ಯಕ್ಷಗಾನ ಕಲಾವಿದ ಜಲವಳ್ಳಿ ವೆಂಕಟೇಶ ರಾವ್‌ ನಿಧನ

ಮಂಗಳವಾರ, ಮಾರ್ಚ್ 26, 2019
33 °C

ಯಕ್ಷಗಾನ ಕಲಾವಿದ ಜಲವಳ್ಳಿ ವೆಂಕಟೇಶ ರಾವ್‌ ನಿಧನ

Published:
Updated:
Prajavani

ಕಾರವಾರ: ಪ್ರಸಿದ್ಧ ಯಕ್ಷಗಾನ ಕಲಾವಿದ, ಹೊನ್ನಾವರದ ಜಲವಳ್ಳಿ ವೆಂಕಟೇಶ ರಾವ್‌ (86) ಮಂಗಳವಾರ ನಿಧನರಾದರು. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರನ್ನು ಶಿರಸಿಯ ಟಿಎಸ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬಡಗುತಿಟ್ಟಿನ ಗುಂಡಬಾಳ, ಗೋಳಿಗರಡಿ, ಕೊಳಗಿಬೀಸ್‌, ಕಮಲಶಿಲೆ, ಇಡಗುಂಜಿ ಮುಂತಾದ ಯಕ್ಷಗಾನ ಮೇಳಗಳಲ್ಲಿ ಅವರು 24 ವರ್ಷ ಬಣ್ಣ ಹಚ್ಚಿದ್ದರು. ಸಾಲಿಗ್ರಾಮ ಮೇಳದಲ್ಲಿ ಕೂಡ 20 ವರ್ಷಕ್ಕೂ ಅಧಿಕ ಕಾಲ ಪ್ರಧಾನ ಪಾತ್ರಧಾರಿಯಾಗಿದ್ದರು. ತೆಂಕುತಿಟ್ಟಿನ ಸುರತ್ಕಲ್‌ ಮೇಳದಲ್ಲೂ ಗುರುತಿಸಿಕೊಂಡಿದ್ದರು. ಅವರು ಸುಮಾರು 60 ವರ್ಷ ಯಕ್ಷಗಾನ ರಂಗದಲ್ಲಿ ಸಕ್ರಿಯರಾಗಿದ್ದರು.

ರಾವಣ, ಭೀಮ, ಶನಿ, ಈಶ್ವರ, ಸುದರ್ಶನ ಮೊದಲಾದ ಪಾತ್ರಗಳಲ್ಲಿ ಮಿಂಚಿದ್ದ ಅವರು ಯಕ್ಷಗಾನ ರಂಗದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಪ್ರಸಿದ್ಧ ಭಾಗವತ ದಿವಂಗತ‌ ಕಾಳಿಂಗ ನಾವಡ ಅವರಿಗೂ ನೆಚ್ಚಿನ ಕಲಾವಿದರಾಗಿದ್ದರು. ಯಕ್ಷಗಾನದ ಮತ್ತೊಬ್ಬ ಮೇರು ಕಲಾವಿದ ದಿವಂಗತ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರೊಂದಿಗೆ ಜೋಡಿ ಪಾತ್ರಗಳನ್ನೂ ಮಾಡಿ ಖ್ಯಾತಿ ಗಳಿಸಿದ್ದರು. ತಮ್ಮ ಗಂಭೀರವಾದ ಧ್ವನಿಯಿಂದಲೇ ಪಾತ್ರಗಳಿಗೆ ಮತ್ತಷ್ಟು ಜೀವ ತುಂಬುತ್ತಿದ್ದರು. ಅವರ ಪುತ್ರ ವಿದ್ಯಾಧರ ಜಲವಳ್ಳಿ ಕೂಡ ಬಡಗುತಿಟ್ಟಿನ ಕಲಾವಿದರಾಗಿದ್ದಾರೆ.

ಬುಧವಾರ ಬೆಳಿಗ್ಗೆ ಜಲವಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !