ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದ್ರಿ ಗೋಪಾಲನಾಥ್ ಮಂಗಳವಾದ್ಯದ ಮಾಂತ್ರಿಕ!

ನಾದ ಶಿಖರಕ್ಕೇರಿದ ವಾದ್ಯ ಸಂತ!
Last Updated 12 ಅಕ್ಟೋಬರ್ 2019, 2:41 IST
ಅಕ್ಷರ ಗಾತ್ರ

ಬೆಂಗಳೂರು: ಒಂದು ಸಂಗೀತ ವಾದ್ಯದಲ್ಲಿ ಏನೆಲ್ಲ ಪ್ರಯೋಗಗಳನ್ನು ಮಾಡಬಹುದೋ ಅವಷ್ಟನ್ನೂ ಮಾಡಿ ‘ಮಂಗಳವಾದ್ಯದ ಮೋಡಿಗಾರ’ ಎಂಬ ಅನ್ವರ್ಥಕ್ಕೆ ಪಾತ್ರರಾದ ಸಂಗೀತ ಶಿಖರ ಕದ್ರಿ ಗೋಪಾಲನಾಥ್‌.

ಹಾಗೆ ನೋಡಿದರೆ ಸುಷಿರ ವಾದ್ಯ ಸ್ಯಾಕ್ಸೊಫೋನ್‌ ಬೆಲ್ಜಿಯಂ ಮೂಲದ್ದು. ಒಮ್ಮೆ ಮೈಸೂರಿನಲ್ಲಿ ಬ್ಯಾಂಡ್‌ಸೆಟ್‌ನಲ್ಲಿ ಈ ವಾದ್ಯ ನೋಡಿದ ಕದ್ರಿ ಅವರು ಅದಕ್ಕೆ ಮಾರುಹೋದ ಫಲವೇ ಇಂದು ಕದ್ರಿ ಗೋಪಾಲನಾಥ್‌ ಈ ವಾದ್ಯದಲ್ಲಿ ಮೇರು ಶಿಖರವಾಗಿ ನಿಂತದ್ದು.

ಸ್ಯಾಕ್ಸೊಫೋನ್‌ನಲ್ಲಿ ಕರ್ನಾಟಕ ಸಂಗೀತ ಅಳವಡಿಸಿದ ಕೀರ್ತಿ ಕೂಡ ಈ ವಿದ್ವಾಂಸರಿಗೇ ಸೇರಬೇಕು. ಕರ್ನಾಟಕ ಶಾಸ್ತ್ರೀಯ ಸಂಗೀತದ ಸರಳೆವರಸೆಯಿಂದ ಆರಂಭಿಸಿ ವರ್ಣ, ಕೃತಿ ಕೀರ್ತನೆ, ರಾಗತಾನ ಪಲ್ಲವಿ, ತಿಲ್ಲಾನದವರೆಗೆ ‘ಸ್ವರ ನಿರಂತರ–ರಾಗ ನಿರಂತರ’ ಎಂದು ಸ್ವರಮಾಲೆ ಪೋಣಿಸುತ್ತಾ ಹೋದ ಈ ವಿದ್ವಾಂಸ ವಿದೇಶಿ ವಾದ್ಯದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ನುಡಿಸಿ ಮನೆಮಾತಾದವರು.

ಕರ್ನಾಟಕ ಸಂಗೀತದ ಎಲ್ಲ 72 ಮೇಳಕರ್ತ ರಾಗಗಳೂ ಸ್ಯಾಕ್ಸೊಫೋನ್‌ನಲ್ಲಿ ಶ್ರವಣಾನಂದಕರವಾಗಿ ವಿಜೃಂಭಿಸುವಂತೆ ಮಾಡಿದ್ದು ಕದ್ರಿ ಗೋಪಾಲನಾಥ್‌ ಅವರ ಅಗ್ಗಳಿಕೆ.ಈ ಸುಷಿರ ವಾದ್ಯದಲ್ಲಿ ರಾಗ ಯಮನ್‌ಕಲ್ಯಾಣ್‌ ನುಡಿಸುವುದೆಂದರೆ ಕದ್ರಿ ಅವರಿಗೆ ಎಲ್ಲಿಲ್ಲದ ಖುಷಿ. ಕೃಷ್ಣಾ ನೀ ಬೇಗನೆ ಬಾರೊ’ ದೇವರನಾಮ, ತಂಬೂರಿ ಮೀಟಿದವ, ಬ್ರಹ್ಮಮೊಕ್ಕಟೆ ಮುಂತಾದ ಕೃತಿಗಳು ಅವರ ಪ್ರತೀ ಕಛೇರಿಗಳಲ್ಲಿ ಇರುತ್ತಿದ್ದು ಕೇಳುಗರಲ್ಲಿ ಸಂಗೀತ ಧ್ಯಾನಿಸುವಂತೆ ಮಾಡುತ್ತಿದ್ದವು.

ಬೃಂದಾವನಿ ಸಾರಂಗ ರಾಗದ ‘ರಾಗ ತಾನ ಪಲ್ಲವಿ’ ಕದ್ರಿ ಅವರಿಗೆ ಅಚ್ಚುಮೆಚ್ಚು ಆಗಿತ್ತು. ಇದನ್ನೂ ಎಲ್ಲ ಕಛೇರಿಗಳಲ್ಲಿಯೂ ನುಡಿಸಿ ನಾದಲೋಕದಲ್ಲಿ ಮಿಂದೇಳಿಸುತ್ತಿದ್ದ ಪರಿ ಮಾತ್ರ ಅನನ್ಯ. ‘ಕದನ ಕುತೂಹಲ’ ರಾಗದ ‘ರಘುವಂಶ ಸುಧಾಂಬುಧೆ’ ಕೃತಿಯ ಸ್ವರಸಂಚಾರ, ಅಭೇರಿ ರಾಗದಲ್ಲಿ ‘ನಗುಮೋಮು ಗಲನೇನಿ’ ತ್ಯಾಗರಾಜರ ಕೃತಿಗೆ ದೀರ್ಘವಾದ ಆಲಾಪ, ಸ್ವಷ್ಟವಾದ ಸ್ವರಪ್ರಸ್ತಾರ, ಹಿತಮಿತವಾದ ನೆರವಲ್‌ನೊಂದಿಗೆ ನುಡಿಸುವ ಅವರ ನುಡಿಸಾಣಿಕೆಯ ರೀತಿ ಕೇಳುಗರಿಗೆ ಎಂದಿಗೂ ಆಪ್ಯಾಯಮಾನವಾಗಿತ್ತು.

‘ಬೇರೆ ವಾದ್ಯಗಳಂತೆ ಸ್ಯಾಕ್ಸೊಫೋನ್‌ ವಾದನದಲ್ಲಿ ಗಮಕಗಳ ಪ್ರಯೋಗ ಬಹಳ ಕಷ್ಟ. ಇದೊಂದು ಸವಾಲು. ಹೀಗಾಗಿ ಮೊದಲು ಹಾಡುಗಾರಿಕೆ ಕಲಿತೆ. ಅದಾಗಿ ಸ್ವಲ್ಪಸಮಯ ತಂದೆಯ ಬಳುವಳಿಯಾದ ನಾದಸ್ವರ ನುಡಿಸತೊಡಗಿದೆ. ಕರ್ನಾಟಕ ಸಂಗೀತದ ಎಲ್ಲ ರಾಗಗಳ ಪರಿಚಯ ಆದ ಮೇಲೆ ಅದನ್ನು ಸ್ಯಾಕ್ಸೊಫೋನ್‌ಗೆ ಅಳವಡಿಸಿದೆ. ನಿತ್ಯ ಐದಾರು ಗಂಟೆ ಅಭ್ಯಾಸ ಮಾಡಿ ಈ ವಾದ್ಯಕ್ಕೆ ನಮ್ಮ ಸಂಗೀತ ಒಗ್ಗಿಕೊಳ್ಳುವಂತೆ ಮಾಡಲು ಬಹಳ ಶ್ರಮಪಟ್ಟೆ’ ಎಂದು ತಾವು ವಾದ್ಯ ನುಡಿಸಿದ ಆರಂಭದ ದಿನಗಳನ್ನು ಹಿಂದೊಮ್ಮೆ ಕದ್ರಿಯವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಅಸಾಧಾರಣ ಪ್ರತಿಭೆ, ಸಾಧನೆ, ಕಲಿಕೆಯಲ್ಲಿ ಹಠ, ಪ್ರಯೋಗಶೀಲ ಗುಣ ಎಲ್ಲವೂ ಮೇಳೈಸಿ ಕದ್ರಿಗೋಪಾಲನಾಥ್‌ ಸ್ಯಾಕ್ಸೊಫೋನ್‌ನಲ್ಲಿ ದಂತಕತೆಯಾದರು. ಈ ವಾದ್ಯಸಂತ ಇನ್ನು ನೆನಪಷ್ಟೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT