ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೃಹತ್ತಿನ ಯುಗ ಅಂತ್ಯ ಸನ್ನಿಹಿತ, ಗಾಂಧಿ ಮಾರ್ಗ ಅನಿವಾರ್ಯ: ರಂಗಕರ್ಮಿ ಪ್ರಸನ್ನ

ಪ್ರಸನ್ನ ಅವರಿಗೆ ಮಹಾತ್ಮಾಗಾಂಧಿ ಸೇವಾ ಪ್ರಶಸ್ತಿ ಪ್ರದಾನ
Last Updated 2 ಅಕ್ಟೋಬರ್ 2018, 15:35 IST
ಅಕ್ಷರ ಗಾತ್ರ

ಬೆಂಗಳೂರು: ‘ಮಾರಣಾಂತಿಕ ಕಾಯಿಲೆಯಂತಿರುವ ಬೃಹತ್ ಉದ್ಯಮಗಳು ಮತ್ತು ಯೋಜನೆಗಳ ಯುಗ ಮುಗಿಯುತ್ತಾ ಬಂದಿದ್ದು, ಈಗ ನಮಗೆ ಗಾಂಧಿ ಮಾರ್ಗ ಬಿಟ್ಟರೆ ಬೇರೆ ಮಾರ್ಗವಿಲ್ಲ’ ಎಂದು ಗಾಂಧಿ ಚಿಂತಕ, ರಂಗಕರ್ಮಿ ಪ್ರಸನ್ನ ಹೇಳಿದರು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ ‘ಮಹಾತ್ಮಾ ಗಾಂಧಿ ಸೇವಾ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದ ಅವರು, ಅಭಿವೃದ್ಧಿಯ ಹರಿಕಾರ ಎಂದು ಗಾಂಧಿಯವರನ್ನು ಸ್ವೀಕರಿಸಬೇಕಾದ ಕಾಲವೂ ಬಂದಿದೆ ಎಂದರು.

‘ಗಾಂಧಿ ಮಾತ್ರವಲ್ಲ ಬುದ್ಧ, ಬಸವರನ್ನೂ ಸಹ ಪಾರಮಾರ್ಥಿಕ ಮಂದಿರಗಳಿಂದ ಬಿಡುಗಡೆಗೊಳಿಸಿ ಅಭಿವೃದ್ಧಿ ಹರಿಕಾರರನ್ನಾಗಿ ಸ್ವೀಕರಿಸಬೇಕಾಗಿದೆ. ಬೃಹತ್‌ ಯಂತ್ರೋದ್ಯಮ, ಬೃಹತ್‌ ಯೋಜನೆಗಳ ಸುತ್ತಲೇ ಗಿರಕಿ ಹೊಡೆಯುತ್ತಿದ್ದ ಮತ್ತು ನಗರ ಕೇಂದ್ರಿತ ಅಭಿವೃದ್ಧಿ ಮಾದರಿಗಳನ್ನು ತಿರಸ್ಕರಿಸಬೇಕಾಗಿದೆ. ಹಾಗೆಂದು, ಯಂತ್ರಸ್ಥಾವರಗಳು, ಬೃಹತ್‌ ಯೋಜನೆಗಳು ಮತ್ತು ಮಹಾನಗರಗಳನ್ನು ವಿದ್ಯುತ್‌ ದೀಪ ಆರಿಸಿದಷ್ಟು ಸುಲಭವಾಗಿ ಆರಿಸಿಬಿಡಬೇಕು ಎಂದು ಹೇಳುತ್ತಿಲ್ಲ’ ಎಂದರು.

2008 ರಲ್ಲಿ ಕಾಲಿರಿಸಿದ ಆರ್ಥಿಕ ಸಂಕಷ್ಟವು ಮುಂದುವರಿದಿದೆ. ವಾಸಿ ಮಾಡಲಾಗದ ಮಾರಣಾಂತಿಕ ಕಾಯಿಲೆಯಂತೆ ನಿಶ್ಚಿತ ಮರಣದತ್ತ ಮನುಕುಲವನ್ನು ಕೊಂಡೊಯ್ಯುತ್ತಿದೆ. ಪಶ್ಚಿಮಘಟ್ಟಗಳು ಜರುಗುತ್ತಿವೆ, ಹೆಚ್ಚು ಮಳೆ ಬಿದ್ದ ವರ್ಷವೇ ಹೆಚ್ಚು ಬರಗಾಲವೂ ಬಂದಿದೆ. ವರ್ಷವಿಡೀ ಹರಿಯುತ್ತಿದ್ದ ಹಳ್ಳ, ಕೊಳ್ಳ, ನದಿಗಳು ತಿಂಗಳೊಪ್ಪತ್ತಿನಲ್ಲೇ ಬತ್ತಿ ಹೋಗಿವೆ ಎಂದೂ ಆತಂಕ ವ್ಯಕ್ತಪಡಿಸಿದರು.

ಒಂದು ಕಾಲದಲ್ಲಿ ಆಧುನಿಕತೆಯ ಮೇರುಕೃತಿಗಳಂತೆ ಕಾಣುತ್ತಿದ್ದ ನಗರಗಳು, ವಿಪರೀತ ಚಲನಶೀಲತೆಯಿಂದ ಚಲಿಸಲಾರದೆ ನಿಂತಿವೆ. ಧೂಳು ಅಮರುತ್ತಿದೆ, ಹಿಂಸೆ ತಾಂಡವವಾಡುತ್ತಿದೆ. ಸೃಷ್ಟಿಯಾದ ಸಂಪತ್ತೆಲ್ಲ ಬೆರಳೆಣಿಕೆಯ ಕೆಲವರ ಜೇಬು ಸೇರುತ್ತಿದೆ. ಬಡವ– ಬಲ್ಲಿದರ ಅಂತರ ಹಿಗ್ಗುತ್ತಿದೆ. ರಾಜಕಾರಣ ಮತ್ತು ಧರ್ಮಕಾರಣ ಎರಡನ್ನೂ ಭ್ರಷ್ಟಗೊಳಿಸುತ್ತಿದೆ ಎಂದು ವಿಷಾದಿಸಿದರು.

‘ಗಾಂಧಿ ಮಾರ್ಗ ಸರಳ ಬದುಕಿನ ಮಾರ್ಗ. ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುತ್ತದೆ ಗಾಂಧಿ ಮಾರ್ಗ. ಆದರೆ, ಬಲಪಂಥೀಯ ರಾಜಕಾರಣವು ವಿಶ್ವಾದ್ಯಂತ ಧಾರ್ಮಿಕ ಅಸಹಿಷ್ಣುತೆ ಹಾಗೂ ಆರ್ಥಿಕ ಅಸಹಿಷ್ಣುತೆಗಳನ್ನು ಬೆಸೆಯುತ್ತಿದೆ. ಪಾರಮಾರ್ಥಿಕ ಕ್ಷೇತ್ರ ಮತ್ತು ಆರ್ಥಿಕ ಕ್ಷೇತ್ರಗಳನ್ನು ಬೆಸೆಯುವ ರೀತಿ ಅದಲ್ಲ. ಗಾಂಧಿ ಮಾರ್ಗ ಮಾತ್ರ ಅದನ್ನು ಬೆಸೆಯಬಲ್ಲದು’ ಎಂದರು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಸನ್ನ ಅವರಿಗೆ ಮಹಾತ್ಮಾಗಾಂಧಿ ಸೇವಾ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ₹ 5 ಲಕ್ಷ ನಗದು ಒಳಗೊಂಡಿತ್ತು. ಪ್ರಶಸ್ತಿಯನ್ನು ಚರಕ ಸಂಸ್ಥೆಯ ಶ್ರಮ ಜೀವಿ ಆಶ್ರಮಕ್ಕೆ ಅರ್ಪಿಸುವುದಾಗಿ ಪ್ರಸನ್ನ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT