ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಪ್ಪು ಕದನಕ್ಕೆ ಮುನ್ನುಡಿ

ಟಿಪ್ಪು ಪಾಠವನ್ನು 101 ಪರ್ಸೆಂಟ್‌ ತೆಗೆದುಹಾಕುತ್ತೇವೆ – ಯಡಿಯೂರಪ್ಪ
Last Updated 30 ಅಕ್ಟೋಬರ್ 2019, 19:43 IST
ಅಕ್ಷರ ಗಾತ್ರ

ಬೆಂಗಳೂರು: ಬ್ರಿಟಿಷರ ವಿರುದ್ಧ ಹೋರಾಡಿ ಮಡಿದ ಟಿಪ್ಪು ಸುಲ್ತಾನ್‌ ಜಯಂತಿ ರದ್ದುಪಡಿಸಿದ ಬಿಜೆಪಿ ಸರ್ಕಾರ, ಶಾಲಾ ಪಠ್ಯಗಳಲ್ಲಿರುವ ಟಿಪ್ಪು ಪರಿಚಯಿಸುವ ಪಾಠವನ್ನು ತೆಗೆದು ಹಾಕುವತ್ತ ಹೆಜ್ಜೆ ಇಟ್ಟಿರುವುದು ರಾಜಕೀಯ ಕದನಕ್ಕೆ ಕಾರಣವಾಗಿದೆ.

‘ಟಿಪ್ಪು ಸುಲ್ತಾನ್‌ಗೆ ಸಂಬಂಧಪಟ್ಟ ವಿಷಯವನ್ನು 101 ಪರ್ಸೆಂ‌ಟ್‌ ತೆಗೆದು ಹಾಕುತ್ತೇವೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿಕೆ ನೀಡಿದ ಬೆನ್ನಲ್ಲೇ, ಕಾಂಗ್ರೆಸ್‌ ನಾಯಕರು ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ.

ಟಿಪ್ಪು ಕುರಿತ ಪಾಠ ತೆಗೆದು ಹಾಕಬೇಕು ಎಂದು ಬಿಜೆಪಿ ಶಾಸಕ ಅಪ್ಪಚ್ಚು ರಂಜನ್‌ ಅವರು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‌ ಕುಮಾರ್‌ ಅವರಿಗೆ ಮನವಿ ಸಲ್ಲಿಸಿದ್ದರು. ಟಿಪ್ಪು ಕುರಿತ ಪಾಠ ಉಳಿಸಿಕೊಳ್ಳಬೇಕೆ, ಬಿಡಬೇಕೆ ಎಂಬುದನ್ನು ನಿರ್ಧರಿಸಲು ಸುರೇಶ್‌ ಕುಮಾರ್‌ ಸಮಿತಿಯೊಂದನ್ನು ರಚಿಸಿ, ವರದಿ ಕೇಳಿದ್ದಾರೆ.

ಮುಖ್ಯಮಂತ್ರಿ ಹೇಳಿಕೆಯನ್ನು ಕಟುವಾಗಿ ವಿರೋಧಿಸಿರುವವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ನೆರೆ ಪರಿಹಾರ ಕಾರ್ಯದಲ್ಲಿ ವಿಫಲವಾಗಿರುವ ಸರ್ಕಾರವು ಜನರ ಗಮನವನ್ನು ಬೇರೆಡೆ ಸೆಳೆಯಲು ಟಿಪ್ಪು ವಿಷಯ ಎತ್ತಿಕೊಂಡಿದೆ’ ಎಂದು ಹರಿಹಾಯ್ದಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಬಿಜೆಪಿ ಸಂಸದರಾದ ಶೋಭಾ ಕರಂದ್ಲಾಜೆ, ಪ್ರತಾಪಸಿಂಹ ಮುಖ್ಯಮಂತ್ರಿ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಮುಖ್ಯಮಂತ್ರಿ ಹೇಳಿದ್ದೇನು?: ಬೆಂಗಳೂರು ಪ್ರೆಸ್‌ ಕ್ಲಬ್‌ ಬುಧವಾರ ಆಯೋಜಿಸಿದ್ದ ಸಂವಾದದಲ್ಲಿ ಟಿಪ್ಪು ಜಯಂತಿ ರದ್ದು ಮತ್ತು ಪಠ್ಯ ಪುಸ್ತಕಗಳಲ್ಲಿರುವ ಟಿಪ್ಪು ವಿಷಯವನ್ನು ಕೈಬಿಡುವ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಟಿಪ್ಪುವಿಗೆ ಸಂಬಂಧಪಟ್ಟ ವಿಷಯವನ್ನು ಶೇ101 ರಷ್ಟು ತೆಗೆದು ಹಾಕುವುದಾಗಿ’ ತಿಳಿಸಿದರು. ತಕ್ಷಣವೇ ಪಠ್ಯದ ಕುರಿತು ಸಮಜಾಯಿಷಿ ನೀಡಿದ ಅವರು, ‘ಈ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇನೆ’ ಎಂದರು.

‘ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡುವುದಿಲ್ಲ. ಈ ಸಂಬಂಧವಾಗಿ ಹಿಂದಿನ ಸರ್ಕಾರದ ಎಲ್ಲಾ ಆದೇಶಗಳನ್ನೂ ವಾಪಸ್ ಪಡೆಯಲಾಗುತ್ತದೆ’ ಎಂದೂ ಅವರು ಹೇಳಿದರು.

ವಿಚಾರಣೆ ಮುಂದೂಡಿಕೆ: ಟಿಪ್ಪು ಜಯಂತಿ ರದ್ದುಪಡಿಸಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಲ್ಲಿಸಿ
ರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ.

ಪಾಠ ತೆಗೆಯುವುದು ಸುಲಭವಲ್ಲ

ಟಿಪ್ಪು ಮಾತ್ರವಲ್ಲ, ಯಾವುದೇ ಐತಿಹಾಸಿಕ ವ್ಯಕ್ತಿಗಳ ಚರಿತ್ರೆಯ ಪಾಠಗಳನ್ನು ಪಠ್ಯದಿಂದ ತೆಗೆದು ಹಾಕಲು ತಾಂತ್ರಿಕವಾಗಿ ಸಾಧ್ಯವಿಲ್ಲ ಎಂದು ಹೆಸರು ಹೇಳಲು ಬಯಸದ ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕರೊಬ್ಬರು ತಿಳಿಸಿದ್ದಾರೆ.

ಟಿಪ್ಪುವನ್ನು ಒಪ್ಪುತ್ತೇವೊ ಬಿಡುತ್ತೇವೊ ಅದು ಬೇರೆ ಪ್ರಶ್ನೆ. ಆದರೆ, ‘ಮೈಸೂರು ಇತಿಹಾಸ’ ಓದುವಾಗ ಹೈದರಾಲಿ ಮತ್ತು ಟಿಪ್ಪುವಿನ 40 ವರ್ಷಗಳ ಆಡಳಿತ ಅವಧಿಯನ್ನು ಬಿಟ್ಟು ಓದಲು ಸಾಧ್ಯವಿಲ್ಲ. ಚರಿತ್ರೆ ಅಪೂರ್ಣವಾಗುತ್ತದೆ. ಕಳೆದ 25 ವರ್ಷಗಳಲ್ಲಿ ಯಾವುದೇ ಐತಿಹಾಸಿಕ ವ್ಯಕ್ತಿಗಳ ಚರಿತ್ರೆ ತೆಗೆದು ಹಾಕಿದ ಉದಾಹರಣೆ ಇಲ್ಲ. ಪಠ್ಯಗಳಲ್ಲಿ ಮಾರ್ಪಾಡು ಆಗಿದೆ ಎಂದು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯಲ್ಲಿ ಕಾರ್ಯ ನಿರ್ವಹಿಸಿರುವ ಇತಿಹಾಸ ಅಧ್ಯಾಪಕ ಹಂ.ಗು.ರಾಜೇಶ್‌ ತಿಳಿಸಿದ್ದಾರೆ.

ಇತಿಹಾಸಕ್ಕೆ ಅಪಚಾರ: ಸಿದ್ದರಾಮಯ್ಯ ಕಿಡಿ

ಬಾಗಲಕೋಟೆ: ‘ಟಿಪ್ಪು ಪಠ್ಯ ಕೈಬಿಟ್ಟರೆ ಇತಿಹಾಸವನ್ನು ತಿರುಚಿದಂತಾಗುತ್ತೆ. ಬ್ರಿಟಿಷರ ವಿರುದ್ಧ ಟಿಪ್ಪು ಹೋರಾಡಿದ್ದು ಸುಳ್ಳೇ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಯಾವುದೇ ಕಾರಣಕ್ಕೂ ಇತಿಹಾಸ ತಿರುಚಬಾರದು. ಮಕ್ಕಳಿಗೆ ಟಿಪ್ಪುವಿನ ಬಗ್ಗೆ ಕಲಿಸಬೇಕು, ಇತಿಹಾಸದಿಂದ ಪಾಠ ಕಲಿಯಬೇಕು. ಟಿಪ್ಪು ಮತಾಂಧನಲ್ಲ ಬಿಜೆಪಿಯವರೇ ಮತಾಂಧರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸತ್ತು ಹೋಗಿರುವ ಸರ್ಕಾರ ಮಾತ್ರ ಹೀಗಿರಲು ಸಾಧ್ಯ. ಜನರ ಗಮನ ಬೇರೆ ಕಡೆ ಸೆಳೆಯುವ ಕುತಂತ್ರ ಬೇಡ. ಮೊದಲು ನೆರೆ ಪರಿಹಾರ‌ ಮಾಡಿ ಲೆಕ್ಕಕೊಡಿ, ಆ ಮೇಲೆ ಟಿಪ್ಪು, ಸಾವರ್ಕರ್ ಬಗ್ಗೆ ಮಾತನಾಡೋಣ’ ಎಂದೂ ಟ್ವೀಟ್‌ ಮಾಡಿದ್ದಾರೆ.

‘ಇತಿಹಾಸ ಇದ್ದಂತೆ ತಿಳಿಸಬೇಕು’

ಮೈಸೂರು: ‘ಇತಿಹಾಸವನ್ನು ತಿರುಚಬಾರದು. ಅದು ಹೇಗಿದೆಯೋ ಅದೇ ರೀತಿ ನಮ್ಮ ಮಕ್ಕಳಿಗೆ, ಮುಂದಿನ ತಲೆಮಾರಿನ ಜನರಿಗೆ ತಿಳಿಸಬೇಕು’ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು.

‘ಇತಿಹಾಸದಲ್ಲಿ ಒಳ್ಳೆಯದೂ ಇದೆ. ಕೆಟ್ಟದ್ದೂ ಇದೆ. ಅವೆರಡನ್ನೂ ನಾವು ಅರಿತುಕೊಳ್ಳಬೇಕು.ಶಾಲಾ ಪಠ್ಯಗಳಿಂದ ಟಿಪ್ಪು ಸುಲ್ತಾನ್‌ ಕುರಿತ ಅಧ್ಯಾಯವನ್ನು ತೆಗೆದು ಹಾಕುವುದು ಸರ್ಕಾರಕ್ಕೆ ಬಿಟ್ಟ ವಿಚಾರ’ ಎಂದು ಅವರು ತಿಳಿಸಿದರು.

****

ಮಹನೀಯರ ಬಗ್ಗೆ ಇತಿಹಾಸ ತಿಳಿಯದೆ ಯಡಿಯೂರಪ್ಪ ಅಜ್ಞಾನಿಯಂತೆ ಮಾತನಾಡುತ್ತಿದ್ದಾರೆ. ಪಠ್ಯ ಪುಸ್ತಕದಿಂದ ತೆಗೆದ ಮಾತ್ರಕ್ಕೆ ಇತಿಹಾಸ ಮರೆಸಲು ಸಾಧ್ಯವಿಲ್ಲ
-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

ಟಿಪ್ಪು ಕುರಿತ ಪಾಠಗಳನ್ನು ಉಳಿಸಿಕೊಳ್ಳಬೇಕೆ? ಕೈಬಿಡಬೇಕೆ? ಎಂಬುದರ ಕುರಿತು ವರದಿ ನೀಡಲು ಸಮಿತಿ ರಚಿಸಲಾಗಿದೆ. ವರದಿ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು
-ಎಸ್‌.ಸುರೇಶ್‌ ಕುಮಾರ್‌ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

ಟಿಪ್ಪುವಿನ ಸ್ವಾತಂತ್ರ್ಯ ಹೋರಾಟ ಹಾಗೂ ಅಪ್ರತಿಮ ಶೌರ್ಯವನ್ನು ರಾಷ್ಟ್ರಪತಿ ಕೋವಿಂದ್ ಅವರು ಹೊಗಳಿದ್ದರು. ಬಿಜೆಪಿ ನಾಯಕರು ಮರೆತಿರುವುದು ಏಕೆ?
-ವಿ.ಎಸ್. ಉಗ್ರಪ್ಪ, ಕಾಂಗ್ರೆಸ್ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT