ಶನಿವಾರ, ಸೆಪ್ಟೆಂಬರ್ 25, 2021
29 °C
ಸಂಶೋಧನೆ, ಅನ್ವೇಷಣೆ ಮೂಲಕ ದೇಶ ಕಟ್ಟಲು ಸ್ಥಾಪನೆಗೊಂಡ ಸಂಸ್ಥೆ

ವಿಜ್ಞಾನದ ಕನಸಿಗೆ ‘ಐಸರ್‌’ ಏಣಿ

ಎಸ್‌.ರವಿಪ್ರಕಾಶ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಅನ್ವೇಷಣೆಯ ಯುವ ಮನಸ್ಸುಗಳಿಗೆ ಉತ್ತೇಜಕ ಅವಕಾಶಗಳು’, ಈ ಅಡಿ ಟಿಪ್ಪಣಿಯ ಮೂಲಕ ದೇಶದ ಎಲ್ಲೆಡೆಯಿಂದ ಅಪ್ಪಟ ಪ್ರತಿಭಾವಂತ ಮಿದುಳುಗಳನ್ನು ವಿಜ್ಞಾನದ ಶಿಕ್ಷಣ ಮತ್ತು ಸಂಶೋಧನೆಯತ್ತ ಆಕರ್ಷಿಸುತ್ತಿರುವ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆ ‘ಐಸರ್’.

‘ಐಸರ್‌’ ಎಂದರೆ, ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸ್‌ ಎಜುಕೇಷನ್‌ ಅಂಡ್‌ ರೀಸರ್ಚ್‌ (ಐಐಎಸ್‌ಇಆರ್‌). ಪಿಯುಸಿ ಬಳಿಕ ವಿಜ್ಞಾನದಲ್ಲಿ ಐದು ವರ್ಷಗಳ ಬಿಎಸ್‌ ಮತ್ತು ಎಂಎಸ್‌ ಪದವಿಗಳನ್ನು ಇಲ್ಲಿ ಮಾಡಬಹುದು. ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಐಐಟಿಗಳ ಸಾಲಿಗೆ ಸೇರಿಸಬಹುದಾದ ಸಂಸ್ಥೆಯಿದು.

ದೇಶದಲ್ಲಿ ಅಂತರ್‌ಶಿಸ್ತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆ ನಡೆಸುವ ಉದ್ದೇಶದಿಂದ ಸರ್ಕಾರ ಐಸರ್‌ಗಳನ್ನು ಸ್ಥಾಪಿಸಿದೆ. ಏಳು ಪ್ರತ್ಯೇಕ ಐಸರ್‌ಗಳಿವೆ. ಸಂಶೋಧನೆ ಮತ್ತು ಅನ್ವೇಷಣೆಗಳು ಈ ಸಂಸ್ಥೆಗಳ ಉದ್ದೇಶ. ದೇಶವನ್ನು ಕಾಡುತ್ತಿರುವ ಹಲವು ಸಮಸ್ಯೆಗಳಿಗೆ ವಿಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳುವುದು ಸಂಸ್ಥೆಗಳ ಮತ್ತೊಂದು ಮಹತ್ವದ ಉದ್ದೇಶ.

ಅಂತರ ರಾಷ್ಟ್ರೀಯ ಮಟ್ಟದಲ್ಲೂ ಐಸರ್‌ ಕೀರ್ತಿ ಪಸರಿಸಿದೆ. ಇಲ್ಲಿ ಸಾಕಷ್ಟು ಮಹತ್ವದ ಸಂಶೋಧನೆಗಳೂ ನಡೆದಿವೆ ಮತ್ತು ಪೇಟೆಂಟ್‌ಗಳೂ ಸಿಕ್ಕಿವೆ. ಅತ್ಯುತ್ತಮ ಗುಣಮಟ್ಟದ ಬೋಧಕರು, ವಿಶ್ವ ಗುಣಮಟ್ಟದ ಸಂಶೋಧನಾ ಸೌಲಭ್ಯದ ಜೊತೆಗೆ ಹಾಸ್ಟೆಲ್‌ ವ್ಯವಸ್ಥೆಯೂ ಇದೆ. ಭೋಪಾಲ್‌ನ ಐಸರ್‌ನಲ್ಲಿ ಎಂಜಿನಿಯರಿಂಗ್‌ ವಿಜ್ಞಾನ ಮತ್ತು ಅರ್ಥಶಾಸ್ತ್ರ ವಿಷಯದ ನಾಲ್ಕು ವರ್ಷಗಳ ಬಿಎಸ್‌ ಕೋರ್ಸ್‌ ಇದೆ. ಎಲ್ಲವೂ ವಸತಿಯುಕ್ತ ಕೋರ್ಸ್‌ಗಳಾಗಿವೆ.

ಐಸರ್‌ಗೆ ಪ್ರವೇಶಕ್ಕೆ ಮೂರು ಮಾರ್ಗ:
* ಕೆವಿಪಿವೈ (ಕಿಶೋರ್‌ ವೈಜ್ಞಾನಿಕ್‌ ಪ್ರೋತ್ಸಾಹನ್‌ ಯೋಜನಾ) ಇದರಲ್ಲಿ ಫೆಲೋಶಿಪ್‌ ಪಡೆದವರಿಗೆ ನೇರ ಪ್ರವೇಶ.
* ಐಐಟಿ– ಜೆಇಇ(ಅಡ್ವಾನ್ಸಡ್‌) ಇದರಲ್ಲಿ 10,000ದ ಒಳಗೆ ರ್‍ಯಾಂಕಿಂಗ್‌ ಪಡೆದವರು ಪ್ರಯತ್ನಿಸಬಹುದು.
* ಸ್ಟೇಟ್‌ ಮತ್ತು ಸೆಂಟ್ರಲ್‌ ಬೋರ್ಡ್‌; ಅಂದರೆ ಆಯಾಯ ರಾಜ್ಯಗಳು ನಡೆಸುವ ದ್ವಿತೀಯ ಪಿಯು ಪರೀಕ್ಷಾ ಮಂಡಳಿಗಳು ಅಥವಾ ಸೆಂಟ್ರಲ್‌ ಬೋರ್ಡ್‌ಗಳು ನಡೆಸುವ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದವರು ಅರ್ಜಿ ಸಲ್ಲಿಸಬಹುದು. ಇವರಿಗೆ ಕಟ್‌ಆಫ್‌ ಅಂಕ ನಿಗದಿ ಮಾಡಲಾಗುತ್ತದೆ. ಇಂತಹ ವಿದ್ಯಾರ್ಥಿಗಳು ಮಾತ್ರ ಐಐಎಸ್‌ಇಆರ್‌ ಆಪ್ಟಿಟ್ಯೂಡ್‌ ಪರೀಕ್ಷೆಯನ್ನು ಬರೆಯಬೇಕು. ಇದರಲ್ಲಿ ಅರ್ಹತೆ ಪಡೆದರೆ ಸಂದರ್ಶನಕ್ಕೆ ಅರ್ಹರಾಗುತ್ತಾರೆ. ಈ ವರ್ಷ ಜೂನ್‌ 6 ಕ್ಕೆ ಪರೀಕ್ಷೆ ನಡೆಯಲಿದೆ.
* ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಪ್ರವೇಶಕ್ಕೆ ಮೀಸಲಾತಿ ನಿಗದಿಪಡಿಸಲಾಗಿದೆ.
* ಇಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗೂ ವಿದ್ಯಾರ್ಥಿ ವೇತನ ಸಿಗುತ್ತದೆ.

ಹೆಚ್ಚಿನ ವಿವರಗಳಿಗೆ www.iiseradmission.in ನೋಡಬಹುದು.

ಐಸೆರ್‌ಗಳು: ಸೀಟುಗಳ ಸಂಖ್ಯೆ
ಬೆರ್ಹಂಪುರ್: 150
ಭೋಪಾಲ್‌: 225
ಕೋಲ್ಕತ್ತಾ: 220
ಮೊಹಾಲಿ: 225
ಪುಣೆ: 256
ತಿರುವನಂತಪುರ: 220
ತಿರುಪತಿ: 185
ಒಟ್ಟು: 1481

(ಭೋಪಾಲ್‌ ಐಸೆರ್‌ನಲ್ಲಿ ಎಂಜಿನಿಯರಿಂಗ್‌ ವಿಜ್ಞಾನ 60 ಮತ್ತು ಎಕಾನಮಿಕ್‌ ಸೈನ್ಸ್‌ 40 ಸೀಟುಗಳಿವೆ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು