ಶುಕ್ರವಾರ, ಫೆಬ್ರವರಿ 28, 2020
19 °C

ಪಕ್ಷ ಸೂಚಿಸಿದರೆ ಇಲ್ಲಿಂದಲೇ ಕಾರು ವಾಪಸು ಕಳಿಸಿ, ಬಸ್ಸಿನಲ್ಲಿ ತೆರಳುವೆ: ಕಾರಜೋಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ‘ಸ್ಥಾನ ತ್ಯಜಿಸಲು ಪಕ್ಷ ಸೂಚಿಸಿದರೆ ಇಲ್ಲಿಂದಲೇ ಕಾರು ವಾಪಸು ಕಳಿಸಿ, ಬಸ್ಸಿನಲ್ಲಿ ತೆರಳುತ್ತೇನೆ’ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಪ್ರತಿಕ್ರಿಯಿಸಿದರು. 

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ,‘ಕೆಲ ದಿನಗಳಲ್ಲಿ ಸಂಪುಟ ವಿಸ್ತರಣೆ ಆಗಿಯೇ ಆಗುತ್ತದೆ. ಪಕ್ಷದ ನಿಲುವಿಗೆ ಬದ್ಧರಾಗಿರುತ್ತೇವೆ. ರಾಜಕಾರಣಿಗೆ ಪಕ್ಷ ತಾಯಿ ಇದ್ದಂತೆ. ಪಕ್ಷದ ನಿರ್ಣಯ ಗೌರವಿಸದಿದ್ದರೆ ಬೆಳೆಯಲು ಸಾಧ್ಯ ಇಲ್ಲ’ ಎಂದು ಉತ್ತರಿಸಿದರು. 

‘ಕೆಲವರು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆಗುತ್ತೇನೆಂದು ಹೇಳಿದ್ದಾರೆ. ಮತ್ತೆ ಕೆಲವರು ಆ ಸ್ಥಾನ ಕೊಡಿ ಎಂದು ಕೋರಿಕೆ ಇಟ್ಟಿದ್ದಾರೆ. ಇವೆಲ್ಲ ಸಾಮಾನ್ಯ’ ಎಂದರು. 

‘ಸಚಿವ ಸ್ಥಾನಕ್ಕಾಗಿ ಜಾತಿ ಆಧಾರದಲ್ಲಿ ಒತ್ತಡಗಳು ಹೆಚ್ಚಾಗಬಾರದು. ಪಕ್ಷಕ್ಕಾಗಿ  ದುಡಿದವರು, ಪ್ರಾದೇಶಿಕ, ಜಿಲ್ಲಾವಾರು ಪ್ರಾತಿನಿಧ್ಯ ಮುಂದಿಟ್ಟುಕೊಂಡು ನಿರ್ಣಯ ಮಾಡಬೇಕು. ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬುದನ್ನು ವರಿಷ್ಠರು ತೀರ್ಮಾನಿಸುತ್ತಾರೆ’ ಎಂದು ಹೇಳಿದರು. 

‘ಹೈಕಮಾಂಡ್‌ ಸ್ವಾತಂತ್ರ್ಯ ನೀಡದಿದ್ದರೆ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಸಾಧ್ಯವಾಗುತ್ತಿತ್ತೇ? ಅವರಿಗೆ ಪೂರ್ಣ ಸ್ವಾತಂತ್ರ್ಯ, ಅಧಿಕಾರ ಇದೆ. ಹೈಕಮಾಂಡ್‌ ಜತೆ ಚರ್ಚಿಸಿ ಅವರು ನಿರ್ಧಾರ ಕೈಗೊಳ್ಳುತ್ತಾರೆ’ ಎಂದರು. 

‘ಅತಿವೃಷ್ಟಿಯಿಂದ ಮೂಡಿಗೆರೆ ಭಾಗದಲ್ಲಿ ಕೊಚ್ಚಿ ಹೋಗಿರುವ ಸೇತುವೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಸೇತುವೆಗಳ ಕಾಮಗಾರಿ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರಿಗೆ ಕೋರಿಕೆ ಸಲ್ಲಿಸಲು ತಿಳಿಸಿದ್ದೇನೆ’ ಎಂದು ಉತ್ತರಿಸಿದರು. 

‘ಮಲೆನಾಡು ಭಾಗದಲ್ಲಿ ಹೆಚ್ಚು ಹಾನಿಯಾಗಿರುವ ಮಾಹಿತಿ ಇದೆ. ಮೂಡಿಗೆರೆ, ಶೃಂಗೇರಿ, ಚಿಕ್ಕಮಗಳೂರು ಕ್ಷೇತ್ರಗಳಿಗೆ ಬಜೆಟ್‌ನಲ್ಲಿ ಹೆಚ್ಚು ಅನುದಾನ ಒದಗಿಸಲು ಆದ್ಯತೆ ನೀಡುತ್ತೇನೆ’ ಎಂದರು. 

‘ಕಸ್ತೂರಿ ರಂಗನ್‌ ವರದಿ ಜಾರಿ ನಿಟ್ಟಿನಲ್ಲಿ ಅನೇಕ ಬಾರಿ ಚರ್ಚಿಸಲಾಗಿದೆ.  ಮುಖ್ಯಮಂತ್ರಿಯವರು ಸಭೆ ನಡೆಸಿ ನಿರ್ಣಯ ಕೈಗೊಳ್ಳುತ್ತಾರೆ. ಎ.ಜೆ.ಸದಾಶಿವ ಆಯೋಗದ ವರದಿ ಜಾರಿ ನಿಟ್ಟಿನಲ್ಲಿ ಸ್ವಲ್ಪ ದಿನ ಕಾಯುಬೇಕಾಗುತ್ತದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು