ಬುಧವಾರ, ಜುಲೈ 6, 2022
21 °C

ರೈಲುಗಳ ನಿಯಂತ್ರಣ, ಹಳಿ ನಿರ್ವಹಣೆಯಲ್ಲಿ ಮಹಿಳೆ

ಎನ್. ನವೀನ್ ಕುಮಾರ್ Updated:

ಅಕ್ಷರ ಗಾತ್ರ : | |

ಪ್ರಪಂಚದಲ್ಲೇ ಅತಿಹೆಚ್ಚು ರೈಲು ಜಾಲವನ್ನು ಹೊಂದಿರುವ ಭಾರತೀಯ ರೈಲ್ವೆ ಇಲಾಖೆಯಲ್ಲಿ ಮಹಿಳೆಯರೂ ಪುರುಷರಿಗೆ ಸರಿಸಮನಾಗಿ, ಶ್ರಮದಾಯಕ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ನೈರುತ್ಯ ರೈಲ್ವೆ ವಲಯದ ಮೈಸೂರು ವಿಭಾಗದಲ್ಲಿ ಇಂತಹ ನೂರಾರು ಮಹಿಳೆಯರು ಕಾಣಸಿಗುತ್ತಾರೆ.

ರೈಲಿನ ಆತ್ಮವೆಂದೇ ಕರೆಯುವ ಹಳಿಗಳನ್ನು ಸುಸ್ಥಿತಿಯಲ್ಲಿ ಇಡುವಂತಹ ‘ಟ್ರಾಕ್ ವುಮೆನ್’ನಿಂದ ಹಿಡಿದು, ಸಾವಿರಾರು ಜನರನ್ನು ಕರೆದೊಯ್ಯುವ ಬೋಗಿಗಳ ರಿಪೇರಿ, ಸ್ಟೇಷನ್‌ ಮಾಸ್ಟರ್‌ನಂತಹ ಕೆಲಸಗಳನ್ನೂ ಲೀಲಾಜಾಲವಾಗಿ ನಿಭಾಯಿಸುತ್ತಿದ್ದಾರೆ.

ಮೈಸೂರು ರೈಲು ನಿಲ್ದಾಣಕ್ಕೆ ಬರುವ, ಇಲ್ಲಿಂದ ಹೊರಡುವ ರೈಲುಗಳನ್ನು ನಿಯಂತ್ರಿಸುವ ಕೆಲಸವನ್ನು ಸ್ಟೇಷನ್ ಮಾಸ್ಟರ್‌ಗಳು ಮಾಡುತ್ತಾರೆ. ಇಲ್ಲಿ ಅಸಿಸ್ಟೆಂಟ್ ಸ್ಟೇಷನ್ ಮಾಸ್ಟರ್ ಆಗಿರುವ ನಾಗಮಣಿ ಪ್ರಸಾದ್ ಅವರು ಕಳೆದ 26 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.


ಮೈಸೂರು ರೈಲು ನಿಲ್ದಾಣದಲ್ಲಿ ಸ್ಟೇಷನ್‌ ಮಾಸ್ಟರ್‌ ಆಗಿರುವ ನಾಗಮಣಿ ಪ್ರಸಾದ್‌

ಪಕ್ಕದ ನಿಲ್ದಾಣದಿಂದ ರೈಲು ಹೊರಟ ಬಳಿಕ ಈ ನಿಲ್ದಾಣದಲ್ಲಿ ಯಾವ ಪ್ಲಾಟ್‌ಫಾರ್ಮ್‌ಗೆ ಬರಬೇಕು ಎಂಬುದನ್ನು ಡೆಪ್ಯುಟಿ ಸ್ಟೇಷನ್ ಮ್ಯಾನೇಜರ್ ಜೊತೆ ಚರ್ಚಿಸುತ್ತಾರೆ. ಅವರ ಸೂಚನೆ ಮೇರೆಗೆ ಸಿಗ್ನಲ್ ನೀಡುತ್ತಾರೆ. ಆ ಹಳಿಯಲ್ಲಿ ಈಗಾಗಲೇ ಇನ್ನೊಂದು ರೈಲು ಇದ್ದರೆ ಅದನ್ನು ಕ್ಲಿಯರ್ ಮಾಡಿ ಇಟ್ಟುಕೊಳ್ಳಬೇಕು. ರೈಲು ಹೊರಡಲು ಸಿಗ್ನಲ್ ಸಹ ನೀಡುತ್ತಾರೆ.

ಕೆಲ ರೈಲುಗಳು ಇಲ್ಲಿಗೆ ಬಂದ ಬಳಿಕ ಅವು ಒಂದೆರಡು ಗಂಟೆ ನಂತರ ಹೊರಡುತ್ತವೆ. ಅಂತಹ ರೈಲುಗಳನ್ನು ನಿಲ್ದಾಣದ ಪಕ್ಕದಲ್ಲೇ ಇರುವ ಹಳಿಗಳಿಗೆ ಸ್ಥಳಾಂತರ ಮಾಡುವುದನ್ನು ಶೆಂಟಿಂಗ್ ಮೂವ್‌ಮೆಂಟ್ ಎನ್ನುತ್ತಾರೆ. ಈ ಸಂದರ್ಭದಲ್ಲಿ ಸ್ಟೇಷನ್ ಮಾಸ್ಟರ್‌ ಲೋಕೊಪೈಲಟ್‌ ಜತೆ ನೇರವಾಗಿ ಮಾತನಾಡಿ ಸೂಚನೆ ನೀಡುತ್ತಾರೆ.

ಸ್ಟೇಷನ್‌ ಮಾಸ್ಟರ್‌ ವೃತ್ತಿ ಸವಾಲಿನ ಕೆಲಸ. ಸ್ವಲ್ಪ ಎಚ್ಚರ ತಪ್ಪಿದರೂ ಸಾವಿರಾರು ಜನರಿಗೆ ಸಮಸ್ಯೆ ಉಂಟಾಗುತ್ತದೆ. ಬೆಳಿಗ್ಗೆ ಐದೈದು ನಿಮಿಷಕ್ಕೂ ರೈಲುಗಳು ಬಂದು ಹೋಗುತ್ತಿರುತ್ತವೆ. ಯಾವುದಾದರೂ ಒಂದು ರೈಲಿನ ಮೂವ್‌ಮೆಂಟ್ ತಪ್ಪಾದರೂ ಉಳಿದ ರೈಲುಗಳು ಹೊರಡುವುದು ತಡವಾಗುತ್ತವೆ. ಹೀಗಾಗಿ, ಜಾಗರೂಕವಾಗಿ ಸೂಚನೆಗಳನ್ನು ನೀಡಬೇಕು ಎನ್ನುತ್ತಾರೆ ನಾಗಮಣಿ.


ಮೈಸೂರು ರೈಲು ನಿಲ್ದಾಣದಲ್ಲಿ ಬಾಕ್ಸಿಂಗ್‌ ಕೆಲಸದಲ್ಲಿ ನಿರತವಾಗಿದ್ದ ಮಂಜುಳಾ

ಟ್ರಾಕ್ ವುಮೆನ್ ಮಂಜುಳಾ: ರೈಲ್ವೆ ಇಲಾಖೆಯ ಆತ್ಮವೆಂದೇ ಹಳಿಗಳನ್ನು ಕರೆಯುತ್ತಾರೆ. ಹಳಿಗಳು ಸುಸ್ಥಿತಿಯಲ್ಲಿ ಇದ್ದರೆ ರೈಲುಗಳು ಸರಾಗವಾಗಿ ಚಲಿಸುತ್ತವೆ. ಅನಾಹುತಗಳು ತಪ್ಪುತ್ತವೆ. ಕಾಂಕ್ರೀಟ್ ಸ್ಲೀಪರ್ ಸುತ್ತಲೂ ಹರಡಿಕೊಂಡಿರುವ ಜಲ್ಲಿಕಲ್ಲನ್ನು ವ್ಯವಸ್ಥಿತವಾಗಿ ಬ್ಲಾಕಿಂಗ್ ಮಾಡುವುದು, ಹಳಿಗಳ ಬಳಿ ಬೆಳೆದಿರುವ ಗಿಡಗಳನ್ನು ಕತ್ತರಿಸುವುದು, ಕ್ಲಿಪ್ ಹಾಗೂ ಪಾಯಿಂಟ್‌ಗಳಿಗೆ ಗ್ರೀಸ್ ಹಾಕುವಂತಹ ಕೆಲಸವನ್ನು ಮಂಜುಳಾ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಪುರುಷರೇ ಈ ಕೆಲಸವನ್ನು ಹೆಚ್ಚಾಗಿ ಮಾಡುತ್ತಾರೆ.

ಮಂಜುಳಾ ಅವರು ‘ಟ್ರಾಕ್ ವುಮೆನ್’ ಆಗಿ ನಂಜನಗೂಡು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತುರ್ತು ಕಾರ್ಯ ಇದ್ದಾಗ ಮೈಸೂರು ನಗರ ವ್ಯಾಪ್ತಿಯಲ್ಲೂ ಕೆಲಸ ಮಾಡುತ್ತಾರೆ. ಪ್ರತಿ ಗ್ಯಾಂಗ್‌ನಲ್ಲಿ 10 ಮಂದಿ ಇರುತ್ತಾರೆ. ಇವರೆಲ್ಲಾ ಪ್ರತಿದಿನ 6 ಕಿ.ಮೀ.ವರೆಗೆ ಬ್ಲಾಕಿಂಗ್, ಗಿಡ ತೆರವು, ಗ್ರೀಸ್ ಹಾಕುವ ಕೆಲಸ ಮಾಡುತ್ತಾರೆ. ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಕೆಲಸ ಮಾಡಬೇಕು. ಬಿಸಿಲು, ಮಳೆ, ಗಾಳಿ ಎನ್ನದೆ ಕೆಲಸ ಮಾಡುತ್ತಾರೆ. ಕೆಲವೆಡೆ ವಿಶ್ರಾಂತಿ ಕೊಠಡಿ, ನೀರಿನ ಸೌಲಭ್ಯ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ.

‘ನಾನು ಮೈಸೂರಿನ ಅಶೋಕಪುರಂ ಕ್ವಾಟ್ರರ್ಸ್‌ನಲ್ಲಿ ವಾಸವಾಗಿದ್ದೇನೆ. ಇಬ್ಬರು ಹೆಣ್ಣು ಮಕ್ಕಳಿದ್ದಾರೆ. 21 ವರ್ಷದ ಮಗಳು ಬುದ್ಧಿಮಾಂದ್ಯೆ. 18 ವರ್ಷದ ಮತ್ತೊಬ್ಬ ಮಗಳಿಗೆ ಮೂರ್ಛೆ ರೋಗವಿದೆ. ಹೀಗಾಗಿ, ಬೇರೆ ಕೆಲಸ ನೀಡಬೇಕು ಎಂದು ಅವರು ಮನವಿ ಮಾಡುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು