ಹೆಬ್ಬಾಳಕರ - ಜಾರಕಿಹೊಳಿ ಸಹೋದರರ ಸಂಘರ್ಷ: ಸಂಧಾನದ ಹೊಣೆ ಸಿದ್ದರಾಮಯ್ಯಗೆ

7

ಹೆಬ್ಬಾಳಕರ - ಜಾರಕಿಹೊಳಿ ಸಹೋದರರ ಸಂಘರ್ಷ: ಸಂಧಾನದ ಹೊಣೆ ಸಿದ್ದರಾಮಯ್ಯಗೆ

Published:
Updated:

ಬೆಂಗಳೂರು: ಜಾರಕಿಹೊಳಿ ಸಹೋದರರು (ರಮೇಶ– ಸತೀಶ) ಮತ್ತು ಲಕ್ಷ್ಮಿ ಹೆಬ್ಬಾಳಕರ ನಡುವಿನ ಸಂಘರ್ಷಕ್ಕೆ ತೇಪೆ ಹಚ್ಚುವ ಕೆಲಸವನ್ನು ಕೆ.ಸಿ. ವೇಣುಗೋಪಾಲ್‌ ಅವರು ಸಿದ್ದರಾಮಯ್ಯಗೆ ವಹಿಸಿದ್ದಾರೆ.

ರಮೇಶ ಮತ್ತು ಹೆಬ್ಬಾಳಕರ ಜೊತೆ ವೇಣುಗೋಪಾಲ್‌ ಮತ್ತು ಸಿದ್ದರಾಮಯ್ಯ ಶನಿವಾರ ರಾತ್ರಿ ಪ್ರತ್ಯೇಕವಾಗಿ ಚರ್ಚೆ ನಡೆಸಿದರು.

ಜಾರಕಿಹೊಳಿ ಸಹೋದರರ ವಿರುದ್ಧ ದೂರಿನ ಸುರಿಮಳೆಯನ್ನೇ ಸುರಿಸಿರುವ ಹೆಬ್ಬಾಳಕರ, ‘ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸೇರಿದಂತೆ ಎಲ್ಲ ಚುನಾವಣೆಗಳಲ್ಲಿ ತೊಂದರೆ ಕೊಟ್ಟಿರುವ ಅವರು, ನನ್ನ ಕ್ಷೇತ್ರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ನನ್ನ ಕ್ಷೇತ್ರದಲ್ಲಿ ಎಂಟು ಹಾಗೂ ಸತೀಶ ಜಾರಕಿಹೊಳಿ ಕ್ಷೇತ್ರದಲ್ಲಿ ಎರಡು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿವೆ. ಹೀಗಿದ್ದರೂ ಅಧಿಕಾರಿಗಳನ್ನು ಅವರೇ ನೇಮಿಸಿಕೊಳ್ಳುತ್ತಿದ್ದಾರೆ. ಸಂಖ್ಯಾಬಲ, ಜನಬಲ ನನ್ನ ಪರವಾಗಿದೆ’ ಎಂದೂ ವಾದಿಸಿದ್ದಾರೆ.

ಅದಕ್ಕೆ ಪ್ರತಿಯಾಗಿ, ‘ಬೆಳಗಾವಿಯಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಿಸಿ ಕೊಟ್ಟಿದ್ದೇವೆ. ಪಕ್ಷಕ್ಕಾಗಿ ಇಷ್ಟು ವರ್ಷ ಕೆಲಸ ಮಾಡಿಕೊಂಡು ಬಂದಿದ್ದರೂ ನನ್ನ ಮತ್ತು ಸತೀಶನ ವಿರುದ್ಧವೇ ಎತ್ತಿ ಕಟ್ಟುವ ಕೆಲಸ ಮಾಡಿದ್ದಾರೆ. ಇದನ್ನು ನೋಡಿಕೊಂಡು ಸುಮ್ಮನಿರಲು ಹೇಗೆ ಸಾಧ್ಯ. ನನ್ನ ಜೊತೆ ಹೈಕಮಾಂಡ್ ಇದೆ ಎಂಬಂತೆ ಅವರು ವರ್ತಿಸುತ್ತಿದ್ದಾರೆ’ ಎಂದು ಹೆಬ್ಬಾಳಕರ ವಿರುದ್ಧ ರಮೇಶ ದೂರಿದ್ದಾರೆ.

ಗೊಂದಲ ಬಗೆಹರಿಸುವ ಭರವಸೆ ನೀಡಿರುವ ವೇಣುಗೋಪಾಲ್‌, ‘ಮಾಧ್ಯಮಗಳ ಮುಂದೆ ಹೋಗಬಾರದು. ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು’ ಎಂದು ಇಬ್ಬರಿಗೂ ಸೂಚನೆ ನೀಡಿದ್ದಾರೆ.

ಬಗೆಹರಿಯದ ಬಿಕ್ಕಟ್ಟು: ರಮೇಶ ಜಾರಕಿಹೊಳಿ ಅವರನ್ನು ಕಾವೇರಿ ನಿವಾಸಕ್ಕೆ ಕರೆಸಿಕೊಂಡು ಚರ್ಚೆ ನಡೆಸಿದ ಸಿದ್ದರಾಮಯ್ಯ, ‘ಹೆಬ್ಬಾಳಕರ ಜೊತೆ ನಾನು ಮಾತನಾಡುತ್ತೇನೆ. ಚುನಾವಣೆ ಹೊಸ್ತಿಲಲ್ಲಿ ಸಂಘರ್ಷ ಬೇಡ. ನಾನು ಯೂರೋಪ್ ಪ್ರವಾಸ ಮುಗಿಸಿ ಬಂದ ಬಳಿಕ ಚರ್ಚೆ ಮಾಡೋಣ’ ಎಂದು ಸಮಾಧಾನಪಡಿಸಿದ್ದಾರೆ.

ಸತೀಶ್ ಜಾರಕಿಹೊಳಿಗೂ ಕರೆ ಮಾಡಿರುವ ಸಿದ್ದರಾಮಯ್ಯ, ‘ಆರೋಪ- ಪ್ರತ್ಯಾರೋಪ ಮಾಡುವುದನ್ನು ನಿಲ್ಲಿಸಿ’ ಎಂದು ಕಿವಿಮಾತು ಹೇಳಿದ್ದಾರೆ.

‘ಬೆಳಗಾವಿ ಜಿಲ್ಲೆಯ ವಿಷಯದಲ್ಲಿ ಮೂರನೆಯವರು ತಲೆ ಹಾಕುವುದು ಸರಿಯಲ್ಲ. ಹೆಬ್ಬಾಳಕರ ಪರ ಡಿ.ಕೆ. ಶಿವಕುಮಾರ್ ಮಧ್ಯಸ್ಥಿಕೆ ವಹಿಸುತ್ತಿರುವುದು ಯಾಕೆ. ನಮ್ಮ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ’ ಎಂದು ರಮೇಶ ಜಾರಕಿಹೊಳಿ ಕಿಡಿಕಾರಿದ್ದಾರೆ ಎಂದೂ ಗೊತ್ತಾಗಿದೆ.

ಈ ಭಿನ್ನಾಭಿಪ್ರಾಯದ ಕುರಿತು ಪ್ರತಿಕ್ರಿಯಿಸಿದ ವೇಣುಗೋಪಾಲ್‌, ‘ಕಾಂಗ್ರೆಸ್‌ ಸಾಗರ ಇದ್ದಂತೆ. ಅಲ್ಲೊಂದು ಇಲ್ಲೊಂದು ಸಮಸ್ಯೆ ಇದ್ದರೆ ಅದನ್ನು ಸರಿಪಡಿಸುತ್ತೇವೆ’ ಎಂದು ಹೇಳಿದರು.

ಇದನ್ನೂ ಓದಿ: ಸಮಸ್ಯೆ ನಾವೇ ಬಗೆಹರಿಸಿಕೊಳ್ಳುತ್ತೇವೆ: ವರಿಷ್ಠರಿಗೆ ಟಾಂಗ್‌ ನೀಡಿದ ಜಾರಕಿಹೊಳಿ

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !