ಮಂಗಳವಾರ, ಏಪ್ರಿಲ್ 20, 2021
26 °C
ಸಚಿವರಾದ ನಂತರ ಮೊದಲ ಬಾರಿಗೆ ಹುಬ್ಬಳ್ಳಿಗೆ ಬಂದ ಅವರಿಗೆ ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ

ಸುಗಮ ಸಂಸತ್ ಕಲಾಪಕ್ಕೆ ವಿರೋಧ ಪಕ್ಷಗಳ ಸಹಕಾರ ಬೇಕು: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ದೇಶದ ಬಹುಕಾಲದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಸತ್‌ನಲ್ಲಿ ಗುಣಾತ್ಮಕ ಚರ್ಚೆಗಳು ನಡೆಯಬೇಕಿದ್ದು, ಅದಕ್ಕೆ ಎಲ್ಲ ವಿರೋಧ ಪಕ್ಷಗಳು ಸಹಕಾರ ನೀಡಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ ಜೋಶಿ ಮನವಿ ಮಾಡಿದರು.

ಸಚಿವರಾದ ನಂತರ ಮೊದಲ ಬಾರಿಗೆ ಭಾನುವಾರ ತವರು ಜಿಲ್ಲೆಗೆ ಬಂದ ಅವರು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಡಿದರು. ಸುದೀರ್ಘ 40 ದಿನಗಳ ಕಾಲ ಸಂಸತ್ ಅಧಿವೇಶನ ನಡೆಯಲಿದೆ. ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಜನರು ನಿರೀಕ್ಷಿಸಿದ್ದಾರೆ. ಅದಕ್ಕೆ ತಕ್ಕಂತೆ ವಿರೋಧ ಪಕ್ಷಗಳು ಸಹಕಾರ ನೀಡಬೇಕು. ಯಾವುದೇ ವಿಷಯದ ಬಗ್ಗೆ ಚರ್ಚೆ ನಡೆಸಲು ಸರ್ಕಾರ ತಯಾರಿದೆ. ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳ ಹಿರಿಯ ಮುಖಂಡರನ್ನು ಖುದ್ದಾಗಿ ಭೇಟಿಯಾಗಿ ಸಹಕಾರ ಕೋರುತ್ತೇನೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಪ್ರಹ್ಲಾದ ಜೋಶಿ ಹುಬ್ಬಳ್ಳಿಗೆ: ಅದ್ಧೂರಿಗೆ ಸ್ವಾಗತ ಕೋರಿದ ಕಾರ್ಯಕರ್ತರು​

ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸುವ ಸಂಬಂಧ ಮಹಾರಾಷ್ಟ್ರ ಮುಖ್ಯಮಂತ್ರಿ ಜೊತೆ ಮಾತನಾಡುತ್ತೇನೆ. ಡಿ.ಕೆ. ಶಿವಕುಮಾರ್ ಅವರು ಬರುವುದಾದರೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿಸುತ್ತೇನೆ. ನೀರಿಗೆ ಬದಲಾಗಿ ನೀರು ಬಿಡಬೇಕು ಎಂಬುದು ಮಹಾರಾಷ್ಟ್ರದ ಬೇಡಿಕೆಯಾಗಿದೆ. ಆ ಬಗ್ಗೆ ಒಪ್ಪಂದ ಆಗಬೇಕು ಎಂದು ಅವರು ಹೇಳುತ್ತಾರೆ. ಈ ಎಲ್ಲ ವಿಷಯಗಳನ್ನು ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬದ್ಧನಿದ್ದೇನೆ. ಈ ವಿಷಯದಲ್ಲಿ ಕರ್ನಾಟಕ ಸರ್ಕಾರ ಸಹ ಪ್ರತಿ ಸ್ಪಂದಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮಹದಾಯಿಗೆ ಸಂಬಂಧಿಸಿದಂತೆ ನ್ಯಾಯಮಂಡಳಿಯ ತೀರ್ಪಿನ ಅಧಿಸೂಚನೆ ಹೊರಡಿಸಲು ಅವಕಾಶ ಇದೆಯೇ ಎಂಬುದನ್ನು ಕಾನೂನು ತಜ್ಞರ ಜೊತೆಗೂಡಿ ಚರ್ಚಿಸಬಹುದು. ಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವರು ದೆಹಲಿಗೆ ಬರುವುದಾದರೆ ಅಧಿಕಾರಿಗಳ ಹಾಗೂ ಕಾನೂನು ತಜ್ಞರ ಸಭೆ ಏರ್ಪಡಿಸುತ್ತೇನೆ. ಈ ವಿಷಯದಲ್ಲಿ ಯಾರೂ ಸಹ ರಾಜಕೀಯ ಮಾಡಬಾರದು ಎಂದದರು.

ಅತಿ  ಹೆಚ್ಚು ಕಲ್ಲಿದ್ದಲು ಮೀಸಲು ಹೊಂದಿರುವ ವಿಶ್ವದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ ಎರಡನೇ ಸ್ಥಾನವಿದೆ. ಆದರೆ, ನೀತಿ ನಿರೂಪಣೆಯಲ್ಲಿಯ ಲೋಪದಿಂದಾಗಿ ದೇಶದಲ್ಲಿ ಒಟ್ಟು 2 ಲಕ್ಷ ಮಿಲಿಯನ್ ಟನ್ ಕಲ್ಲಿದ್ದಲಿನ ಕೊರತೆ ಇದೆ. ದೇಶದಲ್ಲಿ ಶೇ84ರಷ್ಟು ಸರಾಸರಿ ಸಂಗ್ರಹವಿದ್ದರೆ, ರಾಜ್ಯದಲ್ಲಿ ಶೇ86ರಷ್ಟು ಅಂದರೆ ಶೇ2ರಷ್ಟು ಹೆಚ್ಚಾಗಿದೆ. ಕಲ್ಲಿದ್ದಲು ಕೊರತೆ ನಿವಾರಿಸಲು ಇರುವ ಅಡೆತಡೆಗಳನ್ನು ನಿವಾರಿಸಿ, ಸಂಗ್ರಹ ಪ್ರಮಾಣ ಶೇ100ರಷ್ಟು ಮುಟ್ಟಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.

ಪ್ರಹ್ಲಾದ ಜೋಶಿ ಅವರಿಗೆ ಆತ್ಮೀಯ– ಅದ್ಧೂರಿ ಸ್ವಾಗತ ಕೋರಿದ ಕಾರ್ಯಕರ್ತರು ಮೆರವಣಿಗೆಯಲ್ಲಿ ಕರೆದೊಯ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು