ಗುರುವಾರ , ಡಿಸೆಂಬರ್ 5, 2019
21 °C

ಎವರಿ ಡೇ ಈಸ್ ನಾಟ್ ಎ ಸಂಡೇ | ಜನ ಬದಲಾವಣೆ ಬಯಸಿದ್ದಾರೆ–ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎವರಿ ಡೇ ಈಸ್ ನಾಟ್ ಎ ಸಂಡೆ... ಜನ ಬದಲಾವಣೆ ಬಯಸಿದ್ದಾರೆ. ಯಡಿಯೂರಪ್ಪರವರನ್ನು ಹೇಗೆ ತೆಗೆಯಬೇಕು ಎಂದು ಕೇಂದ್ರ ನಾಯಕರು ಕಾಯುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡು ಮಾತನಾಡಿ, ಮಹಾಲಕ್ಷ್ಮಿ ಲೇಔಟ್ ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸವನ್ನು ಮೊದಲಿನಿಂದಲೂ ಎಚ್‍ಡಿಡಿ ಮಾಡುತ್ತಿದ್ದರು. ಈ ಕ್ಷೇತ್ರದ ನಾಯಕ ರಾಜಣ್ಣ ನನಗಿಂತಲೂ ಹಿರಿಯರು. ಅವರನ್ನೇ ಅಭ್ಯರ್ಥಿ ಮಾಡಬೇಕು ಎಂದು ಅಂದುಕೊಂಡಿದ್ದೆವು. ಪಕ್ಷದ ಎಲ್ಲ ನಾಯಕರ ಜತೆ ಚರ್ಚಿಸಿ ಗಿರೀಶ್ ಅವರನ್ನು ಆಯ್ಕೆ ಮಾಡಿದ್ದೇವೆ ಎಂದರು.

ನನ್ನಿಂದ ಬೆಳೆದ ನಾಯಕರು ಸ್ವಾರ್ಥ ರಾಜಕೀಯ ಮಾಡುತ್ತಿದ್ದಾರೆ. ರಾಜಣ್ಣ ಅವರು ರಾಜಕೀಯವಾಗಿ ಬೆಳೆಯಲು ಸಮರ್ಥರಿದ್ದರು. ಈ ಕ್ಷೇತ್ರದಲ್ಲಿ ಒಕ್ಕಲಿಗರ ಮತದಾರರ ಸಂಖ್ಯೆ ಇದೆ. ಹಾಗಾಗಿ ಒಕ್ಕಲಿಗ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸಿ ಎಂಬ ಕೂಗು ಇತ್ತು. ನಮ್ಮದು ಜಾತ್ಯತೀತ ಪಕ್ಷ. ಒಕ್ಕಲಿಗ ಅಭ್ಯರ್ಥಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿದರೆ ಹೇಗೆ? ಅದಕ್ಕಾಗಿ ವೀರಶೈವ ಜನಾಂಗದ ಗಿರೀಶ್ ಅವರಿಗೆ ಟಿಕೆಟ್ ಕೊಟ್ಟೆವು ಎಂದು ಹೇಳಿದರು.

ಇಲ್ಲಿನ ಬಿಜೆಪಿ ಅಭ್ಯರ್ಥಿ ಜನರನ್ನು ಯಾವ ರೀತಿ ದುರುಪಯೋಗ ಪಡಿಸಿಕೊಂಡರು ಎಂಬುದು ತಿಳಿದಿದೆ. ಆ ವ್ಯಕ್ತಿ ಹಿನ್ನೆಲೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ನಮ್ಮಿಂದ ಬದಲಾದ ಆ ವ್ಯಕ್ತಿ. ಆದರೆ ಹುಟ್ಟುಗುಣ ಹೋಗುವುದಿಲ್ಲ ನಾವೇನು ಮಾಡುವುದಕ್ಕೆ ಆಗುವುದಿಲ್ಲ, ಯಾರ್ಯಾರಿಗೆ ಧಮ್ಕಿ ಹಾಕುತ್ತಿದ್ದಾರೆ, ಯಾರ್ಯಾರಿಗೆ ಚೂರಿ ಹಾಕುತ್ತಿದ್ದಾರೆ, ಪೋಲೀಸರನ್ನು ಇಟ್ಟುಕೊಂಡು ಯಾವ ರೀತಿ ಕೆಲಸ ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ. ಕೆಲವರಿಗೆ ಭಯ ಇದೆ. ಭಯದಿಂದ ಹೊರಗಡೆ ಬರುತ್ತಿಲ್ಲ. ಈ ಕ್ಷೇತ್ರದ ಕಾರ್ಪೊರೇಟರ್ ಭದ್ರೇಗೌಡರಿಗೆ ಯಾವ ರೀತಿ ಧಮ್ಕಿ ಹಾಕಿದ್ದರು ಎನ್ನುವುದು ಗೊತ್ತಿದೆ. ರಾಜಣ್ಣ ನಿನ್ನೆ ನಾಮಪತ್ರ ವಾಪಸ್ ಪಡೆದುಕೊಂಡಿದ್ದಾರೆ. ಅವರು ಸ್ವಪ್ರೇರಣೆಯಿಂದ ನಮ್ಮ ಅಭ್ಯರ್ಥಿಗೆ ಬೆಂಬಲ ಕೊಡುತ್ತಾರೆ ಎಂದು ಹೇಳಿದರು.

ಸದಾನಂದ ಗೌಡರು ಬೆವರು ಸುರಿಸಿ ರಾಜಕೀಯ ಮಾಡುತ್ತಿಲ್ಲ. ಅವರು ಕಷ್ಟಪಟ್ಟು ಅಧಿಕಾರಕ್ಕೆ ಬಂದಿಲ್ಲ. ಮೋದಿಯವರ ಹೆಸರು ಹೇಳಿ ಅಧಿಕಾರಕ್ಕೆ ಬಂದವರು. ಅವರ ರೀತಿ ಯಾರದ್ದೋ ಹೆಸರು ಹೇಳಿ ರಾಜಕೀಯ ಮಾಡುತ್ತಿಲ್ಲ ಎಂದು ಟಾಂಗ್ ನೀಡಿದರು.

ನಮ್ಮ‌ ಕುಟುಂಬದಿಂದ 8 ತಾರಾ ಪ್ರಚಾರಕರು ಆಗಿದ್ದಕ್ಕೆ ಕೆಲವರು ಟೀಕೆ ಮಾಡುತ್ತಾರೆ. ಆದರೆ ನಿನ್ನೆ ನಾನು ಹುಣಸೂರಿಗೆ ಹೋದಾಗ ಜನರೇ ನಿಖಿಲ್‌ನನ್ನು ಕಳುಹಿಸಿ ಎನ್ನುತ್ತಿದ್ದಾರೆ. ಜನರೇ ಬಯಸಿದ್ದಾರೆ ಹೊರತು ನಾವಾಗಿಯೇ ಪ್ರಚಾರಕರಾಗಿಲ್ಲ. ನಾವು ಬೆವರು ಸುರಿಸಿ ಪಕ್ಷವನ್ನು ಕಟ್ಟುತ್ತಿದ್ದೇವೆ. ಲೋಕಸಭಾ ಚುನಾವಣಾ ಫಲಿತಾಂಶದ ಲೆಕ್ಕಾಚಾರದಲ್ಲಿ ಯಡಿಯೂರಪ್ಪನವರು 15 ಕ್ಷೇತ್ರದಲ್ಲಿ ಗೆದ್ದಿದ್ದೇವೆ ಎಂದು ಹೇಳುತ್ತಿದ್ದಾರೆ. ಎವರಿ ಡೇ ಈಸ್ ನಾಟ್ ಎ ಸಂಡೆ... ಜನ ಬದಲಾವಣೆ ಬಯಸಿದ್ದಾರೆ. ಮತದಾರರು ಬುದ್ಧಿವಂತರಿದ್ದಾರೆ. ಏನಾಗುತ್ತದೆ ಎಂದು 9ನೇ ತಾರೀಖಿನಂದು ಗೊತ್ತಾಗುತ್ತದೆ. ಯಡಿಯೂರಪ್ಪರವರನ್ನು ಹೇಗೆ ತೆಗೆಯಬೇಕು ಎಂದು ಕೇಂದ್ರ ನಾಯಕರು ಕಾಯುತ್ತಿದ್ದಾರೆ ಎಂದರು.

ಮೊನ್ನೆ ನಡೆದ ಕ್ಯಾಬಿನೆಟ್‌ನಲ್ಲಿ ಇದು ನನ್ನ ಕೊನೆಯ ಕ್ಯಾಬಿನೆಟ್, ನಿಮಗೂ ಕೊನೆ ಕ್ಯಾಬಿನೆಟ್ ಆಗಬಹುದು ಎಂದು ಯಾಕೆ ಹೇಳಿದರು? ಇದರಿಂದಾಗಿ ಅವರಿಗೆ ಎಷ್ಟೊಂದು ಆತಂಕ ಇದೆ ಎನ್ನುವುದು ತಿಳಿಯುತ್ತದೆ ಎಂದು ಕಿಡಿಕಾರಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು