ಮಂಗಳವಾರ, ಜನವರಿ 21, 2020
28 °C

ಅಮಿತ್ ಶಾ ಭೇಟಿ ವಿರೋಧಿಸಿ ದಕ್ಷಿಣ ಕನ್ನಡದಲ್ಲಿ ‘ಗೋ ಬ್ಯಾಕ್’ ಚಳವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ಪರವಾಗಿ ಜನಜಾಗೃತಿ ಹೆಸರಿನಲ್ಲಿ ಸಮಾವೇಶ ನಡೆಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇದೇ 19ರಂದು ಮಂಗಳೂರಿಗೆ ಭೇಟಿ ನೀಡುವುದನ್ನು ವಿರೋಧಿಸಿ 'ಗೋ ಬ್ಯಾಕ್ ಅಮಿತ್ ಶಾ' ಹೆಸರಿನಲ್ಲಿ ಚಳವಳಿ ನಡೆಸುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಕಟಿಸಿದೆ.

ಸೋಮವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಹರೀಶ್ ಕುಮಾರ್ ಮತ್ತು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, 'ದಕ್ಷಿಣ ಕನ್ನಡ ಜಿಲ್ಲೆ ಈಗ ಶಾಂತ ಸ್ಥಿತಿಗೆ ಮರಳುತ್ತಿದೆ. ಈ ಹಂತದಲ್ಲಿ ಅಮಿತ್ ಶಾ ಭೇಟಿ ನೀಡಿದರೆ ಮತ್ತೆ ಪ್ರಚೋದನೆಗೆ ಕಾರಣವಾಗುತ್ತದೆ. ಆದ್ದರಿಂದ ಅವರ ಭೇಟಿಗೆ ಅವಕಾಶ ನೀಡಬಾರದು' ಎಂದು ಆಗ್ರಹಿಸಿದರು.

'ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿ ಇರುವ ರಾಜಕೀಯ ಪಕ್ಷವೇ ಪ್ರತಿಭಟನಕಾರರ ವಿರುದ್ಧ ಯುದ್ಧಕ್ಕೆ ಇಳಿದಂತೆ ವರ್ತಿಸಬಾರದು. ಅಮಿತ್ ಶಾ ಭೇಟಿಯಿಂದ ಜಿಲ್ಲೆಯಲ್ಲಿ ಶಾಂತಿ ಕದಡುತ್ತದೆ. ಅದನ್ನು ವಿರೋಧಿಸಿ ನಾವು ಉಪವಾಸ ಸತ್ಯಾಗ್ರಹ ನಡೆಸುತ್ತೇವೆ' ಎಂದು ಐವನ್ ಡಿಸೋಜ ತಿಳಿಸಿದರು.

ಗೋಲಿಬಾರ್ ನಲ್ಲಿ ಮೃತಪಟ್ಟವರ ಮನೆಗಳಿಗೆ ಈವರೆಗೂ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಶಾಸಕರು ಭೇಟಿ ನೀಡಿಲ್ಲ. ಕೇಂದ್ರ ಗೃ ಸಚಿವರು ರಾಜಕೀಯ ಮಾಡಲು ಬರುವುದನ್ನು ಮುಂದೂಡಿ, ಸಚಿವರು ಶಾಸಕರನ್ನು ಸಂತ್ರಸ್ತರ ಮನೆಗಳಿಗೆ ಕಳುಹಿಸಲಿ ಎಂದರು.

ಹರೀಶ್ ಕುಮಾರ್ ಮಾತನಾಡಿ, 'ಸಿಎಎ ಮತ್ತು ಎನ್ಆರ್ ಸಿ ವಿರುದ್ಧದ ಪ್ರತಿಭಟನೆಗಳನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಹಿಂಸಾ ಮಾರ್ಗವನ್ನು ಹಿಡಿದಿರುವುದು ಖಂಡನೀಯ. ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ  ಭಾನುವಾರ ನಡೆದಿರುವ ಹಿಂಸೆಯನ್ನು ಕಾಂಗ್ರೆಸ್ ಖಂಡಿಸುತ್ತದೆ' ಎಂದರು.

ಬಿಜೆಪಿಯ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿಯ ಸದಸ್ಯರೇ ಹಿಂಸಾಚಾರ ನಡೆಸಿರುವ ಆರೋಪವಿದೆ. ದೆಹಲಿ ಪೊಲೀಸರು ಮತ್ತು ವಿಶ್ವವಿದ್ಯಾಲಯದ ಆಡಳಿತದ ಬೆಂಬಲದಲ್ಲೇ ಎಲ್ಲವೂ ನಡೆದಿದೆ ಎಂದು ದೂರಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು