ಭಾನುವಾರ, ಜನವರಿ 26, 2020
29 °C

ಸಹಜೀವನ ಸಂತ್ರಸ್ತೆ ಜೀವನಾಂಶಕ್ಕೆ ಅರ್ಹಳು: ಹೈಕೋರ್ಟ್ ತೀರ್ಪು

ಬಿ.ಎಸ್.ಷಣ್ಮುಖಪ್ಪ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸಹಜೀವನ (ಲೀವಿಂಗ್‌ ರಿಲೇಶನ್‌ಶಿಪ್‌) ನಡೆಸುತ್ತಿದ್ದ ವ್ಯಕ್ತಿ, ಮಹಿಳೆಯನ್ನು ಏಕಾಏಕಿ ತೊರೆದು ಹೋದಾಗ ಆ ಸಂತ್ರಸ್ತೆ ತನ್ನ ಜೀವನ ನಿರ್ವಹಣೆಗಾಗಿ ಜೀವನಾಂಶ ಕೋರುವುದು ನ್ಯಾಯಬದ್ಧವಾಗಿದೆ’ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಈ ಕುರಿತಂತೆ ವಿವಾಹೇತರ ಸಂಬಂಧ ಹೊಂದಿ ‘ಸಂತ್ರಸ್ತೆಯಾಗಿದ್ದೇನೆ’ ಎಂದು ದೂರಿ ಹೈಕೋರ್ಟ್‌ ಕದ ಬಡಿದಿದ್ದ 46 ವರ್ಷದ ಬೆಂಗಳೂರು ನಿವಾಸಿಯೊಬ್ಬರ ಕ್ರಿಮಿನಲ್‌ ಪುನರ್ ಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎ.ಪಾಟೀಲ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದೆ.

‘ವೈವಾಹಿಕ ಸಂಬಂಧವನ್ನು ಸಾಬೀತುಮಾಡಿ ಎಂದು ಕೇಳುವ ಮೂಲಕ ವಿಚಾರಣಾ ನ್ಯಾಯಾಲಯ ಮತ್ತು ಸೆಷನ್ಸ್ ನ್ಯಾಯಾಲಯ ಜೀವನಾಂಶ ಕೋರಿದ್ದ ಸಂತ್ರಸ್ತೆಯ ಅರ್ಜಿಯನ್ನು ತಿರಸ್ಕರಿಸಿರುವುದು ತಪ್ಪು. ಈ ಪ್ರಕರಣದಲ್ಲಿ ಕೇವಲ ಸಾಕ್ಷಿ ಆಧಾರವೊಂದರಿಂದಲೇ ಸಂತ್ರಸ್ತೆಯ ಮನವಿಯನ್ನು ತಿರಸ್ಕರಿಸಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಹೇಳಿದೆ.

‘ವಿವಾಹೇತರ ಸಂಬಂಧ ಹೊಂದಿದ ಮಹಿಳೆಯನ್ನು ಆಗಾಗ್ಗೆ ಸಂಧಿಸುತ್ತೇನೆ ಎಂದು ಜೀವನಾಂಶ ನೀಡಬೇಕಾಗಿರುವ ಪುರುಷ ವಿಚಾರಣಾ ನ್ಯಾಯಾಲಯದಲ್ಲಿ ತಿಳಿಸಿದ್ದಾರೆ. ಸಂತ್ರಸ್ತೆಯ ಮಕ್ಕಳ ಶಾಲಾ ದಾಖಲಾತಿಗಳಲ್ಲಿ ಅಪ್ಪನ ಹೆಸರು ಪ್ರತಿವಾದಿಯದ್ದೇ ಆಗಿದೆ. ಇದರಿಂದ ಅವರಿಬ್ಬರ ನಡುವೆ ಗಾಢ ಸಂಬಂಧ ಇತ್ತು ಎಂಬುದು ವೇದ್ಯವಾಗುತ್ತದೆ. ಅಂತೆಯೇ ವಿಚಾರಣಾ ನ್ಯಾಯಾಲಯದಲ್ಲಿ ಮೊದಲ ಪತ್ನಿಯನ್ನು ಪಾಟಿ ಸವಾಲಿಗೆ ಒಳಪಡಿಸುವ ಅವಕಾಶ ಕಲ್ಪಿಸಿಲ್ಲ. ಹೀಗಾಗಿ ಮೊದಲ ಪತ್ನಿಯ ಸಂಬಂಧ ಮನವರಿಕೆ ಮಾಡಿಕೊಡುವಲ್ಲಿ ಪ್ರತಿವಾದಿ ವಿಫಲವಾಗಿದ್ದಾರೆ' ಎಂದು ನ್ಯಾಯಪೀಠ ವಿವರಿಸಿದೆ.

‘ಹೀಗಾಗಿ, ಸಂತ್ರಸ್ತೆಗೆ ಪ್ರತಿ ತಿಂಗಳೂ ಜೀವನೋಪಾಯಕ್ಕೆ ₹ 5 ಸಾವಿರ ಹಾಗೂ ಮನೆ ಬಾಡಿಗೆಗೆ ₹ 3 ಸಾವಿರ ನೀಡಬೇಕು. ಈ ಹಣವನ್ನು ಸಂತ್ರಸ್ತೆ ಯಾವಾಗ ವಿಚಾರಣಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರೊ ಆ ದಿನಾಂಕದಿಂದ ಈತನಕ ಶೇ 9ರ ಬಡ್ಡಿ ದರದಲ್ಲಿ ಪಾವತಿಸಬೇಕು’ ಎಂದು ಆದೇಶದಲ್ಲಿ ತಿಳಿಸಿದೆ.

ಪ್ರಕರಣವೇನು?: 58 ವರ್ಷದ ವ್ಯಕ್ತಿಯೊಬ್ಬರು ನಗರದ ಸ್ಥಳೀಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು ರಿಯಲ್‌ ಎಸ್ಟೇಟ್‌ ವ್ಯವಹಾರವನ್ನೂ ಹೊಂದಿದ್ದಾರೆ. ಇವರು 1985ರಲ್ಲಿ ಹಿಂದೂ ಸಂಪ್ರದಾಕ್ಕೆ ಅನುಗುಣವಾಗಿ ಮದುವೆಯಾಗಿದ್ದರು. ಈ ಸಂಬಂಧಕ್ಕೆ ಮೂವರು ಮಕ್ಕಳಿದ್ದಾರೆ.

ಇವರು 1996ರಲ್ಲಿ ವಿವಾಹೇತರ ಸಂಬಂಧ ಹೊಂದುವ ಮೂಲಕ ಆ ಮಹಿಳೆಯಿಂದ ಇಬ್ಬರು ಮಕ್ಕಳನ್ನು ಹೊಂದಿ, ಆಕೆಯ ಜೊತೆ ಸಹಜೀವನ ನಡೆಸುತ್ತಿದ್ದರು. ಏಕಾಏಕಿ 2012ರಲ್ಲಿ ಸಹಜೀವನದಿಂದ ದೂರಾಗಿ ಸಂಪ್ರದಾಯ ಬದ್ಧವಾಗಿ ಮದುವೆಯಾಗಿದ್ದ ಪತ್ನಿಯ ಜೊತೆಯಲ್ಲೇ ವಾಸ ಮಾಡತೊಡಗಿದರು.

ಇದರಿಂದ ಕಂಗಾಲಾದ ಸಹಜೀವನ ಹೊಂದಿದ್ದ ಮಹಿಳೆಯು ವಿಚಾರಣಾ ನ್ಯಾಯಾಲಯದ ಮೊರೆ ಹೋಗಿ, ‘ನನಗೆ ಜೀವನಾಂಶ ಕೊಡಿಸಬೇಕು’ ಎಂದು ಕೋರಿದ್ದರು. ಇದನ್ನು ಆಕ್ಷೇಪಿಸಿದ್ದ ವ್ಯಕ್ತಿ ‘ಆಕೆಗೂ ನನಗೂ ಮದುವೆಯೇ ಆಗಿಲ್ಲ. ಹೀಗಾಗಿ ಜೀವನಾಂಶ ಕೊಡಲು ಆಗುವುದಿಲ್ಲ’ ಎಂದಿದ್ದರು.

‘ಮಹಿಳೆ ಕೌಟುಂಬಿಕ ಸಂಬಂಧ ಸಾಬೀತುಮಾಡುವಲ್ಲಿ ವಿಫಲವಾಗಿದ್ದಾರೆ’ ಎಂದು ವಿಚಾರಣಾ ನ್ಯಾಯಾಲಯ ಅರ್ಜಿ ತಿರಸ್ಕರಿಸಿತ್ತು. ಇದನ್ನು ಆಕೆ ಸೆಷನ್ಸ್‌ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಸೆಷನ್ಸ್ ನ್ಯಾಯಾಲಯವೂ, ‘ವಿಚಾರಣಾ ನ್ಯಾಯಾಲಯ ಹೇಳಿದ್ದು ಸರಿ ಇದೆ’ ಎಂದು ಸಂತ್ರಸ್ತೆಯ ಅರ್ಜಿ ವಜಾ ಮಾಡಿತ್ತು.

ಈ ಎರಡೂ ನ್ಯಾಯಾಲಯಗಳ ಆದೇಶ ಪ್ರಶ್ನಿಸಿ ಸಂತ್ರಸ್ತೆ 2019ರಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ‘ಕೌಟುಂಬಿಕ ಹಿಂಸೆಯಿಂದ ಮಹಿಳೆಯ ಸಂರಕ್ಷಣೆ ಕಾಯ್ದೆ–2005ರ ಕಲಂ 18, 19 ಮತ್ತು 20ರ ಅನುಸಾರ ನನಗೆ ಸೂಕ್ತ ಜೀವನಾಂಶ ಕೊಡಿಸಬೇಕು’ ಎಂದು ಕೋರಿದ್ದರು.

ಅಪರೂಪದ ಪ್ರಕರಣ: ‘ಇದೊಂದು ಅಪರೂಪದ ಪ್ರಕರಣವಾಗಿದ್ದು ನ್ಯಾಯಪೀಠ, ಸುಪ್ರೀಂ ಕೋರ್ಟ್‌ನ ಹಲವು ತೀರ್ಪುಗಳನ್ನು ಉಲ್ಲೇಖಿಸುವ ಮೂಲಕ ಸಹಜೀವನ ನಡೆಸಿದ್ದ ಮಹಿಳೆಗೆ ನ್ಯಾಯ ದೊರಕಿಸಿಕೊಟ್ಟಿರುವುದು ಶ್ಲಾಘನೀಯ’ ಎಂದು ಅರ್ಜಿದಾರ ಸಂತ್ರಸ್ತ ಮಹಿಳೆಯ ಪರ ವಕೀಲ ಜಗದೀಶ ಶಾಸ್ತ್ರಿ ಪ್ರತಿಕ್ರಿಯಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು