ಶುಕ್ರವಾರ, ಫೆಬ್ರವರಿ 26, 2021
18 °C
ನಕಲಿ ಚೆಕ್‌ ಬಳಸಿ ₹ 3.95 ಕೋಟಿ ವರ್ಗಾವಣೆ * ಮೂವರು ಆರೋಪಿಗಳ ಬಂಧನ

₹ 67 ಲಕ್ಷ ತುಂಬಲು ಬಂದು ಸಿಕ್ಕಿಬಿದ್ದರು !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಕಲಿ ಚೆಕ್‌ ಬಳಸಿ ತಮ್ಮ ಹಲವು ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದ ₹ 3.95 ಕೋಟಿ ಪೈಕಿ, ₹ 67 ಲಕ್ಷವನ್ನು ನೆಲಮಂಗಲದ ಐಸಿಐಸಿಐ ಬ್ಯಾಂಕ್‌ ಖಾತೆಯೊಂದಕ್ಕೆ ಜಮಾ ಮಾಡಲು ಬಂದಿದ್ದ ಮೂವರು ಆರೋಪಿಗಳು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಹರಿಹರದ ನಿವಾಸಿಗಳಾದ ಪರೀಕ್ಷಿತ್ ನಾಯ್ಡು, ಗುರುಪ್ರಸಾದ್ ಹಾಗೂ ರಂಗಸ್ವಾಮಿ ಬಂಧಿತರು. ಮೂವರಿಂದ ₹ 67 ಲಕ್ಷವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ನಂಬರ್ ಇಲ್ಲದ ಹೊಸ ಸ್ಕೋಡಾ ಕಾರಿನಲ್ಲಿ ಬ್ಯಾಂಕ್ ಶಾಖೆ ಎದುರು ಗುರುವಾರ ಸಂಜೆ ಬಂದಿಳಿದಿದ್ದ ಆರೋಪಿಗಳು, ಹಣವಿದ್ದ ಮೂರು ಬ್ಯಾಗ್‌ಗಳ ಸಮೇತ ಬ್ಯಾಂಕ್‌ನೊಳಗೆ ತೆರಳಿದ್ದರು. ನಗದು ಕೌಂಟರ್‌ನಲ್ಲಿ ಹಣದ ಬ್ಯಾಗ್‌ಗಳನ್ನು ಇಟ್ಟು ಖಾತೆಯೊಂದಕ್ಕೆ ಜಮಾ ಮಾಡುವಂತೆ ಸಿಬ್ಬಂದಿಗೆ ಹೇಳಿದ್ದರು.

₹ 100, ₹ 500 ಹಾಗೂ ₹ 2,000 ಮುಖಬೆಲೆಯ ನೋಟುಗಳನ್ನು ಬ್ಯಾಗ್‌ಗಳಲ್ಲಿ ನೋಡಿ ಬೆರಗಾದ ಸಿಬ್ಬಂದಿ, ಹಣ ಎಣಿಕೆ ಮಾಡಲಾರಂಭಿಸಿದ್ದರು. ಆರೋಪಿಗಳ ವರ್ತನೆಯಿಂದ ಅನುಮಾನಗೊಂಡಿದ್ದ ಬ್ಯಾಂಕ್ ವ್ಯವಸ್ಥಾಪಕ, ನೆಲಮಂಗಲ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ನಡೆಸಿದಾಗಲೇ ನಕಲಿ ಚೆಕ್‌ ಪ್ರಕರಣ ಬಯಲಾಗಿದೆ.  

ಸರ್ಕಾರೇತರ ಸಂಸ್ಥೆ ಹೆಸರಿನಲ್ಲಿ ಚೆಕ್ ಸೃಷ್ಟಿ: ‘ಬೆಳಗಾವಿಯ ಸರ್ಕಾರೇತರ ಸಂಸ್ಥೆಯೊಂದರ ಹೆಸರಿನಲ್ಲಿ ನಕಲಿ ಚೆಕ್‌ ಸೃಷ್ಟಿಸಿದ್ದ ಆರೋಪಿಗಳು, ಆ ಚೆಕ್‌ನ್ನು ಬೆಂಗಳೂರಿನ ರಾಮಮೂರ್ತಿನಗರದ ಐಸಿಐಸಿಐ ಬ್ಯಾಂಕ್ ಶಾಖೆಗೆ ಬುಧವಾರ ಹಾಕಿದ್ದರು. ಬ್ಯಾಂಕ್ ಸಿಬ್ಬಂದಿ, ಆರೋಪಿಗಳು ಸೂಚಿಸಿದ್ದ ಹರಿಹರ, ಬೆಳಗಾವಿ ಹಾಗೂ ಹಾವೇರಿಯ ಐಸಿಐಸಿಐ ಬ್ಯಾಂಕ್‌ ಶಾಖೆಗಳ ಕೆಲ ಖಾತೆಗಳಿಗೆ ₹ 3.95 ಕೋಟಿ ವರ್ಗಾವಣೆ ಮಾಡಿದ್ದರು’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

‘ಹರಿಹರ ಶಾಖೆಗೆ ಗುರುವಾರ ಬೆಳಿಗ್ಗೆ ಹೋಗಿದ್ದ ಮೂವರು ಆರೋಪಿಗಳು, ಅಲ್ಲಿಯೇ ₹ 67 ಲಕ್ಷ ಡ್ರಾ ಮಾಡಿಕೊಂಡಿದ್ದರು. ಅದೇ ಹಣವನ್ನು ನೆಲಮಂಗಲದ ಬ್ಯಾಂಕ್ ಶಾಖೆಗೆ ಜಮಾ ಮಾಡಲು ಬಂದಿದ್ದರು’ ಎಂದು ಮಾಹಿತಿ ನೀಡಿದರು.

‘ನಕಲಿ ಚೆಕ್ ಸೃಷ್ಟಿ ಸಂಬಂಧ ರಾಮಮೂರ್ತಿನಗರ ಠಾಣೆಗೆ ಐಸಿಐಸಿಐ ಬ್ಯಾಂಕ್ ವ್ಯವಸ್ಥಾಪಕ ದೂರು ನೀಡಿದ್ದಾರೆ. ನೆಲಮಂಗಲ ಪೊಲೀಸರ ವಶದಲ್ಲಿದ್ದ ಆರೋಪಿಗಳನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಕೋರಲಿದ್ದಾರೆ’ ಎಂದು ಅಧಿಕಾರಿ ವಿವರಿಸಿದರು.

ಚೆಕ್‌ ಸೃಷ್ಟಿಸಿದ್ದವನಿಗಾಗಿ ಹುಡುಕಾಟ; ‘ಬೆಳಗಾವಿ, ಹಾವೇರಿ ಹಾಗೂ ದಾವಣಗೆರೆ ಜಿಲ್ಲೆಯ ಕೆಲ ಆರೋಪಿಗಳು, ಗ್ಯಾಂಗ್ ಕಟ್ಟಿಕೊಂಡು ಕೃತ್ಯ ಎಸಗಿದ್ದಾರೆ. ಈಗ ಹಣ ತುಂಬಲು ಬಂದವರನ್ನು ಮಾತ್ರ ಬಂಧಿಸಲಾಗಿದೆ. ಚೆಕ್‌ ಸೃಷ್ಟಿಸಿದ್ದ ವ್ಯಕ್ತಿ ಹಾಗೂ ಹಣ ವರ್ಗಾವಣೆಯಾಗಿದ್ದ ಖಾತೆದಾರರು ಯಾರು ಎಂಬುದನ್ನು ಪತ್ತೆ ಮಾಡುತ್ತಿದ್ದೇವೆ’ ಎಂದು ಅಧಿಕಾರಿ ಹೇಳಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು