ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19 ಹಾಟ್‌ಸ್ಪಾಟ್‌ಗೆ ಕಾರಣವಾಗಿದ್ದ ಜುಬಿಲಂಟ್‌ ಪುನರಾರಂಭಕ್ಕೆ ಒಪ್ಪಿಗೆ

ನಂಜನಗೂಡು ಕಂಪನಿ
Last Updated 22 ಮೇ 2020, 1:56 IST
ಅಕ್ಷರ ಗಾತ್ರ

ಬೆಂಗಳೂರು:ಮೈಸೂರು ಜಿಲ್ಲೆಯು ಕೋವಿಡ್‌–19 ‘ಹಾಟ್‌ಸ್ಪಾಟ್‌’ ಆಗಲು ಮುಖ್ಯ ಕಾರಣ ಎಂಬ ಟೀಕೆಗೆ ಗುರಿಯಾಗಿದ್ದ ನಂಜನಗೂಡಿನ ‘ಜುಬಿಲಂಟ್‌ ಜೆನೆರಿಕ್‌’ ಔಷಧ ತಯಾರಿಕಾ ಘಟಕದ ಪುನರಾರಂಭಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.

ಕೋವಿಡ್‌–19 ಚಿಕಿತ್ಸೆಗೆ ಬಳಸುವ ಔಷಧವೂ ಸೇರಿದಂತೆ ಹಲವು ಮಹತ್ವದ ಔಷಧಗಳಿಗೆ ದೇಶ– ವಿದೇಶಗಳಿಂದ ವ್ಯಾಪಕ ಬೇಡಿಕೆ ಇರುವುದರಿಂದ ತಕ್ಷಣವೇ ಘಟಕ ಆರಂಭಿಸಲು ಅನುಮತಿ ನೀಡಬೇಕು ಎಂದು ಕಂಪನಿ ಸರ್ಕಾರಕ್ಕೆ ಮನವಿ ಮಾಡಿತ್ತು. ಹಿರಿಯ ಅಧಿಕಾರಿಗಳು ಮುಖ್ಯಮಂತ್ರಿಯವರ ಜತೆ ಚರ್ಚಿಸಿ ಸಮ್ಮತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ನಮ್ಮ ಸಂಸ್ಥೆಯು ಜೀವ ರಕ್ಷಕವಾಗಿರುವ 46 ಬಗೆಯ ಅತ್ಯಾವಶ್ಯಕ ಔಷಧಗಳನ್ನು ತಯಾರಿಸುತ್ತದೆ. ಅವುಗಳೆಂದರೆ, ಅಝಿಥ್ರೊಮೈಸಿನ್‌, ಲೋರ್ಸಾತನ್, ವಲ್ಸತ್ರಾನ್, ಇಬ್ರೆಸ್ರಾತನ್, ಕಾರ್ಬಮಜೆಪೈನ್‌. ಅಲ್ಲದೆ, ಕೋವಿಡ್‌–19 ಚಿಕಿತ್ಸೆಗೆ ಬಳಸುವ ಅಝಿಥ್ರೊಮೈಸಿನ್‌ ಡೈಹೈಡ್ರೇಟ್‌ ಮತ್ತು ಅಝಿಥ್ರೊಮೈಸಿನ್‌ ಮೊನೊಹೈಡ್ರೇಟ್‌ ಕೂಡಾ ತಯಾರಿಸುತ್ತದೆ’ ಎಂದು ಕಂಪನಿ ಸರ್ಕಾರಕ್ಕೆ ಮನವಿ ಮಾಡಿತ್ತು.

ಅಲ್ಲದೆ, ಕೋವಿಡ್‌–19 ಚಿಕಿತ್ಸೆಗೆ ಬಳಸುವ ರೆಮ್‌ಡೆಸಿವಿರ್‌ ಅನ್ನು ಭಾರತದಲ್ಲಿ ಉತ್ಪಾದಿಸಲು ಜಿಲೆಡ್‌ ಸೈನ್ಸ್‌ ಅನುಮತಿ ನೀಡಿದೆ. ಇದಕ್ಕೆ ಯುಎಸ್‌ಎಫ್‌ಡಿಎ ತುರ್ತು ದೃಢೀಕರಣವನ್ನೂ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್‌–1 ಚಿಕಿತ್ಸೆಗೆ ರೆಮ್‌ಡೆಸಿವಿರ್‌ ಬಳಸಲು ಸಮ್ಮತಿ ನೀಡಿದೆ. ಈ ಔಷಧದ ಪೂರೈಕೆಗೆ ತತ್‌ಕ್ಷಣವೇ ಉತ್ಪಾದನಾ ಘಟಕವನ್ನು ತುರ್ತಾಗಿ ಆರಂಭಿಸಲೇಬೇಕಾಗಿದೆ. ಕೋವಿಡ್‌–19 ಸೋಂಕಿತರನ್ನು ಗುಣಮುಕ್ತರನ್ನಾಗಿಸುವಲ್ಲಿ ಇದು ಮಹತ್ವದ ಔಷಧವಾಗಿದೆ’ ಎಂದು ಕಂಪನಿಯ ಪ್ರಮುಖರು ಸರ್ಕಾರಕ್ಕೆ ಮನವರಿಕೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಔಷಧ ತಯಾರಿಕಾ ಘಟಕ ಕಾರ್ಯಾರಂಭಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೋಂಕು ನಿವಾರಕಗಳನ್ನು ಬಳಸಿ ಸ್ವಚ್ಛ ಮಾಡಿಡಲಾಗಿದೆ. ಸರ್ಕಾರ ಸೂಚಿಸಿರುವ ಮಾರ್ಗಸೂಚಿಗಳನ್ನು ಚಾಚೂ ತಪ್ಪದೆ ಪಾಲಿಸಲಾಗುತ್ತಿದೆ ಎಂದು ಹೇಳಿದೆ.

ರಾಜ್ಯದಲ್ಲಿ ಕೋವಿಡ್‌–19 ಸೋಂಕು ಆರಂಭವಾದ ಸಂದರ್ಭದಲ್ಲಿ ಜುಬಿಲಂಟ್‌ನ ವ್ಯಕ್ತಿಯೊಬ್ಬರಲ್ಲಿ ಪಾಸಿಟಿವ್‌ ಇರುವುದು ಕಂಡು ಬಂದಿತು. ಇವರಿಂದಾಗಿ ಕಂಪನಿಯಲ್ಲಿ ಹಲವರಿಗೆ ಸೋಂಕು ಹರಡಿತು. ಆ ಮೂಲಕ ಮೈಸೂರಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಅತ್ಯಂತ ವೇಗವಾಗಿ ಏರಿಕೆಯಾಯಿತು. ವೈರಾಣು ಹರಡಲು ಮೂಲ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು, ತನಿಖೆ ನಡೆಸಲಾಯಿತು. ಆದರೆ,ಕೊನೆಗೂ ಅದರ ಮೂಲವೇ ಪತ್ತೆ ಆಗಲಿಲ್ಲ ಎಂದು ಸರ್ಕಾರಕ್ಕೆ ವರದಿ ಸಲ್ಲಿಕೆಯಾಯಿತು.

61 ರಿಂದ ಶೂನ್ಯದತ್ತ ಕೊರೊನಾ
ಮಾರ್ಚ್‌ 26 ರಂದು ಒಬ್ಬ ನೌಕರನಲ್ಲಿ ಕೋವಿಡ್‌–19 ಇರುವುದು ಪತ್ತೆ ಆಯಿತು. ಇದರ ಬೆನ್ನಲ್ಲೇ ಇನ್ನೂ ಹಲವು ಸಿಬ್ಬಂದಿ ಮತ್ತು ಅವರ ಕುಟುಂಬಗಳ ಸದಸ್ಯರಲ್ಲಿ ಕೋವಿಡ್‌–19 ಪರೀಕ್ಷೆ ನಡೆಸಿದಾಗ ಪಾಸಿಟಿವ್‌ ಇರುವುದು ಪತ್ತೆ ಆಯಿತು. ಆ ಬಳಿಕ ಒಟ್ಟು 1,551 ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಶೇ 96 ರಷ್ಟು ಜನರಲ್ಲಿ ನೆಗೆಟಿವ್‌ ಫಲಿತಾಂಶ ಬಂದಿತು.

61 ಜನರಲ್ಲಿ ಪಾಸಿಟಿವ್‌ ಇತ್ತು. ಆದರೆ, ರೋಗ ಲಕ್ಷಣ ಇರಲಿಲ್ಲ. ಇವರಲ್ಲಿ ಮೊದಲ ಹಂತದಲ್ಲಿ 59 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಹಿಂದಿರುಗಿದರು. ಆ ಬಳಿಕ ಉಳಿದವರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದರು. ಆ ಬಳಿಕಒಂದೇ ಒಂದು ಕೋವಿಡ್‌ ಪ್ರಕರಣ ಪತ್ತೆ ಆಗಿಲ್ಲ ಎಂದು ಜುಬಿಲೆಂಟ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT