ಶನಿವಾರ, ಜುಲೈ 31, 2021
27 °C

ಕೋವಿಡ್‌ ನಿರ್ವಹಣೆ ಕುರಿತು ಚರ್ಚೆ; ಸರ್ವಪಕ್ಷಗಳ ಸಭೆಗೆ ಎಚ್‌.ಕೆ.ಪಾಟೀಲ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ರಾಜ್ಯದಲ್ಲಿ ಕೋವಿಡ್ ರೋಗ ಕೈಮೀರುವ ಹಂತ ತಲುಪಿದ್ದು, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಕ್ಷಣವೇ ಸರ್ವ ಪಕ್ಷಗಳ ಸಭೆ ಕರೆಯಬೇಕು’ ಎಂದು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್‌ ಶಾಸಕ ಎಚ್‌.ಕೆ. ಪಾಟೀಲ ಆಗ್ರಹಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಆರೋಗ್ಯ ಸೇವೆಗೆ ಅಗತ್ಯವಿರುವ ವೈದ್ಯರು ಮತ್ತು ಸಿಬ್ಬಂದಿಯನ್ನು ವಿಶೇಷ ನೇಮಕಾತಿ ಮೂಲಕ ನೇಮಿಸಿಕೊಳ್ಳಬೇಕು. ಕೊರೊನಾ ಸೋಂಕು ದೃಢಪಟ್ಟವರಿಗೆ ₹ 2 ಲಕ್ಷದಿಂದ ₹ 5 ಲಕ್ಷ ಆರ್ಥಿಕ ಸಹಾಯ ಸಿಗುವಂಥ ವಿಮೆಯನ್ನು ರಾಜ್ಯ ಸರ್ಕಾರವೇ ಮಾಡಿಕೊಡಬೇಕು. ಆ ಮೂಲಕ ಜನರಿಗೆ ನೈತಿಕ ಸ್ಥೈರ್ಯ ತುಂಬ ಬೇಕು. ಆದರೆ, ಸರ್ಕಾರ ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ’ ಎಂದು ದೂರಿದರು.

‘ಇವತ್ತು ಚಿಕಿತ್ಸೆ ಸಿಗದೆ ಸೋಂಕಿತರು ರಸ್ತೆಯಲ್ಲಿ ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಿಷಯದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗ ಮಧ್ಯಪ್ರವೇಶಿಸಬೇಕು’ ಎಂದರು.

ಕಳಪೆ ಎಂದು ವರದಿ: ‘ಕೋವಿಡ್‌ ನಿರ್ವಹಣೆಗೆ ಸರ್ಕಾರ ಖರೀದಿಸಿರುವ ಚಿಕಿತ್ಸಾ ಉಪಕರಣಗಳು ಕಳಪೆ ಗುಣಮಟ್ಟದ್ದಾಗಿದ್ದು, ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ದೂರುಗಳು ಕೇಳಿಬಂದಿರುವುದು ಅನುಮಾನಗಳಿಗೆ ಕಾರಣವಾಗಿದೆ. ಹೊಸಕೋಟೆಯ ಎಸ್.ಎಂ. ಫಾರ್ಮಾಸ್ಯೂಟಿಕಲ್‌ನಿಂದ ಸರ್ಕಾರ ಖರೀದಿಸಿದ ಸ್ಯಾನಿಟೈಸರ್ ಕಳಪೆ ಗುಣಮಟ್ಟದ್ದಾಗಿದೆ ಎಂದು ರಾಮನಗರ ಮತ್ತು ಕಲಬುರ್ಗಿಯ ಸರ್ಕಾರಿ ಪ್ರಯೋಗಾಲಯಗಳೇ ಪ್ರಮಾಣೀಕರಿಸಿವೆ’ ಎಂದು ದಾಖಲೆಗಳನ್ನು ಪಾಟೀಲ ಬಿಡುಗಡೆ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು