ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರೇ ತ್ರಿಚಕ್ರ ವಾಹನ ಕೊಟ್ಟರೆ ಸಾಕೆ? : ಆಯುಕ್ತ ವಿ.ಎಸ್‌. ಬಸವರಾಜು ಪ್ರಶ್ನೆ

21 ಬಗೆಯ ಅಂಗವೈಕಲ್ಯಕ್ಕೂ ಸೌಲಭ್ಯ ಕೊಡಲು ಆಗ್ರಹ
Last Updated 28 ಜೂನ್ 2019, 18:53 IST
ಅಕ್ಷರ ಗಾತ್ರ

ಬಳ್ಳಾರಿ: ‘ನಗರ ಸ್ಥಳೀಯ ಸಂಸ್ಥೆಗಳು ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನದಲ್ಲಿ ಅಂಗವಿಕಲರಿಗೆ ಬರೇ ತ್ರಿಚಕ್ರ ವಾಹನಗಳನ್ನು ಕೊಟ್ಟರೆ ಸಾಕೆ? 21 ಬಗೆಯ ಅಂಗವೈಕಲ್ಯಗಳಿಂದ ಬಾಧಿತರಾದವರಿಗೆ ಏನೂ ಬೇಡವೇ? ಎಲ್ಲರಿಗೂ ಸೌಲಭ್ಯಗಳನ್ನು ವಿಸ್ತರಿಸಲು ಏನು ಕಷ್ಟ?’ ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಆಯುಕ್ತ ವಿ.ಎಸ್‌. ಬಸವರಾಜು ಶುಕ್ರವಾರ ಇಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರ ಸಭೆ ನಡೆಸಿದ ಅವರು, ‘ಸಾರ್ವಜನಿಕ ಸ್ಥಳಗಳನ್ನು ಅಂಗವಿಕಲ ಸ್ನೇಹಿಯಾಗಿಸಬೇಕು. ವಿವಿಧ ಅಂಗವೈಕಲ್ಯಗಳಿಂದ ಬಳಲುತ್ತಿರುವವರಿಗೆ ಬೇಕಾದ ಸಾಧನ– ಸಲಕರಣೆಗಳನ್ನು ನೀಡಬೇಕು’ ಎಂದು ತಿಳಿಸಿದರು.

‘ಅಂಗವಿಕಲ ಮಕ್ಕಳ ಹಗಲು ಯೋಗಕ್ಷೇಮ ಕೇಂದ್ರ (ಡೇ ಕೇರ್‌) ಆರಂಭಿಸಬೇಕು. ಪೋಷಕರಿಗೆ ತರಬೇತಿಯನ್ನು ಆಯೋಜಿಸಬೇಕು. ಅಂಗವಿಕಲ ಸ್ನೇಹಿಯಾದ ಉದ್ಯಾನ ನಿರ್ಮಿಸಬೇಕು. ಇಂಥ ಹಲವು ಸಾಧ್ಯತೆಗಳನ್ನು ಇಟ್ಟುಕೊಂಡೇ ಕೆಲಸ ಮಾಡಬೇಕು’ ಎಂದು ತಾಕೀತು ಮಾಡಿದರು.

‘ಅಂಗವಿಕಲರಿಗೆ ಎಂಥ ಸೌಕರ್ಯಗಳನ್ನು ಕೊಡಬೇಕು ಎಂಬ ಬಗ್ಗೆ ಅಧಿನಿಯಮದಲ್ಲಿ ಪ್ರತ್ಯೇಕವಾಗಿ ಉಲ್ಲೇಖಿಸಲಾಗಿದೆ. ಅವುಗಳನ್ನು ಮೊದಲು ಓದಿಕೊಳ್ಳಿ. ಒಂದೆರಡು ಸೌಕರ್ಯಗಳನ್ನು ಕೊಟ್ಟು ಕೈತೊಳೆದುಕೊಳ್ಳಬೇಡಿ’ ಎಂದು ಎಚ್ಚರಿಸಿದರು.

ಅಧಿನಿಯಮದ ಪ್ರತಿಯನ್ನು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹ್ಮದ್‌ ಮುನೀರ್‌ ಅವರಿಗೆ ಕೊಟ್ಟ ಬಸವರಾಜು, ಅವರಿಂದಲೇ ಓದಿಸಿದರು.

‘ನಗರದಲ್ಲಿರುವ ಅಂಗವಿಕಲರ ಕುರಿತ ಅಂಕಿ ಅಂಶ ಲಭ್ಯವಿಲ್ಲ. ಅಂಗವಿಕಲ ಮತದಾರರ ಮಾಹಿತಿಯಷ್ಟೇ ಇದೆ’ ಎಂಬ ಪಾಲಿಕೆ ಆಯುಕ್ತೆ ಎಂ.ವಿ.ತುಷಾರಮಣಿ ಅವರ ಮಾತನ್ನು ಒಪ್ಪದೆ, ‘ಕೂಡಲೇ ಅಂಗವಿಕಲರ ಸಮೀಕ್ಷೆ ನಡೆಸಬೇಕು’ ಎಂದು ಸೂಚಿಸಿದರು.

ಅಂಗವಿಕಲರಿಗೆ ಕೊಟ್ಟ ನೆರವಿನ ಕುರಿತು ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ನೀಡಿದ ಮಾಹಿತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಆಯುಕ್ತರು, ‘ಮೊದಲು ಸಮರ್ಪಕವಾದ ಅಂಕಿ– ಅಂಶಗಳನ್ನು ಇಟ್ಟುಕೊಳ್ಳಿ, ಈ ರೀತಿಯ ಕೆಲಸ ಮಾಡಲು ಕಾಳಜಿ ಬೇಕು, ಮೊದಲು ಅದನ್ನು ರೂಢಿಸಿಕೊಳ್ಳಿ’ ಎಂದು ತರಾಟೆಗೆ ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT