ಗುರುವಾರ , ಮಾರ್ಚ್ 4, 2021
24 °C
ಗೋಕಾಕದಲ್ಲಿ ವ್ಯಂಗ್ಯ | ಸತೀಶಗೆ ಮುಖ್ಯಮಂತ್ರಿಯಾಗುವ ಯೋಗ್ಯತೆ ಇದೆ

ಡಿಕೆಶಿ ವಿರೋಧಿಸಿದ್ದರಿಂದಲೇ ನಾನು ದೊಡ್ಡ ಲೀಡರ್ ಆದೆ: ರಮೇಶ ಜಾರಕಿಹೊಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಕಾಕ: ‘ಕಾಂಗ್ರೆಸ್‌ ನಾಯಕ ಡಿ.ಕೆ. ಶಿವಕುಮಾರ್‌ ವಿರೋಧಿಸಿದ್ದರಿಂದಲೇ ನಾನು ಲೀಡರ್‌ ಆದೆ. ಹೀಗಾಗಿ, ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಗೋಕಾಕಕ್ಕೆ ಭಾನುವಾರ ಬಂದ ಅವರು ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

‘ಡಿಕೆಶಿ ಅಂದು ಅಪ್ಪಿಕೊಂಡಿದ್ದರೆ ನಾನು ದೊಡ್ಡ ಲೀಡರ್ ಆಗುತ್ತಿರಲಿಲ್ಲ. ಕಾಂಗ್ರೆಸ್ ನಾಯಕರು ನನ್ನನ್ನು ನಿರ್ಲಕ್ಷಿಸಿದ್ದು ಒಳ್ಳೆಯದೇ ಆಯಿತು. ಬಿಜೆಪಿಯಲ್ಲಿ ಸಚಿವರಾಗುತ್ತೇನೆಂದು ಕನಸಲ್ಲೂ ಊಹಿಸಿರಲಿಲ್ಲ. ಶಾಸಕ ಮಹೇಶ ಕುಮಠಳ್ಳಿ ಅಂಥವರು ಜೊತೆಗಿದ್ದರೆ ಜಗತ್ತು ಗೆಲ್ಲಬಹುದು. ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಿಂದ ಹೊರಬರಲು 36 ಶಾಸಕರು ಸಿದ್ಧವಾಗಿದ್ದೆವು. ಉಳಿದದ್ದು 17 ಮಂದಿ ಮಾತ್ರ’ ಎಂದರು.

‘ಸಚಿವ ಸ್ಥಾನ ತಿರಸ್ಕರಿಸಿ ಗೋಕಾಕಕ್ಕೆ ಹೊರಟಿದ್ದೆ. ಆದರೆ, ಶಾಸಕರಾದ ಮಹೇಶ ಕುಮಠಳ್ಳಿ, ಬಾಲಚಂದ್ರ ಜಾರಕಿಹೊಳಿ ಕಾರಣದಿಂದ ಪ್ರಮಾಣವಚನ ಸ್ವೀಕರಿಸಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ವರಿಷ್ಠ ಅಮಿತ್ ಶಾ ಅವರನ್ನು ನಂಬಿದ್ದೇನೆ. ನೀರಾವರಿ ಖಾತೆ ಕೊಡ್ತಾರೋ, ಲೈಬ್ರರಿ ಕೊಡುತ್ತಾರೋ ಗೊತ್ತಿಲ್ಲ. ಆರ್‌ಎಸ್‌ಎಸ್‌ ನಾಯಕರೂ ಸಹಕಾರ ನೀಡುತ್ತಿದ್ದಾರೆ’ ಎಂದು ತಿಳಿಸಿದರು.

‘ಗೋಕಾಕದಲ್ಲಿ ಕಾಂಗ್ರೆಸ್‌ನ ಲಖನ್ ಜಾರಕಿಹೊಳಿಯಿಂದ ಬಹಳ ಅನ್ಯಾಯವಾಗಿದೆ. ಕುಟುಂಬದ ವಿಚಾರ ಬಂದರೆ ಜಾರಕಿಹೊಳಿ ಸಹೋದರರು ಎಂದಿಗೂ ಒಂದೇ. ಹಿರಿಯ ಸಹೋದರನಾಗಿ ನೋವು ನುಂಗಬೇಕಾಗುತ್ತದೆ. ರಾಜಕೀಯವಾಗಿ ಯಾರಿಗೂ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇನೆ. ಕಾಂಗ್ರೆಸ್‌ ಶಾಸಕ ಸತೀಶ ಜಾರಕಿಹೊಳಿಗೆ ಮುಖ್ಯಮಂತ್ರಿ ಆಗುವ ಯೋಗ್ಯತೆ ಇದೆ. ಅವರು ತಾಳ್ಮೆಯಿಂದ ಇದ್ದರೆ ಒಳ್ಳೆಯದು. ಅವರು 20 ವರ್ಷಗಳಲ್ಲಿ ಮಾಡಲಾಗದ್ದನ್ನು ನಾನು ಎರಡೇ ವರ್ಷಗಳಲ್ಲಿ ಮಾಡಿದ್ದೇನೆ. ಒಳ್ಳೆಯದಕ್ಕಾಗಿ ಹಟ ಮಾಡುತ್ತೇನೆ’ ಎಂದರು.

‘ರಮೇಶ ಬಿಜೆಪಿಗೆ ಹೊಂದಿಕೊಳ್ಳುವುದಿಲ್ಲ ಎಂದು ಕೆಲವರು ಹಬ್ಬಿಸುತ್ತಿದ್ದಾರೆ. ರಾಜಕೀಯ ಸಾಕೆನಿಸಿದರೆ ಬಿಜೆಪಿಯಲ್ಲೇ ನಿವೃತ್ತಿಯಾಗುತ್ತೇನೆ. ಬಿಜೆಪಿ ಬಿಟ್ಟು ಬೇರೆಡೆ ಹೋಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರಿನಿಂದ ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಅವರನ್ನು ಅಭಿಮಾನಿಗಳು, ಸೇಬು ಹಣ್ಣುಗಳಿಂದ ಸಿದ್ಧಪಡಿಸಿದ 5 ಕ್ವಿಂಟಲ್‌ ತೂಕದ ಹಾರ ಹಾಕಿ ಬರಮಾಡಿಕೊಂಡರು. ಅಥಣಿ ಶಾಸಕ ಮಹೇಶ ಕುಮಠಳ್ಳಿ ಜೊತೆಗಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು