ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ ಜಿಲ್ಲೆಗೆ ಪ್ರತ್ಯೇಕ ಸಮನ್ವಯ ಸಮಿತಿ ರಚಿಸುವಂತೆ ಸ್ಥಳೀಯ ಕೈ ಮುಖಂಡರ ಆಗ್ರಹ

Last Updated 20 ಮಾರ್ಚ್ 2019, 8:56 IST
ಅಕ್ಷರ ಗಾತ್ರ

ಬೆಂಗಳೂರು: ಹಾಸನ ಜಿಲ್ಲೆಗೆ ಪ್ರತ್ಯೇಕ ಸಮನ್ವಯ ಸಮಿತಿ ರಚಿಸುವಂತೆ ಅಲ್ಲಿನ ಕೈ ಮುಖಂಡರು ಒತ್ತಾಯಿಸಿದ್ದಾರೆ.

ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ವೇಳೆ ಅವರ ಮುಂದೆ ಸಮಿತಿ ರಚಿಸುವಂತೆ ಒತ್ತಾಯ ಮಾಡಿದರು.

‘ನಮ್ಮ ಜಿಲ್ಲೆಗೆ ಸಮನ್ವಯ ಸಮಿತಿ ರಚನೆ ಮಾಡಬೇಕು. ರಾಜ್ಯಮಟ್ಟದಲ್ಲಿ ಕಾಂಗ್ರೆಸ್-ಜೆಡಿಎಸ್‌ ಮೈತ್ರಿಗಾಗಿ ಸಮನ್ವಯ ಸಮಿತಿ ಇದೆ. ಅದೇ ರೀತಿ ನಮ್ಮ ಜಿಲ್ಲೆಗೂ ಸಮನ್ವಯ ಸಮಿತಿ ಮಾಡಬೇಕು’ಎಂದು ಆಗ್ರಹಿಸಿದರು.

‘ನಮ್ಮ ಕಾರ್ಯಕರ್ತರ ಮೇಲೆ ಅನಗತ್ಯವಾಗಿ ಕೇಸ್‌ಗಳನ್ನು ಹಾಕಲಾಗಿದೆ. ಆ ಎಲ್ಲ ಕೇಸ್‌ಗಳನ್ನ ವಾಪಸ್ ಪಡೆಯಬೇಕು. ತಡೆಹಿಡಿದಿರುವ ಕಾಮಗಾರಿಗಳಿಗೆ ಅವಕಾಶ ನೀಡಬೇಕು. ಜೆಡಿಎಸ್ ಕಾರ್ಯಕರ್ತರ ದಬ್ಬಾಳಿಕೆ ನಿಲ್ಲಿಸಬೇಕು. ದೇವೇಗೌಡರೇ ಮುಂದೆ ನಿಂತು ಬಗೆಹರಿಸಬೇಕು. ಹೀಗಾದಾಗ ಮಾತ್ರ ನಾವು ಮೈತ್ರಿ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತೇವೆ’ಎಂದು ಷರತ್ತು ಹಾಕಿದರು.

ಸಭೆ ಬಳಿಕ ಮಾತನಾಡಿದ ಮಾಜಿ ಸಚಿವ ಗಂಡಸಿ ಶಿವರಾಮ್, ‘ರಾಜ್ಯಮಟ್ಟದಲ್ಲಿ ಮೈತ್ರಿ ಇದೆ. ಹಾಸನದಲ್ಲಿ ಸಮರ್ಪಕವಾಗಿ ಇಲ್ಲ. ಅಲ್ಲಿ ಇರುವ ನೋವನ್ನು ಸಿದ್ದರಾಮಯ್ಯ ಅವರಿಗೆ ಅರಿವು ಮಾಡಿಕೊಟ್ಟಿದ್ದೇವೆ. ನಮ್ಮ ಸಮಸ್ಯೆಗಳನ್ನು ಆಲಿಸಿದ ಸಿದ್ದರಾಮಯ್ಯ ನಮಗೆ ಆಶ್ವಾಸನೆ ಕೊಟ್ಟಿದ್ದಾರೆ.‌ ನಾಳೆ ರೇವಣ್ಣ ಅವರನ್ನ ಕರೆಸಿ ಮಾತನಾಡುವುದಾಗಿ ಹೇಳಿದ್ದಾರೆ. ಅದನ್ನು ಅವರು ಬಗೆ ಅರಿಸುವ ನಿರೀಕ್ಷೆ ಇದೆ’ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಹಾಸನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೌರ್ಜನ್ಯ ಆಗಿದೆ. ಅದನ್ನು ಅವರ ಗಮನಕ್ಕೆ ತಂದಿದ್ದೇವೆ. ನಮ್ಮ ಕಾರ್ಯಕರ್ತರ ಮೇಲೆ ದೌರ್ಜನ್ಯ ಮಾಡುವುದಿಲ್ಲ ಅಂತ ರೇವಣ್ಣ ಮಾಧ್ಯಮಗಳ ಮುಂದೆ ಹೇಳಬೇಕು’ಎಂದು ಒತ್ತಾಯಿಸಿದರು.

ಎ.ಮಂಜು ಬಿಜೆಪಿ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ‘ಪಕ್ಷದ ನಾಯಕರು, ಕಾರ್ಯಕರ್ತರು ಬೇರೆ ಪಕ್ಷಗಳಿಗೆ ಹೋಗುತ್ತಿದ್ದಾರೆ. ಇದನ್ನು ತಡೆಯುವ ಕೆಲಸವನ್ನು ನಾಯಕರು ಮಾಡಬೇಕು. ಎ.ಮಂಜು ಹಲವು ವರ್ಷಗಳಿಂದ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ.‌ ಈಗ ಕೋಮುವಾದಿ ಬಿಜೆಪಿ ಅವರನ್ನು ಸೆಳೆದಿದೆ’ಎಂದರು.

‘ಹಾಸನ ಜಿಲ್ಲೆಯಲ್ಲಿ ಜನ ತಬ್ಬಲಿತನ ಅನುಭವಿಸುತ್ತಿದ್ದಾರೆ. ನಮ್ಮ ನೋವುಗಳನ್ನು ನಾಯಕರ ಮುಂದೆ ತೋಡಿಕೊಂಡಿದ್ದೇವೆ’ಎಂದು ಮಾಜಿ ಶಾಸಕ ಪುಟ್ಟೇಗೌಡ ಹೇಳಿದರು.

‘ಬಡವರಿಗೆ ಮನೆ ಹಂಚಿಕೆ, ಗುತ್ತಿಗೆ ನೀಡಿಕೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ಸಚಿವ ರೇವಣ್ಣ ಅವರನ್ನು ಕರೆಸಿ ಮಾತನಾಡುತ್ತೇನೆ ಎಂದು ಸಿದ್ಧರಾಮಯ್ಯ ಭರವಸೆ ಕೊಟ್ಟಿದ್ದಾರೆ’ಎಂದರು.

‘ಪ್ರಜ್ವಲ್ ಅವರಿಗೆ ಬೆಂಬಲ ಕೊಡುವಂತೆ ಸಿದ್ಧರಾಮಯ್ಯನವರು ಹೇಳಿದ್ದಾರೆ. ನಮ್ಮ ಯುವಕರ ಆಕ್ರೋಶ ಇನ್ನೂ ಕಡಿಮೆಯಾಗಿಲ್ಲ‌. ಆದರೆ ನಮ್ಮ ನಾಯಕರ ಆದೇಶವನ್ನು ಮೀರಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡಬೇಕಾಗಿದೆ’ಎಂದರು.

‘ಇನ್ನು‌ ಮುಂದೆ ನಮ್ಮ ಮೇಲೆ ದೌರ್ಜನ್ಯ ನಡೆಸುವುದಿಲ್ಲ ಎಂದು ಪ್ರಮಾಣ ಮಾಡಲಿ. ದೇವೇಗೌಡರೇ ಶಾರದಾಂಬೆ ಮೇಲೆ ಪ್ರಮಾಣ ಮಾಡಿ ಹೇಳಲಿ’ಎಂದೂ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT