ಬುಧವಾರ, ಆಗಸ್ಟ್ 21, 2019
24 °C

ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ಒದಗಿಸಬೇಕು: ಕುಮಾರಸ್ವಾಮಿ ಒತ್ತಾಯ

Published:
Updated:
Prajavani

ಬೆಳಗಾವಿ: ‘ರಾಜ್ಯದ ವಿವಿಧ‌ ಜಿಲ್ಲೆಗಳಲ್ಲಿ ನೆರೆಯಿಂದಾಗಿ ನೆಲೆ ಕಳೆದುಕೊಂಡ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಹೆಚ್ಚಿನ ಪರಿಹಾರ ನೀಡಬೇಕು’ ಎಂದು ಜೆಡಿಎಸ್ ಮುಖಂಡ, ಶಾಸಕ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದರು.

ಸಾಂಬ್ರಾ ವಿಮಾನನಿಲ್ದಾಣದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರವು ತನ್ನ ಪಾಲಿನ ಪರಿಹಾರ ನೀಡುವಾಗ ತಾರತಮ್ಯ ನಿಲುವು ತಾಳಬಾರದು. ಅಗತ್ಯ ಅನುದಾನ ನೀಡಿ ಜನರಿಗೆ ನೆರವಾಗಬೇಕು’ ಎಂದು ಒತ್ತಾಯಿಸಿದರು.

‘ನಾನು ಜ್ವರದಿಂದ ಬಳಲುತ್ತಿದ್ದೆ. ಇನ್ನೂ ಸಂಪೂರ್ಣ ಗುಣಮುಖವಾಗಿಲ್ಲ. ಆದರೆ, ಪ್ರವಾಹಪೀಡಿತ ಜನತೆಯ ಸಂಕಷ್ಟ ಕಂಡು ಮನೆಯಲ್ಲಿ ಇರಲು ಆಗಲಿಲ್ಲ. ಬೆಳಗಾವಿ ಪ್ರವಾಸ ಮುಗಿಸಿ, ಭಾನುವಾರ ಕೊಡಗಿಗೆ ಹೋಗುತ್ತೇನೆ. ಸಂತ್ರಸ್ತರ ಅಳಲು ಕೇಳುತ್ತೇನೆ’ ಎಂದರು.

‘ಅಗತ್ಯಬಿದ್ದರೆ ಸಂತ್ರಸ್ತರಿಗೆ ಆಹಾರ ಧಾನ್ಯ ವ್ಯವಸ್ಥೆ ಮಾಡುತ್ತೇ‌ನೆ. ಮಧುರೈನಿಂದ 10ಸಾವಿರ ಹೊದಿಕೆಗಳನ್ನು (ರಗ್ಗು) ತರಿಸಿ ವಿತರಿಸಲಾಗುವುದು’ ಎಂದು ಹೇಳಿದರು.

‘ಪ್ರವಾಹ ಪರಿಸ್ಥಿತಿ ನಿಭಾಯಿಸುವ ಜವಾಬ್ದಾರಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲಿದೆ. ಅಧಿಕಾರಿಗಳಿಂದ ಸರಿಯಾಗಿ ಕೆಲಸ ಮಾಡಿಸಿಕೊಳ್ಳಬೇಕು. ನಾನು ಯಾವುದೇ ರಾಜಕೀಯ ಮಾಡುವುದಕ್ಕೋಸ್ಕರ ನೆರೆ ಸಮೀಕ್ಷೆ ನಡೆಸುತ್ತಿಲ್ಲ. ಜನರಿಗೆ ಒಳ್ಳೆಯದಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬೇಕು’ ಎಂದರು.

ಬಳಿಕ, ಬಳ್ಳಾರಿ ನಾಲೆಯಿಂದ ಜಲಾವೃತವಾಗಿರುವ ಜಮೀನುಗಳು, ಬಡಾವಣೆಗಳನ್ನು ವೀಕ್ಷಿಸಿದರು. ಬಳ್ಳಾರಿ ನಾಲೆಯಲ್ಲಿ ಸಿಲುಕಿ ಪ್ರಾಣಾಪಾಯದಿಂದ ಪಾರಾಗಿ ಬಂದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಲ್ಲಪ್ಪ–ರತ್ನವ್ವ ದಂಪತಿಯ ಆರೋಗ್ಯ ವಿಚಾರಿಸಿದರು.

Post Comments (+)