ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟ ವಿಸ್ತರಣೆ: ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ ಎಂದ ಜೆ.ಸಿ.ಮಾಧುಸ್ವಾಮಿ

Last Updated 26 ಜನವರಿ 2020, 7:02 IST
ಅಕ್ಷರ ಗಾತ್ರ

ತುಮಕೂರು: ಸಚಿವ ಸಂಪುಟ ವಿಸ್ತರಣೆ ಮಾಡುವಾಗ ನಮ್ಮ ನಾಯಕರು 'ಬಂದವರಿಗೆ ಅವಕಾಶ ನೀಡಲು, ನೀವು ಸ್ಥಾನ ತ್ಯಾಗ ಮಾಡಬೇಕು' ಎಂದು ಸೂಚಿಸಿದರೆ, ತುಂಬಾ ಸಂತೋಷದಿಂದ ಒಪ್ಪಿಕೊಳ್ಳುತ್ತೇನೆ. ಬಹಳ ಖುಷಿಯಿಂದ ತ್ಯಾಗ ಮಾಡುತ್ತೇನೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಪಕ್ಷ ಹೇಳಿದರೆ ಶಾಸಕ ಸ್ಥಾನವನ್ನೂ ಬಿಟ್ಟು ಕೊಡಲು ಸಿದ್ಧನಿದ್ದೇನೆ. ಪಕ್ಷ ಮತ್ತು ಸರ್ಕಾರದ ಹಿತಕ್ಕಾಗಿ ಸಚಿವ ಸ್ಥಾನ ಬಿಟ್ಟುಕೊಟ್ಟರೆ ನನಗೆ ಬಹಳ ಹರ್ಷವಾಗುತ್ತದೆ ಎಂದು ತಿಳಿಸಿದರು.

‘ಫೆ.15 ರಿಂದ 21ರ ವರೆಗೆ ಮತ್ತು ಮಾರ್ಚ್ 2 ರಿಂದ 5 ರ ವರೆಗೆ ವಿಧಾನಸಭಾ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ. ಫೆ.15 ರಂದು ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ನಂತರದ ದಿನಗಳಲ್ಲಿ ಭಾಷಣದ ಮೇಲೆ ಚರ್ಚೆ ನಡೆಯಲಿದೆ. ಮಾರ್ಚ್ 2ರಂದು ಎರಡ್ಮೂರು ಮಸೂದೆ ಮಂಡನೆ ಮಾಡುಬೇಕು ಅಂದುಕೊಂಡಿದ್ದೇವೆ. ಅವುಗಳ ಬಗ್ಗೆ ಶಾಸಕರಿಗೆ ಮೊದಲೇ ತಿಳಿಸುತ್ತೇವೆ. ಅವುಗಳನ್ನು ಶಾಸಕರು ಅಧ್ಯಯನ ಮಾಡಿಕೊಂಡು ಸದನಕ್ಕೆ ಬಂದರೆ, ಉತ್ತಮ ಚರ್ಚೆಗಳನ್ನು ನಡೆಸಬಹುದು ಎಂಬುದು ನಮ್ಮ ಸದಾಶಯ. ಮಾರ್ಚ್ 5ರಂದು ರಾಜ್ಯ ಬಜೆಟ್ ಮಂಡನೆ ಆಗಲಿದೆ’ ಎಂದು ಅವರು ಮಾಹಿತಿ ನೀಡಿದರು.

ಕಾನೂನು ಪಾಲನೆಯಿಂದ ಸಂಘರ್ಷಕ್ಕೆ ಕೊನೆ

ನಮ್ಮ ದೇಶದ ಸಂವಿಧಾನ ಪರಿಪೂರ್ಣ ಅಲ್ಲ ಎಂಬ ಕಾರಣಕ್ಕಾಗಿಯೇ ಬದಲಾವಣೆಗೆ ಅದರ ರಚನಕಾರರೇ ಅವಕಾಶ ಕಲ್ಪಿಸಿದ್ದಾರೆ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ತುಮಕೂರು ಜಿಲ್ಲಾಡಳಿತ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು.

ಜನರ ಕಲ್ಯಾಣ ಮತ್ತು ಹಿತ ಕಾಯಲು ಸಂವಿಧಾನದಲ್ಲಿ ಈಗಾಗಲೇ ಹಲವು ಬಾರಿ ಬದಲಾವಣೆ ಆಗಿವೆ. ಸಹಿಷ್ಣುತೆ, ಸಮಾಜವಾದ, ಸಮತವಾದ ನಮ್ಮ ಸಂವಿಧಾನದ ಪ್ರಮುಖಾಂಶಗಳು. ಅವುಗಳನ್ನು ಅನುಸರಿಸಿದರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂದರು.
ಎಲ್ಲರೂ ಕಾನೂನನ್ನು ಗೌರವಿಸಬೇಕು. ಪಾಲಿಸಬೇಕು. ಆಗ ಸಂಘರ್ಷ ಇರುವುದಿಲ್ಲ. ಘರ್ಷಣೆ ಇರುವುದಿಲ್ಲ ಎಂದು ಕಿವಿಮಾತು ಹೇಳಿದರು.

ಒಂದು ಕಾಲದಲ್ಲಿ ನಮ್ಮವರು ನಗ್ನರಾಗಿ ಎದುರಾಳಿಗಳಿಂದ ಗುಂಡೇಟು ತಿನ್ನುತ್ತಿದ್ದರು. ಈಗ ಜಗತ್ತಿನ ಮೂರನೆಯ ಸೇನಾ ಶಕ್ತಿ ನಮ್ಮದಾಗಿದೆ. ಇದಕ್ಕೆ ಸ್ವಾತಂತ್ರ್ಯ ನಂತರದ ಎಲ್ಲ ಸರ್ಕಾರಗಳ ಕೊಡುಗೆ ಇದೆ ಎಂದು ಹೇಳಿದರು.

ತುಮಕೂರಿನಲ್ಲಿ ಈಗಿರುವ ಅಂತರಸನಹಳ್ಳಿ ಮತ್ತು ವಸಂತನರಸಪುರ ಕೈಗಾರಿಕಾ ಪ್ರದೇಶದೊಂದಿಗೆ ಇನ್ನೂ ಮೂರು ತಾಲ್ಲೂಕುಗಳಲ್ಲಿ ಕೈಗಾರಿಕಾ ಪ್ರದೇಶಗಳನ್ನು ಸ್ಥಾಪಿಸಲು ಚಿಂತನೆ ನಡೆದಿದೆ ಎಂದು ಅವರು ಅಭಿವೃದ್ಧಿ ಕಾರ್ಯದ ಮುಂದಾಲೋಚನೆ ಬಿಚ್ಚಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT