ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನಿಟ್ರ್ಯಾಪ್‌ ತನಿಖೆಗೆ ಚುನಾವಣೆ ಅಡ್ಡಿ?

Last Updated 3 ಡಿಸೆಂಬರ್ 2019, 19:07 IST
ಅಕ್ಷರ ಗಾತ್ರ

ಬೆಂಗಳೂರು: ಹನಿಟ್ರ್ಯಾಪ್‌ ಹಗರಣದಲ್ಲಿ ಸಿಲುಕಿರುವ ಕೆಲವು ಅನರ್ಹ ಶಾಸಕರು ವಿಧಾನಸಭೆ ಉಪ ಚುನಾವಣೆಯಲ್ಲಿ ಕಣಕ್ಕಿಳಿದಿರುವುದರಿಂದ ಈ ಪ್ರಕರಣದ ತನಿಖೆಗೆ ಕೊಂಚ ಅಡ್ಡಿಯಾಗಿದೆ.

‘ಇದೇ 5ರಂದು ಉಪ ಚುನಾವಣೆ ನಡೆಯುವುದರಿಂದ ತನಿಖೆ ನಿಧಾನ ಮಾಡಿ’ ಎಂಬ ಸೂಚನೆಯನ್ನು ಸರ್ಕಾರ ಕೇಂದ್ರ ಅಪರಾಧ ದಳಕ್ಕೆ (ಸಿಸಿಬಿ) ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಹನಿಟ್ರ್ಯಾಪ್‌ಗೆ ಸಂಬಂಧಿಸಿದ ಸುದ್ದಿಗಳು ಮಾಧ್ಯಮಗಳಿಗೆ ಸೋರಿಕೆಯಾದರೆ ಆಡಳಿತ ಪಕ್ಷದ ಮೇಲೆ ಪರಿಣಾಮ ಬೀರಲಿವೆ. ತಮ್ಮ ಅದೃಷ್ಟ ಪಣಕ್ಕಿಟ್ಟಿರುವ ಕೆಲವು ಅನರ್ಹರಿಗೂ ತೊಂದರೆಯಾಗಲಿದೆ. ಹೀಗಾಗಿ, ಯಾವುದೇ ಕಾರಣಕ್ಕೂ ಮಾಹಿತಿ ಬಹಿರಂಗ ಮಾಡಬಾರದು ಎಂದು ತನಿಖಾಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಧಾರಾವಾಹಿ ನಟಿಯರನ್ನು ಒಳಗೊಂಡ ತಂಡವೊಂದುಗದಗ ಜಿಲ್ಲೆಯ ಶಾಸಕರೊಬ್ಬರನ್ನು ಹನಿಟ್ರ್ಯಾಪ್‌ ಬಲೆಗೆ ಬೀಳಿಸಿ, ಬ್ಲ್ಯಾಕ್‌ಮೇಲ್‌ ಮಾಡಿರುವ ಪ್ರಕರಣ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ದಿಗಿಲುಗೊಂಡಿರುವ ಆಡಳಿತ ಪಕ್ಷದ ಕೆಲವು ಶಾಸಕರು ಮತ್ತು ಅನರ್ಹ ಶಾಸಕರು ಸುದ್ದಿ ಸೋರಿಕೆಯಾದರೆ ತಮ್ಮ ಹುಳುಕು ಎಲ್ಲಿ ಬಯಲಾಗುವುದೋ ಎಂದು ಆತಂಕಕ್ಕೆ ಒಳಗಾಗಿದ್ದಾರೆ.

ಹನಿಟ್ರ್ಯಾಪ್‌ ಜಾಲದಲ್ಲಿ ಅರ್ಧ ಡಜನ್‌ಗೂ ಹೆಚ್ಚು ಧಾರಾವಾಹಿ ನಟಿಯರಿದ್ದಾರೆ. ಗದಗ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಮೂವರು ಜನಪ್ರತಿನಿಧಿಗಳಲ್ಲದೆ, ಅನೇಕರು ಇವರಿಂದ ಬ್ಲ್ಯಾಕ್‌ಮೇಲ್‌ಗೆ ಒಳಗಾಗಿ ಹಣ ಕಳೆದುಕೊಂಡಿರುವ ಸಂಗತಿ ತನಿಖೆಯಿಂದ ಬಯಲಾಗಿದೆ.

ಗದಗ ಜಿಲ್ಲೆಯ ಶಾಸಕರನ್ನು ಬ್ಲ್ಯಾಕ್‌ಮೇಲ್‌ ಮಾಡಿದ ಪ್ರಕರಣದಲ್ಲಿ ಇಬ್ಬರು ಧಾರಾವಾಹಿ ನಟಿಯರೂ ಸೇರಿ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ ನಟಿಯರು ಇವರ ತಂಡಕ್ಕೇ ಸೇರಿದವರೇ ಅಥವಾ ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆಯೇ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

‘ಪಕ್ಷವನ್ನು ಮುಜುಗರಕ್ಕೆ ಸಿಲುಕಿಸುವ ಪ್ರಕರಣಗಳಲ್ಲಿ ಭಾಗಿಯಾದವರ ಬಗ್ಗೆ ಮೃಧು ಧೋರಣೆ ಬೇಡ. ಅಂಥವರಿಂದ ಅಂತರ ಕಾಯ್ದುಕೊಳ್ಳಬೇಕು’ ಎಂದು ವರಿಷ್ಠರು ರಾಜ್ಯ ಘಟಕದ ಅಧ್ಯಕ್ಷರಿಗೂ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಬಿಜೆಪಿ ವರಿಷ್ಠರಿಂದ ಖಡಕ್‌ ಸಂದೇಶ

ನವದೆಹಲಿ: ಪಕ್ಷದ ಶಾಸಕರು ‘ಹನಿಟ್ರ್ಯಾಪ್‌’ ಪ್ರಕರಣದಲ್ಲಿ ಸಿಲುಕಿಕೊಂಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಹೈಕಮಾಂಡ್‌, ಯಾವುದೇ ಕಾರಣಕ್ಕೂ ಇಂತಹ ಬೆಳವಣಿಗೆಗಳನ್ನು ಸಹಿಸಕೂಡದು ಎಂಬ ಸಂದೇಶವನ್ನು ರಾಜ್ಯ ಮುಖಂಡರಿಗೆ ರವಾನಿಸಿದೆ.

‘ಹನಿಟ್ರ್ಯಾಪ್‌ನಲ್ಲಿ ಸಿಲುಕಿದವರಿಗೆ ಸಚಿವ ಸ್ಥಾನ ಸೇರಿದಂತೆ ಪಕ್ಷದಲ್ಲಿ ಯಾವುದೇ ಪ್ರಮುಖ ಸ್ಥಾನ ನೀಡುವುದು ಬೇಡ. ಚುನಾವಣೆಯ ಟಿಕೆಟ್ ನೀಡುವಾಗಲೇ ಆಕಾಂಕ್ಷಿಯ ಪೂರ್ವಾಪರ ಅರಿಯಬೇಕು’ ಎಂದೂ ವರಿಷ್ಠರು ಕಟುವಾಗಿ ಹೇಳಿದ್ದಾರೆ ಎಂದು ಪಕ್ಷದ ರಾಜ್ಯ ಮುಖಂಡರೊಬ್ಬರು ವಿವರಿಸಿದರು.

‘ಇದು ಅನೈತಿಕತೆಯ ಪರಾಕಾಷ್ಠೆ. ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತಕ್ಕಿಂತಲೂ ಘೋರವಾದ ಅಪರಾಧ. ಅಧಿಕಾರ ಇರುವುದು ಜನರ ಸೇವೆಗೇ ವಿನಾ ಇಂಥ ಅಕ್ರಮಗಳಿಗೆ ಬಳಕೆ ಮಾಡುವುದಕ್ಕಲ್ಲ. ಪಕ್ಷದ ಎಲ್ಲ ಶಾಸಕರು, ಸಚಿವರಿಗೆ ಈ ಕುರಿತು ಮನವರಿಕೆ ಮಾಡಬೇಕು’ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸೂಚಿಸಿದ್ದಾಗಿ ಅವರು ಹೇಳಿದರು.

ಜನಪ್ರತಿನಿಧಿಗಳು ಕೈ–ಬಾಯಿ ಶುದ್ಧವಾಗಿ ಇಟ್ಟುಕೊಳ್ಳುವುದು ಎಷ್ಟು ಮುಖ್ಯವೋ ಇಂಥ ವಿಷಯದಲ್ಲೂ ಪರಿಶುದ್ಧರಾಗಿ ಇರುವುದು ಮುಖ್ಯ. ಅಧಿಕಾರ ಹತ್ತಿರ ಇದ್ದಾಗ ಆಸೆ–ಆಮಿಷಗಳು ಸಹಜ. ಅದಕ್ಕೆಲ್ಲ ಬಲಿಯಾಗದೇ, ಹೊಣೆ ಅರಿತು ವರ್ತಿಸಬೇಕು. ಈ ವಿಷಯವನ್ನು ಪಕ್ಷದ ಸದಸ್ಯರು, ಜನಪ್ರತಿನಿಧಿಗಳಿಗೆ ತಿಳಿಸಬೇಕು ಎಂಬ ಖಡಕ್‌ ಸಂದೇಶ ರವಾನೆಯಾಗಿದೆ ಎಂದು ವಿವರಿಸಿದರು.

‘ಹನಿಟ್ರ್ಯಾಪ್‌ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಯಲಿ. ಯಾರನ್ನೂ ರಕ್ಷಿಸುವ ಕೆಲಸ ಆಗಕೂಡದು. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಕಠಿಣ ಕ್ರಮ ಕೈಗೊಂಡರೆ ಮಾತ್ರ ಆಮಿಷಗಳತ್ತ ಶಾಸಕರು ಆಕರ್ಷಿತರಾಗದಂತೆ ತಡೆಯಬಹುದು’ ಎಂದು ವರಿಷ್ಠರು ಹೇಳಿದ್ದಾಗಿ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT