ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‍ಡೌನ್ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಿ: ಸಚಿವ ಬಿ.ಸಿ.ಪಾಟೀಲ

Last Updated 26 ಮಾರ್ಚ್ 2020, 12:11 IST
ಅಕ್ಷರ ಗಾತ್ರ

ಹಾವೇರಿ: ‘ಕೊರೊನಾ ವೈರಸ್‍ನ ಯಾವುದೇ ವಿಪತ್ತುಗಳನ್ನು ನಿಭಾಯಿಸಲು ವೈದ್ಯಕೀಯ ಸೌಲಭ್ಯಗಳೊಂದಿಗೆ ಸಿದ್ಧವಾಗಿರಿ. ಜನರಿಗೆ ಆತಂಕ ನಿವಾರಿಸಲು ಜಾಗೃತಿ ಮೂಡಿಸಿ’ ಎಂದು ಜಿಲ್ಲಾಡಳಿತಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ ಸಲಹೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕೊರೊನಾ ವೈರಸ್ ತಡೆ ಕುರಿತಂತೆ ಅಧಿಕಾರಿಗಳ ಸಭೆ ನಡೆಸಿದ ಅವರು ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದಾಗ ಜಿಲ್ಲೆಯಲ್ಲಿ ಕೊರೊನಾ ಸೋಂಕು ಬಾಧಿತವಾಗಿಲ್ಲ. ಆದಾಗ್ಯೂ ಯುದ್ಧೋಪಾದಿಯಲ್ಲಿ ಎಲ್ಲ ಮುಂಜಾಗ್ರತೆ ಕೈಗೊಳ್ಳುವಂತೆ ಸೂಚಿಸಿದರು.

ಐಸೋಲೇಷನ್ ವಾರ್ಡ್:ಜಿಲ್ಲಾ ಆಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಈಗಾಗಲೇ ಸಿದ್ಧ ಮಾಡಿಕೊಂಡಿರುವ ಐಸೋಲೇಷನ್‌ ವಾರ್ಡ್‍ಗಳ ಜೊತೆಗೆ ಹೆಚ್ಚುವರಿಯಾಗಿ ಕೆರೆಮತ್ತಿಹಳ್ಳಿಯ ಹಳೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯನ್ನು ಕೊರೊನಾ ಐಸೋಲೇಷನ್ ವಾರ್ಡ್ ಆಗಿ ಪರಿವರ್ತಿಸಿ ಸಿದ್ಧಮಾಡಿಕೊಳ್ಳಿ ಹಾಗೂ ನಗರದ ಹೊರವಲಯಗಳಲ್ಲಿರುವ ಮೊರಾರ್ಜಿ ಶಾಲೆ ಅಥವಾ ವಿದ್ಯಾರ್ಥಿ ನಿಲಯಗಳನ್ನು ಗುರುತಿಸಿ ಐಸೋಲೇಷನ್ ವಾರ್ಡ್‍ಗಳನ್ನಾಗಿ ಪರಿವರ್ತಿಸಬೇಕು. ಈ ವಾರ್ಡ್‍ಗಳಲ್ಲಿ ಅಗತ್ಯ ವೈದ್ಯಕೀಯ ಉಪಕರಣಗಳ ಸೌಲಭ್ಯಗಳೊಂದಿಗೆ ಕೊರೊನಾ ಚಿಕಿತ್ಸೆಗೆ ಸಿದ್ಧವಾಗಿ ಇಟ್ಟುಕೊಳ್ಳಬೇಕು ಎಂದು ಸೂಚಿಸಿದರು.

ಖಾಸಗಿ ವೈದ್ಯರ ಸೇವೆ:ಸರ್ಕಾರಿ ವೈದ್ಯರೊಂದಿಗೆ ಖಾಸಗಿ ವೈದ್ಯರ ಸೇವೆ ಅವಶ್ಯ ಇದೆ. ಇಂದಿನಿಂದಲೇ ಅರೆವೈದ್ಯಕೀಯ ಸಿಬ್ಬಂದಿಯನ್ನು ಹೊರಗುತ್ತಿಗೆ ಮೇಲೆ ಮಾಡಿಕೊಳ್ಳಲು ಕ್ರಮ ತೆಗೆದುಕೊಳ್ಳಿ ಹಾಗೂ ಖಾಸಗಿ ವೈದ್ಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿ ಸ್ವಯಂಪ್ರೇರಣೆಯಿಂದ ಕೊರೊನಾ ಸೋಂಕಿತರ ಸೇವೆಗೆ ಮುಂದಾಗುವಂತೆ ಮನವಿ ಮಾಡಿಕೊಂಡು ಅವರ ಸೇವೆಯನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಹೊರರಾಜ್ಯಗಳಿಂದ ಜಿಲ್ಲೆಗೆ ಬಂದಿರುವವರ ಮಾಹಿತಿಯನ್ನು ಪಡೆದು ಸಾಮಾನ್ಯ ವೈದ್ಯಕೀಯ ತಪಾಸಣೆಗೆ ಒಳಪಡಿಸುವಂತೆ ಸಲಹೆ ನೀಡಿದರು.

ಪ್ರಸ್ತಾವ:ಮಾಸ್ಕ್‌ಗಳು, ಸ್ಯಾನಿಟೈಸರ್, ವೆಂಟಿಲೇಟರ್, ಹಾಸಿಗೆ, ವೈದ್ಯಕೀಯ ಉಪಕರಣಗಳು ಸೇರಿದಂತೆ ಜಿಲ್ಲೆಗೆ ಅವಶ್ಯವಿರುವ ಎಲ್ಲ ವೈದ್ಯಕೀಯ ಉಪಕರಣಗಳ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಕೊರೊನಾ ನಿಯಂತ್ರಣಕ್ಕೆ ಯಾವುದೇ ಅನುದಾನದ ಕೊರತೆಯಿಲ್ಲ. ಈ ಹಂತದಲ್ಲೇ ಎಲ್ಲವನ್ನೂ ಖರೀದಿ ಮಾಡಲು ವಿಪತ್ತು ನಿಧಿಯಿಂದ ಅವಕಾಶ ಕಲ್ಪಿಸಲಾಗಿದೆ. ಅವಶ್ಯಕತೆಗೆ ತಕ್ಕಂತೆ ಖರೀದಿಸಿ ಎಂದು ಸಲಹೆ ನೀಡಿದರು.

ಪೆಟ್ರೋಲ್ – ಡಿಸೇಲ್ ಮಿತಗೊಳಿಸಿ:ಜಿಲ್ಲೆ ಸೇರಿದಂತೆ ದೇಶದಾದ್ಯಂತ ಲಾಕ್‍ಡೌನ್ ಇದ್ದರೂ ಕೆಲವರು ಉದ್ದೇಶಪೂರ್ವಕವಾಗಿ ಸುತ್ತಾಡುವುದು, ಬೈಕ್‍ನಲ್ಲಿ ತಿರುಗಾಡುವುದು ವರದಿಗಳಾಗಿವೆ. ಇಂತಹವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು. ಸರ್ಕಾರಿ ವಾಹನಗಳು ಹಾಗೂ ಅಗತ್ಯ ಸೇವೆಗೆ ಅನುಮತಿ ಪಡೆದ ವಾಹನಗಳನ್ನು ಹೊರತುಪಡಿಸಿ ಇತರ ವಾಹನಗಳಿಗೆ ಡಿಸೇಲ್ ಹಾಗೂ ಪೆಟ್ರೋಲ್ ಪೂರೈಸದಂತೆ ಬಂಕ್‍ಗಳಿಗೆ ಸೂಚನೆ ನೀಡಿ. ಪ್ರತಿ ಬಂಕ್‍ಗಳಿಗೂ ಓರ್ವ ಪೊಲೀಸರನ್ನು ನಿಯೋಜಿಸಿ ಎಂದು ಸಲಹೆ ನೀಡಿದರು.

ತಹಶೀಲ್ದಾರ್‌ಗೆ ಅಧಿಕಾರ:ರೇಷ್ಮೆ ಮಾರುಕಟ್ಟೆಗೆ ಅನುಮತಿ, ದೈನಂದಿನ ಸಾಮಗ್ರಿಗಳ ಸಾಗಾಣಿಕೆಗೆ ವಾಹನಗಳಿಗೆ ಅನುಮತಿ ನೀಡಲು ಆಯಾ ತಹಶೀಲ್ದಾರ್‌ಗಳಿಗೆ ಅಧಿಕಾರ ನೀಡುವುದು, ಎಲ್ಲ ಅಧಿಕಾರಿಗಳ ಸೇವೆಯನ್ನು ತುರ್ತು ಸಂದರ್ಭದಲ್ಲಿ ಬಳಸಿಕೊಳ್ಳುವುದು, ಎರಡು ತಿಂಗಳು ಆಹಾರ ಸಾಮಗ್ರಿಗಳನ್ನು ಪಡಿತರ ವ್ಯವಸ್ಥೆಯಲ್ಲಿ ವಿತರಿಸಲು ಕ್ರಮ, ಸ್ವಯಂ ಸೇವಾ ಸಂಸ್ಥೆಗಳ ಸೇವೆ ಬಳಕೆ, ಯಾವುದೇ ನಿರ್ಬಂಧವಿಲ್ಲದೆ ವೈದ್ಯಕೀಯ ಸಿಬ್ಬಂದಿಗೆ, ಪೊಲೀಸರಿಗೆ ಹಾಗೂ ಪೌರ ಕಾರ್ಮಿಕರಿಗೆ ಸುರಕ್ಷಾ ಸೌಲಭ್ಯಗಳ ವಿತರಣೆಗೆ ಕ್ರಮವಹಿಸಲು ಸಲಹೆ ನೀಡಿದರು.

ಕೊರೋನಾ ವೈರಸ್ ನಿಯಂತ್ರಣಕ್ಕೆ ಜಿಲ್ಲಾಡಳಿತ ಕೈಗೊಂಡಿರುವ ಪೂರ್ವ ಸಿದ್ಧತೆಗಳ ಕುರಿತಂತೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ವಿವರಿಸಿದರು. ಶಾಸಕರಾದ ನೆಹರು ಚ.ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರ ಅವರು ಕೊರೊನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಇದ್ದರು.

ಗೃಹ ದಿಗ್ಬಂಧನ: 159 ಜನರ ಪಟ್ಟಿ ಪ್ರಕಟಿಸಿ
ವಿದೇಶದಿಂದ ಬಂದಿರುವ ವ್ಯಕ್ತಿಗಳನ್ನು ತಪಾಸಣೆಗೊಳಪಡಿಸಿ ಯಾವುದೇ ಸೋಂಕಿಲ್ಲದಿದ್ದರೂ ಗೃಹ ದಿಗ್ಬಂಧನದ ಮೇಲೆ (ಹೋಂ ಕ್ವಾರೆಂಟೈನ್) ನಿಗಾವಹಿಸಲಾಗಿದೆ. ಈ ವ್ಯಕ್ತಿಗಳ ಪೈಕಿ ಕೆಲವರು ಮನೆಯಿಂದ ಹೊರಬಂದು ಸುತ್ತಾಡದಂತೆ ಕಟ್ಟೆಚ್ಚರವಹಿಸಬೇಕು. ಪಾಳಿ ಪ್ರಕಾರ ಪೊಲೀಸರನ್ನು ನಿಯೋಜಿಸಿ ಕಾವಲು ಕಾಯಬೇಕು. ನೆರೆಹೊರೆಯವರಿಗೂ ಈ ವ್ಯಕ್ತಿಗಳು ಹಾಗೂ ಕುಟುಂಬದವರು ಹೊರಬರದಂತೆ ಕಾಯ್ದುಕೊಳ್ಳುವಂತೆ ನೋಡಬೇಕು. ಗೃಹ ದಿಗ್ಬಂಧನದಲ್ಲಿರುವ ಜಿಲ್ಲೆಯ 159 ಜನರ ಪಟ್ಟಿಯನ್ನು ಮಾಧ್ಯಮದಲ್ಲಿ ಪ್ರಕಟಿಸುವಂತೆ ಸಚಿವ ಬಿ.ಸಿ.ಪಾಟೀಲ ಸಲಹೆ ನೀಡಿದರು.

ದಿನಬಳಕೆ ವಸ್ತುಗಳ ನಿರ್ಬಂಧ ಬೇಡ
ಹಾಲು, ಹಣ್ಣು, ತರಕಾರಿ, ದಿನ ಬಳಕೆ ವಸ್ತುಗಳಿಗೆ ಯಾವುದೇ ಕೊರತೆಯಾಗುವುದಿಲ್ಲ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಬೇರೆ ಜಿಲ್ಲೆ ಹಾಗೂ ತಾಲ್ಲೂಕುಗಳಿಂದ ತರಕಾರಿ ಸೇರಿದಂತೆ ಆಹಾರ ಪದಾರ್ಥಗಳು, ದಿನಸಿಗಳನ್ನು ತರಲು ಅವಕಾಶ ಕಲ್ಪಿಸಿ ದಿನಬಳಕೆ ವಸ್ತಗಳನ್ನು ಸಾಗಾಣಿಕೆ ಮಾಡುವ ವಾಹನಗಳನ್ನು ಗುರುತಿಸಿ ಪರವಾನಗಿ ನೀಡಬೇಕು. ಯಾವುದೇ ಅಡೆತಡೆಗಳು ಇರದಂತೆ ಆಹಾರ ಸಾಮಗ್ರಿಗಳನ್ನು ಪೂರೈಸಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT