ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಪಾಲರ ಆಹ್ವಾನ: ಟೀಕೆ

Last Updated 26 ಜುಲೈ 2019, 19:51 IST
ಅಕ್ಷರ ಗಾತ್ರ

ಬೆಂಗಳೂರು: ಬಹುಮತ ಇಲ್ಲದೆ ಇದ್ದರೂ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ. ಅವರ ತರಾತುರಿಯ ನಿರ್ಧಾರವನ್ನು ರಾಜ್ಯಪಾಲರು ಒಪ್ಪಿರುವುದು ಸಂಸದೀಯ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಬಿಜೆಪಿಯವರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಶಾಸಕರ ಖರೀದಿ:ಸ್ವಸಾಮರ್ಥ್ಯದಿಂದ ಬಹುಮತ ಸಾಬೀತುಪಡಿಸಲು ಸಾಧ್ಯವಿಲ್ಲವಾಗಿದ್ದು, ಶಾಸಕರ ಖರೀದಿಯಿಂದ ಬಹುಮತ ಸಾಬೀತು ಮಾಡಲು ಸಾಧ್ಯ. ವಾಮಮಾರ್ಗದಲ್ಲಿ ಸರ್ಕಾರ ರಚನೆಯಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ.

ಶಾಸಕರ ರಾಜೀನಾಮೆ ವಿಚಾರಣೆ ಸಭಾಧ್ಯಕ್ಷರ ಮುಂದೆ ಇನ್ನೂ ಬಾಕಿ ಇದ್ದು, ಇತ್ಯರ್ಥ ಆಗುವವರೆಗೂ ಅವರೆಲ್ಲಾ ಕಾಂಗ್ರೆಸ್, ಜೆಡಿಎಸ್ ಶಾಸಕರೇ ಆಗಿರುತ್ತಾರೆ. ಬಿಜೆಪಿ 105 ಸಂಖ್ಯಾಬಲ ಹೊಂದಿದ್ದು, ಈ ಸಂಖ್ಯೆಯನ್ನು 112ಕ್ಕೆ ಹೆಚ್ಚಿಸಿಕೊಳ್ಳಲು ಹೇಗೆ ಸಾಧ್ಯ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

ಬಿ.ಎಸ್.ಯಡಿಯೂರಪ್ಪ ಬಹುಮತ ಇಟ್ಟುಕೊಂಡು ಮುಖ್ಯಮಂತ್ರಿ ಆಗಿಲ್ಲ. ಮೂರು ಬಾರಿಯೂ ಆಪರೇಷನ್ ಕಮಲದ ಮೂಲಕ ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂದಿದ್ದಾರೆ. ಶಾಸಕರ ಖರೀದಿ ಮೂಲಕ ಸರ್ಕಾರ ರಚನೆಯಾಗುತ್ತಿದ್ದರೂ, ಅದಕ್ಕೆ ರಾಜ್ಯಪಾಲರು ಅವಕಾಶ ನೀಡಿದ್ದಾರೆ ಎಂದು ದೂರಿದ್ದಾರೆ.

ರಾಜ್ಯಪಾಲರ ನಿಲುವು ಸಂವಿಧಾನ ಬಾಹಿರ, ಜನಾದೇಶಕ್ಕೆ ವಿರುದ್ಧವಾಗಿದೆ. ಇದು ಪ್ರಜಾಪ್ರಭುತ್ವ ಮೌಲ್ಯಗಳಿಗೆ ಎಸಗುತ್ತಿರುವ ಅಪಚಾರವಾಗಿದೆ ಎಂದು ಆರೋಪಿಸಿದ್ದಾರೆ.

ಜೆಡಿಎಸ್ ಅಪಸ್ವರ: ಬಹುಮತದ ಸರ್ಕಾರ ರಚನೆಯ ಕುರಿತು ಯಾವುದೇ ಅನುಮಾನ ವ್ಯಕ್ತಪಡಿಸದೆ ಒಂದೇ ನಿಮಿಷದಲ್ಲಿ ರಾಜ್ಯಪಾಲರು ಸರ್ಕಾರ ರಚನೆಗೆ ಅನುಮತಿ ನೀಡಿದ್ದು, ಪ್ರಜಾಪ್ರಭುತ್ವದ ವಿರೋಧಿ ನಿರ್ಧಾರ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.

ವಿಧಾನಸಭೆಯ ಸಂಖ್ಯಾ ಬಲ 222. ಬಹುಮತಕ್ಕೆ ಬೇಕಾಗಿರುವ ಸಂಖ್ಯಾ ಬಲ 112. ಆದರೆ ಬಿಜೆಪಿಯವರು ತಮಗೆ 105 ಶಾಸಕರ ಬೆಂಬಲವಿದ್ದು, ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಯಾವುದೇ ಯೋಚನೆ ಮಾಡದೆ ತಕ್ಷಣ ಅನುಮತಿ ನೀಡಲಾಗಿದೆ ಎಂದು ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT