ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

11 ಸಾವಿರ ಜನರಿಗೆ ದೋಖಾ: ದೂರು ಕೊಡಲು ಸರದಿ ಸಾಲಿನಲ್ಲಿ ನಿಂತ ಜನ

ಐಎಂಎ ಅವ್ಯವಹಾರ ತನಿಖೆಗೆ ವಿಶೇಷ ತನಿಖಾ ದಳ ರಚನೆ: ಮುಂದುವರಿದ ಹೂಡಿಕೆದಾರರ ಆತಂಕ
Last Updated 11 ಜೂನ್ 2019, 20:20 IST
ಅಕ್ಷರ ಗಾತ್ರ

ಬೆಂಗಳೂರು: ಚಿನ್ನ– ಬೆಳ್ಳಿ ವಹಿವಾಟಿನ ನೆಪದಲ್ಲಿ ನೂರಾರು ಕೋಟಿ ಷೇರು ಸಂಗ್ರಹಿಸಿ ಬಾಗಿಲು ಮುಚ್ಚಿರುವ ‘ಐಎಂಎ(ಐ ಮಾನಿಟರಿ ಅಡ್ವೈಸರಿ) ಜ್ಯುವೆಲ್ಸ್‌ ಕಂಪನಿ’ ವಂಚನೆ ‍ಪ್ರಕರಣದ ತನಿಖೆಯನ್ನು ‘ವಿಶೇಷ ತನಿಖಾ ತಂಡ’ಕ್ಕೆ (ಎಸ್‌ಐಟಿ) ಒಪ್ಪಿಸಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆದೇಶಿಸಿದ್ದಾರೆ. ಕಂಪನಿಗೆ ಸೇರಿರುವ ಆಸ್ತಿಗಳನ್ನು ‍ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹಣ ಕಳೆದುಕೊಂಡು ಬೀದಿಗೆ ಬಂದಿರುವ ಸಾವಿರಾರು ಜನರಪ್ರತಿಭಟನೆಯಿಂದ ಎಚ್ಚೆತ್ತುಕೊಂಡ ಮುಖ್ಯಮಂತ್ರಿ, ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ಒಪ್ಪಿಸಿರುವುದಾಗಿ ಟ್ವೀಟ್‌ ಮಾಡಿದ್ದಾರೆ.

ಈ ಪ್ರಕರಣದಲ್ಲಿ ಶಿವಾಜಿನಗರದ ಶಾಸಕರೂ ಸೇರಿದಂತೆ ಕೆಲವು ಪ್ರಭಾವಿಗಳ ಹೆಸರೂ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಎನ್‌.ಎ. ಹ್ಯಾರಿಸ್‌, ರಿಜ್ವಾನ್‌ ಅರ್ಷದ್, ಅಬ್ದುಲ್‌ ಜಬ್ಬಾರ್‌, ಜಮೀರ್‌ ಅಹಮದ್‌ಖಾನ್‌ ಮತ್ತಿತರ ಕಾಂಗ್ರೆಸ್‌ ನಾಯಕರು ಕುಮಾರಸ್ವಾಮಿ ಅವರನ್ನು ಒತ್ತಾಯಿಸಿದ್ದಾರೆ. ಅಗತ್ವಾದರೆ ಸಿಬಿಐಗೆ ವಹಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

11 ಸಾವಿರ ದೂರು: ಈ ಮಧ್ಯೆ, ಕಂಪನಿಯಲ್ಲಿ ಹಣ ತೊಡಗಿಸಿ ವಂಚನೆಗೆ ಒಳಗಾಗಿರುವ 11 ಸಾವಿರಕ್ಕೂ ಹೆಚ್ಚು ಹೂಡಿಕೆದಾರರು ದೂರು ದಾಖಲಿಸಿದ್ದಾರೆ. ರಾತ್ರಿಯಾದರೂ ಜನ ದೂರು ಕೊಡಲು ಸರದಿ ಸಾಲಿನಲ್ಲಿ ನಿಂತಿದ್ದಾರೆ. ಮೈಸೂರು, ಮಂಗಳೂರು, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ವಿವಿಧ ಸ್ಥಳಗಳಿಂದ ಜನ ದೂರು ದಾಖಲಿಸಲು ದೌಡಾಯಿಸಿದ್ದಾರೆ. ನೆರೆಹೊರೆಯ ರಾಜ್ಯಗಳ ಜನರೂ ಕಂಪನಿಯಲ್ಲಿ ಷೇರು ಹಣ ಹೂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಾರ್ವಜನಿಕರಿಂದ ಕಂಪನಿ ಎಷ್ಟು ಹಣ ಸಂಗ್ರಹಿಸಿದೆ ಎಂದು ಇನ್ನೂ ಅಂದಾಜಿಸಿಲ್ಲ. ಕೇಂದ್ರ, ರಾಜ್ಯ ಸರ್ಕಾರದ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್‌ಟಿ ಮತ್ತು ಎಸ್‌ಜಿಎಸ್‌ಟಿ) ಇಲಾಖೆ, ಆದಾಯ ತೆರಿಗೆ ಇಲಾಖೆ ಬಳಿಯೂ ಐಎಂಎ ಜ್ಯುವೆಲ್ಸ್‌ ಕಂಪನಿ ವಹಿವಾಟು ಕುರಿತು ಮಾಹಿತಿ ಇಲ್ಲ. ದೂರುಗಳು ಬಂದರೆ ಈ ಕುರಿತು ಪರಿಶೀಲನೆ ನಡೆಸುವುದಾಗಿ ಮೂಲಗಳು ತಿಳಿಸಿವೆ.

ಐಎಂಎ ಕಂಪನಿ ವಂಚನೆ ಪ್ರಕರಣ ಕುರಿತು ಗೃಹ ಸಚಿವ ಎಂ.ಬಿ. ಪಾಟೀಲ ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿದರು. ಹಣ ಕಳೆದುಕೊಂಡಿರುವ ಜನರಿಗೆ ನ್ಯಾಯ ಕೊಡಿಸುವ ಸಂಬಂಧ ಸುದೀರ್ಘ ಚರ್ಚೆ ನಡೆಸಿದರು.

ಜನರಿಂದ ಹಣ ಸಂಗ್ರಹಿಸಿ ವಂಚಿಸಿರುವ ಸಂಬಂಧ ಇದುವರೆಗೆ 24 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳನ್ನು ಸಿಐಡಿ ಮತ್ತುಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಂಚನೆ ಪ್ರಕರಣ ವರದಿಯಾದ ಮೇಲೆ ಪೊಲೀಸರ ಗಮನಕ್ಕೆ ಬರುತ್ತಿದೆ. ಹಣಕಾಸು ಕಂಪನಿಗಳಿಗೆ ಪರವಾನಗಿ ಕೊಡುವ ಇಲಾಖೆಗಳ ಜತೆಗೆ ಪೊಲೀಸ್‌ ಇಲಾಖೆಯನ್ನು ಸೇರ್ಪಡೆ ಮಾಡಿದರೆ ಆರಂಭದಲ್ಲೇ ಎಚ್ಚರ ವಹಿಸಲು ಸಾಧ್ಯವಾಗುತ್ತದೆ ಎಂದು ಪಾಟೀಲರು ತಿಳಿಸಿದರು. ಕಂಪನಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಆಸ್ತಿಗಳನ್ನು ಮಾರಾಟ ಮಾಡಿ ಹೂಡಿಕೆದಾರರಿಗೆ ಹಣ ಹಿಂತಿರುಗಿಸಲು ಅನುಕೂಲವಾಗುವಂತೆ ತಮಿಳುನಾಡು ಮಾದರಿಯಲ್ಲಿ ಕಾಯ್ದೆ ರೂಪಿಸಲಾಗುತ್ತಿದೆ ಎಂದೂ ಗೃಹ ಸಚಿವರು ತಿಳಿಸಿದರು.

₹ 17 ಕೋಟಿ ವರ್ಗಾವಣೆ‌

‘ತಲೆಮರೆಸಿಕೊಂಡಿರುವ ಮನ್ಸೂರ್ ಖಾನ್ ಅವರ ಖಾತೆಗೆ ಮಂಗಳವಾರ ಸುಮಾರು ₹ 17 ಕೋಟಿ ಜಮೆ ಆಗಿದ್ದು, ಆ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

‘ಖಾತೆಗೆ ಹಣ ಹಾಕಿದವರು ಯಾರು ಎಂಬ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಂದ ಮಾಹಿತಿಪಡೆಯಲಾಗುತ್ತಿದೆ. ನಗರದ ವಿವಿಧ ಬ್ಯಾಂಕ್‌ಗಳಲ್ಲಿ ಅವರು ಖಾತೆ ಹೊಂದಿದ್ದು, ಒಂದೊಂದಾಗಿ ಜಪ್ತಿ ಮಾಡಲಾಗುತ್ತಿದೆ’ ಎಂದು ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT