ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೋಂಕಿನ ಬಗ್ಗೆ ಗಂಭೀರ ವಿಚಾರಗಳ ಪ್ರಸ್ತಾವ: ಸಿಎಂಗೆ ಎಚ್‌.ಕೆ.ಪಾಟೀಲ ಪತ್ರ

Last Updated 5 ಏಪ್ರಿಲ್ 2020, 13:43 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್–19ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ಮಾಜಿ ಸಚಿವ ಎಚ್‌.ಕೆ ಪಾಟೀಲ ಅವರುಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳು ಯಾವ ಹಂತದಲ್ಲಿಯೂ ಸಮರ್ಪಕವಾಗಿ ನಿರ್ವಹಣೆಯಾಗುತ್ತಿಲ್ಲ ಎಂದು ಆರೋಪಿಸಿರುವ ಅವರು ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ ಎಂದು ಎಚ್ಚರಿಸಿದ್ದಾರೆ.

ಪಾಟೀಲರ ಪತ್ರದ ಸಂಪೂರ್ಣ ವಿವರ ಇಲ್ಲಿದೆ...

ಸನ್ಮಾನ್ಯ ಶ್ರೀ. ಯಡಿಯೂರಪ್ಪನವರೇ,

ವಿಶ್ವದಾದ್ಯಂತ ಮಹಾಮಾರಿ ಕೊರೋನಾ ವೈರಸ್ (ಕೋವಿಡ್-19) ನಿಂದಾಗಿ ಆತಂಕದ ಕ್ಷಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಅತ್ಯಂತ ಗಂಭೀರವಾದ ಪರಿಸ್ಥಿತಿ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ಸರ್ಕಾರಗಳ ನಿರ್ಲಕ್ಷ್ಯ ಮನೋಭಾವ ಅತ್ಯಂತ ಆಘಾತಕಾರಿಯಾಗುತ್ತದೆ. ಕಳವಳಕಾರಿ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳು ಎಲ್ಲಾ ಹಂತದಲ್ಲಿಯೂ ಸಮರ್ಪಕವಾಗಿ ನಿರ್ವಹಣೆಯಾಗುತ್ತಿಲ್ಲ. ಅದರಿಂದ ಸೂಕ್ಷ್ಮ ಮತ್ತು ಗಂಭೀರ ದೂರಗಾಮಿ ಪರಿಣಾಮಗಳು ಉಂಟಾಗುತ್ತಿವೆ ಎಂದು ದಿನಗಳು ಉರುಳಿದಂತೆ ಗೋಚರವಾಗುತ್ತಿದೆ.

ಅದಕ್ಕಾಗಿ ಈ ಹಿನ್ನೆಲೆಯಲ್ಲಿ ದಿನಾಂಕ 24.3.2020 ಮತ್ತು 26.3.2020 ಮತ್ತು 1.4.2020ರಂದು ನಾನು ಬರೆದ ಪತ್ರಗಳನ್ನು ಹಾಗೂ ದಿನಾಂಕ 12.3.2020 ಮತ್ತು 23.3.2020 ರಂದು ವಿಧಾನಸಭೆಯಲ್ಲಿ ನಾನು ಈ ವಿಷಯ ಪ್ರಸ್ತಾಪಿಸಿದಾಗ ಮಾಡಿದ ಹಲವಾರು ಸಲಹೆಗಳು ತಮ್ಮ ಗಮನದಲ್ಲಿರಲಿಕ್ಕೆ ಸಾಕು.

ಇಂದಿನ ಪರಿಸ್ಥಿತಿ ದಿನೇ ದಿನೇ ಬದಲಾಗುತ್ತಿರುವುದರಿಂದ ಮಹಾಮಾರಿಯ ಹರಡುವಿಕೆ ವ್ಯಾಪಕಗೊಳ್ಳುತ್ತಿರುವುದರಿಂದ ಈ ಕೆಳಕಂಡ ಇನ್ನೂ ಹಲವು ಸಲಹೆಗಳನ್ನು ನೀಡಲು ಬಯಸುತ್ತೇನೆ.

1)ನಮ್ಮ ರಾಜ್ಯದಲ್ಲಿ ಒಂದುಕಡೆ ರೋಗ ತಪಾಸಣೆಯು ಅತ್ಯಂತ ನಿರ್ಲಕ್ಷ್ಯದಿಂದ ಮತ್ತು ಅಸಮರ್ಪಕವಾಗಿ ನಡೆಯುತ್ತಿದೆ. ರೋಗ ತಪಾಸಣೆ ಈ ಹಂತದಲ್ಲಿ ಬಹಳ ಪ್ರಮುಖವಾದದ್ದು. ನಮ್ಮ ನಿರ್ಲಕ್ಷ್ಯದ ಪರಮಾವಧಿ ಇಲ್ಲಿಯೇ ಇದೆ. ಇದೀಗ ತಪಾಸಣೆಯಾದ ಶಂಕಿತರ ಸಂಖ್ಯೆ ಮತ್ತು ಸಕಾರಾತ್ಮಕ ಫಲಿತಾಂಶ ಬಂದ ಸಂಖ್ಯೆಗಳನ್ನು ಸರ್ಕಾರ ಪಾರದರ್ಶಕವಾಗಿ ಬಿಡುಗಡೆ ಮಾಡದೇ ಇರುವುದರಿಂದ ಆತಂಕ ಮತ್ತಷ್ಟು ಮಡುಗಟ್ಟುತ್ತಿದೆ. ಈ ಅಂಕಿ-ಸಂಖ್ಯೆಗಳು ಪಾರದರ್ಶಕವಾಗಿ ಜನರ ಗಮನಕ್ಕೆ ಆಗಾಗ ತರುತ್ತಿದ್ದರೆ ಜನರನ್ನು ಹೆಚ್ಚು ಜಾಗೃತಗೊಳಿಸಲು ಸಾಧ್ಯವಾಗುತ್ತದೆ. ಸರ್ಕಾರದ ಅಂಕಿಸಂಖ್ಯೆಗಳು ಪಾರದರ್ಶಕವಾಗಿದ್ದು ನೈಜತೆಯನ್ನಷ್ಟೆ ಬಿಂಬಿಸುವಂತಿದ್ದರೆ ಅದರಿಂದ ಜಾಗೃತಿ ಉಂಟಾಗುತ್ತದೆಯೇ ಹೊರತು ಅನಾವಶ್ಯಕ ಭಯ ಉಂಟಾಗುವುದಿಲ್ಲ. ಅಂಕಿಸಂಖ್ಯೆಗಳನ್ನು ಮುಚ್ಚಿಡುವುದರಿಂದ ಸುಳ್ಳು ಸುದ್ದಿಗಳು ಹರಿದಾಡಲು ಸಹಾಯಕವಾಗುತ್ತದೆ. ಸರ್ಕಾರ ವಾಸ್ತವಿಕತೆಯನ್ನು ಅರಿತು ನೈಜ ಪರಿಸ್ಥಿತಿಯನ್ನು ಜನರ ಎದುರಿಗೆ ಇಡಬೇಕೆಂದು ಒತ್ತಾಯಿಸುವೆ.

2)ಅಮೇರಿಕಾ ದೇಶದಲ್ಲಿ ನ್ಯೂಯಾರ್ಕ್ ನಗರವೊಂದರಲ್ಲಿಯೇ ಪ್ರತಿ ದಶಲಕ್ಷ ಜನಸಂಖ್ಯೆಗೆ 395 ಜನರನ್ನು ತಪಾಸಣೆಗೊಳಪಡಿಸಲಾಗಿದೆ. ಇಡೀ ಅಮೇರಿಕಾ ದೇಶದಲ್ಲಿ ಪ್ರತಿ ದಶಲಕ್ಷ ಜನಸಂಖ್ಯೆಗೆ 183 ಜನರನ್ನು ತಪಾಸಣೆಗೊಳಪಡಿಸಲಾಗಿದೆ. ಆಸ್ಟ್ರೇಲಿಯಾದಲ್ಲಿ ಪ್ರತಿ ದಶಲಕ್ಷ ಜನಸಂಖ್ಯೆಗೆ 11,000 ಜನರನ್ನು ತಪಾಸಣೆಗೊಳಪಡಿಸಲಾಗಿದೆ. ದಕ್ಷಿಣ ಕೋರಿಯಾದಲ್ಲಿ ಪ್ರತಿ ದಶಲಕ್ಷ ಜನಸಂಖ್ಯೆಗೆ 8,800 ಜನರನ್ನು ತಪಾಸಣೆಗೊಳಪಡಿಸಲಾಗಿದೆ. ಬ್ರಿಟನ್ ದೇಶದಲ್ಲಿ ಪ್ರತಿ ದಶಲಕ್ಷ ಜನಸಂಖ್ಯೆಗೆ 2,573 ಜನರನ್ನು ತಪಾಸಣೆಗೊಳಪಡಿಸಲಾಗಿದೆ. ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಪ್ರತಿ ದಶಲಕ್ಷ ಜನಸಂಖ್ಯೆಗೆ 17,904 ಜನರನ್ನು ತಪಾಸಣೆಗೊಳಪಡಿಸಲಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ಪ್ರತಿ ದಶಲಕ್ಷ ಜನಸಂಖ್ಯೆಗೆ 23,000 ಜನರನ್ನು ತಪಾಸಣೆಗೊಳಪಡಿಸಲಾಗಿದೆ. ಆದರೆ ಭಾರತದಲ್ಲಿ ಪ್ರತಿ ದಶಲಕ್ಷ ಜನಸಂಖ್ಯೆಗೆ ಕೇವಲ 51 ಜನರನ್ನು ಮಾತ್ರ ತಪಾಸಣೆಗೊಳಪಡಿಸಲಾಗಿದೆ. ಕರ್ನಾಟಕದ ಸರಾಸರಿ ಲೆಕ್ಕ ಹಾಕಿದರೆ ಆಘಾತಕಾರಿ ಅಂಶಗಳು ಬೆಳಕಿಗೆ ಬರುತ್ತವೆ. ನಮ್ಮ ರಾಜ್ಯದಲ್ಲಿ ಪ್ರತಿ ದಶಲಕ್ಷ ಜನಸಂಖ್ಯೆಗೆ 75 ಜನರನ್ನು ಮಾತ್ರ ತಪಾಸಣೆಗೊಳಪಡಿಸಲಾಗಿದೆ. ಇಂತಹ ಅಪಾಯದ ಅಂಚಿನಲ್ಲಿದ್ದಾಗಲೂ ತಪಾಸಣೆಗಳ್ಳಲುಕೈಗೊಳ್ಳಲು ಹಿಂದೇಟು ಹಾಕುವುದು ಏಕೆ? ತಪಾಸಣೆಗಳನ್ನು ಕೈಗೊಳ್ಳಲು ಏನು ತೊಂದರೆ ಇದೆ?

3)ದಿನಾಂಕ 1.4.2020 ರಂದು ನಾನು ಬರೆದ ಪತ್ರದಲ್ಲಿ ತಮ್ಮ ಗಮನಕ್ಕೆ ತಂದ ವಿಷಯವನ್ನು ಇಲ್ಲಿ ಮತ್ತೆ ಪ್ರಸ್ತಾಪಿಸುತ್ತಿದ್ದೇನೆ. 'ಕೋವಿಡ್-19ರ ಹರಡುವಿಕೆಯನ್ನು ತಡೆಗಟ್ಟಲು ಸಾಧ್ಯವಾದಷ್ಟು ಬೇಗ ತಪಾಸಣೆಗಳನ್ನು ಕೈಗೊಳ್ಳುವ ಬಗ್ಗೆ ಚರ್ಚಿಸಿದ್ದೇವೆ. ಆದರೆ ಈ ತಪಾಸಣೆಗಳು ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ದಕ್ಷಿಣ ಕೋರಿಯಾ ರಾಷ್ಟ್ರದಲ್ಲಿ ಸಾಮೂಹಿಕ ತಪಾಸಣೆ (Mass Testing) ನಡೆಸಿ ತ್ವರಿತಗತಿ (Rapid Test) ತಪಾಸಣೆಯನ್ನು ಕೈಗೊಳ್ಳಲಾಯಿತು. ಈ ತಪಾಸಣೆಗಳ ಫಲಿತಾಂಶವು ಶೇ. 85 ರಷ್ಟು ನಿಖರವಾಗಿರುತ್ತದೆ ಮತ್ತು 10 ನಿಮಿಷದಲ್ಲಿ ವರದಿ ಕೈಗೆ ಲಭ್ಯವಾಗುತ್ತದೆ.

ದಕ್ಷಿಣ ಕೋರಿಯಾದ ಅನುಭವವನ್ನು ನಾವು ನಮ್ಮ ರಾಷ್ಟ್ರಕ್ಕೆ ಮಾದರಿಯಾಗುವ ರೀತಿಯಲ್ಲಿ ಏಕೆ ಅನುಷ್ಠಾನಗೊಳಿಸಬಾರದು. ಈ ಕಿಟ್‍ಗಳನ್ನು ಪಡೆದುಕೊಳ್ಳಲು ದಕ್ಷಿಣ ಕೋರಿಯಾಕ್ಕೆ ವಿಶೇಷ ವಿಮಾನ ಕಳಿಸಿ ಪಡೆದುಕೊಳ್ಳಲು ಕ್ರಮ ಕೈಗೊಳ್ಳಿ.

ನಾಲ್ಕು ದಿನಗಳು ಕಳೆದರೂ ಈ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಸರ್ಕಾರ ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟಲು 200 ಕೋಟಿ ರೂಪಾಯಿಗಳನ್ನು ತೆಗೆದಿರಿಸಿದೆ ಎಂದು ಸರ್ಕಾರದ ಪರವಾಗಿ ವಿಧಾನಸಭೆಯಲ್ಲಿ ತಾವು ಭರವಸೆ ನೀಡಿದ್ದಿರಿ.ವೈದ್ಯರಿಗೆ ಮತ್ತು ವೈದ್ಯಕೀಯ ಕಾರ್ಯಕರ್ತರಿಗೆ ಅವರ ಸ್ವಯಂ ರಕ್ಷಣೆಗೆ ಕಿಟ್‍ಗಳನ್ನು ನೀಡಲು ಈ ಹಣ ಸಾಕಾಗುವುದಿಲ್ಲವೇ ಅಥವಾ ಈ ಹಣದಲ್ಲಿ ಆ ಕಿಟ್‍ಗಳನ್ನು ಖರೀದಿಸಲು ಕಾರ್ಯಾದೇಶಗಳನ್ನು ನೀಡಿಲ್ಲವೇ ಎಂಬ ಬಗ್ಗೆ ದಯವಿಟ್ಟು ನನಗೆ ಪತ್ರ ಮುಖೇನ ಮಾಹಿತಿ ನೀಡಿ. ರಕ್ಷಣಾತ್ಮಕ ಕವಚಗಳನ್ನು ಹೊಂದಿಲ್ಲದ ವೈದ್ಯಕೀಯ ಸಿಬ್ಬಂದಿಯ ಜೀವ ರಕ್ಷಣೆ ಯಾರ ಹೊಣೆ? ನನ್ನ ಮಾಹಿತಿಯಂತೆ ಯಾವುದೇ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ Personal Protective Equipment (PPE) ಈವರೆಗೂ ಈ ಕಿಟ್‍ಗಳನ್ನು ಒದಗಿಸಲಾಗಿಲ್ಲ. ಬೆಂಗಳೂರಿನ ಕೆಲವು ಆಸ್ಪತ್ರೆಗಳಲ್ಲಿ ಲಭ್ಯವಿದೆ ಎಂದು ಹೇಳಲಾದ ಈ ಕಿಟ್‍ಗಳು ಹೆಚ್.ಐ.ವಿ ಕಿಟ್‍ಗಳೆಂದು ಮತ್ತು ಈ ಕಿಟ್‍ಗಳು ಕೋವಿಡ್-19ರ ಚಿಕಿತ್ಸೆಗೆ ಸೂಕ್ತವಲ್ಲವೆಂಬುದು ವೈದ್ಯಕೀಯ ಕ್ಷೇತ್ರದಲ್ಲಿ ಎಲ್ಲರಿಗೂ ಗೊತ್ತಿರುವ ಮಾಹಿತಿ. ಸಮರ್ಪಕವಾದ ಕಿಟ್‍ಗಳನ್ನು ಏಕೆ ಒದಗಿಸಲಾಗಿಲ್ಲ? ದಯವಿಟ್ಟು ತಕ್ಷಣ ಒದಗಿಸಲು ಕ್ರಮ ಕೈಗೊಳ್ಳಿ.

4)ತಾವು ಸಭೆಗಳನ್ನು ಮಾಡುತ್ತಿದ್ದೀರಿ, ವಿಡಿಯೋ ಕಾನ್ಪರೆನ್ಸ್ ಮೂಲಕ ನಿರ್ದೇಶನಗಳನ್ನು ನೀಡುತ್ತಿದ್ದೀರಿ, ಸರ್ಕಾರದ ನಿರ್ಣಯಗಳನ್ನು ಅಧಿಕಾರಿಗಳಿಗೆ ಸೂಚಿಸುತ್ತಿದ್ದೀರಿ, ತಮ್ಮ ಮುಖ್ಯ ಕಾರ್ಯದರ್ಶಿಯವರು ಪ್ರತಿನಿತ್ಯ ವಿಡಿಯೋ ಕಾನ್ಫರೆನ್ಸ್ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳೊಂದಿಗೆ ಸತತ ಸಂಪರ್ಕ ಸಾಧಿಸಿದ್ದಾರೆ ಎಂಬೆಲ್ಲ ಪತ್ರಿಕಾ ವರದಿಗಳು ಕೇವಲ ಆಕರ್ಷಕವಾಗಿ ನಿರೂಪಿಸಲಾದ ಕಿಟಕಿಯಂತೆ (Window Dressing) ಭಾಸವಾಗುತ್ತಿವೆ. ನೀಡಿರುವ 200 ಕೋಟಿ ರೂಪಾಯಿ ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಲೆಕ್ಕಶೀರ್ಷಿಕೆಗೆ ಹೋಗುವ ಬದಲು ಅದನ್ನು BMRCL ಗೆ ಎಂದು ತಪ್ಪಾಗಿ ಆದೇಶ ಹೊರಡಿಸಲಾಗಿತ್ತು. ನಂತರ ಅದನ್ನು ಸರಿಪಡಿಸಲಾಯಿತು. ಈ ಸರಿಪಡಿಸುವಿಕೆಗೆ ಒಂದು ವಾರ ಕಾಲ ವ್ಯರ್ಥವಾಯಿತು. ಈ ಬಗ್ಗೆ ನಾನು ಸದನದಲ್ಲಿ ಪ್ರಸ್ತಾಪಿಸಿದ್ದೆ. ಇದಕ್ಕೆ ಸರ್ಕಾರ ಉತ್ತರ ಕೊಡುವ ಗೋಜಿಗೂ ಕೂಡ ಹೋಗಲಿಲ್ಲ. ಇಷ್ಟೊಂದು ಸಭೆಗಳನ್ನು ಮಾಡಿದ ಮೇಲೆ ಪರಿಣಾಮಕಾರಿಯಾದ ಕೆಲಸಗಳು ಮತ್ತು ಫಲಿತಾಂಶಗಳು ಕಣ್ಣಿಗೆ ಗೋಚರವಾಗಬೇಕು. ತಮಗೆ ನಿಖರವಾದ, ಸಮರ್ಪಕವಾದ, ಪಾರದರ್ಶಕವಾದ ಮಾಹಿತಿ ಲಭ್ಯವಾಗುತ್ತಿದೆ ಎಂದು ನನಗೆ ಅನಿಸುವುದಿಲ್ಲ. ನಿಖರವಾದ ಮಾಹಿತಿ ತಮಗೆ ಲಭ್ಯವಾಗುವಂತೆ ವ್ಯವಸ್ಥೆ ಮಾಡಿಕೊಳ್ಳಿ. ಇಲ್ಲದಿದ್ದರೆ ಗಂಭೀರವಾದ ಸಮಸ್ಯೆ ಎದುರಾದೀತು. ಸರ್ಕಾರ ಸದನದಲ್ಲಿ ಉತ್ತರ ಕೊಡುವಾಗ 3T(Test, Trace, Treat) ಗಳ ಆಧಾರದ ಮೇಲೆ ಕೆಲಸ ಮಾಡುತ್ತಿದೆ ಎಂದು ಘೋಷಣೆ ಮಾಡಲಾಯಿತು. ಈ ಮೂರು 3T ಗಳು ಇಲ್ಲಿಯವರೆಗೆ ಅಗತ್ಯವಿದ್ದಷ್ಟು, ಸಮರ್ಪಕವಾಗಿ ಅನುಷ್ಠಾನವೇ ಆಗಲಿಲ್ಲ. ಟೆಸ್ಟ್ಗಳಂತೂ ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲ. ಇದರಿಂದಾಗಿ ಸಮರ್ಪಕವಾಗಿ ಟ್ರೇಸ್ ಆಗುತ್ತಿಲ್ಲ. ಟೆಸ್ಟ್ ಮತ್ತು ಟ್ರೇಸ್ ಇಲ್ಲದೆ ಟ್ರೀಟ್‍ಮೆಂಟ್ ಪ್ರಶ್ನೆಯೇ ಇಲ್ಲ.

ಮೇಲಿನ ಅಂಶಗಳು ದಿನಾಂಕ 1.4.2020ರಂದು ಬರೆದ ಪತ್ರಕ್ಕೆ ಮತ್ತಷ್ಟು ಪೂರಕ ಅಂಶಗಳಾಗಿವೆ. ತಮ್ಮ ಮಾಹಿತಿಗಾಗಿ ಈ ಪತ್ರದ ಪ್ರತಿಯನ್ನು ತಮ್ಮ ಅವಗಾಹನೆಗೆ ಕಳುಹಿಸುತ್ತಿದ್ದೇನೆ. ಮಹಾಮಾರಿ ಕೊರೋನಾ ನಿಯಂತ್ರಿಸುವಲ್ಲಿ ಸರ್ಕಾರದ ಮಟ್ಟದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಬೆಳಕು ಚೆಲ್ಲುತ್ತವೆ. ಈ ಎಲ್ಲಾ ಅಂಶಗಳನ್ನು ಕೂಲಂಕುಷವಾಗಿ ತಕ್ಷಣ ಅಧ್ಯಯನ ಮಾಡಿ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸುವೆ.

ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿ
(ಎಚ್.ಕೆ.ಪಾಟೀಲ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT