ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಮೌಢ್ಯ ನಿಷೇಧ ಕಾಯ್ದೆ ಜಾರಿ: ಸಿಡಿ ಆಟ, ಮಡೆಸ್ನಾನ ನಿಷೇಧ

ತಪ್ತ ಮುದ್ರಾಧಾರಣೆ, ಕೇಶಲೋಚನಕ್ಕೆ ತಡೆ ಇಲ್ಲ
Last Updated 22 ಜನವರಿ 2020, 20:49 IST
ಅಕ್ಷರ ಗಾತ್ರ

ಬೆಂಗಳೂರು: ಎಂಜಲು ಎಲೆ ಮೇಲೆ ಉರುಳುವ ಅಮಾನವೀಯ ಮಡೆಸ್ನಾನ, ಮಾಟ–ಮಂತ್ರ, ವಶೀಕರಣ ಮತ್ತಿತರ ಅನಿಷ್ಟ ಪದ್ಧತಿ ಆಚರಿಸುವವರನ್ನು ಶಿಕ್ಷೆಗೆ ಗುರಿಪಡಿಸಲು ಅವಕಾಶ ಇರುವ ‘ಮೌಢ್ಯ ನಿಷೇಧ ಕಾಯ್ದೆ’ಯನ್ನು ರಾಜ್ಯ ಸರ್ಕಾರ ಜಾರಿ ಮಾಡಿದೆ.

ಪೊಲೀಸ್‌ ಠಾಣೆಯ ಪೊಲೀಸ್‌ ಇನ್ಸ್‌ಪೆಕ್ಟರ್‌ ಜಾಗೃತ ಅಧಿಕಾರಿಯಾಗಿದ್ದು, ಮೌಢ್ಯಾಚರಣೆ ಕಂಡರೆ ಇವರಿಗೆ ದೂರು ನೀಡಬಹುದು. ಅವರು ಕಡ್ಡಾಯವಾಗಿ ಎಫ್‌ಐಆರ್ ದಾಖಲಿಸಿಕೊಳ್ಳಬೇಕು. ಪೊಲೀಸ್‌ ಇನ್ಸ್‌ಪೆಕ್ಟರ್‌ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಳ್ಳಬಹುದಾಗಿದೆ.

ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಮೌಢ್ಯ ನಿಷೇಧಿಸುವ ಕಾಯ್ದೆ ರೂಪಿಸಲು ತಜ್ಞರ ಸಮಿತಿ ರಚಿಸಲಾಗಿತ್ತು. ತಜ್ಞರು ಸಲ್ಲಿಸಿದ ವರದಿಯಲ್ಲಿನ ಕೆಲವು ಶಿಫಾರಸುಗಳ ಬಗ್ಗೆ ಧಾರ್ಮಿಕ ಮತ್ತು ರಾಜಕೀಯ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಕೆಲವು ಅಂಶ ಪರಿಷ್ಕರಿಸಿ ಮಸೂದೆಗೆ ಒಪ್ಪಿಗೆ ಪಡೆಯಲಾಗಿತ್ತು.

‘2017 ರ ಡಿಸೆಂಬರ್‌ನಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು.ಇದರಲ್ಲಿ ಕಾನೂನಾತ್ಮಕ ತೊಡಕು ಇದ್ದುದರಿಂದ ತಡೆಹಿಡಿಯಲಾಯಿತು. ಆ ಅಂಶ ತೆಗೆದುಹಾಕಿ ಮತ್ತೆ ರಾಜ್ಯಪಾಲರಿಂದ ಅಂಕಿತ ಪಡೆಯಲಾಯಿತು. ಕಾಯ್ದೆ ಜಾರಿ ವಿಳಂಬವಾಯಿತು’ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.

ನಿಷೇಧ ಯಾವುದಕ್ಕೆ
* ಭಾನಾಮತಿ, ಮಾಟ–ಮಂತ್ರ ಮಾಡುವುದು. ಗುಪ್ತ ನಿಧಿ, ನಿಕ್ಷೇಪಗಳ ಅನ್ವೇಷಣೆ, ಅದಕ್ಕಾಗಿ ವಾಮಾಚಾರ ಮಾಡುವುದು.

* ವ್ಯಕ್ತಿಯ ದೇಹದ ಮೇಲೆ ಅಗೋಚರ ಶಕ್ತಿಯನ್ನು ಆಹ್ವಾನಿಸಲಾಗಿದೆ ಅಥವಾ ಆ ವ್ಯಕ್ತಿ ಅಂಥ ಶಕ್ತಿ ಹೊಂದಿದ್ದಾನೆ ಎಂದು ನಂಬಿಸುವುದು.

* ದೆವ್ವ ಉಚ್ಚಾಟನೆ ಮಾಡುವ ನೆಪದಲ್ಲಿ ವಿವಿಧ ರೀತಿಯ ಹಿಂಸೆ ನೀಡುವುದು.

* ನಿರ್ದಿಷ್ಟ ವ್ಯಕ್ತಿ ದುರಾದೃಷ್ಟಕ್ಕೆ ಕಾರಣ, ರೋಗಗಳನ್ನು ಹರಡುತ್ತಾನೆ ಎಂದು ಆರೋಪಿಸುವುದು. ಪಾಪಿ ಅಥವಾ ಪಾಪಾತ್ಮ ಎಂದು ಹೇಳುವುದು, ಸೈತಾನ ಅಥವಾ ಸೈತಾನನ ಅವತಾರವೆಂದು ಘೋಷಿಸುವುದು.

* ಮಂತ್ರ ಪಠಿಸಿ ದೆವ್ವಗಳನ್ನು ಆಹ್ವಾನಿಸುತ್ತೇವೆ ಎಂದು ಹೇಳಿ ಜನರಲ್ಲಿ ಗಾಬರಿ, ಭಯ ಹುಟ್ಟಿಸುವುದು.

* ವೈದ್ಯಕೀಯ ಚಿಕಿತ್ಸೆ ತೆಗೆದುಕೊಳ್ಳುವುದಕ್ಕೆ ಬದಲು, ದುಷ್ಟ ಮತ್ತು ಅಘೋರಿ ಕೃತ್ಯ ಆಚರಿಸಲು ಪ್ರೇರೇಪಿಸುವುದು

* ಬರಿಗೈ ಬೆರಳುಗಳಿಂದ ಶಸ್ತ್ರ ಚಿಕಿತ್ಸೆ, ಮಹಿಳೆಯ ಗರ್ಭದಲ್ಲಿನ ಭ್ರೂಣದ ಲಿಂಗ ಬದಲಾಯಿಸುವುದಾಗಿ ಹೇಳುವುದು.

* ತನ್ನಲ್ಲಿ ವಿಶೇಷ ಶಕ್ತಿ ಇದೆ. ಪವಿತ್ರಾತ್ಮದ ಅವತಾರ ಅಥವಾ ಹಿಂದಿನ ಜನ್ಮದಲ್ಲಿ ಪತಿ, ಪತ್ನಿ ಅಥವಾ ಅನೈತಿಕ ಸಂಬಂಧವಿದ್ದ ಪ್ರೇಮಿ ಆಗಿದ್ದೇವೆಂಬ ಭಾವನೆ ಉಂಟು ಮಾಡುವುದು.

* ಕೊಕ್ಕೆಯಿಂದ ನೇತು ಹಾಕುವುದು (ಸಿಡಿ), ದೇಹಕ್ಕೆ ಚುಚ್ಚಿಕೊಂಡ ಕೊಕ್ಕೆಯ ಮೂಲಕ ರಥ ಎಳೆಯುವುದು.

* ಮಕ್ಕಳಿಗೆ ಚಿಕಿತ್ಸೆ ಹೆಸರಿನಲ್ಲಿ ಎತ್ತರದಿಂದ ಎಸೆಯುವುದು, ಮುಳ್ಳುಗಳ ಮೇಲೆ ಮಲಗಿಸುವುದು.

* ಋತುಮತಿ, ಬಾಣಂತಿಯನ್ನು ಒಂಟಿಯಾಗಿರುವಂತೆ ಮಾಡುವುದು, ಬೆತ್ತಲೆ ಸೇವೆ, ಬೆತ್ತಲೆ ಮೆರವಣಿಗೆ.

* ಪ್ರಾಣಿಯ ಕುತ್ತಿಗೆಯನ್ನು ಕಚ್ಚಿ (ಗಾವು) ಕೊಲ್ಲುವುದು.

* ಸಾರ್ವಜನಿಕ ಅಥವಾ ಧಾರ್ಮಿಕ ಸ್ಥಳಗಳಲ್ಲಿ ವ್ಯಕ್ತಿಗಳು ಊಟ ಮಾಡಿ ಬಿಟ್ಟ ಎಲೆಗಳ ಮೇಲೆ (ಮಡೆ ಸ್ನಾನ) ಉರುಳಾಡುವುದು.

* ಕೆಂಡ ಹಾಯುವ ಪದ್ಧತಿ ಆಚರಿಸುವಂತೆ ಬಲವಂತಪಡಿಸುವುದು.

* ಬಾಯಿ ಬೀಗ ಪದ್ಧತಿ, ಅಂದರೆ ನಾಲಗೆಯೂ ಸೇರಿದಂತೆ ಒಂದು ದವಡೆಯಿಂದ ಇನ್ನೊಂದು ದವಡೆಗೆ ಕಬ್ಬಿಣದ ಸಲಾಕೆ ತೂರಿಸುವುದು.

* ಭಾನಾಮತಿ ಹೆಸರಿನಲ್ಲಿ ಮನೆಗಳ ಮೇಲೆ ಕಲ್ಲು ತೂರುವುದು.

* ನಾಯಿ, ಹಾವು, ಚೇಳು ಕಡಿತಕ್ಕೆ ಔಷಧ ಮಾಡದೇ ಮಂತ್ರ, ತಂತ್ರ, ಗಂಧ– ದೋರ ಮತ್ತು ಅಂತಹ ವಸ್ತುಗಳಿಂದ ಚಿಕಿತ್ಸೆ.

* ಇವೆಲ್ಲವುಗಳ ಬಗ್ಗೆ ಜಾಹೀರಾತು ನೀಡುವುದು.

ನಿಷೇಧವಿಲ್ಲ
* ಧಾರ್ಮಿಕ, ಅಧ್ಯಾತ್ಮಿಕ ಸ್ಥಳಗಳಲ್ಲಿ ಪ್ರದಕ್ಷಿಣೆ, ಯಾತ್ರೆ, ಪರಿಕ್ರಮ ಮತ್ತು ಪೂಜೆ.

*ಹರಿಕಥೆ, ಕೀರ್ತನೆ, ಪ್ರವಚನ, ಭಜನೆ, ಪ್ರಾಚೀನ ಮತ್ತು ಪಾರಂಪರಿಕ ಕಲಿಕೆಗಳು, ಕಲೆಗಳು, ಪದ್ಧತಿ ಮತ್ತು ಅದರ ಪ್ರಸಾರ.

* ದೈವಾಧೀನರಾದ ಸಂತರ ಪವಾಡದ ಬಗ್ಗೆ ಮಾತನಾಡುವುದು. ಪ್ರಚಾರ ಮಾಡುವುದು, ಸಾಹಿತ್ಯ ಪ್ರಸಾರ.

*ಮನೆ, ದೇವಾಲಯ, ದರ್ಗಾ, ಗುರುದ್ವಾರ, ಪಗೋಡ, ಚರ್ಚ್‌ ಅಂಥ ಧಾರ್ಮಿಕ ಸ್ಥಳಗಳಲ್ಲಿ ದೈಹಿಕವಾಗಿ ಹಾನಿ ಉಂಟು ಮಾಡದಿರುವ ಪ್ರಾರ್ಥನೆ, ಉಪಾಸನೆ, ಧಾರ್ಮಿಕ ಆಚರಣೆ.

* ಧರ್ಮಾಚರಣೆಗೆ ಅನುಸಾರವಾಗಿ ಮಕ್ಕಳ ಕಿವಿಗಳು, ಮೂಗು ಚುಚ್ಚುವುದು, ತಪ್ತ ಮುದ್ರಾಧಾರಣೆ, ಜೈನ ಸಂಪ್ರದಾಯದ ಕೇಶಲೋಚನ.

* ವಾಸ್ತುಶಾಸ್ತ್ರ ಸಲಹೆ, ಜ್ಯೋತಿಷ್ಯ ಮತ್ತು ಜ್ಯೋತಿಷ್ಯಗಳಿಂದ ಸಲಹೆ.

ಶಿಕ್ಷೆ ಏನು
ಮಾಟ, ಮಂತ್ರ, ತಂತ್ರ, ವಾಮಾಚಾರ ಮುಂತಾದವುಗಳಿಗೆ ಒಂದು ವರ್ಷದಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹5,000 ದಿಂದ ₹50,000 ದವರೆಗೆ ದಂಡ ವಿಧಿಸಲಾಗುವುದು.

ಅಧಿಕಾರಿಗಳಿಗೆ ಕಾರ್ಯಾಗಾರ:ಈ ಕಾಯ್ದೆ ಬಗ್ಗೆ ಜಿಲ್ಲಾಧಿಕಾರಿಗಳು, ಪೊಲೀಸ್‌ ಅಧಿಕಾರಿಗಳು ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಅರಿವು ಮೂಡಿಸಲು ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗುವುದು. ಪ್ರತಿ ಆರು ತಿಂಗಳಿಗೊಮ್ಮೆ ಸಮಾಜ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಭೆ ನಡೆಸಲಾಗುವುದು. ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರು ಆರು ತಿಂಗಳಿಗೊಮ್ಮೆ ವಿವಿಧ ಜಿಲ್ಲೆಗಳಲ್ಲಿ ದಾಖಲಾದ ಪ್ರಕರಣಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ವರದಿ ನೀಡಬೇಕು.

ಮೌಢ್ಯ ನಿಷೇಧ: ಪ್ರತಿಕ್ರಿಯೆಗಳು

**
ನನ್ನ ಏಳು ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿದೆ. ಸಿದ್ದರಾಮಯ್ಯ ಸರ್ಕಾರ ಜಾರಿಗೆ ತರಲು ಮುಂದಾಗಿದ್ದ ಈ ಕಾಯ್ದೆಯನ್ನು ಬಿಜೆಪಿ ಸರ್ಕಾರ ಜಾರಿಗೆ ತಂದಿರುವುದೂ ವಿಶೇಷ. ಯಾವುದೇ ಧರ್ಮದಲ್ಲಿ ಇರಲಿ, ಮುಗ್ಧರಿಗೆ ತೊಂದರೆ ಕೊಡುವ ಆಚರಣೆಗಳು ಹೋಗಬೇಕು.
-ನಿಡುಮಾಮಿಡಿ ವೀರಭದ್ರ ಚನ್ನಮಲ್ಲ, ಸ್ವಾಮೀಜಿ,ನಿಡುಮಾಮಿಡಿ ಸಂಸ್ಥಾನ, ಬೆಂಗಳೂರು

**
ಸಿಎಎ ವಿರೋಧ ಎದುರಾಗಿರುವಾಗಲೇ ಈ ನಿರ್ಧಾರ ಕೈಗೊಂಡಿದ್ದರ ಹಿನ್ನೆಲೆ ಏನೇ ಇರಲಿ, ಇದು ಸ್ವಾಗತಾರ್ಹ. ವಿವಿಧ ಧರ್ಮಗಳಲ್ಲಿನ ಅನಾಚಾರಗಳು ನಿವಾರಣೆಯಾಗಬೇಕು.
-ಎಸ್‌.ಬಿ.ಮೊಹಮ್ಮದ್ ದಾರಿಮಿ,ಅಧ್ಯಕ್ಷರು, ದಾರಿಮಿ ಉಲೇಮಾ

**
ಒಕ್ಕೂಟ, ಕರ್ನಾಟಕ ಕಾಯ್ದೆ, ಕಾನೂನು ಜಾರಿಯಾದ ತಕ್ಷಣ ಮೌಢ್ಯಗಳು ದೂರವಾಗುವುದಿಲ್ಲ. ಮೌಢ್ಯತೆ ಬಿತ್ತುವವರನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು. ಎಲ್ಲ ಧರ್ಮಗಳಲ್ಲೂ ಮೌಢ್ಯ ಇದೆ, ಕಂದಾಚಾರಗಳನ್ನು ಶಿಕ್ಷಣ ಮತ್ತು ಜಾಗೃತಿಯ ಮೂಲಕ ಹೋಗಲಾಡಿಸಬೇಕು.
-ಪ್ರಮೋದ್ ಮುತಾಲಿಕ್‌,ಅಧ್ಯಕ್ಷರು, ಶ್ರೀರಾಮ ಸೇನೆ

**
ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆಯ ಸಂದರ್ಭದಲ್ಲಿ ಮೌಢ್ಯ ನಿಷೇಧ ಕಾಯ್ದೆ ಜಾರಿಗೆಯ ಬೇಡಿಕೆಯನ್ನು ಮಂಡಿಸಿದ್ದೆವು. ಈ
ಸರ್ಕಾರವು ಕಾರ್ಯರೂಪಕ್ಕೆ ತರುತ್ತದೆ ಎಂಬ ವಿಶ್ವಾಸ ಅಷ್ಟಕಷ್ಟೆ. ಆದರೂ, ಸಂಥಿಂಗ್ ಈಸ್ ಬೆಟರ್ದೆನ್ ನಥಿಂಗ್...
-ನರೇಂದ್ರ ನಾಯಕ್,ವಿಚಾರವಾದಿ, ಮಂಗಳೂರು

*
ದೇವರ ಹೆಸರಿನಲ್ಲಿ ಬೆತ್ತಲೆ ಸೇವೆ, ಹೆಣ್ಣು ಮಕ್ಕಳನ್ನು ಅರ್ಪಿಸುವುದು, ಮಡೆ ಮಡೆ ಸ್ನಾನದಂತಹ ಅನಿಷ್ಟ ಪದ್ಧತಿಗಳು ಸಮಾಜದಲ್ಲಿ ಇರಬಾರದು
-ಎಚ್.ಆಂಜನೇಯ, ಮಾಜಿ ಸಚಿವ

*
ಸಮಾಜದಲ್ಲಿ ಮೂಢನಂಬಿಕೆ, ಗೊಡ್ಡು ಕಂದಾಚಾರಗಳಿಂದ ಮನುಷ್ಯನಿಂದ ಮನುಷ್ಯನ ಶೋಷಣೆ ಆಗಬಾರದು. ಕಾನೂನು ತರುವವರಲ್ಲಿ ಪ್ರಾಮಾಣಿಕತೆ ಇರಬೇಕು
-ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ

*
ಮೌಢ್ಯ ನಿಷೇಧ ಕಾಯ್ದೆ ಜಾರಿಯಿಂದ ಜನರ ಮೂಲ ನಂಬಿಕೆಗಳಿಗೆ ಚ್ಯುತಿಯಾಗಬಾರದು. ಸಮಾಜದ ಸ್ವಾಸ್ಥ್ಯ ಹದಗೆಡಿಸುವ ಕಂದಾಚಾರಗಳನ್ನು ನಿಷೇಧಿಸಿದರೆ ತಪ್ಪಿಲ್ಲ.
-ಸುಗುಣೇಂದ್ರ ತೀರ್ಥ ಸ್ವಾಮೀಜಿ, ಪುತ್ತಿಗೆ ಮಠ, ಉಡುಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT