ಗುರುವಾರ , ಸೆಪ್ಟೆಂಬರ್ 23, 2021
24 °C
ಆರೋಗ್ಯ ಇಲಾಖೆಗೆ ₹11 ಕೋಟಿ ದಂಡ ಬಾಕಿ

ಪ್ರಾಯೋಜಕತ್ವ ಪಡೆದು ಕೈಕೊಟ್ಟ ಸರ್ಕಾರಿ ವೈದ್ಯರು

ರಶ್ಮಿ ಬೇಲೂರು Updated:

ಅಕ್ಷರ ಗಾತ್ರ : | |

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉನ್ನತ ವ್ಯಾಸಂಗಕ್ಕೆಂದು ‘ಪ್ರಾಯೋಜಕತ್ವ’ ನೀಡಿ ದೇಶ– ವಿದೇಶಗಳಿಗೆ ಇಲಾಖೆಯ ನೂರಾರು ವೈದ್ಯರನ್ನು ಕಳುಹಿಸಿದೆ. ಈ ರೀತಿ ವ್ಯಾಸಂಗಕ್ಕೆ ಹೋದವರಲ್ಲಿ ಸಾಕಷ್ಟು ವೈದ್ಯರು ಸೇವೆಗೆ ಹಿಂದಿರುಗಿಲ್ಲ.

ಕಳೆದ 10 ವರ್ಷಗಳಲ್ಲಿ ಉನ್ನತ ಅಧ್ಯಯನಕ್ಕೆ ಹೋದವರ ಪೈಕಿ 22 ವೈದ್ಯರು ಮರಳಿ ಬಂದಿಲ್ಲ. ಸರ್ಕಾರಕ್ಕೆ ಬರೆದುಕೊಟ್ಟಿದ್ದ ಮುಚ್ಚಳಿಕೆ ಪತ್ರದ ಉಲ್ಲಂಘನೆ ಮಾಡಿದ್ದಕ್ಕೆ ದಂಡವನ್ನೂ ಕಟ್ಟಿಲ್ಲ. ಈ ರೀತಿ ಕೈಕೊಟ್ಟ ವೈದ್ಯರಿಂದ ಸರ್ಕಾರಕ್ಕೆ ಈ ವರ್ಷ ₹11 ಕೋಟಿ ದಂಡದ ಬಾಕಿ ಬರಬೇಕಿದೆ.

ರಾಜ್ಯದಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಆರೈಕೆ ನೀಡುವ ಉದ್ದೇಶದಿಂದ ಸರ್ಕಾರಿ ಆಸ್ಪತ್ರೆಗಳ ವೈದ್ಯರಿಗೆ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಅಥವಾ ಪಿಜಿ ಡಿಪ್ಲೊಮಾ ಮಾಡಲು ಆರೋಗ್ಯ ಇಲಾಖೆ ಪ್ರಾಯೋಜಕತ್ವ ನೀಡುತ್ತಾ ಬಂದಿದೆ. ಪ್ರತಿ ವರ್ಷ ಸೇವೆಯಲ್ಲಿರುವ ವೈದ್ಯರಿಗೆಂದು 100 ಸೀಟುಗಳನ್ನು ಮೀಸಲಿಡಲಾಗುತ್ತದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿಯ ಪ್ರಕಾರ, 10 ವರ್ಷಗಳಲ್ಲಿ 48 ವೈದ್ಯರು ಕೋರ್ಸ್‌ಗಳನ್ನು ಮುಗಿಸಿದರೂ ಸೇವೆಗೆ ಮರಳಿ ಬಂದಿಲ್ಲ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಉನ್ನತ ಅಧ್ಯಯನಕ್ಕೆಂದು ಹೋದ 48 ವೈದ್ಯರಲ್ಲಿ 20 ವೈದ್ಯರು ಮುಚ್ಚಳಿಕೆ ಅನ್ವಯ ದಂಡದ ಹಣವನ್ನು ಕಂತುಗಳಲ್ಲಿ ಪಾವತಿಸಿದ್ದಾರೆ. ಉಳಿದ 28 ವೈದ್ಯರು ಈವರೆಗೂ ಯಾವುದೇ ಮಾಹಿತಿ ನೀಡಿಲ್ಲ. ಅವರಲ್ಲಿ 22 ವೈದ್ಯರಿಗೆ ಹಲವು ಬಾರಿ ನೋಟಿಸ್‌ ನೀಡಿದ್ದರೂ ಅದಕ್ಕೆ ಪ್ರತಿಕ್ರಿಯೆ ನೀಡಿಲ್ಲ ಎಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. 

ಸೇವೆಗೆ ಮರಳದಿರುವ ಮತ್ತು ದಂಡ ಪಾವತಿಸಲು ವಿಫಲರಾಗಿರುವ ವೈದ್ಯರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಮುಚ್ಚಳಿಕೆ ಪತ್ರ ಉಲ್ಲಂಘಿಸಿದವರು, ಸರ್ಕಾರ ಉನ್ನತ ಅಧ್ಯಯನಕ್ಕೆ ಖರ್ಚು ಮಾಡಿದ ಹಣ ಮತ್ತು ಆ ಅವಧಿಯಲ್ಲಿ ಸರ್ಕಾರ ಅವರಿಗೆ ನೀಡಿದ ವೇತನವನ್ನು ಹಿಂದಕ್ಕೆ ನೀಡಬೇಕು. ಇಲ್ಲವಾದರೆ ₹50 ಲಕ್ಷ ದಂಡವನ್ನು ಪಾವತಿಸಬೇಕು ಎಂದು ಅವರು ಹೇಳಿದರು.

ಕೋಟಾಗೆ ಕತ್ತರಿ
ಸರ್ಕಾರಕ್ಕೆ ಕೈಕೊಡುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸೇವೆಯಲ್ಲಿರುವ ವೈದ್ಯರಿಗೆ ಸ್ನಾತಕೋತ್ತರ ಕೋರ್ಸ್‌ನಲ್ಲಿ ಮೀಸಲು ನೀಡುವ ಪದ್ಧತಿಯನ್ನು ಈ ವರ್ಷದಿಂದ ರದ್ದುಪಡಿಸಲಾಗಿದೆ. ಬದಲಿಗೆ, ಸೀಟು ಹಂಚಿಕೆ ಸಂದರ್ಭದಲ್ಲಿ ವೈದ್ಯರಿಗೆ ಆದ್ಯತೆ ನೀಡಲಾಗುವುದು. ಅಲ್ಲದೆ, ವೈದ್ಯರು ನೀಟ್‌ ಪರೀಕ್ಷೆಯಲ್ಲಿ ಹೊಸ ಅಭ್ಯರ್ಥಿಗಳ ಜತೆ ಸ್ಪರ್ಧಿಸಬೇಕು.

ಗ್ರಾಮೀಣ ಸೇವೆಯಲ್ಲೂ ಉಲ್ಲಂಘನೆ: ಸರ್ಕಾರಿ ಕೋಟಾದಡಿ ಸೀಟು ಪಡೆದು ಎಂಬಿಬಿಎಸ್‌ ಮತ್ತು ಸ್ನಾತಕೋತ್ತರ ಪದವಿ ಮಾಡುವವರು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯ. ಇದಕ್ಕಾಗಿ ಅಭ್ಯರ್ಥಿಗಳು ಬಾಂಡ್‌ ಬರೆದುಕೊಡಬೇಕು. ಇದರ ಉಲ್ಲಂಘನೆಯೂ ಆಗುತ್ತಿದೆ. 2010–11 ರಿಂದ 2017–18 ರ ಅವಧಿಯಲ್ಲಿ ₹260 ಕೋಟಿ ದಂಡದ ರೂಪದಲ್ಲಿ ಸರ್ಕಾರಕ್ಕೆ ಸಂದಾಯವಾಗಬೇಕಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು