ಶುಕ್ರವಾರ, ಸೆಪ್ಟೆಂಬರ್ 20, 2019
21 °C

ಗಾಂಧಿ, ಗೌರಿ ಹತ್ಯೆಗೆ ನ್ಯಾಯ ಸಿಕ್ಕಿಲ್ಲ: ಕನ್ಹಯ್ಯ

Published:
Updated:

ಬೆಂಗಳೂರು: ‘ರಾಷ್ಟ್ರಪಿತ ಮಹಾತ್ಮ ಗಾಂಧಿ ಹತ್ಯೆಗೂ ಗೌರಿ ಹತ್ಯೆಗೂ ವ್ಯತ್ಯಾಸವಿಲ್ಲ. ವಿಪರ್ಯಾಸ ಎಂದರೆ ಇಬ್ಬರ ಸಾವಿಗೂ ನ್ಯಾಯ ದೊರೆತಿಲ್ಲ’ ಎಂದು ಜೆಎನ್‌ಯು ವಿದ್ಯಾರ್ಥಿ ನಾಯಕ ಕನ್ಹಯ್ಯಕುಮಾರ್ ಹೇಳಿದರು.

ಗೌರಿ ಸ್ಮಾರಕ ಟ್ರಸ್ಟ್ ನಗರದಲ್ಲಿ ಗುರುವಾರ ಆಯೋಜಿಸಿದ್ದ ಗೌರಿ ನೆನಪು ಹಾಗೂ ಎ.ಕೆ. ಸುಬ್ಬಯ್ಯ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗಾಂಧಿ ಹತ್ಯೆ ಮಾಡಿದವರನ್ನು ಪೊಲೀಸರು ಜೈಲಿಗೆ ತಳ್ಳಿದ್ದರು. ಗೌರಿ ಅವರನ್ನು ಕೊಂದವರೂ ಜೈಲು ಸೇರಿದ್ದಾರೆ. ಇದರಿಂದ ಯಾವ ಬದಲಾವಣೆಯೂ ಆಗುವುದಿಲ್ಲ. ಕೊಲೆಗೆ ಪ್ರೇರೇಪಿಸಿದ ಸಿದ್ಧಾಂತ ನಾಶವಾದರೆ ಮಾತ್ರ ಈ ಇಬ್ಬರಿಗೆ ಸಾವಿಗೆ ನ್ಯಾಯ ದೊರಕಿದಂತೆ ಆಗಲಿದೆ’ ಎಂದು ಅವರು ಪ್ರತಿಪಾದಿಸಿದರು.

‘ಗಾಂಧಿ ಕೊಂದ ಗೋಡ್ಸೆ ಹೆಸರನ್ನು ಸೇತುವೆಗಳಿಗೆ ನಾಮಕರಣ ಮಾಡಲಾಗಿದೆ. ಆತನ ಚಿತ್ರವನ್ನು ಸಂಸತ್ತಿನಲ್ಲಿ ಇಡಲಾಗಿದೆ. ಇಂತಹ ದುಃಸ್ಥಿತಿಯಲ್ಲಿ ನ್ಯಾಯ ಸಿಗುವುದು ಹೇಗೆ’ ಎಂದು ಪ್ರಶ್ನಿಸಿದರು.

‘ದೇಶದಲ್ಲಿ ಇಂದು ನಡೆಯುತ್ತಿರುವುದು ನ್ಯಾಯ–ಅನ್ಯಾಯ, ಮಾನವೀಯತೆ–ಕ್ರೌರ್ಯದ ನಡುವಿನ ಸಂಘರ್ಷವೇ ಹೊರತು, ಕಾಂಗ್ರೆಸ್‌–ಬಿಜೆಪಿ ನಡುವಿನ ಹೋರಾಟವಲ್ಲ. ನಮ್ಮ ಸಂಖ್ಯೆ ಚಿಕ್ಕದಿರಬಹುದು, ಆದರೆ, ಗುರಿ ದೊಡ್ಡದು’ ಎಂದು ಹೇಳಿದರು.

‘ಗೌರಿ ಲಂಕೇಶ್‌’ ಕುರಿತ ಪುಸ್ತಕದ ಬಗ್ಗೆ ಮಾತನಾಡಿದ ಸಾಹಿತಿ ಕೆ. ಶರೀಫಾ, ‘ಗೌರಿ ನಂಬಿಕೊಂಡು ಬಂದಿರುವ ಸಮಾನತೆ, ಸೌಹಾರ್ದತೆಯ ಅಂಶಗಳು ಈ ಕೃತಿಯಲ್ಲಿ ದಾಖಲಾಗಿವೆ’ ಎಂದರು.

ಗೌರಿ ಟ್ರಸ್ಟ್ ಕಾರ್ಯದರ್ಶಿ ಕೆ.ಎಲ್‌. ಅಶೋಕ್‌, ‘ಎ.ಕೆ.ಸುಬ್ಬಯ್ಯ ಅವರು ಜೀವನದುದ್ದಕ್ಕೂ ನಡೆಸಿದ ಹೋರಾಟದಲ್ಲಿ ಬುದ್ಧನ ತಾತ್ವಿಕತೆ ಬೆಸೆದುಕೊಂಡಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದರೂ ಚಳವಳಿಯಿಂದ ಅವರು ಹಿಂದೆ ಸರಿದಿರಲಿಲ್ಲ’ ಎಂದು ಸ್ಮರಿಸಿದರು.

Post Comments (+)