಾಕ್ಟಸ್‌) ಅಧಿಕ ಸಂಖ್ಯೆಯಲ್ಲಿವೆ. ಅವುಗಳು ಬಂಡೆಗಳ ಪಕ್ಕದಲ್ಲಿ ಬೆಳೆದು, ಮಣ್ಣನ್ನು ಗಟ್ಟಿಯಾಗಿ ಹಿಡಿದುಕೊಂಡಿರುತ್ತವೆ. ಬಂಡೆಗಳಿಗೆ ಆಧಾರ ಒದಗಿಸಿರುವ ಅವುಗಳನ್ನು ಕಡಿದು ಹಾಕಿದರೆ ಮಣ್ಣು ಸಡಿಲಗೊಂಡು ಬಂಡೆಗಳು ಉರುಳಿ ಬೀಳುವ ಸಾಧ್ಯತೆ ಹೆಚ್ಚಿದೆ. ಯಾವುದೇ ಮುಂದಾಲೋಚನೆ ಇಲ್ಲದೆ ಕೇವಲ ವಿದ್ಯುದ್ದೀಪಗಳನ್ನು ಅಳವಡಿಕೆಗಾಗಿ ಕಾಡು ನಾಶಕ್ಕೆ ಮುಂದಾಗಿದ್ದು ಸರಿಯಲ್ಲ. ಕೊಡಗಿನಲ್ಲಾದ ಘಟನೆಯಿಂದ ಇನ್ನೂ ನಾವು ಪಾಠ ಕಲಿತಂತಿಲ್ಲ’ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.

‘ಜಗತ್ತಿನ ಕೆಲವೇ ಕೆಲವು ಅಪರೂಪದ ಪಕ್ಷಿಗಳ ತಾಣಗಳಲ್ಲಿ ಮಾತಂಗ ಪರ್ವತ ಕೂಡ ಒಂದು. ಪ್ರತಿ ವರ್ಷ ದೇಶ–ವಿದೇಶಗಳಿಂದ ಪಕ್ಷಿ ತಜ್ಞರು, ಪರಿಸರವಾದಿಗಳು, ವನ್ಯಜೀವಿ ಛಾಯಾಗ್ರಾಹಕರು ಇಲ್ಲಿಗೆ ಬಂದು ಅಧ್ಯಯನ ಕೈಗೊಳ್ಳುತ್ತಾರೆ. ಈ ಕಾರಣಕ್ಕಾಗಿ ವಿಶ್ವದ ಭೂಪಟದಲ್ಲಿ ಈ ಸ್ಥಳಕ್ಕೆ ವಿಶೇಷ ಮಹತ್ವವಿದ್ದು, ಅದನ್ನು ಜಿಲ್ಲಾ ಆಡಳಿತ ಸಂರಕ್ಷಿಸಬೇಕು’ ಎಂದು ಪರಿಸರವಾದಿ ಸಂತೋಷ್‌ ಮಾರ್ಟಿನ್‌ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

**

ಪರ್ವತದಲ್ಲೇಕೆ ವಿದ್ಯುದ್ದೀಪ?

ಹಂಪಿಯಲ್ಲಿ ಮಾತಂಗ ಪರ್ವತ ಎತ್ತರದ ಜಾಗದಲ್ಲಿದೆ. ಬೆಟ್ಟದ ಸುತ್ತಮುತ್ತ ವಿದ್ಯುದ್ದೀಪಗಳನ್ನು ಅಳವಡಿಸಿದರೆ ರಾತ್ರಿವೇಳೆ ನೋಡಲು ಅದು ಅಂದವಾಗಿ ಕಾಣಿಸುತ್ತದೆ. ಅದರಲ್ಲೂ ಹಂಪಿ ಉತ್ಸವಕ್ಕೆ ಬರುವ ಸಹಸ್ರಾರು ಜನರು ಅದನ್ನು ನೋಡಿ ಸಂಭ್ರಮಿಸಲಿ ಎಂಬ ಕಾರಣಕ್ಕೆ ವಿದ್ಯುದ್ದೀಪಗಳನ್ನು ಅಳವಡಿಸಲಾಗುತ್ತಿದೆ.

**

ಕುರುಚಲು ಕಾಡು, ಬಂಡೆಗಳೇ ಹಂಪಿಯ ಸಹಜ ಸೌಂದರ್ಯಕ್ಕೆ ಕಾರಣ. ಅನೇಕ ಜೀವಿಗಳ ಆವಾಸಸ್ಥಾನ ಇದಾಗಿದ್ದು, ಕೂಡಲೇ ಕೆಲಸ ನಿಲ್ಲಿಸಬೇಕು.

-ಸಮದ್‌ ಕೊಟ್ಟೂರು, ಪಕ್ಷಿ ತಜ್ಞ

**

ಈ ವಿಷಯ ನನ್ನ ಗಮನಕ್ಕೆ ಬಂದಿದೆ. ಜೀವಸಂಕುಲಕ್ಕೆ ಸಮಸ್ಯೆ ಆಗದಂತೆ ಕೆಲಸ ನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ.

-ರಾಮ್ ಪ್ರಸಾದ್ ಮನೋಹರ್ , ಜಿಲ್ಲಾಧಿಕಾರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.