ಮಂಗಳವಾರ, ಆಗಸ್ಟ್ 3, 2021
28 °C
ಶ್ರಮಿಕ ವರ್ಗದ ಪಡಿಪಾಟಲು ತೆರೆದಿಟ್ಟ ಕರ್ನಾಟಕ ಜನಶಕ್ತಿ ಸಂಘಟನೆ ಸಮೀಕ್ಷೆ

ಲಾಕ್‌ಡೌನ್‌ | ಶೇ 79ರಷ್ಟು ಶ್ರಮಿಕರಿಗೆ ಸಿಗದ ಸೌಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಲಾಕ್‌ಡೌನ್ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿದವರಲ್ಲಿ ಬಹುಪಾಲು ಶ್ರಮಿಕ ವರ್ಗದವರು. ಅವರಿಗೆ ಜೀವನಾವಶ್ಯಕ ವಸ್ತುಗಳನ್ನು ತಲುಪಿಸಲಾಗಿದೆ ಎಂದು ಸರ್ಕಾರ ಹೇಳುತ್ತಿದ್ದರೂ ಶೇ 79.09ರಷ್ಟು ಜನರಿಗೆ ಅವುಗಳು ದೊರೆತೇ ಇಲ್ಲ.

ಲಾಕ್‌ಡೌನ್ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸಿರುವ ಕರ್ನಾಟಕ ಜನಶಕ್ತಿ ಸಂಘಟನೆ ಈ ಕುರಿತು ಬಿಡುಗಡೆ ಮಾಡಿದ ವರದಿಯಲ್ಲಿ ಶ್ರಮಿಕರ ಪಡಿಪಾಟಲನ್ನು ವಿವರಿಸಲಾಗಿದೆ.  

‘ತಮಗೆ ನೆರವಾಗುವಂತಹದ್ದು ಸರ್ಕಾರದ ಬಳಿ ಇಲ್ಲವೇನೊ ಎಂದುಕೊಂಡ ವಲಸೆ ಕಾರ್ಮಿಕರು, ಹುತ್ತ ಒಡೆದಾಗ ಹೊರ ಬರುವ ಇರುವೆಗಳಂತೆ ಬೀದಿಗೆ ಬಂದರು’ ಎಂದು ಸಮೀಕ್ಷಾ ವರದಿಯಲ್ಲಿ ವಿವರಿಸಲಾಗಿದೆ. ಕಾರ್ಮಿಕರು ಊರುಗಳಿಗೆ ಹೋಗಲು ನಡೆಸಿದ ಪ್ರಯತ್ನ, ಅನುಭವಿಸಿದ ಸಂಕಷ್ಟಗಳನ್ನು ಸಹ ಸಮೀಕ್ಷಾ ತಂಡ ತನ್ನ ವರದಿಯಲ್ಲಿ ಹಿಡಿದಿಟ್ಟಿದೆ.

ಅಧ್ಯಯನದ ಪ್ರಕಾರ, ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇ 79.9ರಷ್ಟು ಶ್ರಮಿಕ ವರ್ಗಕ್ಕೆ ಜೀವನಾವಶ್ಯಕ ವಸ್ತುಗಳು ದೊರೆತಿಲ್ಲ. ಶೇ 82ರಷ್ಟು ಜನರಿಗೆ ಆಹಾರ ಪೂರೈಕೆಯಾಗಿಲ್ಲ. ಮುಂದಿನ ಒಂದು ತಿಂಗಳಿಗೆ ಬೇಕಾಗುವಷ್ಟು ದಿನಸಿ ಖರೀದಿಸಲು ಹಣ ಇಲ್ಲ. ಪಡಿತರ ಚೀಟಿ ಇದ್ದವರಿಗೆ ಕೊಡಲಾದ ಹೆಚ್ಚುವರಿ ಅಕ್ಕಿ ಮತ್ತು ಗೋಧಿಯಿಂದ ಮಾತ್ರ ನಡೆಸಲು ಸಾಧ್ಯವಾಗಿದೆ.

‘ಲಾಕ್‌ಡೌನ್ ಕಾರಣದಿಂದ ರಾಜ್ಯದ ಶೇ 62ರಷ್ಟು ಜನ ತಾತ್ಕಾಲಿಕವಾಗಿ ಉದ್ಯೋಗ ಕಳೆದುಕೊಂಡಿದ್ದಾರೆ. ಅವರಲ್ಲಿ ಒಂದಷ್ಟು ಜನರ ಉದ್ಯೋಗ ಶಾಶ್ವತವಾಗಿ ನಷ್ಟವಾಗುವ ಸಾಧ್ಯತೆಯೂ ಇದೆ’ ಎಂದು ಹೇಳಿದೆ.

‘ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ 92.97ರಷ್ಟು ಮಂದಿಗೆ ಆರೋಗ್ಯ ತಪಾಸಣೆ ಮಾಡಿಲ್ಲ. ಕೊರೊನಾ ಪರೀಕ್ಷೆಯಂತೂ ಇಲ್ಲ. ಗರ್ಭಿಣಿ ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರ, ಪುಟ್ಟ ಮಕ್ಕಳಿಗೆ ಲಸಿಕೆ ಕಾರ್ಯಕ್ರಮಗಳು ಬಹುತೇಕ ನಡೆದಿಲ್ಲ’ ಎಂದು ವಿವರಿಸಿದೆ.

‘ತೊಂದರೆಯಲ್ಲಿದ್ದವರಿಗೆ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಶೇ 94.53ರಷ್ಟು ಜನರು ಹೇಳಿದರೆ, ಜನಪ್ರತಿನಿಧಿಗಳೂ ನೆರವಿಗೆ ಬರಲಿಲ್ಲ ಎಂದು ಶೇ 91.92ರಷ್ಟು ಜನ ತಿಳಿಸಿದ್ದಾರೆ. ವಲಸೆ ಕಾರ್ಮಿಕರಿಗೆ ಆಹಾರ ಮತ್ತವರ ಪ್ರಯಾಣದ ವಿಷಯದಲ್ಲಿ ಅತ್ಯಂತ ಅಮಾನವೀಯವಾಗಿ ನಡೆದುಕೊಂಡಿರುವುದು ಜನಶಕ್ತಿಗೆ ಹೆಲ್ಪ್‌ಲೈನ್‌ನಲ್ಲೇ ಅನುಭವಕ್ಕೆ ಬಂದಿದೆ’ ಎಂದು ವರದಿ ಹೇಳಿದೆ.

‘ಗ್ರಾಮೀಣ ಶ್ರಮಜೀವಿ ಸಮುದಾಯಗಳು ಎಲ್ಲಾ ರೀತಿಯ ಕಷ್ಟಗಳನ್ನೂ ಅನುಭವಿಸಿದರು. ಸಣ್ಣ, ಅತಿಸಣ್ಣ ಮತ್ತು ಮಧ್ಯಮ ವರ್ಗದ ರೈತರಲ್ಲಿ ಶೇ 73.15 ಜನರು ತಾವು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ನಷ್ಟ ಅನುಭವಿಸಿದರು. ಮುಂಗಾರು ಹಂಗಾಮಿಗೆ ಬಿತ್ತನೆ ಮಾಡಲು ಬಂಡವಾಳ ಇಲ್ಲ ಎಂದು ಶೇ 94.95 ಮಂದಿ ಅಳಲು ತೋಡಿಕೊಂಡಿದ್ದಾರೆ’ ಎಂದು ಸಮೀಕ್ಷೆ ತಿಳಿಸಿದೆ.

‘ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರಲ್ಲಿ ಶೇ 76.64 ಜನರಿಗೆ ಕೂಲಿ ಸಿಕ್ಕಿಲ್ಲ. ಲಾಕ್‌ಡೌನ್ ತೆರವಾದ ಬಳಿಕ ಅಸಂಘಟಿತ ಕಾರ್ಮಿಕರಲ್ಲಿ ಶೇ 59.9 ಮಂದಿ ಅದೇ ಕೆಲಸ ಮುಂದುವರಿಯಲು ಅವಕಾಶ ಸಿಗುವುದು ಅನುಮಾನ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಶೇ 47.66 ಜನರಿಗೆ ಸಂಬಳ ಸಿಕ್ಕಿಲ್ಲ. ಅಸಂಘಟಿತ ಕಾರ್ಮಿಕರು ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆ ಎಂದರೆ ಆಹಾರದ ಕೊರತೆ ಎಂದು ಶೇ 71ರಷ್ಟು ಜನರು ಅಭಿಪ್ರಾಯಪಟ್ಟದ್ದಾರೆ. ಬೀದಿಬದಿ ವ್ಯಾಪಾರಿಗಳ, ಮಹಿಳಾ ಕಾರ್ಮಿಕರ ಸ್ಥಿತಿ ಇದಕ್ಕೆ ಹೊರತಾಗಿಲ್ಲ’ ಎಂದು ವರದಿ ಹೇಳಿದೆ.

‘ಜಾತ್ರೆಗಳು ಮತ್ತು ಸಂತೆಗಳನ್ನೇ ನಂಬಿ ಬದುಕು ನಡೆಸುವ ಅಲೆಮಾರಿ ಸಮುದಾಯಗಳಿಗೆ ಉಂಟಾದ ನಷ್ಟ ಲೆಕ್ಕ ಹಾಕಲು ಸಾಧ್ಯವಿಲ್ಲ. ಈ ಸಮುದಾಯಗಳ ಶೇ 95ರಷ್ಟು ಜನರಿಗೆ ಸರ್ಕಾರದ ಯಾವುದೇ ನೆರವು ಸಿಕ್ಕಿಲ್ಲ. ಮೊದಲೇ ಅಂಚಿಗೆ ತಳ್ಳಲ್ಪಟ್ಟ ಲೈಂಗಿಕ ಅಲ್ಪಸಂಖ್ಯಾತರು, ಲೈಂಗಿಕ ಕಾರ್ಯಕರ್ತರು, ದೇವದಾಸಿ ಮಹಿಳೆಯರ ಸ್ಥಿತಿ ಘೋರವಾಗಿದೆ. ಶೇ 85ರಷ್ಟು ಲಿಂಗತ್ವ ಅಲ್ಪಸಂಖ್ಯಾತರಿಗೆ ಯಾವುದೇ ಸಹಾಯ ದೊರೆತಿಲ್ಲ’ ಎಂದು ಸಮೀಕ್ಷೆ ಹೇಳಿದೆ.

ವರದಿಯಲ್ಲಿನ ಶಿಫಾರಸುಗಳು
* ಶ್ರೀಮಂತರಿಗೆ ಶೇ 2ರಷ್ಟು ತುರ್ತು ಕೊರೊನಾ ತೆರಿಗೆ ವಿಧಿಸಬೇಕು.
* ಜೀವನಾವಶ್ಯಕ್ಕೆ ಬೇಕಿರುವ ಕನಿಷ್ಟ ಮೊತ್ತವನ್ನು ಬಿಪಿಎಲ್‌ ಕಾರ್ಡುದಾರರ ಖಾತೆಗೆ  ವರ್ಗಾವಣೆ ಮಾಡಬೇಕು.
* ಪಡಿತರ ಚೀಟಿ ಇರುವ ಮತ್ತು ಇಲ್ಲದವರಿಗೆ ಅಕ್ಕಿ, ಗೋದಿ ಮಾತ್ರವಲ್ಲದೆ ಜೀವನಾವಶ್ಯಕ ಆಹಾರ ಸಾಮಗ್ರಿಗಳನ್ನು ವಿತರಿಸಬೇಕು.
* ಬೀದಿ ಬದಿ ವ್ಯಾಪಾರಿಗಳು, ಟ್ಯಾಕ್ಸಿ ಚಾಲಕರು, ಆಟೊ ಚಾಲಕರು, ಸಣ್ಣ ಪುಟ್ಟ ಉದ್ದಿಮೆಗಳ ಉದ್ಯೋಗಸ್ಥರಿಗೆ ಸಹಾಯಧನ ನೀಡಬೇಕು.
* ಆರೋಗ್ಯ ಸಲಕರಣೆಗಳ ಪೂರೈಕೆಗೆ ತು‌ರ್ತು ಕ್ರಮ ಕೈಗೊಳ್ಳಬೇಕು.
* ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಬೇಕು. 
* ಗ್ರಾಮೀಣ ಆರ್ಥಿಕ ಪುನಶ್ಚೇತನಕ್ಕೆ ವಿಶೇಷ ಆದ್ಯತೆಯ ಮೇಲೆ ಕ್ರಮ ಕೈಗೊಳ್ಳಬೇಕು.
* ನಗರ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೆ ತರಬೇಕು.
* ವಲಸೆ ಕಾರ್ಮಿಕರ ಸರ್ವೆ ಮತ್ತು ದಾಖಲಾತಿ ನಡೆಯಬೇಕು
* ಸಣ್ಣ-ಮಧ್ಯಮ ಉದ್ದಿಮೆಗಳಿಗೆ ವಿಶೇಷ ಪ್ಯಾಕೇಜ್ ನೀಡಬೇಕು

ಅಂಕಿ ಅಂಶ
ಸಮೀಕ್ಷೆಗೆ ಒಳಪಟ್ಟವರು; 1,387
ಗ್ರಾಮೀಣ ಶ್ರಮಜೀವಿಗಳು; 384
ಅಸಂಘಟಿತ ಕಾರ್ಮಿಕರು; 255
ಮಹಿಳಾ ಕಾರ್ಮಿಕರು; 284
ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳು; 464
ವಲಸೆ ಕಾರ್ಮಿಕರು; 84

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು