ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಮರಣದಂಡನೆಗೆ ಗುರಿಯಾಗಿದ್ದ ಕೈದಿ ಸಿನಿಮೀಯ ರೀತಿಯಲ್ಲಿ ಪರಾರಿ

Last Updated 24 ಏಪ್ರಿಲ್ 2019, 16:47 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿದ್ದ, ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಮುರುಗೇಶ ಅಲಿಯಾಸ್ ಮುರುಗ ಅಲಿಯಾಸ್ ಕಣ್ಣಮುಚ್ಚಿ ಸೋಮವಾರ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾನೆ.

ತಮಿಳುನಾಡಿನ ಸೇಲಂ ಜಿಲ್ಲೆಯ ಪೆರಿಯಾನಗರದ ಈತ 2015ರ ಮೇ 13ರಿಂದ 2017ರ ಜುಲೈ 23ರವರೆಗೆ ಚಾಮರಾಜನಗರ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ. ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಿಶೇಷ ಪ್ರಕರಣವೊಂದರಲ್ಲಿ ಮರಣದಂಡನೆಗೆ ಗುರಿಯಾಗಿದ್ದರಿಂದ ಆತನನ್ನು ಇಲ್ಲಿನ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು.

2015ರ ಮೇ 11ರಂದು ತಡರಾತ್ರಿ ಕೊಳ್ಳೇಗಾಲ ತಾಲ್ಲೂಕಿನ ಹರಳೆ ಗ್ರಾಮದ ತೋಟದ ಮನೆಯಲ್ಲಿ 8 ವರ್ಷದ ಬಾಲಕಿ ಸೇರಿದಂತೆ ಐವರನ್ನು ವಿಕೃತವಾಗಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದ ಈ ಹಂತಕನಿಗೆ ಚಾಮರಾಜನಗರ ಜಿಲ್ಲಾ ಸೆಷೆನ್ಸ್‌ ನ್ಯಾಯಾಲಯ ಮರಣದಂಡನೆ ವಿಧಿಸಿ ತೀರ್ಪು ನೀಡಿತ್ತು.

‘ಲೋಕಸಭಾ ಚುನಾವಣೆಗೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಬೇಕಾಗಿದ್ದರಿಂದ, ಕಾರಾಗೃಹಕ್ಕೆ ನೀಡಲಾಗಿದ್ದ ಹೋಂ ಗಾರ್ಡ್‌ಗಳು ಹಾಗೂ ಪೊಲೀಸರನ್ನು ಅಲ್ಲಿನ ಕರ್ತವ್ಯದಿಂದ ವಾಪಸ್‌ ಪಡೆದುಕೊಳ್ಳಲಾಗಿತ್ತು. ಕಾರಾಗೃಹದ ಐದಾರು ಮಂದಿಯಷ್ಟೇ ಭದ್ರತೆ ನೋಡಿಕೊಳ್ಳುತ್ತಿದ್ದರು. ಅವರಿಗೆ ಚಳ್ಳೆಹಣ್ಣು ತಿನ್ನಿಸಿ ಆತ ಪರಾರಿಯಾಗಿದ್ದಾನೆ. ಹಲವು ದಿನಗಳಿಂದ ಮಾಡಿಕೊಂಡಿದ್ದ ಪೂರ್ವನಿಯೋಜಿತ ಕೃತ್ಯ ಇದಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಈ ಕಾರಾಗೃಹದ ಬಹುತೇಕ ಕಟ್ಟಡಗಳು ಹಳೆಯವಾಗಿವೆ. ಅವನಿದ್ದ ಕಟ್ಟಡದಲ್ಲಿಯೇ ದೊರೆತ (ವೈರಿಂಗ್ ಮಾಡಲು ಬಳಸುವ ಕೊಳವೆ ಮಾದರಿಯವು) ಹಲವು ಕಬ್ಬಿಣದ ಪೈಪ್‌ಗಳನ್ನು ನೂಲಿನಿಂದ ಜೋಡಿಸಿ ದೊಡ್ಡದಾಗಿ ಮಾಡಿಕೊಂಡು ಅದರ ಸಹಾಯದಿಂದ ಕಾಂಪೌಂಡ್ ಹಾರಿ ತಪ್ಪಿಸಿಕೊಂಡಿದ್ದಾನೆ. ಪೈಪ್‌ನ ಅಲ್ಲಲ್ಲಿ ನೂಲಿನಿಂದ ಸುತ್ತಿದ್ದ ಅದರ ಆಸರೆಯಿಂದ ಮೇಲಕ್ಕೆ ಹತ್ತಿದ್ದಾನೆ. ನಂತರ ಕಾಂಪೌಂಡ್ ಜಿಗಿದಿದ್ದಾನೆ. ಅವನೊಂದಿಗೆ ಹಾರಲು ಇನ್ನೊಬ್ಬ ವಿಫಲ ಯತ್ನ ನಡೆಸಿದ್ದಾನೆ. ಇನ್ನೂ ನಾಲ್ವರು ತಪ್ಪಿಸಿಕೊಳ್ಳಲು ಇಂಥಾದ್ದೇ ಯೋಜನೆ ರೂಪಿಸಿದ್ದರು ಎನ್ನುವುದು ಬುಧವಾರ ನಡೆಸಿದ ವಿಚಾರಣೆಯಿಂದ ತಿಳಿದುಬಂದಿದೆ. ಚುನಾವಣೆ ಸಂದರ್ಭದಲ್ಲಿ ಎಲ್ಲ ಗಮನ ಆ ಕಡೆ ಇರುತ್ತದೆ; ಅದಲ್ಲೇ, ಜೈಲಿನಲ್ಲಿ ಹೆಚ್ಚಿನ ಭದ್ರತೆ ಇರುವುದಿಲ್ಲ ಎನ್ನುವುದನ್ನು ತಿಳಿದು ಅವರು ಯೋಜನೆ ರೂಪಿಸಿದ್ದರು’ ಎಂದು ಗೊತ್ತಾಗಿದೆ.

‘ಪರಾರಿಯಾಗಿರುವ ಶಿಕ್ಷಾ ಬಂಧಿಯು ಅನೇಕ ಪ್ರಕರಣಗಳಲ್ಲಿ ಬೇಕಾಗಿದ್ದಾನೆ. ಆತನನ್ನು ಪತ್ತೆ ಹಚ್ಚಿಕೊಟ್ಟರಿಗೆ ಆಕರ್ಷಕ ಬಹುಮಾನ ನೀಡಲಾಗುವುದು’ ಎಂದು ಕಾರಾಗೃಹ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT