ಮಡಿಕೇರಿ/ಮಂಗಳೂರು/ಶಿವಮೊಗ್ಗ: ಕೊಡಗು ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಂದ ಮಳೆ ತೀವ್ರತೆ ಪಡೆದಿದೆ. ಭಾಗಮಂಡಲದಿಂದ ನಾಪೋಕ್ಲುವಿಗೆ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತಗೊಂಡಿದ್ದು, ಸಂಪರ್ಕ ಕಡಿತಗೊಂಡಿದೆ.
ಎರಡು ದಿನಗಳಿಂದ ಸುರಿದಿದ್ದ ಧಾರಾಕಾರ ಮಳೆಗೆ ಕಾವೇರಿ ಹಾಗೂ ಲಕ್ಷ್ಮಣತೀರ್ಥ ನದಿಗಳು ಮೈದುಂಬಿಕೊಂಡಿವೆ. ಅಬ್ಬಿ, ಮಲ್ಲಳ್ಳಿ ಹಾಗೂ ಇರ್ಪು ಜಲಪಾತಗಳಿಗೆ ಜೀವಕಳೆ ಬಂದಿದ್ದು, ಅಬ್ಬಿ ಜಲಪಾತದಲ್ಲಿ ಸೋಮವಾರ ನೂರಾರು ಪ್ರವಾಸಿಗರು ಕಂಡುಬಂದರು.
ಭಾಗಮಂಡಲ, ತಲಕಾವೇರಿ ಹಾಗೂ ನಾಪೋಕ್ಲು ವ್ಯಾಪ್ತಿಯಲ್ಲೂ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.
ಹಾರಂಗಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು ಒಳಹರಿವು 1,748 ಕ್ಯುಸೆಕ್‌ಗೆ ಏರಿಕೆಯಾಗಿದೆ. ಎರಡು ದಿನಗಳಲ್ಲಿ ಹಾರಂಗಿಗೆ 2 ಅಡಿ
ಯಷ್ಟು ನೀರು ಹರಿದುಬಂದಿದೆ. ಸೋಮ
ವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಯ ಅವಧಿಯಲ್ಲಿ ಭಾಗ
ಮಂಡಲದಲ್ಲಿ 79.43 ಮಿ.ಮೀ, ಮಡಿ
ಕೇರಿಯಲ್ಲಿ 58, ಸಂಪಾಜೆಯಲ್ಲಿ 53, ಹುದಿಕೇರಿಯಲ್ಲಿ 43 ಮಿ.ಮೀ ಮಳೆ ಸುರಿದಿದೆ.
ನಾಲೆಗಳಿಗೆ ನೀರು: ಕುಡಿಯಲು ಮಾತ್ರ ಬಳಸುವಂತೆಸೂಚಿಸಿ, ಹಾರಂಗಿ ಜಲಾಶಯದಿಂದ ಎಡದಂಡೆ ಮತ್ತು ಬಲದಂಡೆ ನಾಲೆಗಳಿಗೆ 500 ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ.
ಮುಂದುವರಿದ ಮಳೆ:ಹೊಸನಗರ, ತೀರ್ಥಹಳ್ಳಿ ಹೊರತುಪಡಿಸಿದರೆ ಜಿಲ್ಲೆಯ ಎಲ್ಲೆಡೆ ಮಂಗಳವಾರ ಮಳೆ ಬಿಡುವು ನೀಡಿದೆ. ಹೊಸನಗರ ತಾಲ್ಲೂಕಿನಲ್ಲಿಮಳೆ ಆರ್ಭಟ ಮುಂದುವರಿದಿದೆ. ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಸಾಧಾರಣ ಮಳೆಯಾಗಿದೆ. ಕೆಲವು ಭಾಗಗಳಲ್ಲಿ ತುಂತುರು ಮಳೆಯಾಗಿದೆ.
ಉ.ಕ ದಲ್ಲಿ ಜೋರು ಮಳೆ: ಉತ್ತರ ಕನ್ನಡ ಜಿಲ್ಲೆಯವಿವಿಧೆಡೆ ಇಡೀ ದಿನ ಮಳೆಯಾಗಿದೆ.ಕಾರವಾರದ ಬೈತಖೋಲ್‌ನಲ್ಲಿರಾಷ್ಟ್ರೀಯ ಹೆದ್ದಾರಿ 66ರ ಮೇಲೆ ಅರ್ಧ ಅಡಿಯಷ್ಟು ನೀರುನಿಂತು, ಸಂಚಾರಕ್ಕೆ ಅಡಚಣೆಯಾಯಿತು. ರಸ್ತೆಯಲ್ಲಿ ನೀರು ನಿಂತಿದೆ ಎನ್ನುವ ಕಾರಣಕ್ಕೇ ಅಮದಳ್ಳಿ ಪ್ರಾಥಮಿಕ ಶಾಲೆಗೆ ಮಧ್ಯಾಹ್ನದ ನಂತರ ರಜೆ ನೀಡಲಾಯಿತು.
ಹೊನ್ನಾವರದ ಕರ್ಕಿ ಬಳಿ ಭಾನುವಾರ ರಾತ್ರಿ ಆಲದ ಮರ ಹೆದ್ದಾರಿಗೆ ಬಿದ್ದ ಕಾರಣ ವಾಹನಗಳು ಸಾಲುಗಟ್ಟಿ ನಿಂತವು. ಸೋಮವಾರ ಬೆಳಿಗ್ಗೆ ಮರ ತೆರವುಗೊಳಿಸಿದ ನಂತರ ಸಂಚಾರ ಸಹಜ ಸ್ಥಿತಿಗೆ ಬಂತು.
ಮಳೆಯ ಆರ್ಭಟ: ಕರಾವಳಿ ಜಿಲ್ಲೆಗಳಲ್ಲಿ ಸೋಮವಾರ ಬೆಳಿಗ್ಗೆಯಿಂದ ಮಳೆ ಬಿರುಸಾಗಿದೆ. ಮಂಗಳೂರು ನಗರದಲ್ಲಿ ಆಗಾಗ ಬಿಡುವು ನೀಡಿ ಜೋರಾಗಿ ಮಳೆ ಸುರಿಯುತ್ತಿದ್ದು, ಕೆಲವೆಡೆ ಗುಡ್ಡ ಕುಸಿತ, ಮರ ಬಿದ್ದು ಹಾನಿಯಾಗಿದೆ. ಉಡುಪಿ ಜಿಲ್ಲೆಯಲ್ಲೂ ಮಳೆ ಆರ್ಭಟ ಮುಂದುವರಿದಿದೆ.
ದೇವಸ್ಥಾನ ಜಲಾವೃತ: ರಥಬೀದಿಯಲ್ಲಿರುವ ವೀರಾಂಜನೇಯ ದೇವಾಲಯದೊಳಕ್ಕೆ ನೀರು ನುಗ್ಗಿದೆ. ದೇವಸ್ಥಾನದ ಆವರಣ ಜಲಾವೃತವಾಗಿದ್ದು, ಪೂಜೆ ಸ್ಥಗಿತಗೊಂಡಿದೆ. ನಗರದ ಹೊರವಲಯದ ಆಂಬ್ಲಮೊಗರು ಸಮೀಪದ ಮದಕಗುಡ್ಡೆಯಲ್ಲಿ ಗುಡ್ಡವೊಂದು ಕುಸಿದಿದ್ದು, ಎರಡು ಮನೆಗಳಿಗೆ ಹಾನಿಯಾಗಿದೆ. ನಗರದ ಬಿಜೈ ಬಳಿ ಗುಡ್ಡ ಕುಸಿದು ರಸ್ತೆಯ ಮೇಲೆ ಬಿದ್ದಿದ್ದು, ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಉಳ್ಳಾಲದಲ್ಲಿ ಕಡಲ್ಕೊರೆತ ಹೆಚ್ಚಾಗಿದೆ. ಸೋಮೇಶ್ವರ ಉಚ್ಚಿಲದಲ್ಲಿ ಸಮುದ್ರ ತೀರಕ್ಕೆ ಬೃಹದಾಕಾರದ ಅಲೆಗಳು ಬಂದು ಅಪ್ಪಳಿಸುತ್ತಿವೆ.
ನೇತ್ರಾವತಿ, ಕುಮಾರಧಾರ ಸೇರಿದಂತೆ ಜಿಲ್ಲೆಯ ಬಹುತೇಕ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.
ಕೊಡಗು, ಉತ್ತರಕನ್ನಡದಲ್ಲಿ ‘ರೆಡ್ ಅಲರ್ಟ್’
ಕೊಡಗು ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗಳವಾರವೂ (ಜುಲೈ 23) ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ ‘ರೆಡ್ ಅಲರ್ಟ್’ ಘೋಷಿಸಿದೆ .
ಕೊಡಗು ಜಿಲ್ಲೆಯಲ್ಲಿ ಮಳೆಯ ತೀವ್ರತೆ ಕಡಿಮೆಯಾದ ಪರಿಣಾಮ ‘ಆರೆಂಜ್ ಅಲರ್ಟ್’ ಘೋಷಣೆ ಮಾಡಲಾಗಿತ್ತು. ಮಳೆ ಮತ್ತೆ ತೀವ್ರತೆ ಪಡೆಯುವ ಸಾಧ್ಯತೆ ಇರುವುದರಿಂದ ಜುಲೈ 24ರವರೆಗೆ ‘ರೆಡ್ ಅಲರ್ಟ್‘ ಘೋಷಿಸಲಾಗಿದ್ದು, 204 ಮಿ.ಮೀಗಿಂತ ಅಧಿಕ ಮಳೆ ಬೀಳುವ ಎಚ್ಚರಿಕೆ ನೀಡಲಾಗಿದೆ.
ಸಾರ್ವಜನಿಕರು ಹಾಗೂ ಪ್ರವಾಸಿಗರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಕೋರಿದ್ದಾರೆ. ಪ್ರಕೃತಿ ವಿಕೋಪ ಸಂಬಂಧ ಸಹಾಯವಾಣಿ ಆರಂಭಿಸಲಾಗಿದ್ದು ಸಮಸ್ಯೆಯಾದರೆ ದೂರವಾಣಿ: 08272 221077 ಹಾಗೂ ಮೊಬೈಲ್: 85500 01077 ಸಂಪರ್ಕಿಸಲು ಕೋರಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.