ಭಾನುವಾರ, ಜುಲೈ 3, 2022
27 °C

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರುವ ಅವಶ್ಯಕತೆ ಇಲ್ಲ: ಸಿ.ಎಂ.ಇಬ್ರಾಹಿಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕೇಂದ್ರ ಸರ್ಕಾರ ಪೌರತ್ವ ತಿದ್ಧುಪಡಿ ಕಾಯ್ದೆ ಪ್ರಚಾರ ಹಾಗೂ ಅನುಷ್ಠಾನಕ್ಕೆ ತರುವುದಕ್ಕೆ ಮುಂದಾಗಿರುವುದು ಖಂಡನೀಯ ಹಾಗೂ ಜನರ ಸಮಸ್ಯೆ ಪರಿಹಾರ ಕಂಡುಕೊಳ್ಳುವುದ ಮುಂದಾಗಬೇಕು ಎಂದು ವಿಧಾನ ಪರಿಷತ್ತ ಸದಸ್ಯ ಸಿ.ಎಂ.ಇಬ್ರಾಹಿಂ ಆಗ್ರಹಿಸಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರಸ್ತುತ ಜಿಡಿಪಿ ಕುಸಿತ, ದಿನಬಳಕೆ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಸೇರಿದಂತೆ ವಿವಿಧ ಸಮಸ್ಯೆಯ ಬಗ್ಗೆ ಕೇಂದ್ರ ಸರ್ಕಾರ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದರು.

ಸ್ವಾತಂತ್ರ್ಯ ಬಂದಾಗಿನಿಂದ ವಲಸೆ ಬಂದವರಿಗೆ ಪೌರತ್ವ ನೀಡುತ್ತಾ ಬಂದಿದ್ದೇವೆ. ಈ ಕಾಯ್ದೆ ಜಾರಿಗೆ ತರುವುದು ಅವಶ್ಯಕತೆ ಇರಲಿಲ್ಲ. ಡಾ. ಬಿ.ಆರ್‌.ಅಂಬೇಡ್ಕರ್‌ ಅವರ ಬರೆದ ಸಂವಿಧಾನ ಬದಲಾವಣೆಗೆ ಮುಂದಾಗಿರುವಂತೆ ಕಾಣುತ್ತಿದೆ ಎಂದರು.

ಈ ಕಾಯ್ದೆಯ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮೀತ್‌ ಶಾ ಅವರು ಬೇರೆ ಬೇರೆ ಹೇಳಿಕೆ ನೀಡುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ನುಸುಳು ಕೋರರ ಬಗ್ಗೆ ಮಾಹಿತಿ ಬೇಕಿದ್ದರೆ, ಆಯಾ ಬಾಗದ ಪೊಲೀಸ್‌ ಹಾಗೂ ಪಂಚಾಯ್ತಿಗಳಲ್ಲಿ ಮಾಹಿತಿ ಪಡೆದು ಅವರ ಮೇಲೆ ಕ್ರಮ ಕೈಗೊಳ್ಳಬಹುದು. ಪ್ರಾಯೋಗಿಕವಾಗಿಲ್ಲದಿದ್ದರೆ ಹಲವಾರು ಸಮಸ್ಯೆ ಎದುರಾಗುತ್ತದೆ ಎಂದರು.

ಎಲ್ಲೆಲ್ಲೂ ಗಲಭೆ

ಕಾಯ್ದೆಯನ್ನು ಜಾರಿಗೆ ತರುವುದಕ್ಕೆ ಮುಂದಾಗಿರುವುದರಿಂದ ಎಲ್ಲೆಲ್ಲೂ ಗಲಭೆಗಳು ನಡೆಯುತ್ತಿದೆ. ಕರ್ನಾಟಕದ ಮಂಗಳೂರಿನಲ್ಲಿಯೂ ನಡೆದಿದೆ. ಇದರಿಂದ ಮೂವರು ರಾಜ್ಯದಲ್ಲಿ ಬಲಿಯಾಗಿದ್ದಾರೆ. ಇಂತಹ ನಿರ್ಣಯವನ್ನು ಸರ್ಕಾರ ತೆಗೆದುಕೊಳ್ಳಬಾರದು ಎಂದು ಸಲಹೆ ನೀಡಿದರು.

ಶಾರದಾಂಬೆಗೆ ಇಂದಿಗೂ ಸಲಾಂ ಆರತಿ

ಮಹಾರಾಷ್ಟ್ರದ ಪೇಶ್ವೆಗಳು ಶೃಂಗೇರಿ ಶಾರದಾ ಪೀಠದ ಮೇಲೆ ದಾಳಿ ಮಾಡುವ ಸಂದರ್ಭದಲ್ಲಿ ಅವರನ್ನು ಹಿಮ್ಮೆಟ್ಟಿಸಿ ಮತ್ತೆ ಶಾರದಾ ಮಾತೆಯನ್ನು ಪ್ರತಿಷ್ಠಾಪನೆ ಮಾಡಿದ್ದರು. ಅಂದಿನಿಂದ ಇಂದಿನವರೆಗೂ ಟಿಪ್ಪು ಸುಲ್ತಾನ್‌ ಹೆಸರಿನಲ್ಲಿ ಸಲಾಂ ಆರತಿ ಮಾಡಲಾಗುತ್ತದೆ. ಆದರೆ, ಬಿಜೆಪಿ ಅವರ ಬಗ್ಗೆ ಹೀನವಾಗಿ ಮಾತನಾಡುತ್ತದೆ. ಅದನ್ನು ನಿಲ್ಲಿಸಬೇಕು ಎಂದರು.

ಟಿಪ್ಪು ಸುಲ್ತಾನ್‌ ಹಿಂದುವಾಗಿ ಹುಟ್ಟಿದರೆ ಮಹಾರಾಷ್ಟ್ರದಲ್ಲಿ ಶಿವಾಜಿ ಮಹಾರಾಜರಿಗೆ ಇದ್ದ ಸ್ಥಾನ ಗೌರವ, ಕರ್ನಾಟಕದಲ್ಲಿ ಟಿಪ್ಪುವಿಗೂ ಇರುತ್ತಿತ್ತು. ಅಲ್ಲದೆ, ಚುನಾವಣೆ ಸಂದರ್ಭದಲ್ಲಿ ಇವಿಎಂ ಬಳಕೆಯಿಂದ ಬಿಜೆಪಿ ಗೆಲ್ಲುತ್ತಿದೆ. ಕಾಂಗ್ರೆಸ್‌ ಬ್ಯಾಲೆಟ್‌ ಪೇಪರ್‌ ಬಳಕೆಯಲ್ಲಿ ಗೆಲ್ಲುತ್ತಿದೆ. ಇದರ ಬಳಕೆಯಲ್ಲಿಯೂ ಹಲವಾರ ಅವ್ಯವಹಾರ ನಡೆದಿವೆ ಎಂದು ಆರೋಪಿಸಿದರು.

ಯಡಿಯೂರಪ್ಪ ವೀರತ್ವ ತೋರಿಸಿ

ರಾಜ್ಯಕ್ಕೆ ನೀಡಬೇಕಾದ 5 ಸಾವಿರ ಕೋಟಿ ಹಣವನ್ನು ಕೇಂದ್ರ ಸರ್ಕಾರ ಕಡಿತಗೊಳಸಿದೆ. ನಮ್ಮ ಹಣವನ್ನು ಕೇಳಲು ರಾಜ್ಯದ ಸಂಸದರು ವಿಫಲರಾಗಿದ್ದಾರೆ. ವೀರಶೈವರಾದ ನೀವು ವೀರತ್ವವನ್ನು ತೋರಿಸಬೇಕು. ನಮ್ಮ ಹಣ ನಮಗೆ ವಾಪಸ್‌ ಕೇಳಬೇಕು ಎಂದು ಸಿ.ಎಂ.ಇಬ್ರಾಹಿಂ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು