ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಬಿಟ್ಟು ಸಮರ್ಥರು ಯಾರು?; 2ನೇ ಬಾರಿ ಆಯ್ಕೆ ಬಯಸಿದ ಸಂಸದ ಉಗ್ರಪ್ಪ ವಿಶ್ವಾಸ

Last Updated 30 ಏಪ್ರಿಲ್ 2019, 17:02 IST
ಅಕ್ಷರ ಗಾತ್ರ

ಬಳ್ಳಾರಿ: ಲೋಕಸಭೆ ಉಪಚುನಾವಣೆಯಲ್ಲಿ ಕೊನೆ ಗಳಿಗೆಯಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿದ್ದ ವಿ.ಎಸ್‌.ಉಗ್ರಪ್ಪ, ಅತ್ಯಧಿಕ ಮತಗಳ ಅಂತರದಲ್ಲಿ ಗೆದ್ದು ತಾವು ‘ಹರಕೆಯ ಕುರಿ ಅಲ್ಲ’ ಎಂಬುದನ್ನು ಸಾಬೀತು ಮಾಡಿ ಸಂಸದರಾಗಿ ಹೊರಹೊಮ್ಮಿದವರು.

ಈಗ ಎರಡನೇ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿರುವ ಅವರು ‘ನನ್ನ ಬಿಟ್ಟು ಸಮರ್ಥರು ಬೇರೆ ಯಾರಿದ್ದಾರೆ?’ ಎಂಬ ಗಟ್ಟಿ ವಿಶ್ವಾಸದಲ್ಲೇ ಪ್ರಚಾರ ನಡೆಸಿದ್ದಾರೆ.

ಉಪಚುನಾವಣೆಯ ರಾಜಕೀಯ ಸನ್ನಿವೇಶ ಈಗ ಇಲ್ಲ. ಮೈತ್ರಿ ಸರ್ಕಾರದ ಎಲ್ಲರಿಗೂ ಚುನಾವಣೆ ವೈಯಕ್ತಿಕ ತುರ್ತು ಆಗಿರುವ ಸಂದರ್ಭದಲ್ಲಿ, ಉಗ್ರಪ್ಪ ತಮ್ಮ ವೈಯಕ್ತಿಕ ವರ್ಚಸ್ಸು, ಆರು ತಿಂಗಳಲ್ಲಿ ಸಂಸದರಾಗಿ ಮಾಡಿದ ಅಭಿವೃದ್ಧಿ ಕಾರ್ಯ, ಜಾತ್ಯತೀತ ನಿಲುವನ್ನು ಮುಂದಿಟ್ಟು, ಬಿಜೆಪಿಯ ಕೋಮುವಾದಕ್ಕೆ ವಿರೋಧ ವ್ಯಕ್ತಪಡಿಸುತ್ತಾ ಮತಯಾಚಿಸುತ್ತಿದ್ದಾರೆ.

ಬಿಡುವಿಲ್ಲದ ಪ್ರಚಾರದ ನಡುವೆಯೇ ಅವರು ‘ಪ್ರಜಾವಾಣಿ’ಗೆ ಸಂದರ್ಶನ ನೀಡಿದ್ದು, ಅದರ ಪೂರ್ಣಪಾಠ ಇಲ್ಲಿದೆ.

* ಉಪಚುನಾವಣೆಯಲ್ಲಿ ಗೆದ್ದು ಸಂಸದರಾದ ಉಗ್ರಪ್ಪನವರಿಗೂ, ಈಗ ಅಭ್ಯರ್ಥಿಯಾಗಿರುವ ಉಗ್ರಪ್ಪನವರಿಗೂ ಏನು ವ್ಯತ್ಯಾಸ?
ವ್ಯತ್ಯಾಸವಿದೆ. ಆಗ ನಾನು ಮೊದಲ ಬಾರಿಗೆ ಕ್ಷೇತ್ರದಲ್ಲಿ ಗೆದ್ದ ಸ್ಪರ್ಧಾಳು, ಹೊರಗಿನವರು ಎಂಬ ಟೀಕೆ ಎದುರಿಸಿದ್ದೆ. ಈಗ ಅವೆಲ್ಲ ಇಲ್ಲ. ನಾನೀಗ ಆರು ತಿಂಗಳ ಅನುಭವವುಳ್ಳ ಜನಪರ ಸಂಸದ. ಕ್ಷೇತ್ರದ ಎಲ್ಲ ಸಮಸ್ಯೆಗಳ ಅರಿವೂ, ಅದಕ್ಕೆ ಏನು ಪರಿಹಾರ ಎಂಬ ದೂರದೃಷ್ಟಿಯೂ ಇದೆ.

* ಆರು ತಿಂಗಳಲ್ಲಿ ಕ್ಷೇತ್ರಕ್ಕೆ ನಿಮ್ಮದೇನು ಕೊಡುಗೆ?

ಕೆಲವೇ ತಿಂಗಳಲ್ಲಿ ಕ್ಷೇತ್ರಕ್ಕೆ ₹ 35ಕೋಟಿ ಅಭಿವೃದ್ಧಿ ಅನುದಾನ ಲಭ್ಯವಾಗಿದೆ. ₹ 5 ಸಾವಿರ ಕೋಟಿ ವೆಚ್ಚದಲ್ಲಿ ಅಪೆರಲ್‌ ಪಾರ್ಕ್‌ ಸ್ಥಾಪನೆಗೆ ಸರ್ಕಾರ ವಿವಿಧ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಿದೆ. ತುಂಗಭದ್ರಾ ಜಲಾಶಯದ ಹೂಳನ್ನು ತೆರವುಗೊಳಿಸಲು ತುಂಗಭದ್ರಾ ಮಂಡಳಿ ಹಾಗೂ ಸರ್ಕಾರದ ಗಮನ ಸೆಳೆದಿರುವೆ. ಹಂಪಿ ಉತ್ಸವಕ್ಕೆ ಇದ್ದ ಅಡ್ಡಿ ಈಗ ಇಲ್ಲ. ಅದಕ್ಕಾಗಿ ಶಾಶ್ವತ ಅನುದಾನ ಮೀಸಲಿಡುವಂತೆ ಸರ್ಕಾರವನ್ನು ಆಗ್ರಹಿಸಿರುವೆ. ಸಂಸದರ ಅನುದಾನದಲ್ಲಿ ಆಸ್ಪತ್ರೆ ಕಟ್ಟಡ, ನೀರಿನ ಸೌಕರ್ಯ, ಕಾಂಕ್ರಿಟ್‌ ರಸ್ತೆ, ಸಮುದಾಯ ಭವನಗಳು ನಿರ್ಮಾಣವಾಗಿವೆ.

* ಚುನಾವಣೆಯಲ್ಲಿ ನಿಮ್ಮ ಪ್ರಬಲ ಎದುರಾಳಿ ಯಾರು?

ಎದುರಾಳಿ ಯಾರು ಎಂಬುದಕ್ಕಿಂತಲೂ, ಇದು ಎರಡು ಸಿದ್ಧಾಂತಗಳ ನಡುವಿನ ಸಂಘರ್ಷದ ಚುನಾವಣೆ. ಪ್ರಜಾಪ್ರಭುತ್ವವಾದ, ಜಾತ್ಯತೀತವಾದ ಹಾಗೂ ಕೋಮುವಾದದ ನಡುವಿನ ಚುನಾವಣೆ.

* ಆದರೆ, ಮತದಾರರು ಅಭ್ಯರ್ಥಿಗಳನ್ನೂ ನೋಡುತ್ತಾರಲ್ಲವೇ?

ಬಿಜೆಪಿಯ ವೈ,ದೇವೇಂದ್ರಪ್ಪ ಅವರೇ ನನಗೆ ಎದುರಾಳಿ. ಆದರೆ ಅವರು ಮೋದಿ ಮಂತ್ರವನ್ನು ಜಪಿಸುತ್ತಿದ್ದಾರೆ. ತಮ್ಮದೇ ವರ್ಚಸ್ಸಿನ ಮೇಲೆ ಮತ ಕೇಳುವ ವಿದ್ಯಾರ್ಹತೆ, ಅನುಭವವೂ ಇಲ್ಲ. ಕ್ಷೇತ್ರಕ್ಕೆ ಅವರ ಕೊಡುಗೆ ಶೂನ್ಯ. ಕ್ಷೇತ್ರದಲ್ಲಿ ಮೋದಿ ಅಲೆಯೂ ಇಲ್ಲ. 14 ವರ್ಷಗಳ ಕಾಲ ಸಂಸದರಾಗಿದ್ದ ಬಿಜೆಪಿಯವರು ಕ್ಷೇತ್ರದಲ್ಲಿ ಯಾವ ಅಭಿವೃದ್ಧಿಯನ್ನೂ ಮಾಡಲಿಲ್ಲ. ಆ ಬಗ್ಗೆ ಬಹಿರಂಗ ಚರ್ಚೆಗೂ ನಾನು ಸಿದ್ಧನಿದ್ದೇನೆ.

* ವಿದ್ಯಾರ್ಹತೆ, ಅನುಭವವಿಲ್ಲದ ಶಾಸಕರು ನಿಮ್ಮದೇ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದಾರಲ್ಲಾ?

ಸಚಿವರಾದವರಿಗೆ ಆಡಳಿತದಲ್ಲಿ ಮಾರ್ಗದರ್ಶನ ನೀಡಲು ಅಧಿಕಾರಿಗಳ ತಂಡವೇ ಇರುತ್ತದೆ. ಶಾಸಕರು–ಸಂಸದರಿಗೆ ಆ ಅವಕಾಶ ಇರುವುದಿಲ್ಲ. ಅವರು ಸ್ವತಃ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಅಧ್ಯಯನ ಮಾಡಬೇಕಾಗುತ್ತದೆ. ಸಂಸತ್ತಿನಲ್ಲಿ ಯಾರಿಗೂ ಏನನ್ನೂ ಹೇಳಿಕೊಡಲು ಆಗುವುದಿಲ್ಲ.

* ಕಾಂಗ್ರೆಸ್‌ ಶಾಸಕರ ನಡುವಿನ ಭಿನ್ನಮತ, ಅಸಮಾಧಾನ ಶಮನವಾಗಿದೆಯೇ?

ಸಂಪೂರ್ಣ ಶಮನವಾಗಿದೆ. ಎಲ್ಲ ಶಾಸಕರೂ ಅವರ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದಾರೆ. ಹಗರಿಬೊಮ್ಮನಹಳ್ಳಿಯಲ್ಲಿ ಶಾಸಕ ಎಲ್‌ಬಿಪಿ ಭೀಮಾನಾಯ್ಕ ಮತ್ತು ಗ್ರಾಮಾಂತರ ಪ್ರಚಾರ ಸಮಿತಿ ಅಧ್ಯಕ್ಷ ಸಿರಾಜ್‌ ಶೇಖ್‌ ಒಂದೇ ವೇದಿಕೆಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಬಳ್ಳಾರಿ ಗ್ರಾಮೀಣ, ವಿಜಯನಗರ ಕ್ಷೇತ್ರ ಸೇರಿದಂತೆ ಎಲ್ಲೆಡೆ ಪ್ರಚಾರ ಜೋರಾಗಿಯೇ ಇದೆ. ನಾಮಪತ್ರ ಸಲ್ಲಿಸುವ ಸಂದರ್ಭದಿಂದ ಎಲ್ಲ ಹಂತ, ಸನ್ನಿವೇಶಗಳಲ್ಲೂ ನಾವು ಒಗ್ಗಟ್ಟು ಪ್ರದರ್ಶಿಸಿದ್ದೇವೆ.

* ಜೈಲಿನಲ್ಲಿರುವ ಕಂಪ್ಲಿ ಶಾಸಕ ಜೆ.ಎನ್.ಗಣೇಶ್‌ ಅವರ ಗೈರು ಅಲ್ಲಿ ಮತಗಳಿಕೆಗೆ ಅಡ್ಡಿಯಾಗುವುದಿಲ್ಲವೆ? ಅವರನ್ನು ಪಕ್ಷದಿಂದ ಅಮಾನತ್ತು ಮಾಡಿದ್ದಕ್ಕೆ ಅಸಮಾಧಾನಗೊಂಡಿರುವ ಕಾರ್ಯಕರ್ತರನ್ನು ಹೇಗೆ ಸಮಾಧಾನಗೊಳಿಸುವಿರಿ?

ಇದು ಕೇವಲ ರಾಜಕೀಯ ಸಮಸ್ಯೆಯಷ್ಟೇ ಅಲ್ಲ. ಕಾನೂನಿನ ಸಮಸ್ಯೆ ಕೂಡ. ಎರಡು–ಮೂರು ಬಾರಿ ಕಂಪ್ಲಿಗೆ ಭೇಟಿ ನೀಡಿದಾಗ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿರುವುದು ನಿಜ. ಈ ಬಗ್ಗೆ ಪಕ್ಷದ ಹೈಕಮಾಂಡ್‌ ಗಮನಕ್ಕೂ ತಂದಿರುವೆ. ಆನಂದ್‌ಸಿಂಗ್– ಗಣೇಶ್ ನಡುವಿನ ಮುನಿಸನ್ನು ಕೊನೆಗಾಣಿಸುವ ಯತ್ನ ನಡೆದಿದೆ. ಶೀಘ್ರ ಸಮಸ್ಯೆ ಬಗೆಹರಿಯಲಿದೆ.

* ಮತದಾರರು ನಿಮಗೇ ಏಕೆ ಮತ ಕೊಡಬೇಕು?

ಉಪಚುನಾವಣೆಯಲ್ಲಿ ಮತದಾರರು ನನ್ನನ್ನು ದೂರದಿಂದ ನೋಡಿದ್ದರು. ಈಗ ಹತ್ತಿರದಿಂದ ನೋಡಿದ್ದಾರೆ. ನನ್ನ ಕಾರ್ಯವೈಖರಿ ಗೊತ್ತಾಗಿದೆ. ಸಂಸತ್ತಿಗೆ ಹೋಗಿ ನಾನು ಕೇವಲ ಸಹಿ ಹಾಕಿ ಎದ್ದು ಬಂದಿಲ್ಲ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದೇನೆ. ನನ್ನನ್ನು ಯಾರು ಬೇಕಾದರೂ ಎಷ್ಟೇ ಹೊತ್ತಿನಲ್ಲಾದರೂ ನೇರವಾಗಿ ಸಂಪರ್ಕಿಸಬಹುದು. ನನಗೆ ಯಾರೂ ಮಧ್ಯವರ್ತಿಗಳಿಲ್ಲ. ದೂರವಾಣಿ ಕರೆ ಸ್ವೀಕರಿಸಲು ಆಗದಿದ್ದರೆ, ನಂತರ ನಾನೇ ಕರೆ ಮಾಡುವೆ. ಜನರ ನಿಜವಾದ ಪ್ರತಿನಿಧಿ ಹೇಗಿರಬೇಕೋ ಹಾಗೇ ಇದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT