ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಕ್ಸೋಫೋನ್ ಚಕ್ರವರ್ತಿ ‘ಕದ್ರಿ’

Last Updated 29 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಸ್ಯಾಕ್ಸೋಫೋನ್‌ಗೆ ಇನ್ನೊಂದು ಹೆಸರೇ ಕದ್ರಿ ಗೋಪಾಲನಾಥ್! ಈ ವಿದೇಶಿ ವಾದ್ಯವನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಂಡು, ಅದಕ್ಕೆ ಭಾರತೀಯ ಸಂಗೀತದಲ್ಲಿ ‘ಮಂಗಳವಾದ್ಯ’ ಎಂಬ ಪಟ್ಟ ಕಟ್ಟಿದ ಕೀರ್ತಿಯೂ ಅವರಿಗೇ ಸಲ್ಲಬೇಕು. ಗೋಪಾಲನಾಥ್ ಅವರ ವಿದ್ವತ್ತು-ಪ್ರತಿಭೆಗಳನ್ನು ಮನ್ನಿಸಿ ಈವರೆಗೆ ಸಂದಿರುವ ಪ್ರಶಸ್ತಿಗಳ ಸಾಲಿಗೆ ಈಗ ರಾಮ ಸೇವಾ ಮಂಡಳಿಯ ಪ್ರಶಸ್ತಿ ಇನ್ನೊಂದು ನೂತನ ಕಿರೀಟ!

ಮಂಗಳೂರಿನಲ್ಲಿ ಜನಿಸಿದ (1948) ಗೋಪಾಲನಾಥ್ ಅವರಿಗೆ ಬಾಲ್ಯದಿಂದಲೂ ಸಂಗೀತದ ಒಲವು. ತಂದೆಯವರಿಂದ ನಾಗಸ್ವರದ ಕಲಿಕೆ. ಹೀಗಾಗಿ ಬಾಲ್ಯದಲ್ಲಿ ನಾಗಸ್ವರದ ನಾದದಲ್ಲಿ ನಲಿವು.

ಒಮ್ಮೆ ಮೈಸೂರು ಅರಮನೆಯಲ್ಲಿ ಸ್ಯಾಕ್ಸೋಫೋನ್ ವಾದನವನ್ನು ಕೇಳಿ, ಮೋಹಗೊಂಡರು. ಈ ಹೊಸ ವಾದ್ಯಕ್ಕೆ ಮನಸೋತ ಗೋಪಾಲನಾಥ್, ಅದನ್ನು ಶ್ರದ್ಧೆಯಿಂದ ಅಭ್ಯಸಿಸತೊಡಗಿದರು. ಗೋಪಾಲಕೃಷ್ಣ ಅಯ್ಯರ್, ಟಿ.ವಿ. ಗೋಪಾಲಕೃಷ್ಣನ್ ಮತ್ತು ಬಾಲಕೃಷ್ಣ ಪಿಳ್ಳೆ ಅವರುಗಳಲ್ಲಿ ಶ್ರದ್ಧೆಯಿಂದ ಕಲಿತು, ಕಠಿಣ ಸಾಧನೆ ಮಾಡಿ, ವಾದ್ಯದ ಮೇಲೆ ಪ್ರಭುತ್ವ ಸಾಧಿಸಿದ್ದಾರೆ.

ಕರ್ನಾಟಕ ಸಂಗೀತಕ್ಕೆ ಹೊಂದುವಂತೆ ವಾದ್ಯದಲ್ಲಿ ಕೆಲವು ಬದಲಾವಣೆಗಳನ್ನೂ ಮಾಡಿಕೊಂಡು, ಸ್ಯಾಕ್ಸೋಫೋನ್‌ನಲ್ಲಿ ಶುದ್ಧ ಗಮಕಗಳು ನುಡಿಯುವಂತೆ ಮಾಡಿ ಭಾರತೀಯ ಸಂಗೀತ ಚೇತೋಹಾರಿಯಾಗಿ ಸ್ಯಾಕ್ಸೋಫೋನ್‌ನಲ್ಲಿ ಹೊಮ್ಮುವಂತೆ ಮಾಡಿದ್ದಾರೆ. ಕದ್ರಿಯವರ ವಾದನ ಕಾವಿನಿಂದ ಕೂಡಿದ್ದು, ಒಂದು ಕ್ಷಣವೂ ಬೇಸರಕ್ಕೆ ಅವಕಾಶ ಇರುವುದಿಲ್ಲ.

ಉತ್ಸಾಹದ-ಲವಲವಿಕೆಯ ವಿನಿಕೆ. ಸಬಲ ಸಂಗತಿಗಳು. ಲಯಕಾರಿಯಾದ ಸ್ವರಪ್ರಸ್ತಾರ. ಸ್ವರದಿಂದ ಸ್ವರಕ್ಕೆ ಸಾಗುತ್ತಾ, ರಾಗವನ್ನು ಬೆಳೆಸುತ್ತಾ ರಾಗದ ಪ್ರಖರ ಚಿತ್ರವನ್ನು ಬಿಡಿಸುತ್ತಾರೆ. ಪಕ್ಕವಾದ್ಯಗಳನ್ನೂ ಕೂಡಿಸಿಕೊಂಡು ಒಟ್ಟಾಗಿ ಮೇಳೈಸುತ್ತಾರೆ. ಇದರಿಂದ ಶ್ರೋತೃಗಳಿಗೆ ಒಂದು ರೋಚಕ ಅನುಭವವಾಗುತ್ತದೆ.

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಕದ್ರಿಯವರ ಸಂಗೀತ ಪ್ರಮುಖ ಸಭೆ-ಸಮ್ಮೇಳನಗಳಲ್ಲೆಲ್ಲಾ ಮಾರ್ದನಿಗೊಂಡಿದೆ. ಪ್ರಪಂಚದ ಪ್ರತಿಷ್ಠಿತ ಸಂಸ್ಥೆ, ಸಭಾಂಗಣಗಳಲ್ಲಿ ಗೋಪಾಲನಾಥ್ ಕಾರ್ಯಕ್ರಮ ನೀಡಿ ಭಾರತಕ್ಕೆ ಗೌರವ ತಂದಿದ್ದಾರೆ.

ಬಿಬಿಸಿಯಿಂದ ಆಹ್ವಾನಿತರಾಗಿ ರಾಯಲ್ ಆಲ್ಬರ್ಟ್ ಹಾಲ್‌ನಲ್ಲಿ ಸಂಗೀತ ಕಾರ್ಯಕ್ರಮ ನೀಡಿದ ಪ್ರಥಮ ಭಾರತೀಯ - ಎಂಬ ಹೆಗ್ಗಳಿಕೆಗೂ ಅವರು ಪಾತ್ರರು. ಅಮೆರಿಕ, ಇಂಗ್ಲೆಂಡ್, ಕೆನಡಾ, ಸ್ವಿಟ್ಜರ್‌ಲೆಂಡ್, ಆಸ್ಟ್ರೇಲಿಯಾ, ಜರ್ಮನಿ, ಸಿಂಗಪುರ, ಬಹರೈನ್, ಕತಾರ್, ಮಲೇಷ್ಯಾ ಮತ್ತು ಶ್ರೀಲಂಕಾಗಳಲ್ಲಿ ಕಾರ್ಯಕ್ರಮಗಳನ್ನು ನೀಡಿ, ಜನಪ್ರಿಯರಾಗಿದ್ದಾರೆ. 

1980ರಲ್ಲಿ ಕದ್ರಿಯವರ ಸಂಗೀತಕ್ಕೆ ಹೊಸ ತಿರುವು ಸಿಕ್ಕಿತು. ಮುಂಬಯಿಯಲ್ಲಿ ನಡೆದ ಜಾಸ್ ಸಂಗೀತ ಉತ್ಸವದಲ್ಲಿ ಜಾನ್ ಹ್ಯಾಂಡಿ ಅವರೊಂದಿಗೆ ನುಡಿಸಿ, ಹೊಸ ಲೋಕಕ್ಕೆ ಪದಾರ್ಪಣೆ ಮಾಡಿದರು.

ಮುಂದೆ ವಿಶ್ವ ಜಾಸ್ ಲೋಕದ ಪ್ರತಿಷ್ಠಿತ ಕಲಾವಿದರೊಂದಿಗೆ ಸಮ್ಮಿಲನ. ಪ್ರಾಗ್, ಬರ್ಲಿನ್, ಪ್ಯಾರಿಸ್‌ನ ಮ್ಯೂಸಿಕ್ ಹಾಲ್ ಫೆಸ್ಟಿವಲ್, ಲಂಡನ್‌ನ ಬಿಬಿಸಿ ಪ್ರೊಂನೇಡ್ ಕಾರ್ಯಕ್ರಮ, ಮೆಕ್ಸಿಕೋದ ಇಂಟರ್‌ನ್ಯಾಷನಲ್ ಸರ್ವಾಂಟಿನೊ ಫೆಸ್ಟಿವಲ್, ಲ್ಯಾಂಟ್‍ವಿಯದಲ್ಲಿ ನಡೆದ ಇಂಟರ್‌ನ್ಯಾಷನಲ್ ಸ್ಯಾಕ್ಸೋಫೋನ್ ಫೆಸ್ಟಿವಲ್‌ಗಳಲ್ಲಿ ಜಾಸ್ ಫ್ಯೂಷನ್ ನುಡಿಸಿದಾಗ ಶ್ರೋತೃಗಳು ಪುಳಕಿತ. ಈ ನಾದ ರಸಾಯನಕ್ಕೆ ಎಲ್ಲೆಡೆ ಮೆಚ್ಚುಗೆ.

ಆಕಾಶವಾಣಿಯ ‘ಎ-ಟಾಪ್’ ಗ್ರೇಡ್ ಕಲಾವಿದರಾಗಿ ಅವರು ಅನೇಕ ಸಿ.ಡಿ.ಗಳಲ್ಲಿ ಮಿಂಚಿದ್ದಾರೆ. ಕೆ. ಬಾಲಚಂದರ್ ನಿರ್ದೇಶನ ಹಾಗೂ ಎ.ಆರ್. ರೆಹಮಾನ್ ಸಂಗೀತ ಸಂಯೋಜನೆಯ ‘ಡ್ಯುಯೆಟ್‌’  ತಮಿಳು ಸಿನಿಮಾದಲ್ಲೂ ಕದ್ರಿಯವರು ನುಡಿಸಿ, ಜನಾನುರಾಗಿಯಾಗಿದ್ದಾರೆ.

ಕದ್ರಿ ಗೋಪಾಲನಾಥ್ ಅವರಿಗೆ ಪದ್ಮಶ್ರೀ, ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರತಿಷ್ಠಿತ ಪ್ರಶಸ್ತಿ, ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಚೌಡಯ್ಯ ಸ್ಮಾರಕ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಗಾನಕಲಾಭೂಷಣ, ವೀಣೆ ಶೇಷಣ್ಣ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ, ಪೇಜಾವರ ಮಠ, ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠ, ಶೃಂಗೇರಿ, ಕಂಚಿ ಕಾಮಕೋಟಿ ಪೀಠಗಳ ಆಸ್ಥಾನ ವಿದ್ವಾನ್  ಇನ್ನೂ ಅನೇಕ ಪ್ರಶಸ್ತಿಗಳು ಸಂದಿವೆ.

ಅನೇಕ ದಿಗ್ಗಜರು ಸ್ವೀಕರಿಸಿರುವ ಎಸ್.ವಿ. ನಾರಾಯಣಸ್ವಾಮಿರಾವ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಗೆ ಈ ವರ್ಷ ಕದ್ರಿ ಗೋಪಾಲನಾಥ್ ಆಯ್ಕೆಯಾಗಿರುವುದು ಸಹಜವೇ.

₹50 ಸಾವಿರ ಹಮ್ಮಿಣಿ, ಸೀತಾರಾಮರ ಪಂಚಲೋಹದ ವಿಗ್ರಹ, ಅಭಿನಂದನಾ ಪತ್ರಿಕೆ, ಶಾಲು, ಫಲ ತಾಂಬೂಲವನ್ನು ಒಳಗೊಂಡ ಪ್ರಶಸ್ತಿಯನ್ನು ಕೋಟೆ ಹೈಸ್ಕೂಲು ಆವರಣದ ಶ್ರೀ ರಾಮ ಸೇವಾ ಮಂಡಳಿಯ ವಿಶೇಷ ಚಪ್ಪರದಲ್ಲಿ ಭಾನುವಾರ (ಮೇ 1) ಸಂಜೆ 5.30ಕ್ಕೆ ಪ್ರದಾನ ಮಾಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT