ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ, ಗ್ರಾಮ ಮರೆತರೆ ರಾಜಕೀಯ ಪಕ್ಷಗಳಿಗೆ ಹೊಡೆತ ಖಂಡಿತಾ: ದೇವೇಗೌಡ

Last Updated 16 ಫೆಬ್ರುವರಿ 2020, 14:21 IST
ಅಕ್ಷರ ಗಾತ್ರ

ಧಾರವಾಡ: ‘ದೇಶದ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ವ್ಯವಸಾಯ ಮತ್ತು ಹಳ್ಳಿಗಳನ್ನು ಮರೆತರೆ ಯಾವುದೇ ಪಕ್ಷವಾಗಲಿ ಪೆಟ್ಟು ಖಂಡಿತಾ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅಭಿಪ್ರಾಯಪಟ್ಟರು.

ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ಭಾನುವಾರ ಭೇಟಿ ನೀಡಿದ ನಂತರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಹಿಂದಿನ ಅವಧಿಗಿಂತಲೂ ಬಿಜೆಪಿಗೆ ಹೆಚ್ಚಿನ ಸ್ಥಾನವನ್ನು 2019ರಲ್ಲಿ ಮತದಾರರುನೀಡಿದ್ದಾರೆ. ನೆರೆ ಪರಿಹಾರದಲ್ಲಿ ಕೇಂದ್ರ ತಾರತಮ್ಯ ಎಸಗಿದೆ. ಜನರ ಆಶೋತ್ತರಗಳಿಗೆ ಸ್ಪಂದಿಸುವ ಬದಲು ಕಾಶ್ಮೀರ, ಪೌರತ್ವ ಕಾಯ್ದೆ ತಿದ್ದುಪಡಿ ಕುರಿತು ಅತೀವ ಆಸಕ್ತಿಯನ್ನು ಕೇಂದ್ರ ತೋರಿಸುತ್ತಿದೆ. ಹಿಂದೆಂದೂ ಕಂಡಿರದ ಅತಿ ದೊಡ್ಡ ಪ್ರತಿಭಟನೆ ಮುಂಬೈನಲ್ಲಿ ನಡೆದಿದೆ. ದೇಶವ್ಯಾಪಿ ಚಳವಳಿಗಳು ಜೋರಾಗಿವೆ. ಈ ಕುರಿತು ಪಕ್ಷದೊಳಗೆ ಅಸಮಾಧಾನವಿದೆ’ ಎಂದರು.

‘ದೇಶದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡುತ್ತೇವೆ ಎಂದು 2014ರಲ್ಲಿ ಹೇಳಿದ್ದ ಬಿಜೆಪಿ ನಾಯಕರೇ ಇಂದು ಆ ಮಾತನ್ನು ಗಟ್ಟಿಯಾಗಿ ಹೇಳದಂತ ಸ್ಥಿತಿಯಲ್ಲಿದೆ. ಪಕ್ಷದ ನೀತಿಯಿಂದಾಗಿ ಕೈಗಾರಿಕೆ ಹಾಗೂ ಸೇವಾ ಕ್ಷೇತ್ರಗಳು ನೆಲಕಚ್ಚಿವೆ. ನೌಕರರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಬಿಎಸ್‌ಎನ್‌ಎಲ್ ಖಾಸಗೀಕರಣಗೊಳ್ಳುವ ಹಂತದಲ್ಲಿದೆ. ಏರ್‌ ಇಂಡಿಯಾ ಖರೀದಿಸುವವರಿಲ್ಲ. ಎಚ್‌ಎಎಲ್‌ ಸಿಬ್ಬಂದಿ ಮುಷ್ಕರ ನಡೆಸುತ್ತಿದ್ದಾರೆ. ಹಲವು ಚಿಂತಕರು ಬೇಸತ್ತು ಪಕ್ಷದಿಂದ ಹೊರಬರುತ್ತಿದ್ದಾರೆ’ ಎಂದರು.

‘ದೇಶದ ಇತ್ತೀಚಿನ ಕೆಲ ರಾಜ್ಯಗಳ ಚುನಾವಣಾ ಫಲಿತಾಂಶವನ್ನು ಗಮನಿಸಿದಲ್ಲಿ, ಅಭಿವೃದ್ಧಿಯನ್ನೇ ಮಂತ್ರವಾಗಿಸಿಕೊಂಡ ಪ್ರಾದೇಶಿಕ ಪಕ್ಷಗಳಿಗೆ ಭವಿಷ್ಯವಿದೆ ಎಂಬುದು ಸಾಭೀತಾಗಿದೆ. ಈ ನಿಟ್ಟಿನಲ್ಲಿ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸುವ ಪ್ರಯತ್ನ ನಡೆದಿದೆ’ ಎಂದು ದೇವೇಗೌಡ ಹೇಳಿದರು.

‘ಜಾತಿ ಹಾಗೂ ಧರ್ಮವನ್ನು ಆಧರಿಸಿ ಕಾನೂನು ರಚಿಸುವುದರಿಂದ ಅಧಿಕಾರ ಸಿಗದು ಎಂಬುದು ಸಾಭೀತಾಗಿದೆ. ಜೆಡಿಎಸ್ ಪಕ್ಷದ ತಳಮಟ್ಟ ಗಟ್ಟಿಯಾಗಿದೆ. ಚುನಾವಣೆ ಗೆಲ್ಲಲು ಅಗತ್ಯವಿರುವ ಅಂಶಗಳನ್ನು ತುಂಬಲು ಕಾರ್ಯಕರ್ತರಿಗೆ ಶಿಬಿರಗಳನ್ನು ನಡೆಸಲಾಗುವುದು. ಇಂಥ ಶಿಬಿರಗಳಲ್ಲಿ ಪಕ್ಷದ ಮುಖ್ಯಸ್ಥರು ಹಾಜರಿದ್ದು ತರಬೇತಿ ನೀಡಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT