ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್ ಮಾಧ್ಯಮದ ಮೊಂಡುತನ ಬಿಡಿ: ಸರ್ಕಾರದ ಕಿವಿ ಹಿಂಡಿದ ವೆಂಕಟೇಶಮೂರ್ತಿ

ಕಲಬುರ್ಗಿಯಲ್ಲಿ ನಡೆಯುತ್ತಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ಕಾರದ ಕಿವಿ ಹಿಂಡಿದ ಸಮ್ಮೇಳನಾಧ್ಯಕ್ಷ
Last Updated 5 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಶ್ರೀವಿಜಯ ಪ್ರಧಾನ ವೇದಿಕೆ (ಕಲಬುರ್ಗಿ): ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ತೆರೆಯುವ ಮೊಂಡುತನದ ಹಟವನ್ನು ಸರ್ಕಾರ ಬಿಡಬೇಕು ಎಂದು 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎಚ್‌. ಎಸ್‌. ವೆಂಕಟೇಶಮೂರ್ತಿ ಕಿವಿ ಹಿಂಡಿದರು.

ಶಿಕ್ಷಣ ಸಂಸ್ಥೆಗಳ ವ್ಯಾಪಾರೋದ್ದೇಶದ ಕಾರಣದಿಂದ ಕನ್ನಡ ಭಾಷೆ ಕರ್ನಾಟಕದಲ್ಲಿ ಸೊರಗುತ್ತಿದೆ. ಇದರ ಜತೆಯಲ್ಲಿ ಕಾಲಕಾಲಕ್ಕೆ ಬದಲಾಗುತ್ತಿರುವ ಸರ್ಕಾರದ ನಿಲುವುಗಳು ಕೂಡ ಕನ್ನಡ ಶಿಕ್ಷಣ ಮಾಧ್ಯಮವನ್ನು ಅತಂತ್ರಕ್ಕೆ ತಳ್ಳುತ್ತಿವೆ ಎಂದೂ ಅವರು ಕಟುವಾಗಿ ವಿಶ್ಲೇಷಿಸಿದರು.

ಖಾಸಗಿ ವಿದ್ಯಾಸಂಸ್ಥೆಗಳನ್ನು ನಡೆಸುತ್ತಿರುವವರು ಉದ್ಯಮಿಗಳು, ಮಾತೃಭಾಷೆಯಲ್ಲಿ ಕಲಿಯುವುದು ಅನ್ಯಭಾಷಿಕರ ಮತ್ತು ಅಲ್ಪಸಂಖ್ಯಾತರ ಹಕ್ಕು ಎಂಬ ವಾದವನ್ನು ಮುಂದಿಟ್ಟುಕೊಂಡು ನ್ಯಾಯಾಲಯಕ್ಕೆ ಮೊರೆಹೋಗುತ್ತಾರೆ. ನ್ಯಾಯಾಲಯವೂ ಮಕ್ಕಳ ಶಿಕ್ಷಣ ಮಾಧ್ಯಮವನ್ನು ನಿರ್ಧರಿಸುವುದು ಪೋಷಕರ ಹಕ್ಕು ಎಂಬ ತೀರ್ಪನ್ನು ನೀಡುತ್ತದೆ. ಆದರೆ ತಾಯ್ನುಡಿ – ಪರಿಸರದ ನುಡಿಯೇ ಶಿಕ್ಷಣ ಮಾಧ್ಯಮವಾಗಬೇಕು ಎನ್ನುವ ನ್ಯಾಯಾಲಯದ ತೀರ್ಪೇ ವಿಸ್ಮರಣೆಗೆ ಒಳಗಾಗುತ್ತದೆ ಎಂದು ವಿಷಾದವನ್ನು ವ್ಯಕ್ತಪಡಿಸುತ್ತ, ಈಗ ನಾವುಮತ್ತೆ ನ್ಯಾಯಾಂಗದ ಮೊರೆಹೋಗೋಣ ಎಂದು ಕರೆ ನೀಡಿದರು.

ಶಿಕ್ಷಣ ಮಾಧ್ಯಮ ಇಂಗ್ಲಿಷ್‌ ಆಗಬೇಕು ಎಂದು ಹಟ ತೊಟ್ಟು, ಅದನ್ನು ಸಾಧಿಸಲು ನಾನಾ ಬಗೆಯ ವಕ್ರೋಪಾಯಗಳಲ್ಲಿ ತೊಡಗಿರುವವರು ಶಿಕ್ಷಣ ಸಂಸ್ಥೆಗಳು. ಅವುಗಳ ಮೂಲ ಉದ್ದೇಶ ಜ್ಞಾನದ ಪ್ರಸಾರ ಅಲ್ಲ, ಲಾಭದ ದಂಧೆ ನಡೆಸುವುದು. ಈ ಶಿಕ್ಷಣ ಸಂಸ್ಥೆಗಳು ಮತ್ತು ಅವನ್ನು ಸಮರ್ಥಿಸುವವರು ಹೇಗೆ ಮುಖವಾಡಗಳನ್ನು ತೊಟ್ಟು ಕುಟಿಲ ತರ್ಕಗಳ ಮೂಲಕ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುತ್ತಾರೆ ಎನ್ನುವುದನ್ನು ಅವರು ಪದರ ಪದರವಾಗಿ ಬಿಡಿಸಿ ಹೇಳಿದರು.

ಮೊದಲಿಗೆ ಇಂಥವರು ಹೂಡುವ ವಾದ ಎಂದರೆ ನಾವು ಭಾರತದ ಬೇರೆ ಭಾಗದಿಂದ ಬಂದು ಇಲ್ಲಿ ಜೀವನೋಪಾಯಕ್ಕಾಗಿ ನೆಲೆಸಿದವರು. ಕನ್ನಡದಲ್ಲೇ ಕಲಿಯಬೇಕೆಂದು ನೀವು ನಮ್ಮ ಮಕ್ಕಳ ಮೇಲೆ ಹೇರುವುದು ನಮ್ಮ ಮೂಲಭೂತಹಕ್ಕನ್ನೇ ಕಸಿದುಕೊಂಡಂತಾಗುತ್ತದೆ ಎಂದರು.

ನಮ್ಮ ಹಕ್ಕನ್ನು ಅನುಭವಿಸಲು ನಮಗೆ ಅವಕಾಶ ನೀಡಿ ಎನ್ನುತ್ತಾರೆ. ಆದರೆ ಇದು ಮುಖವಾಡದ ಮಾತು. ಮಗುವೊಂದು ತನ್ನ ಪಂಚೇಂದ್ರಿಯಗಳಿಂದ ಸಹಜವಾಗಿ ಗ್ರಹಿಸಿದ ಲೋಕಗ್ರಹಿಕೆ ಪರಿಷ್ಕಾರವಾಗಬೇಕಾದ್ದು ಅದು ಬೆಳೆಯುತ್ತಿರುವ ಪರಿಸರದ ಭಾಷೆ
ಯಲ್ಲಿಯೇ. ಹೀಗಾಗಿ ಕರ್ನಾಟಕದಲ್ಲಿ ಬೆಳೆಯುವ ಮಗು ಕನ್ನಡದಲ್ಲಿಯೇ ಶಿಕ್ಷಣ ಪಡೆಯಬೇಕು ಎಂಬುದು ನಮ್ಮ ವಾದ. ಹೀಗಾದಾಗ ಮಾತ್ರವೇ ಮಗುವಿನ ಕಲಿಕೆ ಅನುಭವದ ನೆಲೆಗೆ ಏರುತ್ತದೆ ಎಂದೂ ಅವರು ಅಭಿಪ್ರಾಯಪಟ್ಟರು.

ಪೋಷಕರ ಬೇಡಿಕೆಯ ಕಾರಣದಿಂದಾಗಿ ನಾವು ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ನಡೆಸುವಂತಾಗಿದೆ. ಪೋಷಕರ ಅಗತ್ಯವನ್ನು ಪೂರೈಸುವುದು ನಮ್ಮ ಧರ್ಮ ಎನ್ನುತ್ತವೆ ಈ ಶಿಕ್ಷಣ ಸಂಸ್ಥೆಗಳು. ಹೌದು, ಅದು ನಿಮ್ಮ ಧರ್ಮವೇ ಹೌದು; ಆದರೆ ಅದು ವ್ಯಾಪಾರೀಧರ್ಮ ಎಂದು ನಾನು ಹೇಳುತ್ತೇನೆ ಎಂದು ವೆಂಕಟೇಶಮೂರ್ತಿ ಖಾರವಾಗಿಯೇ ಪ್ರತಿಕ್ರಿಯಿಸಿದರು. ಶಿಕ್ಷಣ ಎನ್ನುವುದು ವ್ಯಾಪಾರೀ ಉದ್ಯಮವಲ್ಲ; ಅದು ನಡೆ–ನುಡಿಗಳಲ್ಲಿ ಅಖಂಡತೆಯನ್ನು ಪಡೆದು ವ್ಯಕ್ತಿತ್ವದಲ್ಲಿ ಪ್ರಕಟಿಸುವ ಸೃಷ್ಟಿಶಾಲೆ ಎಂದು ವಿವರಿಸಿದರು.

ಕನ್ನಡ ಶಿಕ್ಷಣ ಮಾಧ್ಯಮವಾಗಬೇಕು ಎಂದಾಗ ಸಾಮಾನ್ಯವಾಗಿ ಅದನ್ನು ವಿರೋಧಿಸಿ ಹೂಡುವ ವಾದ ಎಂದರೆ ಕನ್ನಡ ಅನ್ನದ ಭಾಷೆ ಆಗಬಹುದೆ? ಅಂಥವರಿಗೆ ನಾನು ಕೇಳುತ್ತೇನೆ: ನೀವು ಇಂಗ್ಲಿಷನ್ನು ಅನ್ನ ಕೊಡುವ ಭಾಷೆ ಎನ್ನುತ್ತೀರೋ? ಹಾಗಾದರೆ ನಮ್ಮ ರೈತರು ಇಂಗ್ಲಿಷಿನ ಹಂಗಿಲ್ಲದೆ ಅನ್ನ ಬೆಳೆಯುವ ನಿತ್ಯ ಅನುಷ್ಠಾನದಲ್ಲಿ ತೊಡಗಿದ್ದಾರಲ್ಲ? ಇದಕ್ಕೆ ಏನೆನ್ನುತ್ತೀರಿ ಎಂದು ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು. ಕರ್ನಾಟಕದಲ್ಲಿ ಕನ್ನಡವನ್ನು ಅನ್ನದ ಭಾಷೆಯನ್ನಾಗಿಸುವುದು ಎಂದರೆ ಕರ್ನಾಟಕದಲ್ಲಿ ಕನ್ನಡಿಗರಿಗೆ ಸಿಂಹಪಾಲು ಉದ್ಯೋಗ ಮೀಸಲಾತಿ ಜಾರಿಗೆ ತಂದಾಗ ಮಾತ್ರವೇ ಸಾಧ್ಯ ಎಂಬ ಸಲಹೆಯನ್ನೂ ನೀಡಿದರು.

ಹಿಂದಿಗೆ ಪ್ರಥಮ ಸ್ಥಾನ ಬೇಡ

ದೇಶದ ಪ್ರಾಂತ್ಯಗಳ ನಡುವೆ ಸುಲಭ ವ್ಯವಹಾರಕ್ಕೆ ಒಂದು ಭಾಷೆ ಅಗತ್ಯ ಎನಿಸುವುದಾದರೆ ಅದು ಹಿಂದಿಯೇ ಏಕಾಗಬೇಕು ಎಂದು ವೆಂಕಟೇಶಮೂರ್ತಿ ಅವರು ಪ್ರಶ್ನಿಸಿದರು.

ಒಂದು ಕಾಲದಲ್ಲಿ ಭಾರತದ ವೈಚಾರಿಕ, ಸಾಹಿತ್ಯಿಕ ಮತ್ತು ಚಿಂತನೆಯ ಭಾಷೆಯಾಗಿದ್ದ ಸಂಸ್ಕೃತ ಅಥವಾ ಜನಸಾಮಾನ್ಯರ ಭಾಷೆಯಾಗಿದ್ದ ಪ್ರಾಕೃತ ಈ ಸ್ಥಾನವನ್ನು ತುಂಬಲಿ. ಸದ್ಯಕ್ಕೆ ವ್ಯವಹಾರದ ದೃಷ್ಟಿಯಿಂದ ಇಂಗ್ಲಿಷ್‌ ಭಾಷೆಯನ್ನು ಭಾರತೀಯ ಪರಿಸರಕ್ಕೆ ಪಳಗಿಸಿಕೊಂಡು ಬಳಸಬಹುದು. ಅದು ಭಾರತೀಯರ ನಾಲಗೆಗೆ ಒಗ್ಗುವ ‘ಇಂಡಿಯನಿಂಗ್ಲಿಷ್‌’ ಆಗಬೇಕು. ಅದನ್ನು ‘ಅಗ್ಗದಾಂಗ್ಲ’ ಎಂದೂ ಕರೆಯಬಹುದು ಎಂದರು. ಆದರೆ ಸಾಹಿತ್ಯಿಕ, ಸಾಂಸ್ಕೃತಿಕ ಚಿಂತನೆಯ ಭಾಷೆಯಾಗಿ ಇಂಗ್ಲಿಷನ್ನು ಎಲ್ಲ ಭಾರತೀಯರೂ ಕಲಿಯಬೇಕೆಂಬ ತಲೆಯ ಭಾರವನ್ನು ಮೊದಲು ಇಳಿಸಿಕೊಳ್ಳಬೇಕೆಂದು ಎಚ್ಚರಿಸಿದರು.

ಎಲ್ಲರಿಗೂ ತ್ರಿಭಾಷಾಸೂತ್ರ ಇರಲಿ

ತ್ರಿಭಾಷಾಸೂತ್ರವನ್ನು ಕರ್ನಾಟಕದಲ್ಲಿ ಮಾತ್ರ ಮಾನ್ಯ ಮಾಡುವುದಲ್ಲ; ಭಾರತದ ಎಲ್ಲ ಪ್ರಾಂತ್ಯಗಳಿಗೂ ಸಮಾನವಾಗಿ ಅನ್ವಯವಾಗಬೇಕಾದ ಸೂತ್ರ. ದಕ್ಷಿಣ ಭಾರತದ ಮಕ್ಕಳಿಗೆ ಮಾತ್ರ ಮೂರು ಭಾಷೆ; ಹಿಂದಿ ಮಾತೃಭಾಷೆಯಾಗಿರುವ ಉತ್ತರದ ಬಹುಪಾಲು ಪ್ರಾಂತ್ಯಗಳ ಮಕ್ಕಳಿಗೆ ಎರಡು ಭಾಷೆ ಎಂಬಂತಾಗಬಾರದು ಎಂದು ಎಚ್‌. ಎಸ್‌. ವೆಂಕಟೇಶಮೂರ್ತಿ ಆಗ್ರಹಿಸಿದರು.

ರಾಜಧರ್ಮದ ಮಹಾರಥಿ

ಸಿದ್ಧಪಡಿಸಿದ ಭಾಷಣದ ಪೂರ್ಣಪಾಠವನ್ನು ಸಮ್ಮೇಳನ ಅಧ್ಯಕ್ಷರಾದ ಎಚ್‌. ಎಸ್‌. ವೆಂಕಟೇಶಮೂರ್ತಿ ಓದಲಿಲ್ಲ; ಆರಿಸಿದ ಭಾಗಗಳನ್ನಷ್ಟೇ ಓದಿದರು. ಹೀಗೆ ಅವರು ಓದಿದ ಭಾಷಣದಲ್ಲಿ ಕೇವಲ ಸಾಹಿತ್ಯ–ಸಂಸ್ಕೃತಿಗಳ ವಿಷಯಗಳು ಮಾತ್ರವಲ್ಲದೆ ಸಮಾಜದಲ್ಲಿ ಇಂದು ಹೆಚ್ಚಿರುವ ಭ್ರಷ್ಟಾಚಾರವೂ ಪ್ರಸ್ತಾವಗೊಂಡಿತು.

ಈಗ ಸಮಾಜದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರಕ್ಕೆ ಸ್ವಾರ್ಥಕೇಂದ್ರಿತ ಜೀವನಸಿದ್ಧಾಂತವೇ ಪ್ರಧಾನ ಕಾರಣ ಎಂದು ಅವರು ಅಭಿಪ್ರಾಯಪಟ್ಟರು. ನಮಗೆ ಗಣಿ ಮಾಡಿ ಹಣ ಮಾಡುವುದು ಮುಖ್ಯ. ಇಕಾಲಜಿ ಎಂಬ ತತ್ವವನ್ನು ಗಾಳಿಗೆ ತೂರಲಾಗಿದೆ. ಇಂದಿನ ಸಮಾಜದಲ್ಲಿ ಆತ್ಮರಕ್ಷಣೆ ಮುಖ್ಯವಾಗಿದೆಯೇ ವಿನಾ ಆರ್ತರಕ್ಷಣೆಯಲ್ಲ. ನಮ್ಮಲ್ಲಿ ಮಹಾರಥಿ ಎಂಬ ಪರಿಕಲ್ಪನೆಯಿದೆ. ಯಾವನು ಯುದ್ಧದಲ್ಲಿ ತನ್ನ ಸಾರಥಿಯನ್ನೂ ರಥವನ್ನೂ ಧ್ವಜವನ್ನೂ ಕುದರೆಗಳನ್ನೂ ಸೇನೆಯನ್ನೂ ಮತ್ತು ತನ್ನನ್ನೂ ಉಳಿಸಿಕೊಳ್ಳಲು ಸಮರ್ಥನೋ ಅಂಥವನು ಮಹಾರಥಿ. ಈ ತತ್ವವನ್ನು ನಮ್ಮ ನಾಯಕರಿಗೂ ಅನ್ವಯಿಸಿ ಅರ್ಥೈಸಬೇಕು. ಯಾರು ತನ್ನ ನೆಲೆಯನ್ನು, ನಾಡನ್ನು, ಕಾಡು ಬೆಟ್ಟಗಳನ್ನು, ಅಲ್ಲಿ ಜೀವಿಸುವ ಮೃಗಪಕ್ಷಿಗಳನ್ನು, ತನ್ನನ್ನು ಆಶ್ರಯಿಸಿದವರನ್ನು ಕಾಪಾಡುತ್ತ, ತನ್ನನ್ನೂ ತಾನು ರಕ್ಷಿಸಿಕೊಳ್ಳಬಲ್ಲನೋ ಅಂಥವನು ಇಂದಿನ ರಾಜಧರ್ಮದ ಮಹಾರಥಿ ಎಂದು ಅವರು ವ್ಯಾಖ್ಯಾನಿಸಿದರು.

ಕಲ್ಯಾಣ ಕರ್ನಾಟಕದ ವೈಭವ

ಭಾಷಾವಾರು ಪ್ರಾಂತ್ಯದ ಸ್ಥಾಪನೆಗಾಗಿ ನಡೆದ ಬಲಿದಾನಗಳನ್ನೂ ಎಚ್‌. ಎಸ್‌. ವೆಂಕಟೇಶಮೂರ್ತಿ ಸ್ಮರಿಸಿದರು. ಆಗ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಡೆದ ಹೋರಾಟವನ್ನೂ ಅವರು ಮೆಲುಕು ಹಾಕಿದರು. ಜತೆಯಲ್ಲಿ ಇಲ್ಲಿಯ ಸಾಂಸ್ಕೃತಿಕ, ಸಾಹಿತ್ಯಿಕ ಶ್ರೀಮಂತಿಕೆಯನ್ನೂ ವರ್ಣಿಸಿದರು. ಕನ್ನಡ ಭಾಷೆಯ ಪ್ರಥಮ ಕೃತಿ ಕವಿರಾಜಮಾರ್ಗ ಸೃಷ್ಟಿಯಾದದ್ದು ಕಲಬುರ್ಗಿ ಪ್ರಾಂತ್ಯದಲ್ಲಿ. ಎಂಟರಿಂದ ಹತ್ತನೇ ಶತಮಾನದ ತನಕ ಕರ್ನಾಟಕವನ್ನು ಆಳಿದ ರಾಷ್ಟ್ರಕೂಟರಿಗೆ ಮಳಖೇಡ ರಾಜಧಾನಿಯಾಗಿತ್ತು. ಕವಿರಾಜಮಾರ್ಗದ ಕರ್ತೃ ಶ್ರೀವಿಜಯ ರಾಷ್ಟ್ರಕೂಟರ ದೊರೆ ನೃಪತುಂಗನ ಆಸ್ಥಾನ ಕವಿ. ಜೈನರ ಕಾವ್ಯ, ಶರಣರ ವಚನ, ಸಾಸರ ಹಾಡಿನ ಬೀಡು ಕಲ್ಯಾಣ ಕರ್ನಾಟಕ. ಖ್ವಾಜಾ ಬಂದೇ ನವಾಜ್‌, ಶರಣ ಬಸವೇಶ್ವರ, ನಾಗಚಂದ್ರ, ಲಕ್ಷ್ಮೀಶ, ಕಡಕೋಳ ಮಡಿವಾಳಪ್ಪ, ದೇವರ ದಾಸಿಮಯ್ಯ, ಅವನ ಪತ್ನಿ ದುಗ್ಗಲೆ, ಕೆಂಭಾವಿ ಭೋಗಣ್ಣ, ಏಕಾಂತದ ರಾಮಯ್ಯ, ಕೋಲೂರು ಶಾಂತಯ್ಯ, ಷಣ್ಮುಖಸ್ವಾಮಿ, ದೊಡ್ಡಪ್ಪ ಅಪ್ಪ, ಬಿ. ಬಿ. ಚಿಮ್ಮಲಗಿ, ನರಸಿಂಹರಾವು, ರಾಘವೇಂದ್ರಾಚಾರ್ಯ ಕುಷ್ಟಗಿ, ಭೀಮಸೇನರಾವ್‌ ತವರ್‌, ಕಪಟರಾಳ ಕೃಷ್ಣರಾವ್‌, ಅಣ್ಣಾರಾವ್‌ ಗುಣಮುಖಿ ಮೊದಲಾದ ಮಹನೀಯರು ಈ ಪ್ರಾಂತ್ಯಕ್ಕೆ ಸೇರಿದವರು. ನಿಜಾಮರ ದಬ್ಬಾಳಿಕೆ, ರಜಾಕಾರರ ಉಗ್ರಗಾಮಿ ಹಾವಳಿಗಳಿಂದ ಹೋರಾಡಿದ ರಾಷ್ಟ್ರಪುರುಷರೂ ಈ ಪ್ರಾಂತ್ಯದಲ್ಲಿ ಹಲವರಿದ್ದಾರೆ ಎಂದೂ ಅವರು ಸ್ಮರಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT