ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ–ಅಂಕೋಲಾ ರೈಲು ಯೋಜನೆ: ವನ್ಯಜೀವಿ, 2 ಲಕ್ಷ ಮರಗಳಿಗೆ ಕುತ್ತು?

ವನ್ಯಜೀವಿ ಮಂಡಳಿ ಸಭೆ ಇಂದು
Last Updated 8 ಮಾರ್ಚ್ 2020, 20:11 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ವನ್ಯಜೀವಿ ಮಂಡಳಿಯ 13ನೇ ಸಭೆ ಇದೇ ಸೋಮವಾರ (ಮಾರ್ಚ್‌ 9) ನಿಗದಿಯಾಗಿದೆ. ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗ ಯೋಜನೆ ಈ ಸಭೆಯಲ್ಲಿ ಮತ್ತೆ ಚರ್ಚೆಗೆ ಬರಲಿದೆ. ಪಶ್ಚಿಮಘಟ್ಟದಲ್ಲೇ ಸುಮಾರು 2 ಲಕ್ಷ ಮರಗಳ ಹನನಕ್ಕೆ ಕಾರಣವಾಗುವ ಈ ಪ್ರಸ್ತಾವವನ್ನು ಮಂಡಳಿ ಈ ಹಿಂದೆಯೇ ತಿರಸ್ಕರಿಸಿದ್ದರೂ ಮತ್ತೆ ಚರ್ಚೆಗೆ ಕೈಗೆತ್ತಿಕೊಳ್ಳುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ರೈಲ್ವೆ ಸಚಿವಾಲಯವು ಹುಬ್ಬಳ್ಳಿ –ಅಂಕೋಲಾ ರೈಲು ಮಾರ್ಗಕ್ಕೆ ಪ್ರಸ್ತಾವ ಸಲ್ಲಿಸಿದ್ದು ಬಳ್ಳಾರಿಯಿಂದ ರಾಜ್ಯದ ಪಶ್ಚಿಮ ಕರಾವಳಿಯ ಬಂದರುಗಳಿಗೆ ಕಬ್ಬಿಣದ ಅದಿರು ಸಾಗಣೆಗಾಗಿ. ಆದರೆ, ಈಗ ಅದಿರು ಗಣಿಗಾರಿಕೆ ನೆಲಕಚ್ಚಿದೆ. ಹಾಗಿರುವಾಗ, ತಿರಸ್ಕೃತಗೊಂಡ ಪ್ರಸ್ತಾವನೆಯನ್ನು ಮತ್ತೆ ಮುನ್ನೆಲೆಗೆ ತರುವ ಅಗತ್ಯವೇನು ಎಂದು ಪರಿಸರ ಕಾರ್ಯಕರ್ತರು ಪ್ರಶ್ನಿಸಿದ್ದಾರೆ. ಇದರ ಹಿಂದೆ ಮರಗಳನ್ನು ಲೂಟಿ ಮಾಡುವ ಹುನ್ನಾರ ಅಡಗಿದೆ ಎಂದು ಆರೋಪಿಸಿದ್ದಾರೆ.

ಹೊಸಪೇಟೆ–ಲೋಂಡಾ–ವಾಸ್ಕೊ ರೈಲು ಮಾರ್ಗವನ್ನು ₹ 2,127 ಕೋಟಿ ವೆಚ್ಚದಲ್ಲಿ ಜೋಡಿಹಳಿಯನ್ನಾಗಿ ಪರಿವರ್ತಿಸಲಾಗುತ್ತಿದ್ದು, ಗಣಿ ಸರಕು ಸಾಗಾಟಕ್ಕೆ ಇದನ್ನೇ ಬಳಸಬಹುದು. ಉದ್ದೇಶಿತ ರೈಲು ಮಾರ್ಗಕ್ಕೆ ಸಮಾನಾಂತರವಾಗಿರುವ ಹುಬ್ಬಳ್ಳಿ–ಅಂಕೋಲಾ ರಾಷ್ಟ್ರೀಯ ಹೆದ್ದಾರಿಯನ್ನು ವಿಸ್ತರಣೆ ಮಾಡಿ ಅದಿರು ಸಾಗಾಟಕ್ಕೆ ಬಳಸಬಹುದು ಎಂದು ಸಲಹೆ ನೀಡಿದ್ದಾರೆ.

ಉದ್ದೇಶಿತ ಮಾರ್ಗದಿಂದ ಕಾಡು, ಪರಿಸರ ಹಾಗೂ ವನ್ಯಜೀವಿಗಳ ಮೇಲೆ ಪರಿಣಾಮವಾಗುತ್ತದೆ. ಆರ್ಥಿಕವಾಗಿಯೂ ಇದು ಸಮರ್ಥನೀಯವಾಗಿಲ್ಲ ಎಂಬ ಕಾರಣಕ್ಕೆ ಅರಣ್ಯ ಇಲಾಖೆ, ಅರಣ್ಯ ಸಲಹಾ ಸಮಿತಿ, ಕೇಂದ್ರೀಯ ಉನ್ನತಾಧಿಕಾರ ಸಮಿತಿ, ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯಗಳು ಪ್ರಸ್ತಾವವನ್ನು ತಿರಸ್ಕರಿಸಿದ್ದವು.

2016ರಲ್ಲಿ ಈ ಯೋಜನೆ ಕುರಿತ ಅರ್ಜಿಯ ವಿಚಾರಣೆ ನಡೆಸಿದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ, ಈ ಕುರಿತ ಭೂಪರಿವರ್ತನೆಗೆ ಬಳಕೆದಾರ ಸಂಸ್ಥೆಯು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬಹುದು ಎಂದಿತ್ತು. ಉದ್ದೇಶಿತ ರೈಲು ಮಾರ್ಗ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯ ಹಾಗೂ ಹುಲಿ ಕಾರಿಡಾರ್ ವ್ಯಾಪ್ತಿಯಲ್ಲಿರುವುದರಿಂದ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಕೇಂದ್ರ ಪರಿಸರ ಸಚಿವಾಲಯ ಸೂಚಿಸಿತ್ತು. ಪ್ರಾಧಿಕಾರವು ಯೋಜನೆಯನ್ನು ತಿರಸ್ಕರಿಸಲು 2018ರಲ್ಲಿ ಶಿಫಾರಸು ಮಾಡಿತ್ತು.

ರಾಜ್ಯ ಮಂಡಳಿಯ ಶಿಫಾರಸ್ಸಿಲ್ಲದೇ ರಾಜ್ಯ ಸರ್ಕಾರವು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಗೆ ಪ್ರಸ್ತಾವ ಸಲ್ಲಿಸಿದ್ದನ್ನು ಆಕ್ಷೇಪಿಸಿ ವನ್ಯಜೀವಿ ಕಾರ್ಯಕರ್ತರು ಸ್ಥಾಯಿಸಮಿತಿಗೆ ದೂರು ನೀಡಿದ್ದರು. ರಾಜ್ಯ ಮಂಡಳಿಯ ಒಪ್ಪಿಗೆ ಪಡೆಯುವಂತೆ ಸ್ಥಾಯಿಸಮಿತಿ ಸೂಚಿಸಿತ್ತು. ರಾಜ್ಯ ಮಂಡಳಿಯ 11ನೇ ಸಭೆಯಲ್ಲೂ ಈ ಪ್ರಸ್ತಾವ ಕೈಬಿಡುವಂತೆ ಬಹುತೇಕ ಸದಸ್ಯರು ಒತ್ತಾಯಿಸಿದ್ದರು. ಆದರೆ ಪ್ರಸ್ತಾವನೆಯನ್ನು ಕೈಬಿಡುವ ಬದಲು ಮುಂದೂಡಲಾಗಿತ್ತು.

ಸಮಿತಿ/ಪ್ರಾಧಿಕಾರ ಪ್ರಸ್ತಾವ ತಿರಸ್ಕರಿಸಿದ್ದೇಕೆ?
*ಪಶ್ಚಿಮಘಟ್ಟದ ಅತೀ ಸೂಕ್ಷ್ಮ ಪರಿಸರ ವ್ಯವಸ್ಥೆಗೆ ರೈಲು ಯೋಜನೆಯಿಂದಾಗುವ ಪರಿಣಾಮ ತಾಳುವ ಶಕ್ತಿ ಇಲ್ಲ.
* 2 ಲಕ್ಷ ಮರಗಳನ್ನು ಕಳೆದುಕೊಳ್ಳಬೇಕಾಗುತ್ತದೆ
* ರೈಲ್ವೆ ಅಪಘಾತಗಳಲ್ಲಿ ಕಾಡುಪ್ರಾಣಿಗಳ ಸಾವು
* ಕಾಡಿನಲ್ಲಿ ಹೊಸ ರಸ್ತೆ ನಿರ್ಮಿಸಬೇಕಾಗುತ್ತದೆ. ಇದು ಮರಗಳ್ಳತನ, ಕಾಡಿನ ಅತಿಕ್ರಮಣ, ಕಳ್ಳ ಬೇಟೆ, ಕಾಡ್ಗಿಚ್ಚು ಮುಂತಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ
* ಉಪಶಮನ ಕ್ರಮವಾಗಿ ಮೇಲ್ಸೇತುವೆ, ಒಳಮಾರ್ಗ, ಇಳಿಜಾರು ಮತ್ತು ಸುರಂಗಗಳನ್ನು ನಿರ್ಮಿಸಿದ ಮಾತ್ರಕ್ಕೆ ಈ ಯೋಜನೆಯ ದುಷ್ಪರಿಣಾಮ ತಡೆಯಲಾಗದು.
* ಅಭಿವೃದ್ಧಿಗಾಗಿ ಪಶ್ಚಿಮ ಘಟ್ಟಗಳ ಕಾಡಿಗೆ, ಕಾಡುಪ್ರಾಣಿಗಳಿಗೆ ಹಾನಿ ಮಾಡುವುದು ಸೂಕ್ತವಲ್ಲ. ಪಶ್ಚಿಮ ಘಟ್ಟಗಳ ಜೈವಿಕ ವೈವಿಧ್ಯ ಸಂರಕ್ಷಿಸದೆ ಈ ಪ್ರದೇಶದಲ್ಲಿ ನಡೆಸುವ ಆರ್ಥಿಕ ಬೆಳವಣಿಗೆ ದೀರ್ಘಾವಧಿಯಲ್ಲಿ ಸಮರ್ಥನೀಯವಲ್ಲ.

ಪರ್ಯಾಯ ಮಾರ್ಗಗಳು
* ಉದ್ದೇಶಿತ ರೈಲು ಮಾರ್ಗಕ್ಕೆ ಸಮಾನಾಂತರವಾಗಿ ಹುಬ್ಬಳ್ಳಿ–ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಇದೆ. ಇದರ ವಿಸ್ತರಣೆ ಮಾಡಬಹುದು.

* ಅಂಕೋಲಾ ಸಮೀಪದ ಬೇಲೆಕೇರಿಯಿಂದ ಹಟ್ಟಿಕೇರಿವರೆಗೆ ಹಾಗೂ ಕುಮಟಾದಿಂದ ಶಿರಸಿವರೆಗೆ ಹೆದ್ದಾರಿ ಉನ್ನತೀಕರಣಕ್ಕೂ ಈ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಈ ಮಾರ್ಗವನ್ನೂ ಬಳಸಬಹುದು.

* ಗಣಿ ಸರಕು ಸಾಗಾಟಕ್ಕೆ ಹೊಸಪೇಟೆ–ಲೋಂಡಾ–ವಾಸ್ಕೊ ರೈಲು ಮಾರ್ಗವನ್ನು ಜೋಡಿಹಳಿಯನ್ನಾಗಿ ಪರಿವರ್ತಿಸಲಾಗುತ್ತಿದ್ದು, ಹೊಸಪೇಟೆಯಿಂದ ತಿನೈಘಾಟ್‌ವರೆಗೆ ಕಾಮಗಾರಿ ಪ್ರಗತಿಯಲ್ಲಿದೆ.

*
ಹುಬ್ಬಳ್ಳಿ-ವಾಸ್ಕೊ ಹಾಗೂ ಲೋಂಡಾ-ಖಾನಾಪುರ ರೈಲು ಮಾರ್ಗಗಳಲ್ಲಿ 2014 ರಿಂದ 2020 ರವರೆಗೆ 30 ಕಾಟಿ, 2 ಕಾಡಾನೆ, 1 ಕರಡಿ, 1 ಕೆನ್ನಾಯಿ, 1 ಕಡವೆ ಅಪಘಾತಗಳಲ್ಲಿ ಸತ್ತಿವೆ. ಹೊಸ ಮಾರ್ಗ ಇನ್ನಷ್ಟು ಬಲಿ ಪಡೆಯಲಿದೆ.
-ಮಹೇಶ್‌, ವನ್ಯಜೀವಿ ಕಾರ್ಯಕರ್ತ

**
ಅಂಕಿ ಅಂಶ
₹ 2,127 ಕೋಟಿ:ಹೊಸಪೇಟೆ- ಲೋಂಡಾ- ವಾಸ್ಕೊ ರೈಲುಮಾರ್ಗದ ಜೋಡಿಹಳಿ ಕಾಮಗಾರಿಗೆ ಮಂಜೂರಾದ ಮೊತ್ತ

240 ಕಿ.ಮೀ:ಹುಬ್ಬಳ್ಳಿಯಿಂದ ವಾಸ್ಕೊ ಬಂದರಿಗಿರುವ ದೂರ

210 ಕಿ.ಮೀ:ಹುಬ್ಬಳ್ಳಿಯಿಂದ ಕಾರವಾರ ಬಂದರಿಗಿರುವ (ಅಂಕೋಲಾ ಮೂಲಕ) ದೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT