ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಇಲಾಖೆ ಮೌನ– ಪಿಎಸಿ ಅಸಮಾಧಾನ

ಪಿಪಿಇ ಕಿಟ್ ಸೇರಿ ವೈದ್ಯಕೀಯ ಸಲಕರಣೆ ಖರೀದಿ ಅವ್ಯವಹಾರ
Last Updated 30 ಜೂನ್ 2020, 18:17 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ನಿರ್ವಹಣೆಗಾಗಿ ಪಿಪಿಇ ಕಿಟ್ ಸೇರಿ ವೈದ್ಯಕೀಯ ಸಲಕರಣೆಗಳ ಖರೀದಿ ಅವ್ಯವಹಾರದ ಬಗ್ಗೆ ಮೌನ ವಹಿಸಿರುವ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ವಿಧಾನ ಮಂಡಲ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ(ಪಿಎಸಿ) ತರಾಟೆಗೆ ತೆಗೆದುಕೊಂಡಿದೆ.

‘ಪಿಪಿಇ ಕಿಟ್, ಸ್ಯಾನಿಟೈಸರ್, ಗ್ಲೂಕೋಸ್, ವೆಂಟಿಲೇಟರ್ ಖರೀದಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗುತ್ತಲೇ ಇವೆ. ಆದರೂ, ಇದಕ್ಕೂ ತಮಗೂ ಸಂಬಂಧ ಇಲ್ಲ ಎಂಬಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಇರುವುದು ಏಕೆ’ ಎಂದು ಮಂಗಳವಾರ ನಡೆದ ಪಿಎಸಿ ಸಭೆಗೆ ಹಾಜರಾಗಿದ್ದ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳನ್ನು ಸಮಿತಿ ಪ್ರಶ್ನೆ ಮಾಡಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ಆಯುಕ್ತ ಪಂಕಜಕುಮಾರ್ ಪಾಂಡೆ, ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಆ್ಯಂಡ್ ವೇರ್‌ಹೌಸಿಂಗ್ ಸೊಸೈಟಿ ಹೆಚ್ಚುವರಿ ನಿರ್ದೇಶಕಿ ಎನ್‌. ಮಂಜುಶ್ರೀ ಸಭೆಗೆ ಹಾಜರಾಗಿದ್ದರು.

‘ಅವ್ಯವಹಾರ ನಡೆದಿಲ್ಲ ಎಂದಾದರೆ ಸ್ಪಷ್ಟನೆಯನ್ನಾದರೂ ಆರೋಗ್ಯ ಇಲಾಖೆ ನೀಡಬೇಕಿತ್ತಲ್ಲವೇ’ ಎಂದು ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ ಕೇಳಿದರು.

‘ಮುಖ್ಯಮಂತ್ರಿ ಸೂಚನೆ ಮೇರೆಗೆ ಅವ್ಯವಹಾರ ಆರೋಪದ ಬಗ್ಗೆ ಇಲಾಖೆ ಆಂತರಿಕ ತನಿಖೆ ನಡೆಸುತ್ತಿದೆ. ಹೀಗಾಗಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಲ್ಲ’ ಎಂದು ಅಧಿಕಾರಿಗಳು ವಿವರಿಸಿದರು.

‘ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಕೊರೊನಾ ಪರೀಕ್ಷೆ, ಸೋಂಕಿತರಿಗೆ ಚಿಕಿತ್ಸೆ ಮತ್ತು ಸೋಂಕಿತರ ಪತ್ತೆ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. 25 ಸಾವಿರ ಜನರ ಪರೀಕ್ಷಾ ವರದಿ ಬಾಕಿ ಇದೆ ಎಂದರೆ ಏನರ್ಥ’ ಎಂದು ಸಮಿತಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

‘ಕ್ರೀಡಾಂಗಣ, ವಸ್ತುಪ್ರದರ್ಶನ ಕೇಂದ್ರಗಳನ್ನು ಈ ಚಿಕಿತ್ಸೆಗೆ ಬಳಸಿಕೊಳ್ಳುವ ಬದಲು ಸುಗ್ರೀವಾಜ್ಞೆ ಮೂಲಕ ಖಾಸಗಿ ಆಸ್ಪತ್ರೆ ಮತ್ತು ಅಲ್ಲಿನ ಆಂಬುಲೆನ್ಸ್‌ಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಿ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT