ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಿನಲ್ಲೇ ಯೇಸು ಪ್ರತಿಮೆ ನಿರ್ಮಾಣ ಯೋಜನೆ

ಕಾಂಕ್ರೀಟ್‌ ನಿರ್ಮಾಣ ಕೈಬಿಟ್ಟ ಟ್ರಸ್ಟ್‌: ಚೆನ್ನೈ ಐಐಟಿಯಿಂದ ಶೀಘ್ರ ವರದಿ
Last Updated 30 ಡಿಸೆಂಬರ್ 2019, 23:12 IST
ಅಕ್ಷರ ಗಾತ್ರ

ರಾಮನಗರ: ಕನಕಪುರ ತಾಲ್ಲೂಕಿನ ಹಾರೋಬೆಲೆಯ ಕಪಾಲ ಬೆಟ್ಟದಲ್ಲಿ ನಿರ್ಮಾಣ ಆಗಲಿರುವ ಯೇಸುವಿನ ಪ್ರತಿಮೆ ಬರೋಬ್ಬರಿ 114 ಅಡಿ ಎತ್ತರ ಇರಲಿದೆ. ಸ್ಥಳೀಯವಾಗಿ ಲಭ್ಯವಿರುವ ಕಲ್ಲುಗಳನ್ನೇ ಬಳಸಿಕೊಂಡು ಇದರ ನಿರ್ಮಾಣಕ್ಕೆ ಯೋಜನೆ ರೂಪಿಸಿರುವುದು ವಿಶೇಷ.

ಈ ಮೊದಲು ಸಂಪೂರ್ಣ ಕಾಂಕ್ರೀಟ್‌ನಲ್ಲಿ ಪ್ರತಿಮೆ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು. ಆದರೆ, ದೀರ್ಘಕಾಲೀನ ಬಾಳಿಕೆಯ ದೃಷ್ಟಿಯಿಂದ ಕಲ್ಲಿನ ಪ್ರತಿಮೆಯನ್ನೇ ನಿರ್ಮಿಸುವ ನಿರ್ಧಾರಕ್ಕೆ ಬರಲಾಯಿತು. ಬೆಂಗಳೂರಿನ ಶಿಲ್ಪಿ ವಿಜಿಕರ್‌ ಈ ಪ್ರತಿಮೆ ವಿನ್ಯಾಸದ ಜವಾಬ್ದಾರಿ ಹೊತ್ತಿದ್ದಾರೆ. ದಾನಿಗಳ ನೆರವಿನಿಂದ ಐದು ವರ್ಷಗಳಲ್ಲಿ ಇದರ ನಿರ್ಮಾಣ ಕಾಮಗಾರಿ ಮುಗಿಸುವ ಗುರಿ ಹೊಂದಲಾಗಿದೆ.

‘ಕಪಾಲ ಬೆಟ್ಟದಲ್ಲಿ ಶತಮಾನದಿಂದ ಪೂಜೆ ಸಲ್ಲಿಸುತ್ತಾ ಬಂದಿದ್ದೇವೆ. ಯೇಸು ಪುನರುತ್ಥಾನದ ನೆನಪಿಗಾಗಿ ಇಲ್ಲೊಂದು ಪ್ರತಿಮೆ ನಿರ್ಮಿಸುವುದು ನಮ್ಮ ಉದ್ದೇಶ. ತಮಿಳುನಾಡಿನ ತಿರುವಳ್ಳುವರ್‌ ಪ್ರತಿಮೆ ಮಾದರಿಯಲ್ಲಿ ನಿರ್ಮಾಣಕ್ಕೆ ಉದ್ದೇಶಿಸಿದ್ದೆವು. ಕಾಂಕ್ರೀಟ್‌ನಲ್ಲಿ ಕಟ್ಟಬೇಕು ಎಂದು ಯೋಜಿಸಲಾಗಿತ್ತು. ಸುರಕ್ಷತೆ ದೃಷ್ಟಿಯಿಂದ ಕಲ್ಲಿನಲ್ಲೇ ನಿರ್ಮಿಸಲಾಗುತ್ತಿದೆ. ಇದು ಏಕಶಿಲೆ ಪ್ರತಿಮೆ ಅಲ್ಲ. ಹಂತಹಂತವಾಗಿ ಕಾಮಗಾರಿ ನಡೆಯಲಿದೆ. ಇದನ್ನು ಪ್ರವಾಸಿ ತಾಣವಾಗಿಸುವ ಉದ್ದೇಶವಿದೆ’ ಎಂದು ಯೋಜನೆ ರೂವಾರಿಗಳಲ್ಲಿ ಒಬ್ಬರಾದ ಹಾರೋಬೆಲೆಯ ಮುಖಂಡ ಚಿನ್ನುರಾಜ್‌ ತಿಳಿಸಿದರು.

‘ಪ್ರತಿಮೆ ವೆಚ್ಚ ಮತ್ತಿತರ ಸಂಗತಿಗಳು ಇನ್ನೂ ಅಂತಿಮಗೊಂಡಿಲ್ಲ. ಚೆನ್ನೈನ ಐಐಟಿ ಪ್ರಾಧ್ಯಾಪಕರು ಇಲ್ಲಿನ ಮಣ್ಣು ಮೊದಲಾದ ಸಮೀಕ್ಷೆ ನಡೆಸಿ ವರದಿ ನೀಡಲಿದ್ದಾರೆ’ ಎಂದು ತಿಳಿಸಿದರು.

ಏನಿದು ಕಪಾಲ: ‘ಯೇಸುವನ್ನು ಶಿಲುಬೆಗೆ ಏರಿಸಿದ ಅತಿ ಎತ್ತರದ ಪ್ರದೇಶವನ್ನು ಕಾಲವಾರಿ ಬೆಟ್ಟ ಎಂದು ಕರೆಯುತ್ತೇವೆ. ಇದನ್ನೇ ಕನ್ನಡದಲ್ಲಿ ಕಪಾಲ ಬೆಟ್ಟ ಎಂದು ಗುರುತಿಸಿದ್ದೇವೆ. ಈ ಬೆಟ್ಟದಲ್ಲಿ 1906ರಿಂದ ಈವರೆಗೂ ಪ್ರತಿ ಗುಡ್‌ ಫ್ರೈಡೆ ದಿನದಂದು ಬೆಟ್ಟಕ್ಕೆ ಹೋಗಿ ಅಲ್ಲಿ ಯೇಸುವನ್ನು ಶಿಲುಬೆಗೆ ಏರಿಸುವ ರೂಪಕವನ್ನು ಪ್ರದರ್ಶಿಸುತ್ತಾ ಬರಲಾಗಿದೆ’ ಎನ್ನುತ್ತಾರೆ ಅವರು.

‘ಈ ಭಾಗದಲ್ಲಿ 1660ರಿಂದಲೇ ಕ್ರಿಶ್ಚಿಯನ್‌ ಸಮುದಾಯ ವಾಸವಿದೆ. ಆ ಸಂದರ್ಭದಲ್ಲಿ ನಡೆದ ಪತ್ರ ವ್ಯವಹಾರ
ಗಳ ದಾಖಲೆಗಳೂ ಇವೆ. 650–700 ಕ್ರಿಶ್ಚಿಯನ್‌ ಕುಟುಂಬಗಳು ಇಲ್ಲಿದ್ದು, ಯಾವತ್ತೂ ನಮ್ಮ ಧರ್ಮ–ಜಾತಿ ಪ್ರಶ್ನಿಸಿರಲಿಲ್ಲ’ ಎಂದು ಹೇಳುತ್ತಾರೆ.

ಭೂ ಪರಿವರ್ತನೆ ಶುಲ್ಕದಲ್ಲಿ ವಿನಾಯಿತಿ
‘ಜಮೀನು ಕೋರಿ ಮೂರು ವರ್ಷದ ಹಿಂದೆ ಸರ್ಕಾರಕ್ಕೆ ಪತ್ರ ಬರೆದಿದ್ದೆವು. 2018ರ ಫೆಬ್ರುವರಿಯಲ್ಲಿ ಸರ್ಕಾರ 10 ಎಕರೆ ಜಮೀನು ನೀಡಿತು. ಇದಕ್ಕೆ ₹22 ಲಕ್ಷ ಶುಲ್ಕ ವಿಧಿಸಲಾಗಿತ್ತು. ಧಾರ್ಮಿಕ ಸಂಸ್ಥೆಯಾದ್ದರಿಂದ ಭೂ ಪರಿವರ್ತನೆ ಶುಲ್ಕಕ್ಕೆ ವಿನಾಯಿತಿ ಕೋರಿ ಮತ್ತೊಮ್ಮೆ ಮನವಿ ಮಾಡಿದೆವು. ಎಚ್‌.ಡಿ. ಕುಮಾರಸ್ವಾಮಿ ಸಂಪುಟದಲ್ಲಿ ಇದಕ್ಕೆ ಅನುಮೋದನೆ ದೊರೆತು ₹10.80 ಲಕ್ಷಕ್ಕೆ ಇಳಿಕೆಯಾಯಿತು. ಈ ವೆಚ್ಚವನ್ನಷ್ಟೇ ಕಾಂಗ್ರೆಸ್‌ ಶಾಸಕ ಡಿ.ಕೆ. ಶಿವಕುಮಾರ್ ಭರಿಸಿದ್ದಾರೆ. ಸರ್ಕಾರದ ಭೂ ಮಂಜೂರಾತಿ ಆದೇಶದಲ್ಲೇ ಯೇಸುವಿನ ಪ್ರತಿಮೆ ನಿರ್ಮಾಣಕ್ಕೆ ಜಾಗ ಎಂದು ನಮೂದಿಸಲಾಗಿದೆ. ಈ ವಿಷಯವನ್ನು ಸರ್ಕಾರದಿಂದ ಮುಚ್ಚಿಟ್ಟಿಲ್ಲ’ ಎಂದು ಕಪಾಲಬೆಟ್ಟ ಅಭಿವೃದ್ಧಿ ಟ್ರಸ್ಟ್‌ ಪದಾಧಿಕಾರಿಗಳು ತಿಳಿಸಿದರು.

*
ಚೆನ್ನೈ ಐಐಟಿ ಪ್ರಾಧ್ಯಾಪಕರು ಸ್ಥಳ ಪರಿಶೀಲನೆ ಮಾಡಿ ವರದಿ ನೀಡಲಿದ್ದಾರೆ. ಆ ಬಳಿಕ ಪ್ರತಿಮೆ ನಿರ್ಮಾಣದ ಅಂತಿಮ ರೂಪುರೇಷೆ ಸಿದ್ಧವಾಗಲಿದೆ.
-ಚಿನ್ನುರಾಜ್‌, ಕ್ರೈಸ್ತ ಮುಖಂಡ, ಹಾರೋಬೆಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT