ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕಾ ನೀತಿ: ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ

ಪರಿಶಿಷ್ಟ ಜಾತಿ, ಪಂಗಡದ ಉದ್ಯಮಶೀಲರಿಗೆ ಸವಲತ್ತುಗಳ ಅರಿವು ಮೂಡಿಸುವ ಕಾರ್ಯಕ್ರಮ
Last Updated 19 ಸೆಪ್ಟೆಂಬರ್ 2019, 20:46 IST
ಅಕ್ಷರ ಗಾತ್ರ

ಬೆಂಗಳೂರು: ಹೊಸ ಕೈಗಾರಿಕಾ ನೀತಿ ರೂಪಿಸುತ್ತಿದ್ದು, ಕನ್ನಡಿಗರಿಗೆ ಉದ್ಯೋಗ ಅವಕಾಶಗಳನ್ನು ಹೆಚ್ಚಿಸಲು ಅದರಲ್ಲಿ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ಪ್ರಕಟಿಸಿದರು.

ಪರಿಶಿಷ್ಟ ಜಾತಿ, ಪಂಗಡದ ಉದ್ಯಮಶೀಲರಿಗೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ದೊರೆಯುವ ಸವಲತ್ತುಗಳ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪರಿಶಿಷ್ಟರು ಉದ್ಯಮ ಆರಂಭಿಸಲು ಬೇಕಾದ ಜಮೀನು, ನಿವೇಶನವನ್ನು ಕೆಐಎಡಿಬಿ ಮಂಜೂರು ಮಾಡಿದ ನಂತರವೂ ಕೆಎಸ್‌ಎಫ್‌ಸಿಯಿಂದ ಸಾಲ ಸಿಗುತ್ತಿಲ್ಲ. ಹಿಂದಿನಂತೆ ಜಮೀನು ಖರೀದಿಗೆ ಸಾಲ ನೀಡಬೇಕು ಎಂಬ ಬೇಡಿಕೆಗೆ ಸ್ಪಂದಿಸಿದ ಮುಖ್ಯಮಂತ್ರಿ, ಮಂಜೂರಾದ ಜಮೀನು, ನಿವೇಶನವನ್ನೇ ಆಧಾರವಾಗಿ ಇಟ್ಟುಕೊಂಡು ಸಾಲ ನೀಡುವಂತೆ ಸೂಚನೆ ನೀಡುವುದಾಗಿ ಭರವಸೆ ನೀಡಿದರು.

ಪರಿಶಿಷ್ಟ ಉದ್ದಿಮೆದಾರರಿಗೆ ವಿವಿಧ ಮಂಡಳಿ, ನಿಗಮಗಳಿಂದ ಹಂಚಿಕೆಯಾಗುವ ಕೈಗಾರಿಕಾ ನಿವೇಶನ, ಪ್ಲಾಟ್, ಶೆಡ್‌ಗಳನ್ನು ಶೇ 50ರ ರಿಯಾಯಿತಿ ದರದಲ್ಲಿ ನೀಡುತ್ತಿದ್ದು, ಇದನ್ನು ಶೇ 75ಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಸ್ಥಾಪಿಸುವ ಹೊಸ ಕೈಗಾರಿಕಾ ಘಟಕಗಳಿಗೆ ಯೋಜನಾ ವೆಚ್ಚದಲ್ಲಿ ಆರಂಭಿಕ ಬಂಡವಾಳ ಹೂಡಿಕೆಯ ಪಾಲಿನಲ್ಲಿ ಶೇ 50ರಷ್ಟನ್ನು ಬಡ್ಡಿ ರಹಿತವಾಗಿ ಸಾಫ್ಟ್ ಸೀಡ್ ಕ್ಯಾಪಿಟಲ್ ರೂಪದಲ್ಲಿ ಆರ್ಥಿಕ ಸಹಾಯ ನೀಡಲಾಗುವುದು ಎಂದು ಅವರು ಹೇಳಿದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ‘ಪರಿಶಿಷ್ಟರಿಗೆ ಎಲ್ಲ ಕ್ಷೇತ್ರಗಳಲ್ಲಿ ಶೇ 24.1ರಷ್ಟು ಹಣಕಾಸಿನ ನೆರವು ಸಿಗುತ್ತಿದ್ದು, ಈ ಹಣ ಸಮುದಾಯಕ್ಕೆ ಪೂರ್ಣ ಪ್ರಮಾಣದಲ್ಲಿ ತಲುಪಿದರೆ ಮುಂದಿನ ಹತ್ತು ವರ್ಷಗಳಲ್ಲಿ ಆರ್ಥಿಕವಾಗಿ ಸಬಲರಾಗಬಹುದು’ ಎಂದು ಅಭಿಪ್ರಾಯಪಟ್ಟರು.

ಭೂಮಿ ಇಲ್ಲದ ದಲಿತರಿಗೆ ಭೂಮಿ ಖರೀದಿಸಿಕೊಡಲು ಆದ್ಯತೆ ನೀಡಲಾಗಿದ್ದು, ಕಳೆದ ಒಂದು ತಿಂಗಳಲ್ಲಿ ₹200 ಕೋಟಿ ವೆಚ್ಚ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿಯೂ ಆದ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಶಾಸಕರಾದ ಎನ್.ಮಹೇಶ್, ಎಚ್.ಕೆ.ಕುಮಾರಸ್ವಾಮಿ ಉಪಸ್ಥಿತರಿದ್ದರು.

ಮೀಸಲಾತಿ ಬೇಕು: ಹನುಮಂತಯ್ಯ
ಮುಂದುವರೆದ ವರ್ಗದವರಿಗೆ ಸರಿಸಮಾನವಾಗಿ ನಿಲ್ಲುವವರೆಗೂ ಉದ್ಯಮ ಕ್ಷೇತ್ರದಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು. ನಂತರ ಮೀಸಲಾತಿ ಕೇಳುವುದಿಲ್ಲ ಎಂದು ರಾಜ್ಯಸಭೆ ಸದಸ್ಯ ಡಾ.ಎಲ್.ಹನುಮಂತಯ್ಯ ಹೇಳಿದರು.

ಉದ್ದಿಮೆ ಸ್ಥಾಪಿಸಲು ಅರ್ಜಿ ಸಲ್ಲಿಸಿದ ಎಲ್ಲ ಪರಿಶಿಷ್ಟರಿಗೆ ಜಮೀನು ಮಂಜೂರು ಮಾಡಬೇಕು. ರೈತರಿಗೆ ಬಡ್ಡಿ ರಹಿತ ಸಾಲ ಸೌಲಭ್ಯ ನೀಡುತ್ತಿದ್ದು, ಅದೇ ರೀತಿ ದಲಿತ ಸಮುದಾಯದವರು ಉದ್ದಿಮೆ ಆರಂಭಿಸಲು ಬಡ್ಡಿ ರಹಿತ ಸಾಲ ಕೊಡಬೇಕು ಎಂದು ಆಗ್ರಹಿಸಿದರು.

ವೇಕೆಯಲ್ಲಿ ಯಡಿಯೂರಪ್ಪ– ಸಿದ್ದರಾಮಯ್ಯ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವೇದಿಕೆಯಲ್ಲಿ ಅಕ್ಕಪಕ್ಕ ಕುಳಿತಿದ್ದರೂ ಒಬ್ಬರಿಗೊಬ್ಬರು ಮುಖಕೊಟ್ಟು ಮಾತನಾಡಲಿಲ್ಲ. ಯಡಿಯೂರಪ್ಪ ಅವರಂತೂ ಸಿದ್ದರಾಮಯ್ಯ ಕಡೆಗೆ ತಿರುಗಿಯೂ ನೋಡಲಿಲ್ಲ.

ಸಿದ್ದರಾಮಯ್ಯ ಅವರೇ ಒಮ್ಮೆ ಯಡಿಯೂರಪ್ಪ ಅವರ ಕೈಮುಟ್ಟಿ ಮಾತನಾಡಿಸಿದರು. ಅದಕ್ಕೆ ತಲೆ ಅಲ್ಲಾಡಿಸಿ ಮಾತು ಕೇಳಿಸಿಕೊಂಡು ಸುಮ್ಮನಾದರು. ವೇದಿಕೆಯಲ್ಲಿ ಮಾತನಾಡುವ ಸಮಯದಲ್ಲೂ ಕೆಲ ವಿಚಾರ ಪ್ರಸ್ತಾಪಿಸಿ, ಮುಖ್ಯಮಂತ್ರಿ ಕಡೆಗೆ ನೋಡಿದರು. ಆಗಲೂ ಅತ್ತ ಮುಖಕೊಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT