ಗುರುವಾರ , ಸೆಪ್ಟೆಂಬರ್ 23, 2021
28 °C
ಪ್ರತಿಭಾವಂತ ಕನ್ನಡಿಗ ವಿದ್ಯಾರ್ಥಿಗಳಿಗೆ ಅವಕಾಶ * ಗುರುಕುಲ ಮಾದರಿಯ ಶಿಕ್ಷಣ ಕೇಂದ್ರ

ವಿಜ್ಞಾನ ಕಲಿಕೆಯ ‘ಕಾಶಿ’ ಐಐಎಸ್‌ಸಿ

ಎಸ್‌.ರವಿಪ್ರಕಾಶ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ದೇಶದ ನಂಬರ್‌ 1 ವಿಶ್ವವಿದ್ಯಾಲಯ. ಮೂಲ ವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳ ಪಾಲಿಗೆ ‘ನಳಂದ– ತಕ್ಷಶಿಲಾ’ ಗಳ ರೀತಿಯಲ್ಲಿ ಗುರುಕುಲ ಮಾದರಿಯ ಶಿಕ್ಷಣ ಕೇಂದ್ರ.

ದ್ವಿತೀಯ ಪಿಯು ಬಳಿಕ ಮೂಲ ವಿಜ್ಞಾನಕ್ಕೆ ಸಂಬಂಧಿಸಿದ ಹಲವು ಪದವಿ ಕೋರ್ಸ್‌ಗಳು ಇಲ್ಲಿವೆ. ಪ್ರವೇಶ ಕಠಿಣ, ಪರಿಶ್ರಮಪಟ್ಟರೆ ಕಷ್ಟವಲ್ಲ. ದೇಶದ ಅತ್ಯುತ್ತಮ ವಿಜ್ಞಾನಿಯಾಗಿ ಹೊರ ಹೊಮ್ಮವ ಅವಕಾಶ ಇಲ್ಲಿದೆ.

ವಿಜ್ಞಾನಿಗಳಾಗುವ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಈ ಸಂಸ್ಥೆ ಮೊದಲ ಆದ್ಯತೆ ಆಗಿರುತ್ತದೆ. ಭೌತವಿಜ್ಞಾನ, ರಸಾಯನವಿಜ್ಞಾನ, ಜೀವವಿಜ್ಞಾನ, ಮೆಕ್ಯಾನಿಕಲ್‌ ವಿಜ್ಞಾನ, ಗಣಿತ, ಎಲೆಕ್ಟ್ರಿಕಲ್‌ ವಿಜ್ಞಾನ ವಿಭಾಗಗಳ ನಾಲ್ಕು ವರ್ಷಗಳ ಪದವಿ (ಸಂಶೋಧನಾ) ಕೋರ್ಸ್‌ಗಳಿವೆ. ಮೊದಲ ಮೂರು ಸೆಮಿಸ್ಟರ್‌ಗಳ ಬಳಿಕ ವಿದ್ಯಾರ್ಥಿಗಳ ಇಚ್ಛೆಯ ವಿಷಯವನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ನಡೆಸಬಹುದು.

ಇಲ್ಲಿಗೆ ಆಯ್ಕೆ ಆಗಬೇಕಾದರೆ ವಿದ್ಯಾರ್ಥಿಗಳಿಗೆ ಮೂರು ಮಾರ್ಗಗಳಿವೆ. ಅವುಗಳೆಂದರೆ, ಕೆವಿಪಿವೈ (ಕಿಶೋರ್‌ ವೈಜ್ಞಾನಿಕ್‌ ಪ್ರೋತ್ಸಾಹನ್ ಯೋಜನಾ), ಜೆಇಇ ಮತ್ತು ನೀಟ್‌. ಇವುಗಳಲ್ಲಿ ಉತ್ತಮ ರ್‍ಯಾಂಕಿಂಗ್ ಪಡೆದವರಿಗೆ ಮೆರಿಟ್‌ ಆಧಾರದಲ್ಲಿ ಇಲ್ಲಿ ಪ್ರವೇಶ ಸಿಗುತ್ತದೆ. ಇಲ್ಲಿ ದಾಖಲಾಗುವ ಪ್ರತಿಯೊಬ್ಬ ವಿದ್ಯಾರ್ಥಿಗೂ ವಿದ್ಯಾರ್ಥಿ ವೇತನ ಖಚಿತ.

ಪದವಿಯ ಬಳಿಕ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಮಾಡಲೂ ಇಲ್ಲಿ ಅವಕಾಶವಿದೆ. ಇಲ್ಲಿ ಕೋರ್ಸ್‌ ಮಾಡಿದವರಿಗೆ ವಿಶ್ವದ ಎಲ್ಲೆಡೆ ಉತ್ತಮ ಉದ್ಯೋಗ ಅವಕಾಶಗಳು (ಪ್ಲೇಸ್‌ಮೆಂಟ್‌) ಸಿಗುತ್ತವೆ. ಕ್ಯಾಂಪಸ್‌ನಲ್ಲೇ ಪ್ಲೇಸ್‌ಮೆಂಟ್‌ ಸೌಲಭ್ಯ ಕಲ್ಪಿಸಲಾಗಿದೆ.

ಕನ್ನಡಿಗರ ಸಂಖ್ಯೆ ಕಡಿಮೆ

ಪ್ರತಿಭಾವಂತ ಕನ್ನಡಿಗ ವಿದ್ಯಾರ್ಥಿಗಳು ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಕೋರ್ಸ್‌ಗಳ ಬಗ್ಗೆ ತೋರಿಸುವ ಆಸಕ್ತಿಯನ್ನು ಭಾರತೀಯ ವಿಜ್ಞಾನ ಸಂಸ್ಥೆಯಂತಹ ಸಂಸ್ಥೆಗಳತ್ತ ತೋರಿಸುತ್ತಿಲ್ಲ. ಆದರೆ, ಕೇರಳ, ಪಶ್ಚಿಮ ಬಂಗಾಳ, ಉತ್ತರಪ್ರದೇಶ ಮತ್ತು ಬಿಹಾರದಂತಹ ರಾಜ್ಯಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಗೆ ಪ್ರವೇಶ ಪಡೆಯುತ್ತಾರೆ. ಇದಕ್ಕಾಗಿ ಅವರು ಹಲವುಗಳ ಕಾಲ ನಿರಂತರ ಪರಿಶ್ರಮ ಹಾಕುತ್ತಾರೆ. ಕನ್ನಡಿಗ ವಿದ್ಯಾರ್ಥಿಗಳು ಮೂಲ ವಿಜ್ಞಾನದ ಬಗ್ಗೆ ಆಸಕ್ತಿ ತೋರಿಸಬೇಕು. ಉಜ್ವಲ ಭವಿಷ್ಯವಿದೆ ಎಂದು ಐಐಎಸ್‌ಸಿ ಅಧಿಕಾರಿಯೊಬ್ಬರು ತಿಳಿಸಿದರು.

* ಐಐಎಸ್‌ಸಿ ಗುರುಕುಲ ಮಾದರಿ ಶಿಕ್ಷಣ. ವಿದ್ಯಾರ್ಥಿಗಳ ಆಸಕ್ತಿಯ ವಿಷಯದ ಬಗ್ಗೆ ಬೋಧಿಸುತ್ತಾರೆ ಮುಕ್ತ, ತೆರೆದ ವಾತಾವರಣದಲ್ಲಿ ವಿಷಯ ಕಲಿಕೆಗೆ ಮತ್ತು ಸಂಶೋಧನೆಗೆ ಅವಕಾಶವಿದೆ

- ಅನುರಾಗ್‌ ಕುಮಾರ್‌, ನಿರ್ದೇಶಕ, ಐಐಎಸ್‌ಸಿ

ಪ್ಲೇಸ್‌ಮೆಂಟ್‌ ಮತ್ತು ವೇತನ

ಐಐಎಸ್‌ಸಿ ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಕಂಪೆನಿಗಳಲ್ಲಿ ಉದ್ಯೋಗ ಗಿಟ್ಟಿಸಿದ್ದಾರೆ. ಉತ್ತಮ ಸಂಬಳವೂ ನಿಗದಿಯಾಗಿದೆ ಅದರ ವಿವರ ಹೀಗಿದೆ–

ವಾರ್ಷಿಕ ವೇತನ(₹ಗಳಲ್ಲಿ);ವಿದ್ಯಾರ್ಥಿಗಳ ಪ್ರಮಾಣ(ಶೇ)

25ಲಕ್ಷ;9

18–25ಲಕ್ಷ;16

15–18ಲಕ್ಷ;25

12–15ಲಕ್ಷ;16

9–12ಲಕ್ಷ;21

9ಲಕ್ಷ;13

ಸೀಟುಗಳ ಲಭ್ಯತೆ

ವಿವಿಧ ವಿಭಾಗಗಳ ಪದವಿ ಕೋರ್ಸ್‌ಗಳ ಒಟ್ಟು ಸೀಟುಗಳು 132

(ಈ ಹಿಂದೆ 120 ಇತ್ತು. ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10 ರಷ್ಟು ಮೀಸಲಾತಿ ಜಾರಿ ಮಾಡಿದ್ದರಿಂದ 12 ಸೀಟುಗಳು ಹೆಚ್ಚಾಗಿವೆ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು