ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 1.6 ಕೋಟಿ ದೇಣಿಗೆ ಕೊಟ್ಟ ವಿದೇಶಿ ಮಹಿಳೆ!

ವಿಲ್ಲಾ ಖರೀದಿಸಿದ ಆಟೋ ಚಾಲಕ ಸುಬ್ರಮಣಿ ನಿರಾಳ
Last Updated 8 ಮೇ 2019, 18:50 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದ ಆಟೊ ಚಾಲಕ ಎನ್‌. ಸುಬ್ರಮಣಿ ವೈಟ್‌ಫೀಲ್ಡ್‌ ಸಮೀಪದ ಮಹದೇವಪುರದಲ್ಲಿ ಖರೀದಿಸಿರುವ ₹ 1.6 ಕೋಟಿ ಮೌಲ್ಯದ ವಿಲ್ಲಾಗೆ ಪಾವತಿಸಿದ ಹಣ ದೇಣಿಗೆಯಾಗಿ ಪಡೆದಿದ್ದು’ ಎಂಬ ತೀರ್ಮಾನಕ್ಕೆ ಆದಾಯ ತೆರಿಗೆ ಇಲಾಖೆ (ಐ.ಟಿ) ಅಧಿಕಾರಿಗಳು ಬಂದಿದ್ದಾರೆ.

ವಿಲ್ಲಾ ಖರೀದಿಸಿ ಐ.ಟಿ ಕೆಂಗಣ್ಣಿಗೆ ಗುರಿಯಾಗಿದ್ದ ಸುಬ್ರಮಣಿಗೆ ‘ಬೇನಾಮಿ ಆಸ್ತಿ ವಹಿವಾಟು ಕಾಯ್ದೆ’ಯಡಿ ನೋಟಿಸ್‌ ಜಾರಿ ಮಾಡಲಾಗಿತ್ತು. ‘ಆಟೊ ಚಾಲಕಇಷ್ಟೊಂದು ಹಣ ತಂದಿದ್ದಾದರೂ ಎಲ್ಲಿಂದ? ಅವರಿಗೆ ರಾಜಕೀಯ ನಾಯಕರ ನಂಟೇನಾದರೂ ಇರಬಹುದೇ?’ ಎಂದು ಪರಿಶೀಲನೆ ನಡೆಸಲಾಗಿತ್ತು.

ಸುಬ್ರಮಣಿ ಅವರನ್ನು ಸಮಗ್ರ ವಿಚಾರಣೆಗೆ ಒಳಪಡಿಸಲಾಗಿತ್ತು. ವಿಲ್ಲಾಗೆ ಪಾವತಿಸಿದ ಹಣವನ್ನು ಅಮೆರಿಕದ ಮಹಿಳೆ ಲಾರಾ ಎವಿಸನ್‌ ದೇಣಿಗೆಯಾಗಿ ಕೊಟ್ಟಿದ್ದು ಎಂಬ ಸಂಗತಿಯನ್ನು ಅವರು ಬಹಿರಂಗಪಡಿಸಿದ್ದರು. ಆನಂತರ ಏ.16ರಂದು ಲಾರಾ ಅವರನ್ನೂ ಅಧಿಕಾರಿಗಳು ಪ್ರಶ್ನಿಸಿದ್ದರು. ಅವರೂ ಇಂತಹುದೇ ಹೇಳಿಕೆ ಕೊಟ್ಟರು. ‘ಇಬ್ಬರ ಹೇಳಿಕೆಗಳಲ್ಲೂ ಹೊಂದಾಣಿಕೆ ಆಗಿದೆ. ಇದಕ್ಕೆ ಪೂರಕವಾದ ದಾಖಲೆಯನ್ನು ಒದಗಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

2005ರಿಂದ 2010ರವರೆಗೆ ವೈಟ್‌ಫೀಲ್ಡ್‌ನಲ್ಲಿರುವ ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಲಾರಾ ಕೆಲಸದಲ್ಲಿದ್ದರು. ಆ ಸಮಯದಲ್ಲಿ ಆಟೊ ಚಾಲಕ ಸುಬ್ರಮಣಿ ಪರಿಚಯವಾಗಿತ್ತು. ಪ್ರತಿನಿತ್ಯ ಅವರು ಮಹಿಳೆಯನ್ನು ಮನೆಯಿಂದ ಕಚೇರಿಗೆ ಕರೆದೊಯ್ಯುವುದು, ಕಚೇರಿಯಿಂದ ಮನೆಗೆ ಬಿಡುವುದು ಮಾಡುತ್ತಿದ್ದರು. ಕ್ರಮೇಣ ಚಾಲಕನ ಕುಟುಂಬಕ್ಕೆ ಆತ್ಮೀಯರಾದ 72 ವರ್ಷದ ಮಹಿಳೆ ವಿಲ್ಲಾ ಖರೀದಿಗೆ ₹1.6 ಕೋಟಿ ದೇಣಿಗೆ ನೀಡಿದರು ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

‘ಸುಬ್ರಮಣಿಗೆ ವಿಲ್ಲಾ ಕೊಡಿಸಿದ್ದು ನಾನೇ’ ಎಂದು ಲಾರಾ ಇತ್ತೀಚೆಗೆ ‘ಪ್ರಜಾವಾಣಿ’ಗೂ ಹೇಳಿದ್ದರು. ಈ ಬಗ್ಗೆ ಐ.ಟಿ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಪ್ರತಿಕ್ರಿಯೆಗೆಅಧಿಕಾರಿಗಳು ಸಿಗಲಿಲ್ಲ. ವಿಲ್ಲಾ ಖರೀದಿಸಿ ಸಂಕಷ್ಟಕ್ಕೆ ಸಿಕ್ಕಿಕೊಂಡಿದ್ದ ಆಟೋ ಚಾಲಕ ಕೊನೆಗೂ ನಿರಾಳರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT