ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer| ‘ಸಚಿವರೇ, ದಮ್ಮಯ್ಯ ಇತ್ತ ನೋಡಿ’

ಪ್ರವಾಹಪೀಡಿತ ಜಿಲ್ಲೆಗಳ ಶಾಲೆಗಳ ದುರವಸ್ಥೆಗೆ ಸಿಕ್ಕಿಲ್ಲ ಮುಕ್ತಿ l ಮಕ್ಕಳಿಗೆ ಕೆಸರಲ್ಲಿ ಸಾಗಿ ಬಯಲಲ್ಲಿ ಪಾಠ ಕೇಳುವ ದುಃಸ್ಥಿತಿ
Last Updated 15 ಫೆಬ್ರುವರಿ 2020, 1:35 IST
ಅಕ್ಷರ ಗಾತ್ರ

ಬೆಂಗಳೂರು: ಒಂದೆಡೆ ಮಕ್ಕಳು ಶಾಲೆಗಾಗಿ ಕೆಸರಿನ ಹಾದಿಯಲ್ಲಿ ಮೂರು ಕಿ.ಮೀ. ದೂರ ಕ್ರಮಿಸಬೇಕು. ಇನ್ನೊಂದೆಡೆ ಎರಡು ವರ್ಷಗಳ ಹಿಂದೆ ಮುಚ್ಚಿದ್ದ ಶಾಲೆಗಳು ಇನ್ನೂ ತೆರೆದಿಲ್ಲ. ಮತ್ತೊಂದೆಡೆ ಟೆಂಟ್‌ ಮಳಿಗೆಯಲ್ಲಿ ಮಕ್ಕಳು ಪಾಠ ಕೇಳುವಂತಹ ಸ್ಥಿತಿ.

–ಪ್ರವಾಹಪೀಡಿತ ಜಿಲ್ಲೆಗಳಲ್ಲಿ ಕಂಡು ಬರುತ್ತಿರುವ ಶಿಕ್ಷಣ ಸೌಲಭ್ಯದ ಬಿಂಬಗಳು ಇವು. ಪ್ರವಾಹದ ಹೊಡೆತಕ್ಕೆ ಸಿಕ್ಕು ನಲುಗಿದ ನೂರಾರು ಗ್ರಾಮಗಳು ಇನ್ನೂ ಚೇತರಿಸಿಕೊಂಡಿಲ್ಲ. ಗ್ರಾಮಗಳ ಸ್ಥಳಾಂತರ, ಕಟ್ಟಡ ಕುಸಿತದಂತಹ ಘಟನೆಗಳಿಂದಾಗಿ ಸಾವಿರಾರು ಮಕ್ಕಳ ಪಾಲಿಗೆ ಶಾಲೆಗಳು ದೂರವಾಗಿವೆ. ಮಹಾಪೂರದಲ್ಲಿ ಪಾಟೀಚೀಲಗಳು ತೇಲಿಹೋದ ಬಳಿಕ ಎಷ್ಟೋ ಮಕ್ಕಳು ಶಾಲೆಯಿಂದಲೇ ವಿಮುಖರಾಗಿದ್ದಾರೆ.

ನೆರೆ ಹಾವಳಿಗೆ ಸಿಲುಕಿದ ಜಿಲ್ಲೆಗಳ ಶಾಲಾ ಕಟ್ಟಡಗಳ ಸಮೀಕ್ಷೆ ನಡೆಸಿರುವ ಶಿಕ್ಷಣ ಇಲಾಖೆಯು ಸುಮಾರು ಎಂಟು ಸಾವಿರ ಕಟ್ಟಡಗಳು ಹಾನಿಗೊಳಗಾಗಿವೆ ಎಂದು ಲೆಕ್ಕಹಾಕಿದೆ. ಆದರೆ, ಆರು ತಿಂಗಳು ಕಳೆದರೂ ಅವುಗಳ ದುರಸ್ತಿಯಲ್ಲಿ ಹೆಚ್ಚಿನ ಪ್ರಗತಿಯಾಗಿಲ್ಲ. ಪುನರ್‌ವಸತಿ ಕಲ್ಪಿಸಲಾದ ಪ್ರದೇಶಗಳಲ್ಲಿ ಶಾಲೆಗಳನ್ನು ತೆರೆಯದ್ದರಿಂದ ಸಮಸ್ಯೆಯ ತೀವ್ರತೆ ಮತ್ತಷ್ಟು ಹೆಚ್ಚಿದೆ.

‘ಶಿಕ್ಷಣ ಸಚಿವರೇ, ನಿಮ್ಮ ದಮ್ಮಯ್ಯ ಅಂತೀವಿ. ದಯವಿಟ್ಟು ಶಾಲಾ ಕಟ್ಟಡಕ್ಕೆ ಒಂದು ವ್ಯವಸ್ಥೆ ಮಾಡಿ’ ಎಂಬುದು ನೆರೆ ಹಾವಳಿಗೆ ತುತ್ತಾಗಿರುವ ಬಹುತೇಕ ಗ್ರಾಮಗಳಲ್ಲಿ ಕೇಳಿಬರುತ್ತಿರುವ ಒಕ್ಕೊರಲ ಮನವಿ. ಹಲವೆಡೆ ಪಾಠ ಕೇಳಲು, ಊಟ ಮಾಡಲು ನೆರಳಿನ ವ್ಯವಸ್ಥೆಯಿಲ್ಲದೆ ಮಕ್ಕಳು ಬಿಸಿಲಲ್ಲಿ ಬಳಲುವ ಸ್ಥಿತಿ ಹಾಗೇ ಮುಂದುವರಿದಿದೆ.

ಮಕ್ಕಳಿಗೆ ಈ ಶಾಲೆ ದೂರ, ಬಲು ದೂರ!

ಬಾಗಲಕೋಟೆ: ಮಲಪ್ರಭಾ ನದಿ ಹಾಗೂ ಬೆಣ್ಣೆಹಳ್ಳದ ಪ್ರವಾಹದ ಅಟಾಟೋಪಕ್ಕೆ ಸಿಲುಕಿ ಜರ್ಜರಿತವಾದ ಬಾದಾಮಿ ತಾಲ್ಲೂಕಿನ ಮುಮ್ಮರಡ್ಡಿಕೊಪ್ಪದಲ್ಲಿ ಮಕ್ಕಳಿಗೆ ಈಗ ಶಾಲೆಯೂ ಬಲು ದೂರ.

ಗ್ರಾಮದಲ್ಲಿ ಪ್ರವಾಹಕ್ಕೆ ಸಿಲುಕಿದ್ದ ಶೇ 80ರಷ್ಟು ಜನರನ್ನು ಅಲ್ಲಿಂದ ಮೂರು ಕಿ.ಮೀ ದೂರದ ಆಸರೆ ಮನೆಗಳ ಕಾಲೊನಿಗೆ ಸ್ಥಳಾಂತರಿಸಲಾಗಿದೆ. ಆದರೆ ಶಾಲೆ ಮಾತ್ರ ಗ್ರಾಮದಲ್ಲಿಯೇ ಇದೆ. ಹೀಗಾಗಿ ಮಕ್ಕಳ ಹಾಜರಾತಿ ಅರ್ಧಕ್ಕರ್ಧ ಕುಸಿದಿದೆ. ಇಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 28 ಮಕ್ಕಳು ದಾಖಲಾಗಿದ್ದರೂ 15 ಮಕ್ಕಳಷ್ಟೇ ಬರುತ್ತಿದ್ದಾರೆ.

ಹುಣಸೂರು ವರದಿ: ಕಳೆದ ಆಗಸ್ಟ್‌ನಲ್ಲಿ ಲಕ್ಷ್ಮಣತೀರ್ಥ ನದಿಗೆ ಬಂದ ಪ್ರವಾಹದಿಂದಾಗಿ, ತಾಲ್ಲೂಕಿನ ಕಾಡಂಚಿನ ಗ್ರಾಮಗಳು ತೀವ್ರ ಸಮಸ್ಯೆಗೆ ಸಿಲುಕಿದ್ದವು. ಅಲ್ಲದೆ, ಶಾಲೆಗಳೂ ಶಿಥಿಲಗೊಂಡಿದ್ದವು. ಹನಗೋಡು ಹೋಬಳಿ ಹಾಗೂ ನೇರಳಕುಪ್ಪೆ ಗ್ರಾಮ ಪಂಚಾಯಿತಿ ಭಾಗದಲ್ಲಿ ನೆರೆ ಹಾವಳಿಗೆ 54 ಶಾಲೆಗಳು ಶಿಥಿಲಗೊಂಡಿವೆ. ಇಂದಿಗೂ ದುರಸ್ತಿ ಕಾಮಗಾರಿ ನಿಧಾನವಾಗಿ ನಡೆದಿರುವುದರಿಂದ 2,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೊಠಡಿಗಳ ಹೊರಗೆ ಅಭ್ಯಾಸ ಮಾಡುತ್ತಿದ್ದಾರೆ.

ಅಂದು ಮುಚ್ಚಿದ ಬಾಗಿಲು ಇಂದೂ ತೆರೆದಿಲ್ಲ

ಮಡಿಕೇರಿ: ಎರಡು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಸುರಿದಿದ್ದ ಧಾರಾಕಾರ ಮಳೆಯ ನಂತರ ಬಾಗಿಲು ಮುಚ್ಚಿದ್ದ ನಾಲ್ಕು ಶಾಲೆಗಳು ಇನ್ನೂ ತೆರೆದಿಲ್ಲ!

ಮಕ್ಕಳ ಕಲರವ, ಆಟ–ಪಾಠ ಕೇಳಿಬರುತ್ತಿದ್ದ ಶಾಲಾ ಆವರಣವು ಈಗಲೂ ಬಿಕೋ ಎನ್ನುತ್ತಿದೆ. 2ನೇ ಮೊಣ್ಣಂಗೇರಿ, ಕಾಲೂರು, ಹೆಬ್ಬಟ್ಟಗೇರಿ ಹಾಗೂ ಅರೆಕಲ್ಲು ಗ್ರಾಮದ ಸರ್ಕಾರಿ ಶಾಲೆಗಳು ಈಗಲೂ ಬಂದ್‌ ಆಗಿವೆ.

ಮೊಣ್ಣಂಗೇರಿಯ ಶಾಲೆಯ ಸ್ಥಿತಿ ನೋಡಿದರೆ, ಆಗಲೋ–ಈಗಲೋ ಬೀಳುವ ಸ್ಥಿತಿಗೆ ತಲುಪಿದೆ. ಶಾಲಾ ಆವರಣದ ಸುತ್ತ ಗಿಡಗಂಟಿಗಳು ಬೆಳೆದಿವೆ. ಬಿಸಿಯೂಟ ತಯಾರಿಸುತ್ತಿದ್ದ ಅಡುಗೆ ಕೋಣೆಯಲ್ಲಿ ಸದ್ದಿಲ್ಲ. ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕರನ್ನೂ ಹತ್ತಿರದ ಶಾಲೆಗಳಿಗೆ ನಿಯೋಜಿಸಲಾಗಿದೆ ಎಂದು ಹೇಳುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು.

ಮೊಣ್ಣಂಗೇರಿ ಭಾಗದಲ್ಲಿ ಭಾರಿ ಭೂಕುಸಿತವಾಗಿತ್ತು. ಅದಾದನಂತರ ಸಂಭವನೀಯ ಭೂಕುಸಿತಕ್ಕೆ ಹೆದರಿದ ಬಹುತೇಕರು ಗ್ರಾಮ ತೊರೆದಿದ್ದಾರೆ. ಹೀಗಾಗಿ, ವಿದ್ಯಾರ್ಥಿಗಳೂ ಈ ಶಾಲೆಗಳತ್ತ ಬಂದಿಲ್ಲ.

ತರಗತಿಗೆ ಟೆಂಟ್‌ ಮಳಿಗೆ ಗತಿ

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಾಳೂರುಹೊರಟ್ಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರ ಎರಡಕ್ಕೂ ಟೆಂಟ್‌ ಮಳಿಗೆ ಗತಿಯಾಗಿದೆ. ಕಳೆದ ವರ್ಷ ಮಹಾಮಳೆಗೆ ಶಾಲಾ ಕಟ್ಟಡ ಕುಸಿದುಬಿದ್ದಿತ್ತು. ಮರುನಿರ್ಮಾಣಕ್ಕೆ ಈವರೆಗೆ ಕ್ರಮ ವಹಿಸಿಲ್ಲ.

‘ಜೋಪಡಿ’ಗೆ ಗ್ರಾಮಸ್ಥರೇ ಟಾರ್ಪಾಲು ಕಟ್ಟಿ, ಚಾವಣಿಗೆ ಶೀಟುಗಳನ್ನು ಅಳವಡಿಸಿ ಕಲಿಕೆ, ಬೋಧನೆಗೆ ವ್ಯವಸ್ಥೆ ಮಾಡಿದ್ದಾರೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನೆಲದಲ್ಲಿ ಕುಳಿತುಕೊಳ್ಳಬೇಕಾದ ಸ್ಥಿತಿ ಇದೆ.

‘ನಮ್ಮ ಅಣ್ಣ, ದೊಡ್ಡಮ್ಮ ಅಪಘಾತದಲ್ಲಿ ತೀರಿಹೋದರು. ಅವರ ಸ್ಮರಣಾರ್ಥ ನಮ್ಮ ಅಂಗಡಿ ಮಳಿಗೆಯನ್ನು ಶಾಲೆಗೆ ಬಿಟ್ಟುಕೊಟ್ಟಿದ್ದೇವೆ’ ಎಂದು ಗ್ರಾಮಸ್ಥರಾದ ಸುಮಿತ್ರಾ ಹೇಳುತ್ತಾರೆ.

ಕಿರಿಯ ಪ್ರಾಥಮಿಕ ಶಾಲೆಯಲ್ಲಿ 12 ಮತ್ತು ಅಂಗನವಾಡಿ ಕೇಂದ್ರದಲ್ಲಿ 10 ಮಕ್ಕಳು ಇದ್ದಾರೆ. ಶಾಲೆಯಲ್ಲಿ ಇಬ್ಬರು ಶಿಕ್ಷಕರು ಇದ್ದಾರೆ. ಬಾಳೂರು ಗ್ರಾಮ ಪಂಚಾಯಿತಿಯವರು ತಾತ್ಕಾಲಿಕ ಶೌಚಾಲಯವೊಂದನ್ನು ನಿರ್ಮಿಸಿದ್ದಾರೆ.

‌ಮಳೆಯಾದರೆ ಟೆಂಟ್‌ ಮಳಿಗೆಯೊಳಕ್ಕೆ ನೀರು ನುಗ್ಗುತ್ತದೆ. ಇರುಚಲು ಹೊಡೆಯುತ್ತದೆ. ಹಾಜರಿ ಪುಸ್ತಕ, ಲೇಖನ ಸಾಮಗ್ರಿಗಳನ್ನು ಸುರಕ್ಷಿತವಾಗಿ ಇಡುವುದೂ ಸವಾಲಾಗಿದೆ.

ಬಾಳೂರುಹೊರಟ್ಟಿ, ಮಲ್ಲಹಳ್ಳಿ, ಕಾಡುಗದ್ದೆ ಗ್ರಾಮಗಳ ಮಕ್ಕಳು ಈ ಶಾಲೆಗೆ ಬರುತ್ತಾರೆ. ಒಂದಿಬ್ಬರು ಮಕ್ಕಳು ಟಿ.ಸಿ (ವರ್ಗಾವಣೆ ಪತ್ರ) ಪಡೆದು ಬೇರೆಡೆಗೆ ತೆರಳಿದ್ದಾರೆ. ಶಾಲೆಗೆ ಕಟ್ಟಡ ನಿರ್ಮಿಸಲು ಕ್ರಮ ವಹಿಸಬೇಕು ಎಂಬುದು ವಿದ್ಯಾರ್ಥಿಗಳು, ಗ್ರಾಮಸ್ಥರ ಮೊರೆ.

ಜಗುಲಿ ಮೇಲೆ ಮಕ್ಕಳಿಗೆ ಪಾಠ

ಹಾಸನ: ಅರಸೀಕೆರೆ ನಗರದ ಹೆಂಜಗೊಂಡನಹಳ್ಳಿ ಬಡಾವಣೆಯಲ್ಲಿರುವ, ಎರಡು ಕೊಠಡಿಗಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಶಾಲಾ ಜಗುಲಿಯ ಮೇಲೆ ಪಾಠ ಕೇಳುತ್ತಾರೆ.

ಇಲ್ಲಿ 13 ಮಕ್ಕಳು ಓದುತ್ತಿದ್ದು, ಇಬ್ಬರು ಶಿಕ್ಷಕರಿದ್ದಾರೆ. ಎರಡು ದಶಕದ ಹಿಂದೆಯೇ ನಿರ್ಮಿಸಿರುವ ಈ ಶಾಲಾ ಕಟ್ಟಡ ಇದೀಗ ಕುಸಿದು ಬೀಳುವ ಹಂತದಲ್ಲಿದೆ. ಗೋಡೆಗಳು ಬಿರುಕು ಬಿಟ್ಟಿದ್ದು, ಸಿಮೆಂಟ್‌ ಉದುರುತ್ತಿದೆ. ಹೆಂಚುಗಳು ಒಡೆದಿವೆ.

ಯಾವುದೇ ಕ್ಷಣದಲ್ಲಿ ಗೋಡೆ ಕುಸಿದು ಬೀಳುವ ಸಾಧ್ಯತೆ ಇರುವುದನ್ನು ಮನಗಂಡು, ಒಂದು ಕೊಠಡಿಗೆ ಬೀಗ ಹಾಕಲಾಗಿದೆ. ಮತ್ತೊಂದು ಕೊಠಡಿಯನ್ನು ಶಿಕ್ಷಕರು ಕಚೇರಿ ಮಾಡಿಕೊಂಡಿದ್ದಾರೆ. ಬೀಗ ಜಡಿದ ಕೊಠಡಿಯ ಮುಂಭಾಗದ ಜಗುಲಿಯ ಮೇಲೆ ಮಕ್ಕಳಿಗೆ ಪಾಠ ಹೇಳಿಕೊಡಲಾಗುತ್ತಿದೆ.

***

* 23 –ನೆರೆ ಹಾವಳಿಗೆ ಸಿಲುಕಿದ ಜಿಲ್ಲೆಗಳು

* 7,492 –ಹಾನಿಗೊಳಗಾದ ಪ್ರಾಥಮಿಕ ಶಾಲೆಗಳು

* 285 –ಹಾನಿಗೊಳಗಾದ ಪ್ರೌಢಶಾಲೆಗಳು

* 7,777 –ಹಾನಿಗೊಳಗಾದ ಒಟ್ಟು ಶಾಲೆಗಳು

* ₹344 ಕೋಟಿ –ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕಿದ್ದ ದುಡ್ಡು

* ₹ 199 ಕೋಟಿ –ಇದುವರೆಗೆ ಬಿಡುಗಡೆಯಾಗಿರುವ ದುಡ್ಡು

ಜಿಲ್ಲಾವಾರು ಶಾಲೆಗಳ ಹಾನಿ ವಿವರ

* 1,305 – ಚಿಕ್ಕೋಡಿ ಜಿಲ್ಲೆ

* 1,074 –ಶಿವಮೊಗ್ಗ ಜಿಲ್ಲೆ

* 1,025 -ಗದಗ ಜಿಲ್ಲೆ

* 868 -ಬೆಳಗಾವಿ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT