ರಂಗಸ್ಥಳದಲ್ಲೇ ಕಲಾಯಾತ್ರೆ ಮುಗಿಸಿದ ಹುಡಗೋಡು

ಶನಿವಾರ, ಮಾರ್ಚ್ 23, 2019
34 °C

ರಂಗಸ್ಥಳದಲ್ಲೇ ಕಲಾಯಾತ್ರೆ ಮುಗಿಸಿದ ಹುಡಗೋಡು

Published:
Updated:
Prajavani

ಬೈಂದೂರು: ಭೀಷ್ಮ ವಿಜಯದಲ್ಲಿ ‘ಸಾಲ್ವ’ನ ಪಾತ್ರವದು. ‘ಧುರ ಪರಾಕ್ರಮ ಭೀಷ್ಮಂಗೆ ಮಾರಿಹೋದುದೆ’ ಎಂದು ಅಬ್ಬರದ ಕುಣಿತ ಆರಂಭಿಸಿದ ಕಲಾವಿದ ರಂಗಸ್ಥಳದಲ್ಲೇ ಕುಸಿದರು. ‘ಸಾಲ್ವ’ನಾಗಿ ಪಾತ್ರಕ್ಕೆ ಜೀವ ತುಂಬಿದವರು ಹುಡಗೋಡು ಚಂದ್ರಹಾಸ ನಾಯ್ಕ್ (52). ಬಣ್ಣದ ವೇಷ ತೊಟ್ಟು ಯಕ್ಷಗಾನ ಕಲೋಪಾಸನೆ ಮಾಡುತ್ತಲೇ ಅವರು ಇಹಲೋಕದ ಯಾತ್ರೆ ಮುಗಿಸಿದರು. 

ಇಲ್ಲಿಗೆ ಸಮೀಪದ ಯಳಜಿತ ಗ್ರಾಮದಲ್ಲಿ ಕಲಾಧರ ಯಕ್ಷಗಾನ ಮೇಳದವರಿಂದ ಭಾನುವಾರ ರಾತ್ರಿ ‘ಭೀಷ್ಮ ವಿಜಯ’ ಪ್ರಸಂಗ ನಡೆಯುತ್ತಿತ್ತು. ರಾತ್ರಿ 11.30ರ ವೇಳೆಗೆ ‘ಅಂಬಾ ವಿವಾಹ’ ಸನ್ನಿವೇಶ ನಡೆಯುತ್ತಿತ್ತು. ಬಳ್ಕೂರು ಕೃಷ್ಣಯಾಜಿ ಅವರ ಭೀಷ್ಮನ ಎದುರು ಸಾಲ್ವನ ಪಾತ್ರ ಮಾಡಿದ್ದ ಹುಡಗೋಡು ಮಾತು ಮುಗಿಸಿ ಕುಣಿತ ಆರಂಭಿಸುತ್ತಿದ್ದಂತೆ ಕುಸಿದು ಬಿದ್ದರು. ದಿಗ್ಭ್ರಾಂತರಾದ ಸಹ ಕಲಾವಿದರು ಬಳಿಗೆ ಧಾವಿಸಿ ನೋಡಿದಾಗ ನಿಶ್ಚಲರಾಗಿದ್ದರು. ತಕ್ಷಣ ಅವರನ್ನು ಬೈಂದೂರು ಆಸ್ಪತ್ರೆಗೆ ತರಲಾಯಿತು. ಅಷ್ಟರಲ್ಲೇ ಅಸುನೀಗಿದ್ದರು.  ಚಂದ್ರಹಾಸ ನಾಯ್ಕ್ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಹುಡಗೋಡಿನವರು. ಯಕ್ಷಗಾನದ ಸವ್ಯಸಾಚಿ ಎನಿಸಿದ್ದ ಗುಂಡಿಬೈಲು ಸುಬ್ರಾಯ ಭಟ್ಟರಲ್ಲಿ ಯಕ್ಷ ನೃತ್ಯ ಕಲಿತಿದ್ದರು. ವೃತ್ತಿ ಮೇಳಗಳಲ್ಲಿ 30 ವರ್ಷ ಸೇವೆ ಸಲ್ಲಿಸಿದ್ದರು.

ರಂಗದಲ್ಲೇ ಅಸುನೀಗಿದವರು
ಈ ಹಿಂದೆ ದಾಮೋದರ ಮಂಡೆಚ್ಚ, ಶಿರಿಯಾರ ಮಂಜು ನಾಯ್ಕ, ಕೆರೆಮನೆ ಶಂಭು ಹೆಗಡೆ, ಗೇರುಕಟ್ಟೆ ಗಂಗಯ್ಯ ಶೆಟ್ಟಿ, ಅರುವ ನಾರಾಯಣ ಶೆಟ್ಟಿ ಅವರು ವೇಷಧಾರಿಗಳಾಗಿ ರಂಗಸ್ಥಳದಲ್ಲಿದ್ದಾಗಲೇ ಮೃತಪಟ್ಟಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !