ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಟಿ ದಾಳಿ: ರಾಜಕೀಯ ಸಂಘರ್ಷ

ಜೆಡಿಎಸ್‌, ಕಾಂಗ್ರೆಸ್‌ ನಾಯಕರ ಆಪ್ತ ಉದ್ಯಮಿ, ಗುತ್ತಿಗೆದಾರರಿಗೆ ಬಲೆ * 15ಕ್ಕೂ ಹೆಚ್ಚು ಸ್ಥಳಗಳಲ್ಲಿ ಪರಿಶೀಲನೆ
Last Updated 28 ಮಾರ್ಚ್ 2019, 19:05 IST
ಅಕ್ಷರ ಗಾತ್ರ

ಬೆಂಗಳೂರು/ಮೈಸೂರು/ಮಂಡ್ಯ/ಹಾಸನ: ಲೋಕಸಭೆ ಚುನಾವಣಾ ಪ್ರಚಾರಕ್ಕೆ ರಂಗೇರುತ್ತಿರುವ ನಡುವೆಯೇ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಾಯಕರು, ಅವರ ಆಪ್ತ ಗುತ್ತಿಗೆದಾರರು ಮತ್ತು ಉದ್ಯಮಿಗಳ ಮನೆ, ಕಚೇರಿಗಳ ಮೇಲೆ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು ಗುರುವಾರ ನಸುಕಿನಲ್ಲಿ ನಡೆಸಿದ ದಾಳಿ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.

ಮಂಡ್ಯ, ಹಾಸನ, ಶಿವಮೊಗ್ಗ ಹಾಗೂ ಬೆಂಗಳೂರು ಒಳಗೊಂಡಂತೆ 15 ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆದಿದೆ. ಕೇಂದ್ರ ಮೀಸಲು ಪೊಲೀಸರ (ಸಿಆರ್‌ಪಿಎಫ್‌) ಭದ್ರತೆಯೊಂದಿಗೆ ಸಣ್ಣ ನೀರಾವರಿ ಸಚಿವ ಸಿ. ಪುಟ್ಟರಾಜು ಅವರ ಸಂಬಂಧಿಗಳು, ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಅವರ ಆಪ್ತರ ಮನೆಗಳನ್ನು ಶೋಧಿಸಲಾಗಿದೆ.

‘ತಮ್ಮ ಆಪ್ತರು ಮತ್ತು ಸಂಬಂಧಿಕರ ಮೇಲೆ ಐ.ಟಿ ದಾಳಿ ನಡೆಯಲಿದೆ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಬುಧವಾರ ಸಂಜೆ ಮಂಡ್ಯದಲ್ಲಿ ಆತಂಕ ವ್ಯಕ್ತಪಡಿಸಿದ್ದರು. ಗುರುವಾರ ಬೆಳಕು ಹರಿಯುವುದರೊಳಗೆ ಅವರ ಮಾತು ಅಕ್ಷರಶಃ ನಿಜವಾಗಿದೆ.

ದಾಳಿಯ ಬೆನ್ನಲ್ಲೇ ಮಿತ್ರ ಪಕ್ಷಗಳ ನಾಯಕರು ಬೆಂಗಳೂರಿನ ಐ.ಟಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಅಧಿಕಾರಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ದಾಳಿಯನ್ನು ರಾಜಕೀಯವಾಗಿ ಎದುರಿಸುವುದಾಗಿ ಉಭಯ ಪಕ್ಷಗಳ ನಾಯಕರು ಗುಡುಗಿದರು. ಅಧಿಕಾರಿಗಳು ಒಂದು ಪಕ್ಷದ ಕೈಗೊಂಬೆಯಾಗಿ ವರ್ತಿಸುವುದರ ವಿರುದ್ಧ ಎಚ್ಚರಿಕೆ ನೀಡಿದರು. ಈ ನಡುವೆ, ಆದಾಯ ತೆರಿಗೆ ಇಲಾಖೆಸುದೀರ್ಘ ಸ್ಪಷ್ಟನೆ ನೀಡಿದೆ. ಐ.ಟಿ ಅತ್ಯಂತ ವೃತ್ತಿಪರವಾಗಿದ್ದು, ಕಾನೂನಿನ ಚೌಕಟ್ಟಿನೊಳಗೇ ಕೆಲಸ ಮಾಡುತ್ತಿದೆ. ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿರುವ ಇಲಾಖೆಗೆ ರಾಜಕೀಯ ಕಳಂಕ ಹಚ್ಚಬಾರದು ಎಂದು ಮನವಿ ಮಾಡಿದೆ.

ಸಚಿವರು, ಶಾಸಕರ ಮನೆ ಮೇಲೆ ದಾಳಿ ನಡೆದಿಲ್ಲ

ರಾಜ್ಯದ ಕೆಲವು ಗುತ್ತಿಗೆದಾರರು ಮತ್ತು ಅವರ ಆಪ್ತರ ಮನೆಗಳ ಮೇಲೆ ದಾಳಿ ನಡೆಸಿರುವುದು ನಿಜ. ಆದರೆ, ಯಾವುದೇ ಸಚಿವರು, ಶಾಸಕರು ಅಥವಾ ಸಂಸದರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಆಗಿಲ್ಲ ಎಂದು ಐ.ಟಿ ಮೂಲಗಳು ಸ್ಪಷ್ಟಪಡಿಸಿವೆ.

ದಾಳಿಗೆ ಕೇಂದ್ರ ಮೀಸಲು ಪೊಲೀಸ್‌ ಪಡೆ ಭದ್ರತೆ ಪಡೆಯಲಾಗಿದೆ. ಸಾಮಾನ್ಯ ಶಿಷ್ಟಾಚಾರದ ಅನ್ವಯ ರಾಜ್ಯದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರೇ (ಕಾನೂನು ಸುವ್ಯವಸ್ಥೆ) ಈ ಪಡೆಯನ್ನು ಕರೆಸಿದ್ದಾರೆ. ನಂಬಲರ್ಹ ಮಾಹಿತಿ ಆಧರಿಸಿಯೇ ದಾಳಿ ನಡೆಯುತ್ತಿದೆ. ಇದುವರೆಗೆ ರಾಜಕಾರಣಿಗಳು, ಚಿತ್ರರಂಗ, ಗಣಿ ಉದ್ಯಮ, ಬಹು ರಾಷ್ಟ್ರೀಯ ಕಂಪನಿಗಳು, ಶಿಕ್ಷಣ ಸಂಸ್ಥೆಗಳು, ಮೆಡಿಕಲ್‌ ಕಾಲೇಜುಗಳು, ಅಧಿಕಾರಿಗಳು, ಮದ್ಯ ತಯಾರಿಕಾ ಘಟಕಗಳ ಮೇಲೆ ದಾಳಿ ಮಾಡಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಯಾರ ಆಪ್ತರು, ಎಲ್ಲಿ ದಾಳಿ?

ಸಚಿವ ಎಚ್‌.ಡಿ. ರೇವಣ್ಣ

* ಚನ್ನರಾಯಪಟ್ಟಣ ಗುತ್ತಿಗೆದಾರರಾದ ಅಶ್ವತ್ಥನಾರಾಯಣ, ತಿಮ್ಮೇಗೌಡ, ನಾರಾಯಣರೆಡ್ಡಿ, ಶ್ರವಣಬೆಳಗೊಳದ ಅಬ್ದುಲ್‌ ಹಫೀಜ್‌

* ಹಾಸನ ಲೋಕೋಪಯೋಗಿ ಇಲಾಖೆ ಕಚೇರಿ ಮತ್ತು ಕಾರ್ಯಪಾಲಕ ಎಂಜಿನಿಯರ್‌ ಮಂಜುನಾಥ್‌ ಮನೆ, ಕುವೆಂಪುನಗರದಲ್ಲಿರುವ ಎಂಜಿನಿಯರ್‌ ಮಾವ, ಗುತ್ತಿಗೆದಾರ ಕೃಷ್ಣೇಗೌಡರ ನಿವಾಸ

* ಚಿಕ್ಕಮಗಳೂರು ಗುತ್ತಿಗೆದಾರ ಸಿ.ಎಚ್‌.ವಿ.ಎನ್‌ ರೆಡ್ಡಿ ಮನೆ

* ಶಿವಮೊಗ್ಗದ ಪರಮೇಶ್‌ ಮನೆ, ಕಾರು ಷೋ ರೂಂ

* ಹಾಸನ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್‌, ಅರಕಲಗೂಡು ಮಲ್ಲಿಪಟ್ಟಣದ ಗುತ್ತಿಗೆದಾರ ಶಿವಮೂರ್ತಿ ಮನೆ

ಸಚಿವ ಸಿ.ಎಸ್‌. ಪುಟ್ಟರಾಜು

* ಅಣ್ಣನ ಮಗ ಹಾಗೂ ಮಂಡ್ಯ ಜಿಲ್ಲಾ ಪಂಚಾಯಿತಿ ಸದಸ್ಯ ಸಿ. ಅಶೋಕ್ ಅವರ ಮೈಸೂರು ವಿಜಯನಗರ ಮನೆ, ಚಿನಕುರಳಿ ಪಟ್ಟಣದ ಮನೆ. ಸಂಬಂಧಿಗಳಾದ ಶಿವಕುಮಾರ್, ಹರೀಶ್, ಕಾಂಗ್ರೆಸ್ ಮುಖಂಡ ಎಂ. ರೇವಣ್ಣ ಅವರ ನಿವಾಸ

*ಯಾರ ಮೇಲೆ ದಾಳಿ ನಡೆಸಬೇಕೆಂದು ರಾಜ್ಯದ ಬಿಜೆಪಿ ನಾಯಕರೊಬ್ಬರು ನೀಡಿದ ಪಟ್ಟಿಯನ್ನು ಅಮಿತ್ ಶಾ ಐಟಿ ಅಧಿಕಾರಿಗಳಿಗೆ ಕೊಡುತ್ತಾರೆ. ಅದಕ್ಕೆ ದಾಖಲೆಗಳಿವೆ

– ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

*ವಿರೋಧ ಪಕ್ಷಗಳ ನಾಯಕರ ಮೇಲೆ ಐ.ಟಿ ದಾಳಿ ನಡೆಸಿರುವುದು ಭಯ ಸೃಷ್ಟಿಸುವ ತಂತ್ರ. ಹೆದರಿಸಿ ಚುನಾವಣೆ ಗೆಲ್ಲುವ ಷಡ್ಯಂತ್ರವನ್ನು ಕೇಂದ್ರ ಮಾಡುತ್ತಿದೆ

– ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ

*ಸಚಿವರ ಮೇಲೆ ದಾಳಿಯಾಗಿದೆ ಎಂದು ಬಿಂಬಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವ ಷಡ್ಯಂತ್ರ

– ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT