ಬುಧವಾರ, ಸೆಪ್ಟೆಂಬರ್ 23, 2020
20 °C

ಸರ್ಕಾರಿ ಶಾಲೆ ಇದ್ದರೆ ಆರ್‌ಟಿಇ ಶುಲ್ಕ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಒಂದು ಕಿ.ಮೀ. ವ್ಯಾಪ್ತಿಯೊಳಗೆ ಸರ್ಕಾರಿ ಶಾಲೆಗಳು ಇದ್ದರೆ ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆಯಡಿ ಖಾಸಗಿ ಶಾಲೆಗೆ ದಾಖಲಾದ ಮಕ್ಕಳ ಶುಲ್ಕವನ್ನು ಇನ್ನು ಮುಂದೆ ಸರ್ಕಾರ ಮರು ಪಾವತಿಸುವುದಿಲ್ಲ.

ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಗೆ (ತಿದ್ದುಪಡಿ) 2018ಕ್ಕೆ ಬುಧವಾರ ನಡೆದ ಸಚಿವ ಸಂಫುಟ ಅನುಮೋದನೆ ನೀಡಿದೆ. ಸರ್ಕಾರಿ ಶಾಲೆಗಳು ಇಲ್ಲದ ಕಡೆಗಳಷ್ಟೇ ಶುಲ್ಕ ಮರುಪಾವತಿ ಮಾಡಲಾಗುತ್ತದೆ. ಈಗಾಗಲೇ ಶಾಲೆಗೆ ಸೇರಿರುವ ಮಕ್ಕಳಿಗೆ ಹೊಸ ನಿಯಮ ಅನ್ವಯವಾಗುವುದಿಲ್ಲ ಎಂದು ಸಂಪುಟ ಸಭೆಯ ನಂತರ ಕಾನೂನು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

‘ಬಡ ಹಾಗೂ ಹಿಂದುಳಿದ ಮಕ್ಕಳಿಗೆ ಉಚಿತ ಶಿಕ್ಷಣ ಸಿಗಬೇಕು ಎಂಬ ಕಾರಣಕ್ಕೆ ಆರ್‌ಟಿಇ ತರಲಾಯಿತು. ಆದರೆ, ಸರ್ಕಾರಿ ಶಾಲೆ ಇದ್ದರೂ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲಾಗುತ್ತಿದೆ. ಇದರಿಂದ ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರುತ್ತಿಲ್ಲ. ಹೀಗಾಗಿ, ಕಾಯ್ದೆಗೆ ತಿದ್ದುಪಡಿ ತರಲಾಗಿದೆ’ ಎಂದರು.

‘ಆರ್‌ಟಿಇ ಕಾಯ್ದೆಯ ಮೂಲ ಉದ್ದೇಶವೇ ಇದು ಆಗಿತ್ತು. ರಾಜ್ಯ ಸರ್ಕಾರ ಈಗಲಾದರೂ ಅರ್ಥಮಾಡಿಕೊಂಡಿದೆ. ಇದು ಸ್ವಾಗತಾರ್ಹ ಬೆಳವಣಿಗೆ. ಜತೆಗೆ, ಅನುದಾನರಹಿತ ಶಾಲೆಗಳ ಕಡೆಗೂ ರಾಜ್ಯ ಸರ್ಕಾರ ಗಮನ ಹರಿಸಬೇಕು’ ಎಂದು ಅನುದಾನರಹಿತ ಶಾಲೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌ ಒತ್ತಾಯಿಸಿದರು.

ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ

ರಾಜ್ಯದ ಎಲ್ಲ ಸರ್ಕಾರಿ ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ವಿದ್ಯಾರ್ಥಿನಿಯರ ಶುಲ್ಕವನ್ನು ರಾಜ್ಯ ಸರ್ಕಾರವೇ ಭರಿಸಲಿದೆ. ಪ್ರಸಕ್ತ ಸಾಲಿನಿಂದಲೇ ಈ ವ್ಯವಸ್ಥೆ ಜಾರಿಗೆ ಬರಲಿದೆ. ಹೆಣ್ಣು ಮಕ್ಕಳ ಶಿಕ್ಷಣದ ಶುಲ್ಕವನ್ನು ಸರ್ಕಾರವೇ ಭರಿಸಲಿದೆ ಎಂದು ಹಿಂದಿನ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ್ದ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು.

‘ಪದವಿ ಹಾಗೂ ಸ್ನಾತಕೋತ್ತರ ಪದವಿಯ 1.84 ಲಕ್ಷ ಹಾಗೂ ಪದವಿಪೂರ್ವ ಕಾಲೇಜಿನ 1.33 ಲಕ್ಷ ವಿದ್ಯಾರ್ಥಿನಿಯರಿಗೆ ಇದರಿಂದ ಅನುಕೂಲವಾಗಲಿದೆ. ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರಿಂದ ವಿದ್ಯಾರ್ಥಿನಿಯರಿಂದ ಶುಲ್ಕ ಪಡೆದಿರಲಿಲ್ಲ. ಹೀಗಾಗಿ, ಮರುಪಾವತಿ ಪ್ರಶ್ನೆ ಬರುವುದಿಲ್ಲ’ ಎಂದರು.

ಭೂ ಪರಿವರ್ತನೆಗೆ ತಿಂಗಳ ಗಡುವು

ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಲು ಜನಸಾಮಾನ್ಯರು ಇನ್ನು ಸರ್ಕಾರಿ ಕಚೇರಿಗಳಿಗೆ ವರ್ಷಗಟ್ಟಲೆ ಅಲೆದಾಡಬೇಕಿಲ್ಲ. ಒಂದೇ ತಿಂಗಳಲ್ಲಿ ಭೂ ಪರಿವರ್ತನೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಭೂಪರಿವರ್ತನೆ ಪ್ರಕ್ರಿಯೆ ಸರಳಗೊಳಿಸುವ ಪ್ರಸ್ತಾವಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಜನರು ಇನ್ನು ಮುಂದೆ ಇದಕ್ಕಾಗಿ ವಿವಿಧ ಇಲಾಖೆಗಳಿಗೆ ಅರ್ಜಿ ಸಲ್ಲಿಸಬೇಕಿಲ್ಲ. ನಮೂನೆ–ಎ ಯಲ್ಲಿ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದರೆ ಸಾಕು. ಒಂದು ತಿಂಗಳ ಒಳಗೆ ಒಪ್ಪಿಗೆ ನೀಡಬೇಕು. ಒಪ್ಪಿಗೆ ನೀಡದಿದ್ದರೆ ಸಕಾರಣ ನೀಡಬೇಕು. ಉತ್ತರ ನೀಡದಿದ್ದರೆ ಆಕ್ಷೇಪ ಎಂದು ಭಾವಿಸಲಾಗುತ್ತದೆ.

ಈಗ ಭೂಪರಿವರ್ತನೆ ಮಾಡಿಸಿಕೊಳ್ಳಲು ಅರ್ಜಿದಾರರು 20 ದಾಖಲೆಗಳನ್ನು ಸಲ್ಲಿಸಬೇಕಿತ್ತು. ಆರ್‌ಟಿಸಿ, ಮ್ಯುಟೇಷನ್‌ ಪ್ರತಿ, ಭೂಮಿಯ ನಕ್ಷೆ ಹಾಗೂ ಅಪಿಡವಿಟ್‌ಗಳನ್ನು ಸಲ್ಲಿಸಿದರೆ ಸಾಕು.

ಪ್ರವಾಸೋದ್ಯಮ, ವಸತಿ, ಸೌಕರ್ಯ, ಅಭಿವೃದ್ಧಿ.. ಹೀಗೆ ಸಮಗ್ರ ಅಭಿವೃದ್ಧಿ ಸಲುವಾಗಿ ಭೂಪರಿವರ್ತನೆಯ ಅವಶ್ಯಕತೆ ಇದೆ. ಇದಕ್ಕಾಗಿ ನಿಯಮ ಸರಳಗೊಳಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಸರ್ಕಾರಿ ನೌಕರರ ವೇತನ ತಾರತಮ್ಯ ನಿವಾರಣೆ

ಆರನೇ ವೇತನ ಆಯೋಗದ ಶಿಫಾರಸು ಜಾರಿ ಬಳಿಕ ಉಂಟಾಗಿದ್ದ ವೇತನ ತಾರತಮ್ಯ ನಿವಾರಿಸಲು ಸರ್ಕಾರ ನಿರ್ಧರಿಸಿದೆ.

ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದ್ದು, ಬೊಕ್ಕಸಕ್ಕೆ ಹೆಚ್ಚುವರಿಯಾಗಿ ₹400 ಕೋಟಿ ಹೊರೆ ಬೀಳಲಿದೆ.

ವೇತನ ಆಯೋಗದ ಶಿಫಾರಸು ಜಾರಿ ಮಾಡಿದಾಗ, ಎರಡರಿಂದ ನಾಲ್ಕು ವರ್ಷ ಕರ್ತವ್ಯ ನಿರ್ವಹಿಸಿದವರು ಹಾಗೂ 2017ರಲ್ಲಿ ಸರ್ಕಾರಿ ಉದ್ಯೋಗಕ್ಕೆ ಸೇರಿದವರಿಗೆ ಒಂದೇ ಮಾದರಿಯ ವೇತನ ಶ್ರೇಣಿ ನಿಗದಿಯಾಗಿತ್ತು. ಮೂರ್ನಾಲ್ಕು ವಾರ್ಷಿಕ ವೇತನ ಬಡ್ತಿ ಪಡೆದವರಿಗೆ ಸೇವಾ ಹಿರಿತನದ ಅನ್ವಯ ವೇತನ ಶ್ರೇಣಿ ನಿಗದಿಯಾಗಿರಲಿಲ್ಲ. ಈ ತಾರತಮ್ಯ ನಿವಾರಿಸಲಾಗಿದೆ.

ರಜೆ ಕಡಿತ ತೀರ್ಮಾನ ಸಮಿತಿಗೆ: ವರ್ಷಕ್ಕೆ 15 ದಿನ ಇರುವ ಸಾಂದರ್ಭಿಕ ರಜೆಯನ್ನು 8ಕ್ಕೆ ಇಳಿಸಿ, ತಿಂಗಳ ನಾಲ್ಕನೇ ಶನಿವಾರ ರಜೆ ನೀಡಲು ಹಾಗೂ ವಿವಿಧ ಭತ್ಯೆಗಳನ್ನು ಹೆಚ್ಚಿಸಲು ಆಯೋಗ ಶಿಫಾರಸು ಮಾಡಿತ್ತು. ಈ ವಿಷಯಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವ ಜವಾಬ್ದಾರಿಯನ್ನು ಸಚಿವ ಸಂಪುಟ ಉಪ ಸಮಿತಿಗೆ ವಹಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು